spot_img
spot_img

ಸಾಹಿತ್ಯ ಕ್ಷೇತ್ರದಲ್ಲಿ ರಶ್ಮಿಯಾಗಿ ಹೊಳೆದ ವಿ.ಕೃ.ಗೋಕಾಕ್!

Must Read

spot_img

ಬೇರೆಯವರ ಮೇಲೆ ಅವಲಂಬಿತವಾದ ಬದುಕು, ಸಾಧನೆ “ಮರವನ್ನು ಆಶ್ರಯಿಸಿ ಬೆಳೆದ ಬಳ್ಳಿಯಂತೆ” ಆಶ್ರಯ ತಪ್ಪಿದಾಗ ಅದು ನೆಲಕಚ್ಚುವುದು ಎಂದವರು ವಿನಾಯಕ ಕೃಷ್ಣ ಗೋಕಾಕ್ (ವಿ.ಕೃ.ಗೋಕಾಕ್). ಕನ್ನಡಕ್ಕೆ ಐದನೆಯ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ಕೀರ್ತಿ ವಿ.ಕೃ.ಗೋಕಾಕ್ ಅವರದ್ದು. ಜ್ಞಾನಪೀಠ ಪ್ರಶಸ್ತಿಯನ್ನು ಸಾಮಾನ್ಯವಾಗಿ ದೆಹಲಿಯಲ್ಲಿ ನೀಡಲಾಗುತ್ತದೆ.

ಆದರೆ ವಿ.ಕೃ.ಗೋಕಾಕರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ನೀಡಲು ಅಂದಿನ ಪ್ರಧಾನಿಗಳಾಗಿದ್ದ ಪಿ.ವಿ.ನರಸಿಂಹರಾವ್ ಅವರೇ ಖುದ್ದಾಗಿ ಮುಂಬೈಗೆ ಬಂದು ಪ್ರಶಸ್ತಿ ಕೊಟ್ಟಿದ್ದು ಗೋಕಾಕರು ಎಂತಹ ಮೇರು ವ್ಯಕ್ತಿತ್ವದ ವ್ಯಕ್ತಿ ಎಂಬುದನ್ನು ತೋರಿಸಿಕೊಟ್ಟಿತ್ತು.

ಅಂದಹಾಗೆ ವಿ.ಕೃ.ಗೋಕಾಕರು ಹುಟ್ಟಿದ್ದು 1909 ಆಗಸ್ಟ್ 09 ರಂದು ಹಾವೇರಿ ಜಿಲ್ಲೆಯ ಸವಣೂರಿನಲ್ಲಿ. ನಂತರ ಗೋಕಾಕರನ್ನು ಇಡೀ ಭಾರತವೇ ಕೊಂಡಾಡುವಂತೆ ಆಗಿದ್ದು ಇತಿಹಾಸ. ಕನ್ನಡ ಸಾಹಿತ್ಯ ಲೋಕದಲ್ಲಿ ವಿ.ಕೃ.ಗೋಕಾಕರಿಗೆ ವಿಶಿಷ್ಟವಾದ ಸ್ಥಾನವಿದೆ. ಹಾಗಾಗಿಯೇ ಅವರನ್ನು “ನವ್ಯಕಾವ್ಯ”ದ ಸಾಹಿತಿ ಎಂದು ಕರೆದು ಗೌರವಿಸಲಾಗುತ್ತದೆ.

ಹೊಸಗನ್ನಡದಲ್ಲಿ ಮುಕ್ತ ಛಂದಸ್ಸನ್ನು ಮೊದಲಿಗೆ ತಂದ ಹೆಗ್ಗಳಿಕೆ ಗೋಕಾಕರಿಗೆ ಸಲ್ಲಬೇಕು.1950ರ ದಶಕದಲ್ಲಿ ಗೋಕಾಕರು ಮುಕ್ತ ಛಂದಸ್ಸಿನಲ್ಲಿ “ನವ್ಯಕವಿತೆ”ಗಳು ಎಂಬ ಸಂಗ್ರಹವನ್ನು ಪ್ರಕಟಿಸಿದ್ದರು. ನಂತರ ಅವರು ಮುಂಬೈ ಸಾಹಿತ್ಯ ಸಮ್ಮೇಳನದಲ್ಲಿ ತಮ್ಮ ಕನಸಿನ ನವ್ಯಕಾವ್ಯದ ಘೋಷಣೆಯನ್ನು ಮೊಳಗಿಸಿದ್ದು ವಿಶೇಷ.

ವಾಸ್ತವವಾಗಿ ಮುಕ್ತ ಛಂದಸ್ಸು ಅವರ ಸಮಸ್ತ ಸಾಧಕಗಳೊಂದಿಗೆಯೇ ವೈವಿಧ್ಯತೆಯನ್ನು ಪಡೆದದ್ದು ಐವತ್ತರ ದಶಕದ ನವ್ಯಕಾವ್ಯದ ಸಂದರ್ಭದಲ್ಲಿಯೇ ಎಂಬುದು ಗಮನಾರ್ಹ. ಈ ದೃಷ್ಟಿಯಿಂದ ನವ್ಯಕಾವ್ಯದಲ್ಲಿ ಪ್ರಯೋಗಗೊಂಡ ಈ ನೂತನ ಛಂದೋಭಿವ್ಯಕ್ತಿಯ ಪ್ರೇರಣೆ ಹೊಸಬರಿಗೆ ಸಿಕ್ಕಿದ್ದು ಗೋಕಾಕರ ಸಾಹಿತ್ಯದಿಂದಲೇ. ಕಾವ್ಯಕ್ಕೆ ಬೇಕಾಗಿದ್ದ ಛಂದೋರೂಪವನ್ನು ನವ್ಯಕಾವ್ಯ ಪರಿಕಲ್ಪನೆಯನ್ನು ಹಾಗೂ ನವ್ಯತೆಯ ಕುರಿತಂತೆ ಚಿಂತನೆಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ ಗೋಕಾಕರ ಬರಹ ಸಾಧನೆ ಅಮೋಘವಾದುದು.

ಅವರ ಸಾಹಿತ್ಯದ ಆಳ-ಅಗಲ ಶ್ರದ್ಧೆಯಿಂದ ಮನವಿಟ್ಟು ಓದಿದವರಿಗಷ್ಟೇ ಅದರ ಅಭಿರುಚಿ ತಿಳಿಯುತ್ತದೆ. ಯಾಕೆಂದರೆ ಗೋಕಾಕರ ಕಾವ್ಯಗಳಲ್ಲಿನ ವೈವಿಧ್ಯತೆ, ಸೌಂದರ್ಯ, ಬರಹದ ಶೈಲಿಯೇ ಅಂಥದ್ದು. ಕವಿ ರತ್ನಾಕರವರ್ಣಿ ಅವರ ತರುವಾಯ ಕಡಲಿನ ಬಗ್ಗೆ, ಕಡಲಿನ ಅಸಂಖ್ಯ ವೈವಿಧ್ಯಗಳ ಬಗ್ಗೆ ಉತ್ಸಾಹದಿಂದ ಬರೆದವರು ಬಹುಶಃ ಗೋಕಾಕರೊಬ್ಬರೇ ಇರಬೇಕು.

ಆಧುನಿಕ ಕಾವ್ಯಕ್ಕೆ ಶೈಶವಾವಸ್ಥೆಯಲ್ಲಿ ಚೈತನ್ಯ ನೀಡಿ ಮುನ್ನಡೆಸಿ, ನಮ್ಮ ಸಂಸ್ಕೃತಿಯೊಳಗೆ ಬೀಸಿದ ಆಧುನಿಕ ವಾತಾವರಣವನ್ನು ಮನಮುಟ್ಟುವಂತೆ ತಮ್ಮ ಕೃತಿಗಳಲ್ಲಿ ವರ್ಣಿಸಿದ ಗೋಕಾಕರ ಸೃಜನಶೀಲತೆ ಮೆಚ್ಚುವಂತದ್ದು.

ಸಮಾಜದ ಪ್ರತಿಯೊಂದನ್ನು ವಿಮರ್ಶೆಗೆ ಒಳಪಡಿಸುತ್ತಿದ್ದ ಗೋಕಾಕರು, ಧರ್ಮಗಳಲ್ಲಿ ಸೂಚಿಸಿದ ಹಾಗೆ ಅಂತರ್ಜೀವಿಗಳನ್ನು, ಸಾಧಕರನ್ನು ಸಮಾಜವೇ ಸಲಹಬೇಕು ಹಾಗೂ ಪೋಷಿಸಬೇಕು. ಹಿಂದೆ ರಾಜಾಶ್ರಯವಿದ್ದಂತೆ ಇಂದು ಧರ್ಮಶಾಲೆಗಳು, ಮಠಗಳು, ಅನ್ನಛತ್ರಗಳು ಸಾಧಕರನ್ನು ಕಲಾವಿದರನ್ನು ಪೋಷಿಸುವ ಕಾರ್ಯವನ್ನು ಮಾಡುತ್ತವೆ. ಆದರೆ ಸಮಾಜದಿಂದ ಉಪಕೃತನಾದ ಸಾಧಕನಿಗೂ ಅವನದೇ ಆದ ಕರ್ತವ್ಯವಿದೆ. ಅವನು ಇನ್ನೊಬ್ಬರಿಂದ ಹೊರೆಯಾಗಬಾರದಲ್ಲವೇ?

ತಾನಾಗಿಯೇ ಇನ್ನೊಬ್ಬರಿಂದ ಏನನ್ನು ತೆಗೆದುಕೊಳ್ಳಬಾರದು ಹಾಗೂ ಏನನ್ನೂ ಅಪೇಕ್ಷಿಸಬಾರದು. ಒಂದುವೇಳೆ ಅಂಥ ಸಮಯ ಬಂದರೆ ದಾನ ಕೊಡುತ್ತಿರುವ ವ್ಯಕ್ತಿಯ ಅಂತರಂಗ ಪರೀಕ್ಷಿಸಿ ದಾನ ತೆಗೆದುಕೊಳ್ಳಬೇಕು ಎನ್ನುವ ಮೂಲಕ, ಗೋಕಾಕರು ಸಮಾಜವನ್ನು ವಾಸ್ತವದ ದೃಷ್ಟಿಯಲ್ಲಿ ನೋಡುವಂತೆ ಮಾಡಿದರು. “ಊರ್ಣನಾಭ”ಎಂಬುದು ವಿ.ಕೃ.ಗೋ ಅವರ ಒಂದು ವಿಶಿಷ್ಟ ಕವನ ಸಂಕಲನ. ಅದರಲ್ಲಿ ಗೋಕಾಕರು ಜೇಡವೊಂದನ್ನು ಕವನದ ಕೇಂದ್ರವನ್ನಾಗಿ ಮಾಡಿ ವರ್ಣಿಸಿದ್ದಾರೆ. ಊರ್ಣನಾಭ ಎಂದರೆ ಜೇಡ.

“ಅಲ್ಲಿ ಹೋದಲ್ಲಿ, ಇಲ್ಲಿ ನಿಂತಲ್ಲಿ ಜೇಡ ತೂಗು ಹಾಕಿರುವ ಜಾಲ.

ನೋಡಿದಲ್ಲೆಲ್ಲ ಮುಗಿಲ ಮುಸುಕಿಹುದು ಧೂಮಕೇತು ಬೀಸಿರುವ ಬಾಲ.

ಅಂತಪಾರವಿಲ್ಲದಲೆ ನೂತ ಜೇಡಾವತಾರವೆತ್ತಿರುವ ಕಾಲ! “

ಎಂದು ಆರಂಭವಾಗುವ ಈ ಕವನದಲ್ಲಿ ಜೇಡ ಕೇಡಿನ ಒಂದು ಪ್ರತೀಕವಾಗಿದೆ. ಇದು ಅನಾದಿಕಾಲದಿಂದಲೂ ಶೇಷಶಾಯಿಯ ತಲ್ಪವಾದ ಆದಿಶೇಷನ ಕೆಳಗೇ, ಹಾಲ್ಗಡಲಿನ ತಳದೊಳಗೆ ಪಾಚಿ ಕಟ್ಟಿರುವ ಜಾಗದಲ್ಲಿ ಮನೆ ಮಾಡಿಕೊಂಡಿದೆ. ಈ ಜೇಡ ಸಮಯ ನೋಡಿ ಮೇಲೆ ಬಂದು ತನ್ನ ಬಲೆಗಳನ್ನು ಹರಡುತ್ತದೆ. ಗಂಗಾಪಾನದಲ್ಲಿ, ದೈನಂದಿನ ಉಣಿಸಿನಲ್ಲಿ, ಧಾನ್ಯದಲ್ಲಿ ತನ್ನ ಬಲೆ ಹರಡಿ ಎಲ್ಲವನ್ನೂ ಭ್ರಷ್ಟಗೊಳಿಸುತ್ತದೆ. ಇಂಥ ಜೇಡನು ಹರಡುವ ಜಾಲದ ವರ್ಣನೆಯನ್ನು ಗೋಕಾಕರು ಊರ್ಣನಾಭಾವತಾರ ಎಂಬ ಕವಿತೆಯೊಳಗೆ ವಿವಿಧ ಪ್ರತೀಕಗಳಲ್ಲಿ ಚಿತ್ರಿಸಿ, ಕೊನೆಯಲ್ಲಿ ಒಂದು ಪ್ರಶ್ನೆ ಎತ್ತುತ್ತಾರೆ. ಯಾರು ಜಗತ್ತಿನ ಒಡೆಯ? ಪದ್ಮನಾಭನೋ ಅಥವಾ ಊರ್ಣನಾಭನೋ? ಎಂಬುದಾಗಿ ಕೇಳುತ್ತಾರೆ.

ಆದರೆ ಕವಿತೆ ಇಲ್ಲಿಗೇ ಮುಗಿಯುವುದಿಲ್ಲ. ಮುಂದೆ, ಅದೇ ಹಾಲ್ಗಡಲಿನ ಶೇಷಶಾಯಿಯ ಅಂಕಿತದಲ್ಲಿರುವ ವಾಯುದೇವನು ಬಂದು, ಆದಿಜೇಡ ನೆಯ್ದ ಬಲೆಗಳನ್ನು ಚಲ್ಲಾಪಿಲ್ಲಿಯನ್ನಾಗಿ ಮಾಡಿದಂತೆ ಮತ್ತೆ ಆದಿಜೇಡ ಹಾಲ್ಗಡಲಿನ ತಳದಲ್ಲಿ ಪಾಚಿಕಟ್ಟಿಕೊಂಡ ಮೂಲ ನೆಲೆಗೆ ಹಿಂದಿರುಗಿದಂತೆ ಈ ಕವಿತೆಯ ವರ್ಣನೆ ಇದೆ. ಕೊನೆಯದಾಗಿ ಮತ್ತದಕೌತಣವಿತ್ತಿರ ಬೇಡ ತಪ್ಪುದಾರಿ ಹಿಡಿದು ಎಂಬ ಎಚ್ಚರಿಕೆಯ ದನಿಯಿಂದ ಈ ಕವಿತೆ ಮುಕ್ತಾಯವಾಗುತ್ತದೆ.

ಅಂದರೆ ಗೋಕಾಕರ ಊರ್ಣನಾಭ ಕವನದ ಸಂಪೂರ್ಣ ಅರ್ಥವೇನೆಂದರೆ, ಕೇಡಿಗೆ ಆಹ್ವಾನ ಕೊಡುವವರು ಕೊನೆಗೂ ನಾವೇ, ಆದ ಕಾರಣ ತಪ್ಪುದಾರಿಯಲ್ಲಿ ನಡೆದು ಮತ್ತೆ ಮತ್ತೆ ಕೇಡಿಗೆ ಔತಣ ಕೊಡುವುದು ಬೇಡ ಎಂಬ ಎಚ್ಚರವೇ ನಮಗೆ ರಕ್ಷಣೆಯಾಗಬೇಕು. ಕೇಡನ್ನು ಕುರಿತು ಹೊಸ ಪುರಾಣವೊಂದನ್ನು ಗೋಕಾಕರು ಈ ಕವಿತೆಯಲ್ಲಿ ನಿರ್ಮಿಸಿರುವ ಕ್ರಮ ಅತ್ಯಂತ ವಿಶಿಷ್ಟವಾಗಿದೆ. ಇದು ಗೋಕಾಕ್ ಅವರ ನವ್ಯಕಾವ್ಯದ ಸಾಹಿತ್ಯಕ್ಕೆ ಒಂದು ಉದಾಹರಣೆ ಅಷ್ಟೇ. ಇನ್ನು ಗೋಕಾಕರ ಮಹತ್ವಾಕಾಂಕ್ಷೆಯ ಕೃತಿಯಾದ ‘ಭಾರತ ಸಿಂಧು ರಶ್ಮಿ’ ಋಗ್ವೇದ ಕಾಲದಲ್ಲಿನ ಭಾರತೀಯ ಸಂಸ್ಕೃತಿಯ ಒಂದು ವ್ಯಾಖ್ಯಾನವಾಗಿದೆ.

‘ಭಾರತ ಸಿಂಧು ರಶ್ಮಿ’ ಹನ್ನೆರಡು ಖಂಡಗಳು ಹಾಗೂ ಸುಮಾರು ಮೂವತ್ತೈದು ಸಾವಿರ ಸಾಲುಗಳನ್ನೊಳಗೊಂಡ ಒಂದು ಮಹಾಕಾವ್ಯ. ಈ ಒಂದು ಕೃತಿಗೆ ವಿ.ಕೃ.ಗೋಕಾಕರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತದ್ದು. ಆದರೂ ಹಲವು ದಾಖಲೆಗಳ ಪ್ರಕಾರ ಕನ್ನಡ ಸಾಹಿತ್ಯಕ್ಕೆ ಅವರು ನೀಡಿದ ಅನುಪಮ ಕೊಡುಗೆಯನ್ನು ಗಮನಿಸಿ ಜ್ಞಾನಪೀಠ ಪ್ರಶಸ್ತಿಯನ್ನು ನೀಡಲಾಗಿದೆ.

ಇನ್ನು ಗೋಕಾಕರು ಬರೆದ 1268 ಪುಟಗಳಷ್ಟು ಸುಧೀರ್ಘವಾದ ‘ಸಮರಸವೇ ಜೀವನ’ ಎಂಬ ಕಾದಂಬರಿ ಬಹುಶಃ ಕನ್ನಡದಲ್ಲಿಯೇ ಬೃಹದ್ಗಾತ್ರದ ಕೃತಿ ಎನ್ನಬಹುದು. ಇದರ ಜತೆಗೆ ಕಾವ್ಯ ಮೀಮಾಂಸೆ, ಸಾಹಿತ್ಯ ವಿಮರ್ಶೆಯನ್ನು ಕುರಿತು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಅವರು ಬರೆದ ಕೆಲವು ಕೃತಿಗಳು ಪಶ್ಚಿಮ ಕಾವ್ಯ ತತ್ವಗಳ ಗಾಢವಾದ ತಿಳುವಳಿಕೆಯನ್ನು, ಭಾರತೀಯ ಕಾವ್ಯಮೀಮಾಂಸೆ ಹಾಗೂ ಅರವಿಂದರ ವಿಚಾರಧಾರೆಗಳನ್ನು ಪ್ರಕಟಿಸುತ್ತವೆ.

ಗೋಕಾಕರ ಮೊದಲ ಕವನಸಂಕಲನ ‘THE SKY LINE’ 1925 ರಲ್ಲೇ ಸಿದ್ಧವಾಗಿತ್ತು. ಅವರ ಕನ್ನಡದ ಮೊದಲ ಕವನ ಸಂಕಲನ ‘ಕಲೋಪಾಸಕ’ 1934ರಲ್ಲಿ ಪ್ರಕಟಿತವಾಗಿದೆ. ನಂತರ ಪಯಣ, ಸಮುದ್ರಗೀತೆಗಳು, ತ್ರಿಶಂಕುವಿನ ಪ್ರಜ್ಞಾ ಪ್ರಭಾತ, ಉಗಮ, ಬಾಳದೇಗುಲದಲ್ಲಿ, ದ್ಯಾವಾಪೃಥಿವಿ, ಸಿಮ್ಲಾಸಿಂಫನಿ, ಭಾವರಾಗ, ನವ್ಯಕವಿಗಳು, ಇಂದಲ್ಲ ನಾಳೆ, ಪಾರಿಜಾತದಡಿಯಲ್ಲಿ ಇವು ಗೋಕಾಕರು ಸಂಪಾದಿಸಿದ ಕವನ ಸಂಕಲನಗಳು. ಜನನಾಯಕ, ಯುಗಾಂತರ ನಾಟಕಗಳಾದರೆ, ಸಮುದ್ರದಾಚೆದಿಂದ, ಪಯಣಿಗ ಇವು ಪ್ರವಾಸ ಕಥನಗಳಾಗಿವೆ.

ಜೀವನಪಾಠ, ಚೆಲುವಿನ ನಿಲವು ಪ್ರಬಂಧ ಸಂಕಲನಗಳಾಗಿವೆ. ಇಂಗ್ಲಿಷ್ ಭಾಷೆಯಲ್ಲಿ 30ಕ್ಕೂ ಹೆಚ್ಚಿನ ಕೃತಿಗಳನ್ನು ಸಹ ಗೋಕಾಕರು ರಚಿಸಿರುವುದು ಅವರಿಗೆ ಇಂಗ್ಲಿಷ್ ಭಾಷೆಯ ಮೇಲಿದ್ದ ಪ್ರೌಢಿಮೆಯನ್ನು ಅನಾವರಣಗೊಳಿಸುತ್ತದೆ. ಇಲ್ಲಿ ಮತ್ತೊಂದು ವಿಷಯವನ್ನು ನೆನಪಿಸಿಕೊಳ್ಳುವುದು ಸೂಕ್ತವೆನಿಸುತ್ತದೆ.

ಅದೇನೆಂದರೆ ಗೋಕಾಕರು ಇಂಗ್ಲಿಷ್ ಸಾಹಿತ್ಯ ಓದಲು ಆಕ್ಸ್ ಫರ್ಡ್ ವಿಶ್ವವಿದ್ಯಾಲಯಕ್ಕೆ ತೆರಳಿದ್ದರು. ನಂತರ ಆಕ್ಸ್ ಫರ್ಡ್ ನಲ್ಲೇ ಇಂಗ್ಲಿಷ್ ಸಾಹಿತ್ಯವನ್ನು ಅಧ್ಯಯನ ಮಾಡಿ, ಪರೀಕ್ಷೆಯನ್ನು ಮೊದಲ ದರ್ಜೆಯಲ್ಲಿ ಪಾಸು ಮಾಡಿದ್ದರು. ವಿಶೇಷವೆಂದರೆ ಆಕ್ಸ್ ಫರ್ಡ್ ನಲ್ಲಿ ‘ಇಂಗ್ಲಿಷ್ ಸಾಹಿತ್ಯವನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದ ಮೊದಲ ಭಾರತೀಯ’ ಎಂಬ ಹಿರಿಮೆಗೆ ಗೋಕಾಕರು ಪಾತ್ರವಾದರು.

ಸಾಹಿತ್ಯದ ಎಲ್ಲಾ ಮಜಲುಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡ ಗೋಕಾಕರು ಮುಂದೆ ಸಾಹಿತ್ಯ ಲೋಕದಲ್ಲಿ ಹೊಸ ಭಾಷ್ಯವನ್ನೇ ಬರೆದರು ಎಂದರೆ ಅತಿಶಯೋಕ್ತಿಯಲ್ಲ. ಹೀಗೆ ಸಾಹಿತ್ಯವನ್ನು ಬದುಕಿನ ಒಂದು ಭಾಗದಂತೆ ಹಾಗೂ ಕಾಯಕದಂತೆ ಅವಿರತವಾಗಿ ನಡೆಸಿಕೊಂಡು ಬಂದ ಗೋಕಾಕರ ‘ಸಾಹಿತ್ಯ ಪ್ರೀತಿ’ ತುಂಬಾ ದೊಡ್ಡದು. ಗೋಕಾಕರ ಇನ್ನೊಂದು ವಿಶೇಷತೆಯೆಂದರೆ ಅವರ ಲೇಖನಿಯಿಂದ ಎಲ್ಲಾ ತರಹದ ಸಾಹಿತ್ಯಾ ಬರಹಗಳು ಹೊರಬಂದವು.

ಕವನ ಸಂಕಲನ, ಸಾಹಿತ್ಯ ವಿಮರ್ಶೆ, ಪ್ರವಾಸ ಕಥನ, ಕಾದಂಬರಿ, ಮಹಾಕಾವ್ಯ ಹೀಗೆ ವಿವಿಧ ಆಕಾರಗಳುಳ್ಳ ಸಾಹಿತ್ಯ ಅವರಿಂದ ಮೂಡಿದ್ದು ವಿಶೇಷ. ಗೋಕಾಕರು ದ.ರಾ.ಬೇಂದ್ರೆ ಅವರನ್ನು ತಮ್ಮ ಗುರು, ಮಾರ್ಗದರ್ಶಕರೆಂದು ಹೇಳಿಕೊಂಡಿದ್ದರು. ಹೆಮ್ಮೆಯ ವಿಷಯವೆಂದರೆ ದ.ರಾ.ಬೇಂದ್ರೆಯವರಂತೆ ಶಿಷ್ಯನು ಕೂಡ ಮುಂದೆ ಸಾಹಿತ್ಯ ಲೋಕದಲ್ಲಿ ದೊಡ್ಡ ಹೆಸರು ಮಾಡಿದ್ದು ಅವಿಸ್ಮರಣೀಯ.

ಇನ್ನು ವಿ.ಕೃ.ಗೋಕಾಕ್ ಎಂದಾಕ್ಷಣ ಕನ್ನಡಿಗರಿಗೆ ಮೊದಲು ನೆನಪಾಗುವುದೇ, ಗೋಕಾಕ್ ವರದಿ ಅಥವಾ ಗೋಕಾಕ್ ಚಳುವಳಿ. 1980ರಲ್ಲಿ ಪ್ರೌಢಶಾಲಾ ವ್ಯಾಸಂಗದಲ್ಲಿ ಭಾಷೆಗಳ ಸ್ಥಾನಮಾನ ಕುರಿತು ವರದಿ ನೀಡಲು ಸರ್ಕಾರ ಗೋಕಾಕರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿತು. ಈ ಸಮಿತಿ ನೀಡಿದ ವರದಿ ಕನ್ನಡ, ಕನ್ನಡಿಗರ ಪರವಾಗಿತ್ತು. ಆದರೆ ಸರ್ಕಾರ ಈ ವರದಿಯನ್ನು ಅಂಗೀಕರಿಸಲು ನಿರಾಕರಿಸಿತು.

ಸಿಟ್ಟಿಗೆದ್ದ ಕನ್ನಡಿಗರು ಗೋಕಾಕ್ ವರದಿ ಜಾರಿಗೆ ಬರಲಿ ಎಂದು ಮೊಟ್ಟಮೊದಲ ಬಾರಿಗೆ ಒಕ್ಕೂರಲಿನಿಂದ ಸರ್ಕಾರವನ್ನು ಒತ್ತಾಯಿಸಿದರು. ಈ ಸಂದರ್ಭದಲ್ಲಿ ನಡೆದ ಕನ್ನಡ ಗೋಕಾಕ್ ಚಳವಳಿ ಕರ್ನಾಟಕದ ಮಟ್ಟಿಗೆ ಐತಿಹಾಸಿಕ ದಾಖಲೆಯೇ ಆಗಿದೆ. ಯಾಕೆಂದರೆ ಈ ರೀತಿಯ ಒಂದು ಐತಿಹಾಸಿಕ ಚಳವಳಿ ಹಿಂದೆಂದೂ ಕರ್ನಾಟಕದಲ್ಲಿ ನಡೆದಿರಲಿಲ್ಲ.

ಅಷ್ಟರಮಟ್ಟಿಗೆ ಗೋಕಾಕ್ ಚಳವಳಿ ಅಂದು ಆ ಪ್ರಮಾಣದಲ್ಲಿ ಹೆಸರುಮಾಡಿತ್ತು. ಅಂದು ಕನ್ನಡದ ಉಳಿವಿಗಾಗಿ ನಡೆದ ಗೋಕಾಕ್ ಚಳವಳಿಯ ಹೋರಾಟದ ಫಲವಾಗಿ ಕರ್ನಾಟಕದಲ್ಲಿ ಕನ್ನಡೇತರ ಶಾಲೆಗಳಲ್ಲೂ ಮೂರನೆಯ ತರಗತಿಯಿಂದ ಹತ್ತನೆಯ ತರಗತಿಯವರೆಗೂ ಕನ್ನಡವನ್ನು ಒಂದು ಭಾಷೆಯಾಗಿ ಕಡ್ಡಾಯವಾಗಿ ಓದಬೇಕಾಗಿದೆ.

ಹೀಗಾಗಿ ಕನ್ನಡಕ್ಕೆ ಶಾಲಾ ಶಿಕ್ಷಣದಲ್ಲಿ ಸಿಗಬೇಕಾದ ನ್ಯಾಯಯುತ ಸ್ಥಾನವೂ ಗೋಕಾಕ್ ವರದಿಯಿಂದ ಸಿಕ್ಕಿದಂತಾಯಿತು. ಕವಿಯಾಗಿ, ಶಿಕ್ಷಣ ತಜ್ಞರಾಗಿ, ಕನ್ನಡ ಪ್ರೇಮಿಯಾಗಿ ಗೋಕಾಕರು ಕನ್ನಡಕ್ಕೆ ನೀಡಿದ ಕೊಡುಗೆ ಅಪಾರ ಹಾಗೂ ಅನನ್ಯ.

ಈ ಹಿನ್ನೆಲೆಯಲ್ಲಿ ಕನ್ನಡ ಭಾಷೆಯ ಉದ್ಧಾರಕ್ಕಾಗಿ ಪಣತೊಟ್ಟು ಬಾಳಿದ ಮಹಾಚೇತನ ವಿನಾಯಕ ಕೃಷ್ಣ ಗೋಕಾಕರನ್ನು ನೆನೆಯುತ್ತಾ, ಅವರ ಸಾಹಿತ್ಯ ಕೊಡುಗೆಗಳನ್ನೊಮ್ಮೆ ಸ್ಮರಿಸೋಣ. ಕೊನೆಯದಾಗಿ ಗೋಕಾಕ್ ಅವರ ಭಾವಗೀತೆಯ ಕೆಲ ಸಾಲುಗಳನ್ನು ಮೆಲುಕು ಹಾಕುವುದರೊಂದಿಗೆ ಈ ಲೇಖನವನ್ನು ಮುಗಿಸುತ್ತೇನೆ.

ಇಲ್ಲೆ ಇರು, ಅಲ್ಲಿ ಹೋಗಿ ಮಲ್ಲಿಗೆಯನು ತರುವೆನು|
ನೇಹಕೆಂದು, ನಲುಮೆಗೊಂದು, ಗುರುತಿಗಿರಿಸಿ ಬರುವೆನು| ಹೋದ ಮೇಲೆ ಸುತ್ತಬೇಕು ಏಳುಕೋಟೆ ದ್ವಾರವು| ದಾರಿಯಲ್ಲಿ ತೀರದಂಥ ದುಃಖವಿಹುದಪಾರವು| ಸಾಧಿಸುತ್ತ ಜಯಿಸುವುದೇ ಬಾಳುವುದರ ಸಾರವು….

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!