ವೇಣು ಜಾಲಿಬೆಂಚಿ ಗಜಲ್ ಗಳು

Must Read

ಲೇಖಕಿ ಜಯಶ್ರೀ ಅಬ್ಬಿಗೇರಿಗೆ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಯ ಗರಿ

ಬೆಳಗಾವಿ: ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜನೀಯರಿಂಗ್ ಪ್ರತಿಷ್ಠಾನ ಟ್ರಸ್ಟ ನೀಡುವ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಸ.ಪ.ಪೂ.ಕಾಲೇಜು ಹಿರೇಬಾಗೇವಾಡಿಯ ಉಪನ್ಯಾಸಕಿ, ಲೇಖಕಿ, ಅಂಕಣಕಾರ್ತಿ ಜಯಶ್ರೀ...

ಮಲ್ಲಪ್ಪ ಕಂಕಣವಾಡಿ ಅವರಿಗೆ ಪಿಎಚ್‍ಡಿ

ಮೂಡಲಗಿ: ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಮಲ್ಲಪ್ಪ ಕೆಂಚಪ್ಪ ಕಂಕಣವಾಡಿ ಅವರು ದೈಹಿಕ ಶಿಕ್ಷಣ ವಿಷಯದಲ್ಲಿ ಡಾ: ಹೆಚ್.ಎಸ್.ಜಂಗೆ ಅವರ...

ಪೋಸ್ಟ್ ಕಾರ್ಡಗಳಲ್ಲಿ ಪ್ರಧಾನಿಗೆ ಶುಭಾಶಯ

ಸಿಂದಗಿ: ಭಾರತೀಯ ಜನತಾ ಪಾರ್ಟಿ ಸಿಂದಗಿ ಮಂಡಲ ವತಿಯಿಂದ ನಗರದ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ವಿಶ್ವ ನಾಯಕ ನಮ್ಮ ಭಾರತದ ಹೆಮ್ಮೆಯ ಪ್ರಧಾನಮಂತ್ರಿ ಮೋದೀಜಿ...

ಗಜಲ್-೧

ನನಗೆ ಪ್ರೀತಿಯೂ ಮರಣವೂ ಒಂದೇ ನೀನಿರೆ
ನನ್ನಿರುವೂ ಬಲವೂ ಒಲವೂ ಒಂದೇ ನೀನಿರೆ

ಕಪಟ ನಾಟಕವಾಡಿ ದೂರ ಮಾಡಲು ಆಗದು
ಬಿಡುಗಡೆಯೂ ಬಂಧನವೂ ಒಂದೇ ನೀನಿರೆ

ರಕ್ತ ಹೀರಿ ಸೊಳ್ಳೆಗಳು ಜಿಂಯ್ಯೆಂದು ಸಂಭ್ರಮಿಸುತಿವೆ
ಕಾಟವೇನೂ ಅಲ್ಲ ಬ್ರಹ್ಮನೋವೂ ಒಂದೇ ನೀನಿರೆ

- Advertisement -

ಹಗಲು ನಿನ್ನ ಧ್ಯಾನ ಇರುಳೂ ನಿನ್ನ ಧ್ಯಾನ ನನ್ನಲ್ಲಿ ನಾ
ಇಲ್ಲ ಕನ್ನಡಿಯೂ ಮನಮಂದಿರವೂ‌ ಒಂದೇ ನೀನಿರೆ

ನಾ ಏನೆಂದು ಋಜುವಾತಾಗಿರಬೇಕು ನಿನಗೆ “ಜಾಲಿ”
ನನ್ನುಸಿರೂ ನನ್ನ ಬಲಹೀನತನವೂ ಒಂದೇ ನೀನಿರೆ


ಗಜಲ್ -೨

ಹೂವಿಗೆ ನೋವಾಗಿದೆಯೆಂದು ಮುಳ್ಳನು ಜರಿಯಬೇಡ ಸಾಕಿ
ಪಕ್ಕದಲ್ಲೇ ಇರುತ್ತದೆಯೆಂದು ಮುಳ್ಳನು ಜರಿಯಬೇಡ ಸಾಕಿ

ನಗುವ ಹೂವನು ನೋಡಿ ಎಲ್ಲರೂ ಇಷ್ಟಪಡುವವರೇ
ಬರೀ ಚುಚ್ಚುತ್ತದೆಯೆಂದು ಮುಳ್ಳನು ಜರಿಯಬೇಡ ಸಾಕಿ

ಬಡವರು ಹೊಟ್ಟೆ ಹೊರಲು ಮುಳ್ಳು ಕಟ್ಟಿಗೆಯೂ
ಉರುವಲು
ಕಾಲಿಗೆ ಅಡ್ಡವಾಗುತ್ತದೆಯೆಂದು ಮುಳ್ಳನು ಜರಿಯಬೇಡ ಸಾಕಿ

ಕಷ್ಟವನು ಇಷ್ಟಪಡುವವರಿಗೆಲ್ಲಾ ಮುಳ್ಳು ಅಪರಿಚಿತವಲ್ಲ
ಹೃದಯವೂ ಕಲ್ಲಾಗಿರುತ್ತದೆಯೆಂದು ಮುಳ್ಳನು ಜರಿಯಬೇಡ ಸಾಕಿ

ಪರಮಾತ್ಮನಿಗೆ ಯಾವುದು ಇಷ್ಟವೋ ಯಾರು ಬಲ್ಲರು “ಜಾಲಿ”
ವ್ಯರ್ಥ್ಯವೇ ಸೃಷ್ಟಿಯಾಗಿರುತ್ತದೆಯೆಂದು ಮುಳ್ಳನು ಜರಿಯಬೇಡ ಸಾಕಿ


ಗಜಲ್ -೩

ನಾವು ಮನುಷ್ಯರೇ ಅಸಲೀ ಟೈಮಿಗೇ ಮನುಷ್ಯರಾಗುವುದಿಲ್ಲ
ನಾವು ಹೃದಯವಂತರೇ ಅಸಲೀ ಟೈಮಿಗೇ ಹೃದಯವಂತರಾಗುವುದಿಲ್ಲ

ನಾವು ಜಾಣರೇ ಅಸಲೀ ಟೈಮಿಗೇ ಜಾಣರಾಗುವುದಿಲ್ಲ
ನಾವು ಶೂರರೇ ಅಸಲೀ ಟೈಮಿಗೇ ಶೂರರಾಗುವುದಿಲ್ಲ

ನಾವು ಮಾತುಗಾರರೇ ಅಸಲೀ ಟೈಮಿಗೇ ಮಾತುಬಲ್ಲವರಾಗುವುದಿಲ್ಲ
ನಾವು ಸತ್ಯವಂತರೇ ಅಸಲೀ ಟೈಮಿಗೇ ಸತ್ಯವಂತರಾಗುವುದಿಲ್ಲ

ನಾವು ಚಿಂತಕರೇ ಅಸಲೀ ಟೈಮಿಗೇ ಚಿಂತಕರಾಗುವುದಿಲ್ಲ
ನಾವು ವಿದ್ಯಾವಂತರೇ ಅಸಲೀ ಟೈಮಿಗೇ ವಿದ್ಯಾವಂತರಾಗುವುದಿಲ್ಲ

ನಾವು ನಿರ್ಮಾಪಕರೇ ಅಸಲೀ ಟೈಮಿಗೇ ನಿರ್ಮಾಪಕರಾಗುವುದಿಲ್ಲ
“ಜಾಲಿ” ನಾವು ಮರಣಾಧೀನರೇ ಅಸಲೀ ಟೈಮಿಗೇ ಮರಣಾಧೀನರಾಗುವುದಿಲ್ಲ.


ಗಜಲ್ -೪

ಈ ದೇಹ ಎಷ್ಟು ಸೂಕ್ಷ್ಮ ಸಣ್ಣ ಗಾಯಕೂ ರಕ್ತ ಸುರಿಸಿ ಕಣ್ಣೀರಿಡುವುದು ಸಖಿ
ಕಣ್ಣಾದರೂ ಅಷ್ಟೇ ಸಣ್ಣ ಕಸವನೂ ಸಹಿಸದೆ ಹನಿಸಿ ಕಣ್ಣೀರಿಡುವುದು ಸಖಿ

ಮೊಹಬ್ಬತ್ತಿನಲಿ ಆಜೀವ‌ಕಾರಾವಾಸ ಮಾಮೂಲೆ ದೇಶಕಾಲ ಬಂಧನವೂ ಇಲ್ಲ
ಸ್ಮಶಾನದಲೂ ಊಳಿಡುವ ನರಿಗಳ ಕೂಗಿಗೆ ಕನಿಕರಿಸಿ ಕಣ್ಣೀರಿಡುವುದು ಸಖಿ

ದಿಗಂತವನು ಬಯಲ ಚಪ್ಪರ ಮಾಡಿ ಎಷ್ಟಾದರೂ ಹಾಡಬಹುದು ಅಲ್ಲಮನ ಹಾಡು
ಎದೆಗೂಡಿನಿಂದಿಳಿಯದ ಹಾಡು ಪಾಡಾಗದೆ ಬೇಸರಿಸಿ ಕಣ್ಣೀರಿಡುವುದು ಸಖಿ

ಕಡಲ ತೀರದಲಿ ಕುಳಿತು ಅಲೆಗಳ ಜೊತೆಗೆ ಸರಸ ಸಲ್ಲಾಪ ಸಾವಿನೊಂದಿಗಿನ ಆಟ
ಕಾಲಚಕ್ರದ ಉರುಳಿಗೆ ಬಿದ್ದ ಆಪ್ತರೆಲ್ಲರ ನೆನಪಿಸಿ ಕಣ್ಣೀರಿಡುವುದು ಸಖಿ

ಎಲ್ಲ ಸೂಕ್ಷ್ಮ ಇಲ್ಲಿ ಎಲ್ಲ ಸೂಕ್ಷ್ಮ ಬದುಕು ಮಾತ್ರ ಬಲು ರೂಕ್ಷ ಇಲ್ಲಿ “ಜಾಲಿ”
ಅರಿತರಿತು ಹೆಜ್ಜೆ ಇಟ್ಟರೂ ಕಾಣದಲೆಗಳು ಅಪ್ಪಳಿಸಿ ಕಣ್ಣೀರಿಡುವುದು ಸಖಿ


ಗಜಲ್ -೫

ಕೊಟ್ಟು ನೋಡು ಪಡೆದು ನೋಡು ಒಂದಿಷ್ಟು ನಿನ್ನವಾಗಬಹುದು ಒಂದಿಷ್ಟು ನನ್ನವಾಗಬಹು
ಕಿವಿಯನ್ನು ಕೊಡು ಕಣ್ಣನ್ನು ಬಿಡು ಒಂದಿಷ್ಟು ನಿನ್ನವಾಗಬಹುದು ಒಂದಿಷ್ಟು ನನ್ನವಾಗಬಹುದು

ಜೋರು ಜಬರುದಸ್ತಿ ಏನಿಲ್ಲವಿಲ್ಲಿ ನೀನು ದೊಡ್ಡವನು ನಾನು ಸಣ್ಣವನು ನೆಲದ ಮೇಲೆ
ಹೆಜ್ಜೆ ಮುಂದೆ ಇಡು ಮೆಲ್ಲಗೆ ಓಡು ಒಂದಿಷ್ಟು ನಿನ್ನವಾಗಬಹುದು ಒಂದಿಷ್ಟು ನನ್ನವಾಗಬಹುದು

ಏರುಪೇರು ಗುಡ್ಡಗಾಡು ಊರು ಎಲ್ಲ ದಾಟಬೇಕು ರಿಯಾಯಿತಿ ಮಾತಿಗಿಲ್ಲಿ ಅರ್ಥವಿಲ್ಲ ಗುರುವೆ
ಕಾಡು ಮೇಡು ಎಲ್ಲ ಸುತ್ತಾಡು ಒಂದಿಷ್ಟು ನಿನ್ನವಾಗಬಹುದು ಒಂದಿಷ್ಟು ನನ್ನವಾಗಬಹುದು

ಗಾಜುಗೊಳದೊಳಗೆ ತೇಲಿಯಾಡುವ ಸಣ್ಣ ಸಣ್ಣ ಮೀನನೋಟ ಕೊಂಡವರ ಕಣ್ಣಿಗೆ ಆನಂದವಷ್ಟೇ
ಹೊರಗಿನ ಪ್ರಪಂಚ ಅರಿತುನೋಡು ಒಂದಿಷ್ಟು ನಿನ್ನವಾಗಬಹುದು ಒಂದಿಷ್ಟು ನನ್ನವಾಗಬಹುದು

ಒಂದು ಕೈಗೆ ಐದು ಬೆರಳಿನಂತೆ ಒಂದು ತಲೆಗೆ ಹತ್ತು ಯೋಚನೆಗಳ ಮುತ್ತಿಗೆ ಎಲ್ಲ ಖರಾಬು “ಜಾಲಿ”
ಸಮಷ್ಟಿಯೆಡೆ ನಡೆಯಲು ಮನಸು ಮಾಡು ಒಂದಿಷ್ಟು ನಿನ್ನವಾಗಬಹುದು ಒಂದಿಷ್ಟು ನನ್ನವಾಗಬಹುದು


ಗಜಲ್ – ೬

ನನ್ನ ಸಾವಿನಲಿ ನಿನ್ನ ಪ್ರೀತಿಯಿದೆಯೆಂದರೆ ನಿನಗಾಗಿ ಸಾಯುವೆ
ನನ್ನ ಕನಸಿನಲಿ‌ ನಿನ್ನ ಅರಮನೆಯಿದೆಯೆಂದರೆ
ನಿನಗಾಗಿ ಕನಸಾಗುವೆ

ನನ್ನ ಉಸಿರಿನಲಿ ನಿನ್ನ ಪಿಸುದನಿಗಳಿವೆಯೆಂದರೆ ನಿನಗಾಗಿ ಉಸಿರಾಡುವೆ
ನನ್ನ ಜೀವದಲಿ ನಿನ್ನ ಕರುಳ ಕುಡಿಗಳಿವೆಯೆಂದರೆ ನಿನಗಾಗಿ ಜೀವಿಸುವೆ

ನನ್ನ ಮಾತಿನಲಿ ನಿನ್ನ ಮಾಧುರ್ಯವಿದೆಯೆಂದರೆ ನಿನಗಾಗಿ ಮಾತಾಗುವೆ
ನನ್ನ ಚರಣದಲಿ ನಿನ್ನ ಋತುಗಾನವಿದೆಯೆಂದರೆ ನಿನಗಾಗಿ ಚರಣವಾಗುವೆ

ನನ್ನ ಮುಖದಲಿ ನಿನ್ನ ಮುಗುಳ್ನಗೆಯಿದೆಯೆಂದರೆ ನಿನಗಾಗಿ ಮುಖದೋರುವೆ
ನನ್ನ ಎದೆಯಲಿ‌ ನಿನ್ನ ಮರಿಗುಬ್ಬಿಯಿದೆಯೆಂದರೆ ನಿನಗಾಗಿ ಎದೆಯೊಡ್ಡುವೆ

ನನ್ನ ಶಿಕ್ಷೆಯಲಿ ನಿನ್ನ ಬಿಡುಗಡೆಯಿದೆಯೆಂದರೆ ನಿನಗಾಗಿ ಶಿಕ್ಷೆ ಪಡೆಯುವೆ
“ಜಾಲಿ” ನನ್ನ ಅಳುವಿನಲಿ ನಿನ್ನ ನಗುವಿದೆಯೆಂದರೆ ನಿನಗಾಗಿ ಅತ್ತುಬಿಡುವೆ


ಗಜಲ್ -೭

ಬೀಗ ಹಾಕಲು ಒಂದೇ ವಿಷಯವಿತ್ತು ಸಖಿ
ಹಗುರವಾಗಲು ಅದ್ಯಾವ ಅಡ್ಡಿಯಿತ್ತು ಸಖಿ

ಕೊಸರಿಕೊಳ್ಳಲು ಈ ಬದುಕೇನು ಕೊರಡಲ್ಲ
ಕೊರಡೂ ಕೊನರುವ ಸತ್ಯ ತಿಳಿಯಬೇಕಿತ್ತು ಸಖಿ

ಹಸನಾಗಿರುವ ವಿಷಯಗಳಲ್ಲಿ ವಿಷ ಬೆರಕೆ ಬೇಡ
ಕಲ್ಲುಮುಳ್ಳು ಹಾದಿಯೆ ಚಿನ್ನ ಸಿಗಬಹುದಿತ್ತು ಸಖಿ

ಅಂದವೂ ಅಲ್ಲ ಅನುರಾಗವೂ ಅಲ್ಲ ಲಜ್ಜೆಯಂತಲ್ಲ
ಕ್ಷಣಕೆ ಕ್ಷಣ ಢೀಕೊಟ್ಟು ನೋಡಬಹುದಾಗಿತ್ತು ಸಖಿ

ಎಲ್ಲ ಮುಗಿಯಿತೆಂದುಕೊಂಡು ಹೆಬ್ಬಂಡೆ ನೂಕಿದೆ
“ಜಾಲಿ” ಕರುಳಿಗೂ ಕಲ್ಲಿನ ಬಾಂಧವ್ಯ ಗೊತ್ತಿತ್ತು ಸಖಿ


ವೇಣು ಜಾಲಿಬೆಂಚಿ
ರಾಯಚೂರು.

- Advertisement -
- Advertisement -

Latest News

ಲೇಖಕಿ ಜಯಶ್ರೀ ಅಬ್ಬಿಗೇರಿಗೆ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಯ ಗರಿ

ಬೆಳಗಾವಿ: ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜನೀಯರಿಂಗ್ ಪ್ರತಿಷ್ಠಾನ ಟ್ರಸ್ಟ ನೀಡುವ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಸ.ಪ.ಪೂ.ಕಾಲೇಜು ಹಿರೇಬಾಗೇವಾಡಿಯ ಉಪನ್ಯಾಸಕಿ, ಲೇಖಕಿ, ಅಂಕಣಕಾರ್ತಿ ಜಯಶ್ರೀ...
- Advertisement -

More Articles Like This

- Advertisement -
close
error: Content is protected !!