spot_img
spot_img

ಪಶು ಆಸ್ಪತ್ರೆಯ ಕಟ್ಟಡ ಕಳಪೆ ಕಾಮಗಾರಿ ; ಚಾಟಿಯೇಟು ಬೀಸಿದ ಈರಣ್ಣ ಕಡಾಡಿ

Must Read

- Advertisement -

ಮೂಡಲಗಿ: ಬೆಳಗಾವಿ ಜಿಲ್ಲೆಯಲ್ಲಿ ಮಂಜೂರಾದ ನಾಲ್ಕು ಪಶು ಆಸ್ಪತ್ರೆ ಕಟ್ಟಡಗಳ ಕಾಮಗಾರಿಯು ತೀರಾ ಕಳಪೆ ಮಟ್ಟದಿಂದ ಕೂಡಿದ್ದು, ಸಂಬಂಧಿಸಿದ ಅಧಿಕಾರಿಗಳು, ಗುತ್ತಿಗೆದಾರನ ವಿರುದ್ದ ಕಟ್ಟುನಿಟ್ಟಿನ ಕ್ರಮ ಜರುಗಿಸಿ ಗುತ್ತಿಗೆದಾರರನ್ನ ಕಪ್ಪುಪಟ್ಟಿಗೆ ಸೇರಿಸಲು ಪಶು ಆಯುಕ್ತರಿಗೆ ಪತ್ರ ಬರೆಯುವ ಮೂಲಕ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಒತ್ತಾಯಿಸಿದ್ದಾರೆ.

ಶುಕ್ರವಾರದಂದು ಪಟ್ಟಣದ ಪಶು ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಆಸ್ಪತ್ರೆಯ ನೂತನ ಕಟ್ಟಡ ಕಾಮಗಾರಿ ಕಳಪೆ ಮಟ್ಟದಲ್ಲಿ ಕೈಗೊಂಡಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಸಮರ್ಪಕವಾದ ರೀತಿಯಲ್ಲಿ ಸಾಮಗ್ರಿಗಳನ್ನು ಬಳಸದೆ ಕಾಟಾಚಾರಕ್ಕಾಗಿ ಕಾಮಗಾರಿ ಮಾಡುತ್ತಿದ್ದರೂ ಸ್ಥಳೀಯ ಅಧಿಕಾರಿಗಳು ಏನು ಕೆಲಸ ಮಾಡುತ್ತೀರಿ ? ಸೈಟಿಗೆ ಬಂದು ವೀಕ್ಷಣೆ ಮಾಡಲು ಆಗೋದಿಲ್ಲ, ಕೇಂದ್ರ ಸರ್ಕಾರದ ಯೋಜನೆಗಳನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ಪಶು ತಾಲೂಕಾ ವೈದ್ಯಾಧಿಕಾರಿ ಮೋಹನ ಕಮತ ಅವರಿಗೆ ಕ್ಲಾಸ್ ತೆಗೆದುಕೊಂಡ ಅವರು, ಶೀಘ್ರವಾಗಿ ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಗೆ ಕಳಪೆ ಕಟ್ಟಡ ಕಾಮಗಾರಿ ಬಗ್ಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.

- Advertisement -

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಮೂಡಲಗಿ, ಖನಗಾಂವ, ಯರಗಟ್ಟಿ ಹಾಗೂ ಕಿತ್ತೂರಿನಲ್ಲಿ ಆರ್.ಐ.ಡಿ.ಎಫ್ ಟ್ರಾಂಚ್ -28ನೇ ಯೋಜನೆಯಡಿ ಪಶು ಚಿಕಿತ್ಸಾಲಯ ಮತ್ತು ಪಶು ಆಸ್ಪತ್ರೆಗಳ ನೂತನ ಕಟ್ಟಡ ನಿರ್ಮಾಣ ಕಾಮಗಾರಿಯನ್ನು 199.13 ಲಕ್ಷ ರೂಪಾಯಿಗಳ ಅನುದಾನದಲ್ಲಿ ರಾಜ್ಯ ಸರ್ಕಾರಿ ಸ್ವಾಮ್ಯದ ನಿರ್ಮಾಣ ಸಂಸ್ಥೆಯಾದ ಕರ್ನಾಟಕ ಸ್ಟೇಟ್ ಹ್ಯಾಬಿಟೇಟ್ ಸೆಂಟರ್ ಬೆಂಗಳೂರು ಈ ಸಂಸ್ಥೆಗೆ ಮಂಜೂರಾತಿ ನೀಡಲಾಗಿದ್ದು. ಪಶು ಚಿಕಿತ್ಸಾಲಯ ಮತ್ತು ಪಶು ಆಸ್ಪತ್ರೆಗಳ ನೂತನ ಕಟ್ಟಡ ನಿರ್ಮಾಣ ಕಾಮಗಾರಿಯು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ ಎಂದರು.

ಆದರೆ ಸದರಿ ಕಾಮಗಾರಿಯನ್ನು ನಿಗದಿತ ಕಾಲಾವಧಿ ಹಾಗೂ ಪೂರ್ಣ ಗುಣ ಮಟ್ಟದಲ್ಲಿ ನಿರ್ಮಾಣ ಮಾಡುವ ಜವಾಬ್ದಾರಿಯು ಸಂಬಂಧಿಸಿದ ಗುತ್ತಿಗೆದಾರದ್ದಾಗಿದ್ದು, ಸದರಿ ಗುತ್ತಿಗೆದಾರ ಸಂಸ್ಥೆಯವರು ಇದನ್ನು ಆಗಸ್ಟ್ 2023 ರಲ್ಲಿ ಪ್ರಾರಂಭಗೊಳಿಸಿ ಜುಲೈ 2024 ರಲ್ಲಿ ಮುಕ್ತಾಯಗೊಳಿಸುವ ನಿಬಂಧನೆಗೆ ಒಳಪಟ್ಟು ಕಾಮಗಾರಿಯನ್ನು ಪಡೆದುಕೊಂಡಿದ್ದಾರೆ. ಆದರೆ ಸದರಿ ಕಾಮಗಾರಿಯನ್ನು ಸಂಬಂಧಿಸಿದ ಗುತ್ತಿಗೆದಾರರು ಕಳೆದ ಆರು ತಿಂಗಳಿಂದ ಅರ್ಧಕ್ಕೆ ಸ್ಥಗಿತಗೊಳಿಸಿದ್ದಾರೆ ಅದೂ ಅಲ್ಲದೆ ಈಗಾಗಲೇ ಕೈಗೊಂಡಿರುವ ಕಾಮಗಾರಿಯನ್ನು ತೀರಾ ಕಳಪೆ ಮಟ್ಟದಲ್ಲಿ ನಿರ್ಮಿಸಿದ್ದಾರೆ. ಕ್ಯೂರಿಂಗ್ ಕಾರ್ಯವನ್ನು ಸರಿಯಾಗಿ ನಿರ್ವಹಿಸಿಲ್ಲ, ಇದರಿಂದಾಗಿ ಕಟ್ಟಡದ ಹಲವು ಭಾಗಗಳಲ್ಲಿ ಬಿರುಕು ಬಿಟ್ಟು, ಕಟ್ಟಡ ಸಂಪೂರ್ಣವಾಗಿ ಕುಸಿದು ಬೀಳುವ ಹಂತದಲ್ಲಿ ಇರುವುದರಿಂದ ಸಾರ್ವಜನಿಕರ ಹಾಗೂ ಜಾನುವಾರುಗಳಿಗೆ ಜೀವ ಹಾನಿಯಾಗುವ ಸಂಭವಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಈಗಾಗಲೇ ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಆಯುಕ್ತರಿಗೆ ಮತ್ತು ಅಪರ ನಿರ್ದೇಶಕರಿಗೆ ಸದರಿ ಕಟ್ಟಡದ ಕಾಮಗಾರಿಗಳನ್ನು ದುರಸ್ತಿಗೊಳಿಸದೇ ಸಂಪೂರ್ಣವಾಗಿ ನೆಲಸಮಗೊಳಿಸಿ ಹೊಸ ಕಟ್ಟಡದ ಕಾಮಗಾರಿಯನ್ನು ಸದರಿ ಗುತ್ತಿಗೆ ಸಂಸ್ಥೆಯವರಿಂದಲೇ ನಿರ್ಮಿಸುವಂತೆ ಆದೇಶಿಸಲು ಹಾಗೂ ಗುತ್ತಿಗೆದಾರ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಹಾಗೂ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಯಾವುದೇ ಮುಲಾಜಯಿಲ್ಲದೇ ಕ್ರಮಕೈಕೊಳ್ಳಬೇಕೆಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಆಯುಕ್ತರಿಗೆ ಮತ್ತು ಅಪರ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ ಎಂದು ಈರಣ್ಣ ಕಡಾಡಿ ಹೇಳಿದರು.

- Advertisement -

ಈ ಸಂದರ್ಭದಲ್ಲಿ ಮೂಡಲಗಿ ಪಾಲಿ ಕ್ಲಿನಿಕ್ ಉಪನಿರ್ದೇಶಕ ಡಾ. ಎಮ್ ಬಿ ವಿಭೂತಿ, ಮುಖಂಡರಾದ ಪ್ರಕಾಶ ಮಾದರ, ಬಸವರಾಜ ಪಾಟೀಲ, ಬಸವರಾಜ ಪಾಲಬಾಂವಿ, ಈರಪ್ಪ ಢವಳೇಶ್ವರ, ಮಲ್ಲಪ್ಪ ನೇಮಗೌಡರ, ಹಾಗೂ ಅನೇಕರು ಇದ್ದರು.

- Advertisement -
- Advertisement -

Latest News

ವೇದವ್ಯಾಸರ ಸ್ಮರಣಾರ್ಥ ಗುರು ಪೂರ್ಣಿಮಾ

ಗುರುಪೂರ್ಣಿಮಾ ವಿಶೇಷ ಅರಿವಿಗೆ ಅನಂತ ಶಯನನಾಗಿ ಜ್ಞಾನ ಜ್ಯೋತಿ ಬೆಳಗುತ್ತಿರುವ ಗುರಿತೋರುವ ನೇತಾರ ಬದುಕು ಭವಿಷ್ಯದ ಹಾದಿಯ ದಿಟ್ಟ ಹೆಜ್ಜೆಯಿಡಲು ಗುರಿ ತೋರುವ ದೈವದ ಗುರಿಕಾರ ಜ್ಞಾನದ ತೃಷೆಯನ್ನು ತಣಿಸಿದ ಬದುಕನ್ನು ಹದಗೊಳಿಸುವ ಗುರುಬಲದ ಶಿಲ್ಪಿಗಾರ ಸಕಲ ಜ್ಞಾನವಾಹಿನಿ ಜಾಗೃತಿ ಜಗಕೆ...
- Advertisement -

More Articles Like This

- Advertisement -
close
error: Content is protected !!
Join WhatsApp Group