‘ಬದುಕಿನ ಜೀವನ ಮೌಲ್ಯಗಳು ಜಾನಪದದಲ್ಲಿವೆ’
ಮೂಡಲಗಿ: ‘ಬದುಕಿನ ನಿಜವಾದ ಜೀವನ ಮೌಲ್ಯಗಳು ಜಾನಪದ ಸಾಹಿತ್ಯ ಮತ್ತು ಜಾನಪದ ಕಲೆಗಳಲ್ಲಿವೆ’ ಎಂದು ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ ಮಾಲತಿಶ್ರೀ ಮೈಸೂರ ಹೇಳಿದರು.
ಇಲ್ಲಿಯ ಚೈತನ್ಯ ಆಶ್ರಮ ವಸತಿ ಶಾಲೆಯ ಆತಿಥ್ಯದಲ್ಲಿ ಗೋಕಾಕ ಮತ್ತು ಮೂಡಲಗಿ ತಾಲ್ಲೂಕುಗಳ ಕನ್ನಡ ಜಾನಪದ ಪರಿಷತ್ತಿನಿಂದ ಜರುಗಿದ ಜಾನಪದ ಪರಿಷತ್ ಸಂಸ್ಥಾಪನ ದಿನಾಚರಣೆ ಮತ್ತು ವಿವಿಧ ಜಾನಪದ ಕಲಾ ಪ್ರದರ್ಶನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ನಾಡಿನ ಇಡೀ ಸಂಸ್ಕೃತಿಯ ಬೇರು ಜಾನಪದದಲ್ಲಿ ಇದೆ ಎಂದರು.
ಕಲೆಗಳು ಇರುವವರೆಗೆ ಕಲಾವಿದರು ಬದುಕುತ್ತಾರೆ. ನಶಿಸಿ ಹೋಗುತ್ತಿರುವ ಜಾನಪದ ಕಲೆಗಳ ಸಂರಕ್ಷಣೆ ಮತ್ತು ಪ್ರೋತ್ಸಾಹವು ಅವಶ್ಯವಿದೆ. ಸರ್ಕಾರವು ಸಹ ಕಲಾವಿದರನ್ನು ಗುರುತಿಸುವ ಕಾರ್ಯವನ್ನು ನಿರಂತರವಾಗಿ ಮಾಡುವ ಮೂಲಕ ಕಲಾವಿದರಲ್ಲಿ ಉತ್ಸಾಹ ತುಂಬಬೇಕು ಎಂದರು.
ಕನ್ನಡ ಜಾನಪದ ಪರಿಷತ್ ಗೋಕಾಕ ತಾಲ್ಲೂಕು ಅಧ್ಯಕ್ಷ ಜಯಾನಂದ ಮಾದರ ಮಾತನಾಡಿ ತಾಲ್ಲೂಕಿನಲ್ಲಿ ಅನೇಕ ಜಾನಪದ ಕಲಾವಿದರು ಇದ್ದಾರೆ. ಅವರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಜಾನಪದ ಪರಿಷತ್‍ವು ಮಾಡುತ್ತಲಿದೆ ಎಂದರು.
ಚಿಂತಕ ಎಂ.ಬಿ. ಬಳಿಗಾರ ಉಪನ್ಯಾಸ ನೀಡಿದರು.
ಬೀರನಹೊಳಿ ಶ್ರೀಕೃಷ್ಣಾಶ್ರಮದ ಚಿದಾನಂದ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.
ಅಧ್ಯಕ್ಷತೆವಹಿಸಿದ್ದ ಮಕ್ಕಳ ಸಾಹಿತಿ ಡಾ. ಲಕ್ಷ್ಮಣ ಚೌರಿ, ಪ್ರೊ. ಸುಭಾಷ ಕಮದಾಳ, ಮುಖ್ಯ ಅತಿಥಿ ಬಾಲಶೇಖ ಬಂದಿ, ಸಾಹಿತಿ ರಜನಿ ಜಿರಗ್ಯಾಳ, ಶಂಕರ ಕ್ಯಾಸ್ತಿ ಮಾತನಾಡಿದರು.
ಶಿಂಗಳಾಪುರದ ಸಂಪ್ರದಾಯ ಕಲಾವಿದೆ ರತ್ನವ್ವಾ ಹರಿಜನ, ಮೂಡಲಗಿಯ ಸಿದ್ದಿಸೋಗಿನ ಚುಟುಕುಸಾಬ ಜಾತಗಾರ, ಅರಭಾವಿಯ ಸಡ್ಲೆಪ್ಪಾ ದೊಡಮನಿ ಅವರನ್ನು ಸನ್ಮಾನಿಸಿ ಗೌರವಿಸಿದರು. ಆನಂದ ಸೊರಗಾಂವಿ ನಿರೂಪಿಸಿದರು, ಲಕ್ಕಪ್ಪ ಯಡ್ರಾಂವಿ ವಂದಿಸಿದರು.
ಜಾನಪದ ವೈಭವ:
ಜಾನಪದ ವೈಭವ ಕಾರ್ಯಕ್ರಮದಲ್ಲಿ ಹಂತಿಪದ, ಭಜನಾಪದ, ಛದ್ಮವೇಶ, ಸೋಬಾನ ಪದ, ಗೊಂದಲಿಗರ ಪದ, ಭರತ ನಾಟ್ಯ ಪ್ರದರ್ಶನವು ಎಲ್ಲರ ಗಮನಸೆಳೆಯಿತು. ಗೋಕಾಕದ ವಿವೇಕಾನಂದ ಯೋಗ ಕೇಂದ್ರ ಮಕ್ಕಳಿಂದ ಯೋಗ ನೃತ್ಯ ಗಮನಸೆಳೆಯಿತು.