ತಿಗಡಿ ಸೇತುವೆಯಂತೆ ಇದನ್ನೂ ವ್ಯರ್ಥ ಮಾಡಬೇಡಿ ಎಂದ ಗ್ರಾಮಸ್ಥರು, ರೈತರು
ಮೂಡಲಗಿ – ತಾಲೂಕಿನ ಕೊನೆಯ ಗ್ರಾಮವಾದ ಢವಳೇಶ್ವರ ಹಾಗೂ ರಬಕವಿ ಬನಹಟ್ಟಿ ತಾಲೂಕಿನ ಢವಳೇಶ್ವರ ಗ್ರಾಮಗಳ ನಡುವೆ ಹಾದು ಹೋಗಿರುವ ಘಟಪ್ರಭಾ ನದಿಗೆ ಸುಮಾರು ೩೦ ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗುತ್ತಿದ್ದು ಇದು ತೀರಾ ಅವೈಜ್ಞಾನಿಕವಾಗಿದೆ ಇದರಿಂದ ಗ್ರಾಮಗಳಿಗೆ ಹಾನಿಯೇ ಹೆಚ್ಚಾಗುತ್ತದೆ ಆದ್ದರಿಂದ ಸೇತುವೆ ಕಾಮಗಾರಿಯಲ್ಲಿ ಬದಲಾವಣೆ ಮಾಡಬೇಕು ಎಂದು ಢವಳೇಶ್ವರ ಗ್ರಾಮದ ನಾಗರಿಕರು ಒತ್ತಾಯಿದ್ದಾರೆ.
ಪತ್ರಿಕೆಯೊಡನೆ ಮಾತನಾಡುತ್ತ ತಮ್ಮ ಅಳಲನ್ನು ತೋಡಿಕೊಂಡ ಗ್ರಾಮದ ಮುಖಂಡ ಮಹಾದೇವ ನಾಡಗೌಡ ಅವರು, ೨೦೧೮ ರಲ್ಲಿ ಆಗಿನ ಶಾಸಕರಾಗಿದ್ದ ಉಮಾಶ್ರೀಯವರಿಂದ ಮಂಜೂರು ಮಾಡಲ್ಪಟ್ಟ ಸೇತುವೆಗೆ ರೂ.೩೦ ಕೋಟಿ ವೆಚ್ಚ ಮಾಡಲಾಗುತ್ತಿದೆ ಆದರೆ ಇದರ ನಿರ್ಮಾಣವೇ ಅವೈಜ್ಞಾನಿಕವಾಗಿದೆ. ಮಳೆಗಾಲದಲ್ಲಿ ಮಹಾಪೂರ ಬಂದು ಮೊದಲೇ ಅಪಾರ ಹಾನಿ ಅನುಭವಿಸುವ ಇದರಿಂದ ಎರಡೂ ಢವಳೇಶ್ವರ ಗ್ರಾಮಗಳಿಗೆ ಇನ್ನೂ ಹೆಚ್ಚಿನ ಹಾನಿ ಸಂಭವಿಸಲಿದೆ ಆದ್ದರಿಂದ ನಮಗೆ ಈಗಲೇ ಭಯವುಂಟಾಗಿದೆ ಎಂದರು.
ಸದರಿ ಸೇತುವೆ ಕಟ್ಟಬೇಕಾದರೆ ಸುಮಾರು ಎರಡು ಕಿಲೋಮೀಟರ್ ಉದ್ದದ ಸೇತುವೆಯಾಗಬೇಕು ಅದು ಎಲ್ಲಿಂದ ಆರಂಭವಾಗುತ್ತದೆಯೋ ಅಲ್ಲಿಂದಲೇ ಸೇತುವೆಯ ಪಿಲ್ಲರ್ ಗಳು ಬಂದು ನೀರು ಹರಿದು ಹೋಗುವಂತೆ ಕಮಾನುಗಳು ಆರಂಭವಾಗಬೇಕು. ಆದರೆ ಇವರು ನದಿಪಾತ್ರದಲ್ಲಿ ಮಾತ್ರ ಕಮಾನುಗಳನ್ನು ಮಾಡಿ ಎರಡೂ ಬದಿಯ ಹೊಲಗಳಲ್ಲಿ ಬೃಹತ್ ಬದು ನಿರ್ಮಾಣ ಮಾಡುವುದರಿಂದ ಮಹಾಪೂರ ಬಂದಾಗ ಹಿನ್ನೀರು ಹೆಚ್ಚಾಗಿ ಇನ್ನೂ ಹೆಚ್ಚು ಪ್ರಮಾಣದಲ್ಲಿ ಗ್ರಾಮದೊಳಗೆ ನೀರು ಬರುತ್ತದೆ. ಅಲ್ಲದೆ ಮಹಾಪೂರದಲ್ಲಿ ಸೇತುವೆಯ ಎರಡೂ ತುದಿಗಳು ನೀರಲ್ಲಿ ಮುಳುಗಿದರೆ ಸೇತುವೆಯ ಮೇಲೆ ಹೇಗೆ ಹೋಗಲು ಸಾಧ್ಯ ಎಂದು ಅವರು ಪ್ರಶ್ನೆ ಮಾಡಿದರು.
ಇಂಥ ಅವೈಜ್ಞಾನಿಕ ಪದ್ಧತಿಯಿಂದ ಕಟ್ಟಲಾಗಿರುವ ತಿಗಡಿ ಸೇತುವೆ ಕೂಡ ಮಹಾಪೂರ ಬಂದಾಗ ಎರಡೂ ಕಡೆ ನೀರು ನಿಂತು ಸೇತುವೆಯ ಮೇಲೆ ಸಂಚಾರ ಮಾಡಲಾಗದೆ ವ್ಯರ್ಥವಾಗಿದೆ. ಮುಸಗುಪ್ಪಿ, ತಿಗಡಿ ಗ್ರಾಮಗಳಿಗೆ ನೀರು ನುಗ್ಗುವುದು ನಿಂತಿಲ್ಲ ಆದರೆ ನಮ್ಮ ಢವಳೇಶ್ವರ ಗ್ರಾಮಗಳಿಗೂ ಹಾಗೆ ಆಗಬಾರದು ಎಂದು ರಾಜು ಉಪ್ಪಾರ ಹೇಳಿದರು.
ಈಗಾಗಲೇ ಪ್ರತಿವರ್ಷ ಮಹಾಪೂರ ಬಂದು ಸುಮಾರು ೧೨೦೦ ಎಕರೆಯಷ್ಟು ಕಬ್ಬಿನ ಬೆಳೆ ನಾಶವಾಗುತ್ತದೆ. ಅವರಾದಿ, ಅರಳಿಮಟ್ಟಿ ಢವಳೇಶ್ವರ, ಬೀಸನಕೊಪ್ಪ, ಹುಣಶಾಳ, ಸುಣಧೋಳಿ ಗ್ರಾಮದ ತನಕ ನೂರಾರು ಮನೆಗಳು ಬಿದ್ದು ನಾವೂ ಸಾಕಷ್ಟು ಹಾನಿ ಅನುಭವಿಸುತ್ತೇವೆ ಸರ್ಕಾರ ಮಾತ್ರ ಕಣ್ಣು ಮುಚ್ಚಿ ಕುಳಿತಿರುತ್ತದೆ. ನಮ್ಮ ಕಷ್ಟಗಳಿಗೆ ಪರಿಹಾರ ಕೂಡ ಕೊಡುವುದಿಲ್ಲ. ಈಗ ಈ ಸೇತುವೆ ನಿರ್ಮಾಣದಿಂದ ಇನ್ನೂ ಹೆಚ್ಚಿನ ಹಾನಿಯಾಗುವುದನ್ನು ಸರ್ಕಾರ, ಶಾಸಕರು, ಮಂತ್ರಿಗಳು ಗಮನಿಸಬೇಕು ಈ ಕಾಮಗಾರಿಯನ್ನು ಇಲ್ಲಿಗೇ ನಿಲ್ಲಿಸಿ ವೈಜ್ಞಾನಿಕವಾಗಿ ಸೇತುವೆ ನಿರ್ಮಿಸಬೇಕು ಇಲ್ಲದಿದ್ದರೆ ನಾವೆಲ್ಲ ರೈತರು ಹೈಕೋರ್ಟಿಗೆ ಹೋಗಿ ರಿಟ್ ಅರ್ಜಿಸಿ ನ್ಯಾಯ ಕೇಳುತ್ತೇವೆ ಎಂದು ಗ್ರಾಮಸ್ಥರಾದಿಯಾಗಿ ಒಕ್ಕೊರಲಿನಿಂದ ಹೇಳಿದರು.
ಈ ಸಂದರ್ಭದಲ್ಲಿ ಮಲ್ಲು ಹುಚ್ಚನ್ನವರ,
ಭೀಮಪ್ಪ ಮಕ್ಕನ್ನವರ, ಭೀಮಪ್ಪ ಕಂಬಳಿ, ಸದಾಶಿವ ಮಕ್ಕನ್ನವರ, ಮಲ್ಲನಗೌಡಾ ಪಾಟೀಲ, ಪರಸಪ್ಪ ಅವರಾದಿ, ದುಂಡಪ್ಪ ತಳವಾರ, ಸುರೇಶ ಕೋಟಿ, ಯಮನಪ್ಪ ಕುಂಬಾರ, ಆನಂದ ಚನಾಳ, ಹಣಮಂತ ಅಂಬಲಜೇರಿ, ಹಣಮಂತಗೌಡಾ ಪಾಟೀಲ ಅನೇಕರು ಇದ್ದರು.