ಮಹಿಳೆಯ ಮೇಲಿನ ದೌರ್ಜನ್ಯ ಅವಳ ಹಕ್ಕುಗಳ ಉಲ್ಲಂಘನೆ : ಸಾಹಿತಿ ವಿದ್ಯಾವತಿ ಅಂಕಲಗಿ 

0
151

ಸಿಂದಗಿ :ಮಹಿಳೆಯರ ಮೇಲಿನ ದೌರ್ಜನ್ಯವು ವಿಶ್ವದಲ್ಲಿ ಅತ್ಯಂತ ಪ್ರಚಲಿತ ಮತ್ತು ವ್ಯಾಪಕವಾದ ಮಾನವ ಹಕ್ಕುಗಳ ಉಲ್ಲಂಘನೆಗಳಲ್ಲಿ ಒಂದಾಗಿದೆ ಎಂದು ವಿಜಯಪುರ ಹಿರಿಯ ಸಾಹಿತಿ ನ್ಯಾಯವಾದಿ ವಿದ್ಯಾವತಿ ಅಂಕಲಗಿ ಹೇಳಿದರು.

ಪಟ್ಟಣದ ಪ್ರಜಾಪಿತ ಬ್ರಹ್ಮಾಕುಮಾರಿ ವಿಶ್ವವಿದ್ಯಾಲಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,  ಜಾಗತಿಕವಾಗಿ, ಸುಮಾರು ಮೂರು ಮಹಿಳೆಯರಲ್ಲಿ ಒಬ್ಬರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ದೈಹಿಕ ಅಥವಾ ಲೈಂಗಿಕ ಹಿಂಸೆಗೆ ಒಳಗಾಗುತ್ತಿದ್ದಾರೆ. ಹಿಂಸೆ ಸಮಾಜದ ಅಷ್ಟೇ ಅಲ್ಲ ಅದಕ್ಕಿಂತಲೂ ಹೆಚ್ಚಾಗಿ ಮನೆಯಲ್ಲೇ ನಡೆಯುತ್ತಿದೆ ಮನೆಯ ಕುಟುಂಬ ಸದಸ್ಯರೇ ಹೆಣ್ಣಿಗೆ ಕಳಂಕವಾಗುತ್ತಿದ್ದಾರೆ ಎಂದು ವಿಷಾದಿಸಿದರು.

ನಿಡುಗುಂದಿ ಬ್ರಹ್ಮಾಕುಮಾರಿಸ್ ಸೇವಾ ಕೇಂದ್ರದ ಸಂಚಾಲಕಿ ರೇಣುಕಾ ಅಕ್ಕನವರು ಮಾತನಾಡಿ, ನಮ್ಮ ಆಧ್ಯಾತ್ಮಿಕತೆಯು ಹಿಂದಿನಿಂದಲೂ ಸಹ ಪ್ರಜ್ಞೆಯ ಉತ್ತುಂಗವನ್ನು ತಲುಪಿದಂತಹ ಸ್ತ್ರೀ ಮತ್ತು ಪುರುಷರ ಶ್ರೀಮಂತ ಸಮೂಹದಿಂದ ತುಂಬಿದೆ. ಆಂತರ್ಯದ ಸ್ವಭಾವಕ್ಕೆ ಬಂದಾಗ ಒಬ್ಬ ಮಹಿಳೆ ಒಬ್ಬ ಪುರುಷನಷ್ಟೇ ಸಮರ್ಥಳು. ನೀವು ಸ್ತ್ರೀ ಅಥವಾ ಪುರುಷ ಎಂದು ಕರೆಯುವ ಶರೀರವು ಹೊರಗಿನ ದೇಹ ಮಾತ್ರವೇ ಆಗಿದೆ. ಇಬ್ಬರ ಒಳಗಿರುವುದು ಒಂದೇ. ಒಬ್ಬರ ಆಧ್ಯಾತ್ಮಿಕ ಸಾಮರ್ಥ್ಯಗಳು ಏನೆಂಬುದನ್ನು ದೇಹ ನಿರ್ಧರಿಸುವುದಿಲ್ಲ. ಹೊರನೋಟದ ಸೌಂದರ್ಯಕ್ಕಾಗಿ ಬೆನ್ನುತ್ತಿದ್ದೇವೆ ವಿನಹ ಒಳಗಿರುವ ಚೈತನ್ಯ ಆತ್ಮದ ಬಗ್ಗೆ ತಿಳಿದುಕೊಂಡಿಲ್ಲ ಅದನ್ನರಿಯಲು ಸತ್ಸಂಗ ಒಂದೇ ಮಾರ್ಗ  ಎಂದರು.

ನಗರದ ಅನನ್ಯ ಆಸ್ಪತ್ರೆಯ ವೈದ್ಯೆ ಶ್ರೀದೇವಿ ಬಿರಾದಾರ ಮಾತನಾಡಿ  ಒಬ್ಬ ಹೆಣ್ಣು ತನ್ನ ತಂದೆ ಅಥವಾ ಗಂಡನ ಸೇವೆಗಾಗಿ ಮಾತ್ರವೇ ಜನಿಸಿದ್ದಾಳೆ ಎಂಬ ಭಾವವಿದೆ. ಕೆಲವರು ಆಕೆ ಅಸ್ತಿತ್ವದ ಬಗ್ಗೆ ಮಾತನಾಡುತ್ತಾರೆ ತನ್ನ ಅಸ್ತಿತ್ವ ಅವಳ ಮೇಲೆ ಅವಲಂಬಿತವಾಗಿದೆ ಎಂಬ ಸತ್ಯ ತಿಳಿದಿದ್ದರೂ ಸಹ, ಅವಳು ಕೀಳೆನ್ನುತ್ತಾರೆ.  ಕೀಳೆಂದಾದರೆ, ಒಬ್ಬ ಮಹಿಳೆಯಿಂದ ಜನಿಸಿದ ಪುರುಷ ಮೇಲಾಗಲು ಹೇಗೆ ಸಾಧ್ಯ? ಈ ಮೇಲು ಕೀಳೆಂಬ ಸಮಸ್ಯೆ ಸಾರ್ವತ್ರಿಕವಾಗಿದೆ. ಇದು ಕೇವಲ ಒಬ್ಬ ಗಂಡಸು ಆ ರೀತಿಯಾಗಿ ಯೋಚಿಸುವ ಬಗ್ಗೆಯಾಗಿಲ್ಲ. ಇಡೀ ಪುರುಷ ಸಂಕುಲದ  ವಿಧಾನವಾಗಿಬಿಟ್ಟಿದೆ, ಮತ್ತಿದು ಅವರ ಸಂಸ್ಕೃತಿ ಹಾಗೂ ಧರ್ಮದ ಒಂದು ಭಾಗವೇ ಆಗಿಹೋಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಂಜೀವಿನಿ ಆಸ್ಪತ್ರೆಯ ವೈದ್ಯೆ ಆಫ್ರಿನ್ ನಾಗರಹಳ್ಳಿ   ನಿಡಗುಂದಿಯ ಗ್ರಾಮೀಣ ವಿದ್ಯಾವರ್ಧಕ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕಿ ನೀಲಾಂಬಿಕಾ ಅಕ್ಕಿ ವೇದಿಕೆ ಮೇಲಿದ್ದರು. ಸಿಂದಗಿ ಸೇವಾ ಕೇಂದ್ರದ ಸಂಚಾಲಕಿ ಪವಿತ್ರಕ್ಕನವರು ಸಾನ್ನಿಧ್ಯ ವಹಿಸಿದ್ದರು. ಮನಗೂಳಿ ಕಾಲೇಜಿನ ಪ್ರಾಚಾರ್ಯ ಡಾ. ಬಿ ಜಿ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕರಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಮಹಿಳಾ ಕ್ರಿಕೆಟ್ ಪಟು ಜಯಶ್ರೀ ಕೂಚಬಾಳ ಗೀಗಿ ಪದ ಗಾಯಕಿ ರೇಣುಕಾ ಮಾದರ, ವೈದ್ಯೆ ಸುಷ್ಮ ಹೆಗ್ಗಣದೊಡ್ಡಿ ಉಪಸ್ಥಿತರಿದ್ದರು. ಪುರಸಭೆಯ ಎಲ್ಲ ಮಹಿಳಾ ಪೌರ ಕಾರ್ಮಿಕರನ್ನು ಗೌರವಿಸಿ ಸನ್ಮಾನಿಸಲಾಯಿತು