ಬನವಾಸಿ: ಗೋವಾ ರಾಜ್ಯದ ಸಮಾಜ ಕಲ್ಯಾಣ, ಪುರಾತತ್ವ ಇಲಾಖೆಯ ಸಚಿವ ಸುಭಾಷ ದೇಸಾಯಿ ಹಾಗೂ ಗೋವಾದ ನಾವೇಲಿ ಕ್ಷೇತ್ರದ ಶಾಸಕ ಉಲ್ಲಾಸ ತುವೇಕರ ಅವರು ಕದಂಬರ ರಾಜಧಾನಿ ಇಲ್ಲಿಯ ಐತಿಹಾಸಿಕದ ಮಧುಕೇಶ್ವರ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.
ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರವಾಸದಲ್ಲಿದ್ದಾಗ ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವ ಸುಭಾಷ ದೇಸಾಯಿ ಮತ್ತು ಶಾಸಕ ಉಲ್ಲಾಸ ತುವೇಕರ ಪೂರ್ಣ ದೇವಸ್ಥಾನ ವೀಕ್ಷಣೆ ಮಾಡಿ, ಐತಿಹಾಸಿಕ ಮಾಹಿತಿ ಪಡೆದು ಶ್ರೀ ಮಧುಕೇಶ್ವರ ದೇವರ ನೂತನ ರಥದ ವೀಕ್ಷಣೆ ಮಾಡಿದರು.
ಬಿಜೆಪಿಯ ಸರ್ಕಾರವು ಧಾರ್ಮಿಕ – ಪೌರಾಣಿಕ – ಐತಿಹಾಸಿಕ ಕ್ಷೇತ್ರಗಳ ಬಗ್ಗೆ ಹಾಗೂ ನಮ್ಮ ಸಂಸ್ಕೃತಿಯ ಬಗ್ಗೆ ಹೊಂದಿರುವ ಕಳಕಳಿಯ ಅಭಿವ್ಯಕ್ತಿಯಾಗಿ ಬನವಾಸಿಯ ಮಧುಕೇಶ್ವರ ದೇವರ ನೂತನ ರಥವು ನಿರ್ಮಾಣವಾಗಿದೆ. ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಅವರ ಛಲ ಮತ್ತು ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ ಎಂದು ಸಚಿವ ಸುಭಾಷ ದೇಸಾಯಿ ಹೇಳಿದರು.
ಬಿಜೆಪಿ ಉತ್ತರ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್, ದೇವಾಲಯದ ಆಡಳಿತ ಸಮಿತಿಯ ಅಧ್ಯಕ್ಷ ರಾಜಶೇಖರ ಒಡೆಯರ್, ಕಾರ್ಯದರ್ಶಿ ಪ್ರಕಾಶ ಬಂಗ್ಲೆ, ಹಿರಿಯರಾದ ಟಿ.ಜಿ ನಾಡಿಗೇರ, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮಂಜುನಾಥ ನಾಯ್ಕ್, ಬಿಜೆಪಿಯ ಪ್ರಮುಖರಾದ ರವಿ ಹೆಗಡೆ, ರಮೇಶ ನಾಯ್ಕ, ಗಣೇಶ ಸಣ್ಣಲಿಂಗಣ್ಣವರ ಮತ್ತಿತರರು ಉಪಸ್ಥಿತರಿದ್ದರು.