ತಿಮ್ಮಾಪೂರ ಗ್ರಾಮದ ಮಬನೂರ ತೋಟದಲ್ಲಿ ವಿವೇಕ ಶಾಲಾ ಕೊಠಡಿಗಳನ್ನು ಉದ್ಘಾಟನೆ
ಮೂಡಲಗಿ- ಸರಕಾರಿ ಶಾಲೆಗಳಲ್ಲಿನ ಶಾಲಾ ಕೊಠಡಿಗಳ ಕೊರತೆಯನ್ನು ನೀಗಿಸಲು ವಿವೇಕ ಶಾಲಾ ಕೊಠಡಿಗಳನ್ನು ನಿರ್ಮಿಸಿದ್ದು, ಇದಕ್ಕಾಗಿ ಒಟ್ಟು ೪೮.೩೬ ಲಕ್ಷ.ರೂ.
ವಿನಿಯೋಗಿಸಲಾಗಿದೆ ಎಂದು ಶಾಸಕ ಮತ್ತು ಬೆಳಗಾವಿ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ತಾಲ್ಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ಕಳೆದ ಸೋಮವಾರದಂದು ತಿಮ್ಮಾಪೂರ ಗ್ರಾಮದ ಮಬನೂರ ತೋಟದ ಶಾಲೆಯಲ್ಲಿ ನೂತನವಾಗಿ ನಿರ್ಮಿಸಿರುವ ವಿವೇಕ ಶಾಲಾ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಶಾಲೆಯಲ್ಲಿ ಶಾಲಾ ಕೊಠಡಿ, ಭೋಜನಾಲಯ ಸೇರಿ ೪೮ ಲಕ್ಷ ರೂ ವೆಚ್ಚದಲ್ಲಿ ಕಾಮಗಾರಿಯನ್ನು ಮಾಡಲಾಗಿದೆ ಎಂದು ತಿಳಿಸಿದರು.
ಮೂಡಲಗಿ ವಲಯದಲ್ಲಿ ಮಕ್ಕಳು ಉತ್ತಮ ರೀತಿಯಲ್ಲಿ ಅಭ್ಯಸಿಸುತ್ತಿದ್ದಾರೆ. ಶಿಕ್ಷಕರು ಸಹ ಉತ್ತಮವಾಗಿ ಬೋಧನೆ ಮಾಡುತ್ತಿರುವುದರಿಂದ ಶಾಲೆಗಳ ಫಲಿತಾಂಶಗಳು ಉತ್ತಮವಾಗಿ ಬರುತ್ತಿದೆ. ನಮ್ಮ ವಿದ್ಯಾರ್ಥಿಗಳ ಸಾಧನೆಯಲ್ಲಿ ಶಿಕ್ಷಕ ಸಮೂಹದ ಪಾತ್ರ ದೊಡ್ಡದಿದೆ ಎಂದು ಹೇಳಿದರು.
೩೧ ವಿವೇಕ ಶಾಲಾ ಕೊಠಡಿಗಳು ಈಗಾಗಲೇ ನಿರ್ಮಾಣಗೊಂಡಿವೆ. ಪ್ರತಿ ಶಾಲಾ ಕೊಠಡಿಗಳಿಗೆ ೧೫.೬೦ ಲಕ್ಷ ರೂ ಗಳನ್ನು ವೆಚ್ಚವನ್ನು ಮಾಡಲಾಗಿದೆ. ವಿದ್ಯಾರ್ಥಿಗಳು ಓದುವಿಕೆಗೆ ಹೆಚ್ಚಿನ ಗಮನ ನೀಡಬೇಕು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಿದರೆ ಸರ್ವಾಂಗೀಣ ವಿಕಾಸವಾಗುತ್ತದೆ ಎಂದು ತಿಳಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಲಾ ೧೫.೬೦ ಲಕ್ಷ ರೂ ವೆಚ್ಚದ ಎರಡು ಶಾಲಾ ಕೊಠಡಿಗಳು ಮತ್ತು ನರೇಗಾ ಯೋಜನೆ ಅಡಿಯಲ್ಲಿ ೧೮ ಲಕ್ಷ. ರೂ. ವೆಚ್ಚದ ಭೋಜನಾಲಯವನ್ನು ಉದ್ಘಾಟಿಸಿದರು.
ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ, ತಾ.ಪಂ.ಇಓ ಎಫ್.ಎಸ್. ಚಿನ್ನನ್ನವರ, ಬಿಇಓ ಅಜೀತ ಮನ್ನಿಕೇರಿ, ತಜ್ಞ ವೈದ್ಯ ಡಾ. ಆರ್.ಎಸ್. ಬೆಂಚಿನಮರ್ಡಿ, ಸಿದ್ಧಾರೂಢ ಮಬನೂರ, ಗ್ರಾಮ ಪಂಚಾಯತಿ ಅಧ್ಯಕ್ಷ ಭೀಮಪ್ಪ ದಳವಾಯಿ, ಮುಖಂಡರಾದ ಎಂ.ಎಂ.ಪಾಟೀಲ, ಸಂಜು ಪಾಟೀಲ, ಹಣಮಂತ ಮೆಟ್ಟಿನವರ, ಮಂಜು ಚಂದರಗಿ, ಬಿ.ಎಚ್.ಪಾಟೀಲ, ಪ್ರಕಾಶ ಕಾಳಶೆಟ್ಟಿ, ಎಸ್ಡಿಎಂಸಿ ಅಧ್ಯಕ್ಷ ಕರೆಪ್ಪ ಬಾವಿಕಟ್ಟಿ, ಸಿಆರ್ಪಿ ವಿ.ಆರ್. ಬರಗಿ, ಶಾಲೆಯ ಪ್ರಧಾನ ಶಿಕ್ಷಕ ಎಂ.ಎಲ್.ಉಳ್ಳಾಗಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.