ಯಾವುದೇ ಒಂದು ಸಮಾಜ ಆಗಿರಬಹುದು .ದೇಶ ಆಗಿರಬಹುದು .ಅದು ಮುಂದೆ ಬರಬೇಕಾದರೆ, ಆ ದೇಶದಲ್ಲಿರುವ ಮಹಿಳೆಯರಿಗೆ, ಮೊದಲು ಶಿಕ್ಷಣವನ್ನು ಕೊಡಬೇಕು. ಎಂದು ಹೇಳಿದ ವೀರ ಸನ್ಯಾಸಿಗಳು ಸ್ವಾಮಿ ವಿವೇಕಾನಂದರು.
ನನ್ನ ಆಧ್ಯಾತ್ಮಿಕ ಗುರು ವಿಶ್ವಗುರು ಬಸವಣ್ಣನವರು. ಆದರೆ ,ಎರಡನೇಯ ಆಧ್ಯಾತ್ಮಿಕ ಗುರು ಸ್ವಾಮಿವಿವೇಕಾನಂದರು .
ಬಸವಣ್ಣನವರು ಯಾವೆಲ್ಲ ವಚನಗಳನ್ನು ಬರೆದಿದ್ದಾರೋ, ಆ ಎಲ್ಲಾ ತತ್ವ ಸಿದ್ದಾಂತಗಳನ್ನು ಸ್ವಾಮಿವಿವೇಕಾನಂದರು ಹೇಳಿದ್ದಾರೆ . ನಾಲ್ಕು ಗೋಡೆಗಳ ಮಧ್ಯೆ ಇರುವ ಮಹಿಳೆಯರನ್ನು ಹೊರಗೆ ಕರೆದುಕೊಂಡು ಬಂದು ಸ್ವತಂತ್ರವಾಗಿ ಅನುಭವ ಮಂಟಪದಲ್ಲಿ ಚರ್ಚಿಸುವ ಹಕ್ಕನ್ನು ಸ್ವಾತಂತ್ರ್ಯವನ್ನು ಕೊಟ್ಟಿದ್ದು ವಿಶ್ವ ಗುರು ಬಸವಣ್ಣನವರು .ಅವೇ ಮಾತುಗಳನ್ನು ನಿತ್ಯ ಸತ್ಯತೆಯಲ್ಲಿ ತಮ್ಮ ಕಾಯಕ ಸಿದ್ದಾಂತದಲ್ಲಿ ಅಳವಡಿಸಿಕೊಂಡು ಹೋಗುವ ಜೀವನದ ಮಾರ್ಗದ ಉತ್ತಮ ಸಂದೇಶ ಸಾರುವ ಅನೇಕ ವಚನಗಳು ನಮಗೆ ದಾರಿ ದೀಪಗಳಾಗಿ ನಿಂತಿವೆ .
ಶಾಂತಿ ,ಸಮಾಧಾನ, ಸಚ್ಚ್ಯಾರಿತ್ರ್ಯ, ಸಹಬಾಳ್ವೆ ,ಸಮಾನತೆ ,ಏಕಾಗ್ರತೆ,ಗುರಿ ,ಸಹೋದರತೆಯ ತತ್ವದ ನೆಲೆಯಲ್ಲಿ ವಿಚಾರ ಮಾಡಿ ,ಸಮಾಜದಲ್ಲಿ ನೈತಿಕ ತತ್ತ್ವಕ್ಕೆ ಮಹತ್ವ ಕೊಟ್ಟು ಅತ್ಯಂತ ಸಣ್ಣ ವಯಸ್ಸಿನಲ್ಲಿಯೇ ,ವೀರ ಸನ್ಯಾಸಿಯಾಗಿ ವಿಶ್ವ ಭ್ರಾತೃತ್ವ ವನ್ನು ಮೆರೆದವರು ಸ್ವಾಮಿ ವಿವೇಕಾನಂದರು .
ಇವರು ಹುಟ್ಟಿದ್ದು ಜನವರಿ 12, 1863 ಕೋಲ್ಕತ್ತ ದಲ್ಲಿ
ತಾಯಿ-ಭುವನೇಶ್ವರಿ, ತಂದೆ -ವಿಶ್ವನಾಥದತ್ತ
ಭುವನೇಶ್ವರಿದೇವಿ ಹಾಗೂ ವಿಶ್ವನಾಥದತ್ತರ ಉದರದಲ್ಲಿ ಜನಿಸಿದ .ನರೇಂದ್ರ ಎನ್ನುವ ಮೂಲ ನಾಮಾಂಕಿತ ಹೊಂದಿದವರು ಮುಂದೆ ಸ್ವಾಮಿವಿವೇಕಾನಂದ ಎಂದು ಹೆಸರುವಾಸಿಯಾಗಿ ,ಅನೇಕ ಶಿಷ್ಯ ಬಳಗದ ಸ್ನೇಹಿತರನ್ನು ಹೊಂದಿದ ವಿವೇಕಾನಂದರು ತಾಯಿಯಿಂದ ಉತ್ತಮ ಸಂಸ್ಕಾರವನ್ನು ಕಲಿತು ಅದ್ಭುತ ಜ್ಞಾನಿಗಳು ಹಾಗಿ ಜಗತ್ತಿಗೆ ಉತ್ತಮ ಸಂದೇಶವನ್ನು ಸಾರಿ ಹೋದರು .
ತಮ್ಮ ತಾಯಿಯ ಜೊತೆಗೆ ವಿವಿಧ ಆಧ್ಯಾತ್ಮಿಕ ಪ್ರವಚನಗಳನ್ನು ಕೇಳಲು ಹೋಗುತ್ತಿದ್ದರು ಒಮ್ಮೆ ಬಾಳೆಯ ವನದಲ್ಲಿ ಹನುಮಂತನು ತಿರುಗುತ್ತಿರುತ್ತಾನೆ. ಎಂದು ಪ್ರವಚನ ಕೇಳಿದ ವಿವೇಕಾನಂದರು .ಇಡೀ ರಾತ್ರಿ ಬಾಳೇಯ ಗಿಡದಲ್ಲಿ ಹನುಮಂತನಿಗಾಗಿ ಕಾದು, ಕಾದು ನಂತರ ನೇರವಾಗಿ ಪ್ರವಚನಕಾರರಿಗೆ ಹೇಳಿಯೇ ಬಿಟ್ಟರು .ನಿನ್ನೆಯ ದಿವಸ ನೀವು ಹೇಳಿದ್ದು ಎಲ್ಲವೂ ಸುಳ್ಳು. ಎಂದು ಅಂದಿನಿಂದ ವಿವೇಕಾನಂದರು ಯಾರ ಮಾತನ್ನೂ ಸುಲಭವಾಗಿ ನಂಬುತ್ತಿರಲಿಲ್ಲ.
ಬಾಲ್ಯದಲ್ಲಿ ವಿವೇಕಾನಂದರು ತುಂಬಾ ಜಾಣ .ಅಷ್ಟೇ ಅಲ್ಲದೇ ಅಷ್ಟೇ ಏಕಾಗ್ರತೆಯಿಂದ ಓದುತ್ತ ಕೂಡುತ್ತಿದ್ದರು .ಒಂದು ದಿವಸ ಹೀಗೆ ಓದುತ್ತ ಕುಳಿತು ಕೊಂಡಾಗ ಅವರ ಮೈಮೇಲೆ ಒಂದು ಹಾವು ಹಾಗೇ ಏರುತ್ತ ಹೋಗುತ್ತಿರುವುದನ್ನು ಆತನ ಸ್ನೇಹಿತರು ನೋಡಿ ಓಡಿ ಹೋದದ್ದು ,ನೋಡಿದರೆ ವಿವೇಕಾನಂದರಲ್ಲಿರುವ ಏಕಾಗ್ರತೆಯ ಓದು ನಮಗೆ ಅನುಕರಣೀಯ. ಅಷ್ಟೇ ಶಾಂತ ಮನದ ಸ್ವಾಮಿವಿವೇಕಾನಂದರು .
ಪ್ರತಿಯೊಬ್ಬರಲ್ಲೂ ಒಂದೊಂದು ಗುರಿ ಇರಬೇಕು .ಆ ಗುರಿಯೇ ನಮ್ಮನ್ನು ಕರೆದುಕೊಂಡು ಹೋಗುವ ಸತ್ಯದ ಮಾರ್ಗ ಎಂದು ಹೇಳಿರುವರು, ‘ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ’ ಎನ್ನುವ ಅದ್ಭುತ ಸಂದೇಶವನ್ನು ಸಾರಿದವರು .
ಗುರಿಯಿಲ್ಲದ ಮಾನವನ ಬದುಕು ಬದುಕೇ ಅಲ್ಲ .ಒಂದು ಕುದುರೆಗೆ ನೇರವಾಗಿ ಹೋಗಲು ಅದರ ಚಿತ್ತ ಆ ಕಡೆ ಈ ಕಡೆ ಹೋಗಬಾರದು.ನೋಡಬಾರದು ಎಂದು ಅದರ ಮೊಗಕ್ಕೆ ಕಟ್ಟಿದ ಮೊಗವಾಡದಂತೆ ನಾವು ಸಾಗುವ ಪಯಣವೂ ಕೂಡಾ ಕುದುರೆಯು ಸಾಗುವ ಪಯಣದಂತೆ. ದಾರಿಯಲ್ಲಿ ಅನೇಕ ಎಡರು ತೊಡರುಗಳು ಬಂದೇ ಬರುತ್ತವೆ .ಅವೆಲ್ಲವನ್ನೂ ಎದುರಿಸುವ ಧೈರ್ಯ ನಮ್ಮಲ್ಲಿ ಇರಬೇಕು .
ದುಡಿಯುವ ಪ್ರತಿ ವ್ಯಕ್ತಿಗಳಲ್ಲಿ ಒಂದು ಚೈತನ್ಯದಾಯಕ ಶಕ್ತಿಯು ಪ್ರತಿಯೊಬ್ಬರಲ್ಲಿಯೂ ಇದ್ದೇ ಇರುವುದು .
ಆ ಶಕ್ತಿಯನ್ನು ಪಡೆದುಕೊಳ್ಳಲು ನಾವು ಪ್ರತಿ ನಿತ್ಯ ಶ್ರಮ ವಹಿಸಲೇಬೇಕು .
ನಾವು ಏನು ಆಗಬೇಕು ಎಂದು ನಮ್ಮ ಮನದೊಳಗಿನ ಶಕ್ತಿಯನ್ನು ಬಡಿದು ಎಬ್ಬಿಸುತ್ತೇವೆಯೋ. ಆ ಶಕ್ತಿಯೇ ನಮ್ಮನ್ನು ದೂರ ಬಹು ದೂರಕ್ಕೆ ಕರೆದುಕೊಂಡು ಹೋಗುತ್ತದೆ .ಅದರಂತೆಯೇ ಸ್ವಾಮಿವಿವೇಕಾನಂದರು ಆಗಿ ಹೋದವರು .
ಅವರ ಕೀರ್ತಿ ಪತಾಕೆಯು ಇಡೀ ಭೂಮಂಡಲವನ್ನೇ ವ್ಯಾಪಿಸಿತು
‘
ಆತ್ಮೀಯ ನನ್ನ ಸಹೋದರ ಸಹೋದರಿಯರೇ’ ಎನ್ನುವ ಅವರ ಅಮೇರಿಕೆಯ ಚಿಕ್ಯಾಗೋ ಅವರ ಭಾಷಣದ ಪ್ರಾರಂಭದ ಮಾತುಗಳನ್ನು ಕೇಳಿದ ಅಲ್ಲಿ ನಡೆದ ಸಭಿಕರು ಪ್ರೇಕ್ಷಕರು ನಿಬ್ಬೆರಗಾಗಿ ಚಪ್ಪಾಳೆಯ ಸದ್ದನ್ನು ಸುರಿಸಿದ್ದು, ನಿಜಕ್ಕೂ ಮರೆಯದ ಘಟನೆಯೇ ಸರಿ .
ಅವರ ಮಾತಿನ ಶೈಲಿ ,ಅವರ ಮಾತಿನ ಕಳಕಳಿ ,ಅವರ ಮಾತುಗಳಲ್ಲಿರುವ ಸತ್ಯದ ಸಂದೇಶ ಅದ್ಭುತ, ಅವರು ಸ್ತ್ರೀಯರ ಮೇಲೆ ಇಟ್ಟಿರುವ ಗೌರವ ಭಾವನೆ ,ಸಹೋದರತೆಯ ಬಾಂಧವ್ಯದ ಸೆಳೆತ ಚುಂಬಕದಂತೆ ಎಲ್ಲರ ಮನವನ್ನು ಸೆಳೆದುಕೊಂಡು ಬಿಟ್ಟಿತು .
ಇದ್ದರೂ ಇರಬೇಕು ಇಂಥಹ ವೀರ ಸನ್ಯಾಸಿಗಳು ನಮಗಿಂದು ಬೇಕಾಗಿದ್ದಾರೆ.
ಉತ್ತಮ ಭಾಂಧವ್ಯವಿಲ್ಲದ ನಡೆ ,ಬಣ್ಣ ಹಚ್ಚಿದ ಮೊಗವಾಡದ ಬದುಕು ,ಆಚಾರ ವಿಚಾರಕ್ಕೆ ಮಸಿ ಬಳಿಯುವ ವಿದ್ರೋಹಕ ಸಂದೇಶ ಸಾರುವ ಮಾತುಗಳನ್ನು ಕೇಳಿದರೆ, ಮೇಲಿರುವ ಪರಮಾತ್ಮನು ನಕ್ಕೇ ನಗುವನು .ಪರಮಾತ್ಮನು ನಗದಿದ್ದರೂ ನಮ್ಮ ಒಳಗಿನ ಅಂತರಾತ್ಮ ನಮ್ಮನ್ನು ನೋಡಿ ನಗುತ್ತದೆ .ಎನ್ನುವ ಅರಿವನ್ನು ತಿಳಿದುಕೊಂಡು ಸಾಗಬೇಕಾಗಿದೆ ಇವತ್ತಿನ ಸಮಾಜ.ಎಲ್ಲಿ ನೋಡಿದಲ್ಲಿ ಶಾಂತಿ ಇಲ್ಲ ,ಸಮಾಧಾನ ವಿಲ್ಲ ,ಬಣ್ಣ ಬಣ್ಣದ ಮಾತುಗಳಿಗೆ ಕೊನೆಯೇ ಇಲ್ಲ .ಹೇಳುವ ಮಾತಿನಲ್ಲಿ ನಡೆಯೇ ಇಲ್ಲ.ನುಡಿಯಲ್ಲಿ ಸತ್ಯವೇ ಇಲ್ಲ .ಗುಂಪು ಕಟ್ಟಿ ಆ ಜಾತಿ ಈ ಜಾತಿ ಎಂದು ನಮ್ಮ ನಮ್ಮಲ್ಲೇ, ನಾವು ಮೇಲು ನೀವು ಕೆಳಗೆ ಎನ್ನುವ ಅಹಂಕಾರದ ನಡೆ .ಸಮಾಜದಲ್ಲಿರುವ ಸ್ವಾಸ್ಥ್ಯ ವನ್ನು ಹಾಳು ಮಾಡುವ ಸಂದೇಶದ ಮಾತುಗಳು ,ಗೌರವಿಲ್ಲದ ನುಡಿ ಮಾತುಗಳು ,ಗುರಿ ಹಿರಿಯರಿಗೆ ಸಲ್ಲದ ಗೌರವ ಇವೆಲ್ಲವನ್ನು ನೋಡಿದರೆ, ಯಾವ ಕಡೆ ನಮ್ಮ ದೇಶ ಹೋಗುತ್ತಿದೆ, ಎನ್ನುವ ಅರಿವಿನಿಂದ ನಾವು ಹೆಜ್ಜೆ ಹಾಕಬೇಕಾಗಿದೆ.
ನಂಬಿದ ಮನಗಳು ನಂಬಿಕೆಯನ್ನು ,ವಿಶ್ವಾಸ ವನ್ನು ಕಳೆದುಕೊಂಡು ಸಾಗುತ್ತಿವೆ.ಒಬ್ಬರ ಮೇಲೆ ಒಬ್ಬರಿಗೆ ವಿಶ್ವಾಸ ಇಲ್ಲ ನಂಬಿಕೆ ಇಲ್ಲ .ಎಲ್ಲಿದೆ ನ್ಯಾಯ?,ಎಲ್ಲಿದೆ ಧರ್ಮ? ಸಿಗದೇ ಹೋಗಿದೆ ಕಂಗಳಲ್ಲಿ ಕುಣಿಯುವ ಗೊಂಬೆಯಾಗಿದ್ದಾಳೆ ನಾರಿ .ಅದಕ್ಕಾಗಿಯೇ ಸ್ವಾಮಿವಿವೇಕಾನಂದರು ನಾರಿಯರಿಗೆ ಮೊದಲು ಗೌರವ ಕೊಡಿ, ಸಮಾಜದಲ್ಲಿ ಒಳ್ಳೆಯ ನೈತಿಕ, ಶಿಕ್ಷಣವನ್ನು ಕೊಟ್ಟರೆ ಈ ನಾಡು ಮುಂದೆ ಬರುತ್ತದೆ ಎಂದು ಕರೆ ಕೊಟ್ಟರು .ಆದರೆ ಇವತ್ತಿನ ಮಕ್ಕಳಾದ ನಾವು ನೀವುಗಳೆಲ್ಲ ಸ್ವಲ್ಪ ಕುಳಿತು ನಮ್ಮ ನಮ್ಮ ಮನವನೊಮ್ಮೆ ಅಂತರಾತ್ಮದ ಅವಲೋಕನ ಮಾಡಿಕೊಂಡು ಸಾಗಬೇಕಾದ ಪರಿಸ್ಥಿತಿ .ಎಷ್ಟೊಂದು ನೈತಿಕ ಜ್ಞಾನ ನಮ್ಮಲ್ಲಿ ಇದೆ ಎಂದು .ವಿಚಾರಿಸಿ ಸಾಗಬೇಕಾಗಿದೆ. ಈ ಸಮಾಜಕ್ಕೆ ನಮ್ಮ ಕೊಡುಗೆ ಏನು ?ಎಂದು. ಹೊಗಳಿಸಿಕೊಂಡು ಅಟ್ಟ ಹತ್ತುವ ನಾವುಗಳು ಮುಂದೆ ಚಟ್ಟ ಕಟ್ಟಿಸಿಕೊಳ್ಳುವೆವು ಎನ್ನುವ ಅರಿವು ನಮಗೆ ಇರಬೇಕಾಗಿದೆ.
ಸ್ವಾಸ್ಥ್ಯ ಹಾಳು ಮಾಡುವ ಮಾತುಗಳು ಎಷ್ಟು ಮನಗಳನ್ನು ಮನೆಗಳನ್ನು ಮುರಿದಿವೆ ನೋಡಿ. ನಮ್ಮ ಮಕ್ಕಳೊಂದಿಗೆ ,ನಮ್ಮ ಮನೆಯ ಸದಸ್ಯರೊಂದಿಗೆ ,ನಮ್ಮ ಸಮಾಜದೊಂದಿಗೆ ನಾವು ಎಷ್ಟು ಸಾಮರಸ್ಯ ದಿಂದ ಇದ್ದೇವೆ ಎನ್ನುವ ಅರಿವು ಇಂದಿನವರಿಗೆ ಆಗಬೇಕಾಗಿದೆ .ನೈತಿಕತೆ ಇಲ್ಲದ ಜ್ಞಾನ ಅದನ್ನು ಪಡೆದರೆಷ್ಟು ಬಿಟ್ಟರೆಷ್ಟು.
ನಿನ್ನೊಳಗಿನ ಶಕ್ತಿಯನ್ನು ನೀನೇ ಬಡಿದು ಎಚ್ಚರಿಸುವ ಕಾಲ ಇದು .ಯಾರ ಹಿಂದೆ ಮುಂದೆ ಹೋಗುವ ಅವಶ್ಯಕತೆಯೇ ಇರಲಾರದು .ಕೊಟ್ಟ ಶಕ್ತಿಯನ್ನು ಉತ್ತಮವಾಗಿ ಬಳಸಿಕೊಂಡು ಹೋಗುವ ಚಾಕ ಚಕ್ಯತೆಯು ಇರಬೇಕು .
ನಮಗೆ ಬೇಕಾಗಿರುವುದೇ ಇದೇ ಜ್ಞಾನ ಅದಕ್ಕೆ ವಿವೇಕಾನಂದರು ಯುವಕರಿಗೆ ಕರೆ ಕೊಟ್ಟಿದ್ದಾರೆ .
ನಮಗಿಂದು ಬೇಕಾಗಿರುವುದು ಕಬ್ಬಿಣದಂತಹ ಮಾಂಸ ಖಂಡಗಳನ್ನು ಹೊಂದಿದ, ಸಮುದ್ರದ ತಳವನ್ನಾದರೂ ಹೊಕ್ಕು ಅನರ್ಘ್ಯ ಮುತ್ತು ರತ್ನಗಳನ್ನು ಹೊರ ತೆಗೆಯಬಲ್ಲ ಪ್ರಚಂಡ ಯುವ ಶಕ್ತಿ ನಮಗಿಂದು ಬೇಕಾಗಿದೆ
ಅಂಥ ಯುವ ಶಕ್ತಿಯನ್ನು ತಯಾರು ಮಾಡುವ ಇಂದಿನ ನೈತಿಕ ಶಿಕ್ಷಣ ಯುವಕರಿಗೆ ಬೇಕು .
ಒಳ್ಳೆಯ ನೈತಿಕತೆಯ ಶಿಕ್ಷಣ ವನ್ನು ಮಕ್ಕಳಿಗೆ ಬಾಲ್ಲದಲ್ಲಿಯೇ ದೊರೆಯಬೇಕಾಗಿದೆ . ಮೊಬೈಲ್ ಬಳಕೆಯಿಂದ ಬಳಲುವ ಯುವಕರು ,ಅತೀ ಅವಶ್ಯಕ ಎನಿಸಿದರೆ ಮಾತ್ರ, ಬಳಸಿ ನಿಮ್ಮ ಸ್ವಾಸ್ಥ್ಯವನ್ನು ನೀವೇ ಕಾಪಾಡಿಕೊಳ್ಳಿ.
ಶಾಂತಿ ಸಮಾಧಾನಕ್ಕೆ ಒಳ್ಳೆಯ ಮಹಾತ್ಮರ ಪುಸ್ತಕಗಳನ್ನು ಓದಿ .
ಒಳ್ಳೆಯ ಚಿಂತನ ಮಂಥನದಲ್ಲಿ ತೊಡಗಿಕೊಂಡು ನಿಮ್ಮ ನಿಮ್ಮ ಜ್ಞಾನ ವನ್ನು ಹೆಚ್ಚಿಸಿಕೊಳ್ಳಿ.
ಅನೇಕ ಶ್ರೀ ಮಠಕ್ಕೆ ಹೋಗಿ ಶಾಂತಿಯನ್ನು ಪಡೆದುಕೊಳ್ಳಿ .
ಸ್ವಾಮಿವಿವೇಕಾನಂದರು ಅನೇಕ ಮಠಗಳನ್ನು ಸಂಸ್ಥಾಪಿಸಿದರು. ಬೇಲೂರ ಮಠ, ರಾಮಕೃಷ್ಣ ಮಠ,
ರಾಮಕೃಷ್ಣ ಮಿಷನ್ ಹೀಗೆ ಹತ್ತು ಹಲವು ವಿಚಾರಗಳ ನೈತಿಕ ನೆಲಗಟ್ಟಿನ ತಳಪಾಯದಲ್ಲಿ ವಿಚಾರಿಸಿದ ಸ್ವಾಮಿವಿವೇಕಾನಂದರು ಭಕ್ತಿಯೋಗ ,ಜ್ಞಾನ ಯೋಗ ಎನ್ನುವ ಕೃತಿಗಳನ್ನು ಬರೆದರು. ರಾಮಕೃಷ್ಣ ಪರಮಹಂಸರನ್ನು ತಮ್ಮ ಗುರುಗಳನ್ನಾಗಿ ಪಡೆದ ಸ್ವಾಮಿವಿವೇಕಾನಂದರು ಜುಲೈ 8 1902 ರಂದು ಅನಾರೋಗ್ಯದ ನಿಮಿತ್ತ ಇಹಲೋಕವನ್ನು ತ್ಯಜಿಸಿ ಆತ್ಮ ಪರಮಾತ್ಮನಲ್ಲಿ ಲೀನ ಆಗಿ. ಬಯಲಲ್ಲಿ ಬಯಲಾಗಿ ಹೋದರು.
_____________
ಡಾ. ಸಾವಿತ್ರಿ ಕಮಲಾಪೂರ