ಮೂಡಲಗಿ: ಸ್ವಾಮಿ ವಿವೇಕಾನಂದರ ನಡೆ-ನುಡಿಗಳು ಇಂದಿನ ಯುವಕರಿಗೆ ದಾರಿ ದೀಪವಾಗಿವೆ. ಅವರ ಚಿಂತನೆಗಳನ್ನು ಮೈಗೂಡಿಸಿಕೊಂಡು ಆದರ್ಶ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ನ್ಯಾಯವಾದಿ ಲಕ್ಷ್ಮಣ ಅಡಿಹುಡಿ ಯುವಕರಿಗೆ ಕಿವಿಮಾತು ಹೇಳಿದರು.
ಇತ್ತೀಚೆಗೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಜರುಗಿದ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರ, ವಿಜಯಪುರ ಜಿಲ್ಲಾ ಹಾಗೂ ತಾಲೂಕಾ ಘಟಕ ಮುದ್ದೇಬಿಹಾಳ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿಜಯುಪುರ ಇವುಗಳ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 160ನೇ ಜಯಂತ್ಯುತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ರಾಜ್ಯಮಟ್ಟದ ಸದ್ಭಾವನಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಸಂಘಟನೆಯವರು ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವುದರಿಂದ ಸಾಧಕರಿಗೆ ಮತ್ತಷ್ಟು ಸಮಾಜ ಸೇವೆಯಲ್ಲಿ ಕಾಯಕ ಮಾಡುವಂತೆ ಪ್ರೇರಣೆ ನೀಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಕರ್ನಾಟಕ ಪ್ರತಿ ಜಿಲ್ಲೆಗಳಿಂದ ಒಬ್ಬರಂತೆ ಸಾಧಕರನ್ನು ಗುರುತಿಸಿ, ಈ ಕಾರ್ಯಕ್ರಮದಲ್ಲಿ ಅವರನ್ನು ಸತ್ಕರಿಸಿ ಇಂದಿನ ಯುವಕರಿಗೆ ಸಾಧಕರ ಬಗ್ಗೆ ಪರಿಚಯ ಮಾಡಿಸುವ ಮೂಲಕ ಯುವಕರಿಗೆ ಸ್ವಾಮಿ ವಿವೇಕಾನಂದರ ಆದರ್ಶ ವ್ಯಕ್ತಿತ್ವಗಳನ್ನು ಮೂಡಿಸುವಂಥ ಕಾರ್ಯ ಪ್ರತಿ ಜಿಲ್ಲೆಯಲ್ಲಿ ಆಯೋಜಿಸುವ ಕೆಲಸವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾಲಜ್ಞಾನಿ ಬಬಲಾದಿಯ ಅಪ್ಪಯ್ಯ ಮಹಾಸ್ವಾಮಿಗಳು, ರಾಜ್ಯ ಎನ್.ಎಸ್.ಎಸ್ ಅಧಿಕಾರಿ ಪ್ರತಾಪಲಿಂಗಯ್ಯ, ಮಾಜಿ ಸಚಿವ ಸಿ ಎಸ್ ನಾಡಗೌಡ್ರ, ಬೆಳಗಾವಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಹಾಗೂ ಅನೇಕರು ಉಪಸ್ಥಿತರಿದ್ದರು.