spot_img
spot_img

ಪಯಣಿಗನ ಪಯಣ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರ

Must Read

- Advertisement -

ಪ್ರವಾಸ ಎಂಬುದು ಮೈಮನಗಳನ್ನು ಪುಳಕಿತಗೊಳಿಸುವ ಹಾಗೂ ಉತ್ಸಾಹ ಹುಮ್ಮಸ್ಸನ್ನು ಇಮ್ಮಡಿಗೊಳಿಸುವ ಒಂದು ಕ್ರಿಯೆ. ನಾವು ಎಲ್ಲಿಯೇ ಹೋಗಲಿ ಅಲ್ಲಿ ಹತ್ತಿರದ ಸ್ಥಳಗಳನ್ನು ನೋಡಿಕೊಂಡು ಬರುವ ಮೂಲಕ ಪ್ರತಿ ಕಾರ್ಯದ ನಡುವೆ ಒಂದು ಪುಟ್ಟ ಪ್ರವಾಸ ಎಂದುಕೊಂಡು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡರೆ ಮೈಮನಗಳು ಉಲ್ಲಾಸದಿಂದ ಕೂಡಿರುತ್ತವೆ ಎಂಬುದನ್ನು ನನ್ನ ಬದುಕಿನಲ್ಲಿ ರೂಢಿಸಿಕೊಂಡವನು ನಾನು.

ಧಾರವಾಡದಲ್ಲಿ ಒಂದು ಮದುವೆ ಸಮಾರಂಭ ಮುಗಿಸಿಕೊಂಡು ಅದೂ ಕೂಡ ಕಲ್ಯಾಣ ಮಂಟಪದಿಂದ ಕೇವಲ ಒಂದೂವರೆ ಕಿಲೋ ಮೀಟರ ಅಂತರದ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಭೇಟಿ ಕೊಟ್ಟೆವು.

ಇಲ್ಲಿ ಬಂದರೆ ಮುಖ್ಯ ದ್ವಾರದಲ್ಲಿ ಇರುವ ಟಿಕೇಟ್ ಕೌಂಟರ ನಲ್ಲಿ ಟಿಕೇಟು ಖರೀದಿಸಬೇಕು.ಟಿಕೇಟು ವಿತರಿಸುವ ಸಮಯ ಬೆಳಿಗ್ಗೆ ೧೦ ರಿಂದ ಸಂಜೆ ೫.೧೫ ರ ಅವಧಿ ಮಾತ್ರ.ಸಾರ್ವಜನಿಕರಿಗೆ ಪ್ರತಿಯೊಬ್ಬರಿಗೆ ೩೦ ರೂ.ಗಳು.ಕ್ಯಾಮರಾ ತಂದಿದ್ದಲ್ಲಿ ೪೦ ರೂಪಾಯಿಗಳು. ವಿಡಿಯೋ ಕ್ಯಾಮರಾ ಇದ್ದಲ್ಲಿ ೧೪೦ ರೂ. ತುಂಬಿ ರಸೀದಿ ಪಡೆಯಬೇಕು.೫ ರಿಂದ ೧೨ ವರ್ಷದ ಮಕ್ಕಳಿಗೆ ತಲಾ ಹತ್ತು ರೂಪಾಯಿ ನಿಗದಿಪಡಿಸಲಾಗಿದೆ.ನಾವು ನಾಲ್ಕು ಜನ ಟಿಕೇಟು ಪಡೆದುಕೊಂಡು ಒಳ ಪ್ರವೇಶಿಸಿದೆವು.

- Advertisement -

ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರ:

ರಾಷ್ಟ್ರೀಯ ವಿಜ್ಞಾನ ವಸ್ತುಸಂಗ್ರಹಾಲಯಗಳ ಪರಿಷತ್ತು ನಮ್ಮ ದೇಶದ ವಿಜ್ಞಾನ ವಸ್ತು ಸಂಗ್ರಹಾಲಯ ಮತ್ತು ವಿಜ್ಞಾನ ಕೇಂದ್ರಗಳ ಮುಖ್ಯ ಸಂಸ್ಥೆ.ಇದರಡಿ ದೇಶದಾದ್ಯಂತ ೨೬ ವಿಜ್ಞಾನ ಕೇಂದ್ರಗಳು ಮತ್ತು ವಸ್ತು ಸಂಗ್ರಹಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ಅಂಥ ಒಂದು ವಿಜ್ಞಾನ ಕೇಂದ್ರ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಆವರಣಕ್ಕೆ ಹೊಂದಿಕೊಂಡಂತೆ ತಲೆ ಎತ್ತಿ ನಿಂತಿದೆ.ಈ ವಿಜ್ಞಾನ ಕೇಂದ್ರವು ಎಳೆಯ ಮಕ್ಕಳನ್ನು ಯುವಕರನ್ನು ಮತ್ತು ವಯಸ್ಕರನ್ನು ವಿಜ್ಞಾನ ಚಟುವಟಿಕೆಗಳ ಮೂಲಕ ತನ್ನತ್ತ ಆಕರ್ಷಿಸುವ ತಾಣವಾಗಿ ಜನಪ್ರಿಯವಾಗಿದೆ.

೪೦೦೦ ಚದರ ಮೀಟರ್ ವಿಸ್ತೀರ್ಣದಲ್ಲಿ ದಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಲಾಗಿದ್ದು.ಇದರಲ್ಲಿ ನಮ್ಮ ವಿಜ್ಞಾನ ಮತ್ತು ತಂತ್ರಜ್ಞಾನ ಪರಂಪರೆ,ಜೀವಯಾಂತ್ರಿಕ ಮತ್ತು ಮೋಜಿನ ವಿಜ್ಞಾನ ಎಂಬ ಮೂರು ಪ್ರದರ್ಶನಾಲಯಗಳು, ಹವಾ ನಿಯಂತ್ರಿತ ತ್ರೀಡಿ ಆಯಾಮದ ಚಿತ್ರಮಂದಿರ, ತಾರಾಮಂಡಲ,ವಿಜ್ಞಾನ ಪ್ರಾತ್ಯಕ್ಷಿಕೆ ಉಪನ್ಯಾಸ ಮಂದಿರ,ಮಕ್ಕಳ ಚಟುವಟಿಕೆ ಕೇಂದ್ರ,ಹವಾನಿಯಂತ್ರಿತ ಸಭಾಂಗಣ,ಗ್ರಂಥಾಲಯ,ಸಮಾಲೋಚನಾ ಮಂದಿರ,ತಾತ್ಕಾಲಿಕ ಪ್ರದರ್ಶನಾಲಯ ಸ್ಥಳ,ಸ್ವಾಗತಾಲಯ ಇತ್ಯಾದಿ ಸೌಲಭ್ಯಗಳನ್ನು ಒಳಗೊಂಡ ಒಂದೇ ಸಮುಚ್ಚಯದ ವಿಸ್ತಾರವಾದ ಕಟ್ಟಡ ಆಕರ್ಷಿಸುತ್ತದೆ.

ಮಕ್ಕಳೊಂದಿಗೆ ಮನೆ ಮಂದಿಯೆಲ್ಲ ಬಂದರೂ ಕೂಡ ಇಲ್ಲಿ ನಿಗದಿ ಪಡಿಸಿದ ದರದಲ್ಲಿ ಟಿಕೇಟ್ ಖರೀದಿಸಿ ಒಳ ಬರಲು ವಿಶೇಷ ರೀತಿಯ ವಿನ್ಯಾಸವುಳ್ಳ ರಸ್ತೆ ನಿರ್ಮಿಸಿರುವರು. ಕೌಂಟರ್ ನಲ್ಲಿ ಟಿಕೇಟು ಪಡೆದು ಒಳ ಬಂದರೆ ನಮಗೆ ಕಾಣುವುದು ಸಾಲು ಸಾಲು ವಿಜ್ಞಾನಿಗಳ ಮೂರ್ತಿಗಳು ರಸ್ತೆಯ ಎಡ ಬಲದಲ್ಲಿ ಆಕರ್ಷಿಸುವ ಜೊತೆಗೆ ನೀಲಿ ಬಣ್ಣದ ಕಮಾನು ವಿನ್ಯಾಸದ ಮಧ್ಯದಲ್ಲಿ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕಟ್ಟಡ ಕೈಬೀಸಿ ತನ್ನೆಡೆಗೆ ಕರೆಯುತ್ತದೆ.ಒಳ ಬಂದರೆ ಪರಂಪರೆ ಎಂಬ ತಲೆಬರಹದ ಬಾಗಿಲು ಬಾರತೀಯ ಶಿಲ್ಪಕಲಾ ವಿನ್ಯಾಸದಲ್ಲಿ ಗಮನಸೆಳೆದು ಒಳಗಿರುವ ನಾಗರಿಕತೆಯ ಶಿಲ್ಪಗಳು ಬನ್ನಿ ನಿಮಗಿದೋ ಸ್ವಾಗತ ಎನ್ನುವಂತೆ ಭಾಸವಾಗುತ್ತದೆ.

- Advertisement -

ನಮ್ಮ ವಿಜ್ಞಾನ ಮತ್ತು ತಂತ್ರಜ್ಞಾನ:

ಭಾರತೀಯ ನಾಗರಿಕತೆಯಲ್ಲಿ ವೈಜ್ಞಾನಿಕ ಸಂಸ್ಕೃತಿಯ ಲಿಖಿತ ಇತಿಹಾಸ ಸುಮಾರು ೫೦೦೦ ವರ್ಷ ಹಿಂದಿನದು.ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಗೆ ನಮ್ಮ ಪ್ರಾಚೀನ ಭಾರತೀಯರು ನೀಡಿದ ಕೊಡುಗೆಯನ್ನು ಈ ಪ್ರದರ್ಶನಾಲಯದಲ್ಲಿ ಅನಾವರಣಗೊಳಿಸಲಾಗಿದೆ, ಅತ್ಯಂತ ಪುರಾತನ ಲಿಪಿಯಿಂದ ಹಿಡಿದು ಪುರಾತನ ನಗರ ಯೋಜನೆ,ವಾಸಯೋಗ್ಯ ಸಂಕೀರ್ಣ,ತ್ಯಾಜ್ಯ ನೀರಿನ ನಿರ್ವಹಣಾ ಪದ್ದತಿ,ಸುಮಾರು ೫೦೦ ವರ್ಷ ಹಳೆಯದಾದ ದೆಹಲಿಯಲ್ಲಿರುವ ಕಬ್ಬಿಣದ ಸ್ಥಂಭ ಇಂದಿಗೂ ತುಕ್ಕು ಹಿಡಿಯದೇ ವಿರಾಜಮಾನವಾಗಿ ನಿಂತಿದೆ.ಭಾರತೀಯರು ನಿರ್ಮಿಸಿದ ವಾಸ್ತುಶಿಲ್ಪ ಕಲಾಕೃತಿಗಳು ಪಾರಂಪರಿಕ ಕಲಾಕೃತಿಗಳಾಗಿ ವಿರಾಜಮಾನವಾಗಿವೆ.

ನಮ್ಮ ಪೂರ್ವಜರಿಗೆ ಕರಗತವಾದ ಸತುವಿನ ಪೃಥಕ್ಕರಣ. ಅವರಿಗಿದ್ದ ಲೋಹ ವಿಜ್ಞಾನದ ಪ್ರಾವಿಣ್ಯತೆ ಹೇಳುವ ದೃಶ್ಯಗಳು.ಅಲ್ಕೋಹಾಲಿನ ಭಟ್ಟಿ ಇಳಿಸುವಿಕೆ,ಕುಂಬಾರಿಕೆ ಚಕ್ರ,ನಮ್ಮ ಪೂರ್ವಜರ ಸಂಗೀತ ಉಪಕರಣಗಳಾದ ವೀಣೆ,ಮೃದಂಗ,ತಬಲಾ, ಇತ್ಯಾದಿಗಳು ಕೋನಾರ್ಕನ ಸೂರ‍್ಯ ದೇವಾಲಯ,ಕುತುಬ್ ಮಿನಾರ್ ಪ್ರತಿಕೃತಿಗಳು, ಹಂಪಿಯ ಕಲ್ಲಿನ ರಥ,ಕುಶಲ ಕರ್ಮಿಗಳ ಕಲೆಗಾರಿಕೆ ಗಮನ ಸೆಳೆಯುತ್ತವೆ.

೬೦೦ ಚದರ ಮೀಟರಿನಲ್ಲಿ ಹರಡಿದ ಈ ಪ್ರದರ್ಶನಾಲಯದಲ್ಲಿ ಭಾರತೀಯ ವಿಜ್ಞಾನದ ಮತ್ತು ತಂತ್ರಜ್ಞಾನದ ಪರಂಪರೆಯನ್ನು ಅನಾವರಣ ಮಾಡಲಾಗಿದೆ. ಇಲ್ಲಿ ಹರಪ್ಪ ಜನರ ತಾಂತ್ರಿಕತೆಯ ಸಂಪ್ರದಾಯವನ್ನು ನೀವು ಕಾಣಬಹುದು.ಅಲ್ಲಿ ಒಂದು ಫಲಕವನ್ನು ಅಳವಡಿಸಲಾಗಿದ್ದು ಈ ಕುರಿತು ವಿವರಣೆಯನ್ನು ಕೂಡ ಬರೆದಿರುವರು.

ಅದು ಸಿಂಧೂ ಕಣಿವೆ ಅಥವ ಹರಪ್ಪ ನಾಗರೀಕತೆ ಎಂದು ಕರೆಯಲಾಗುವ ಅವಧಿಯಲ್ಲಿ ಅಲ್ಲಿನ ನಾಗರಿಕರಿಗಿದ್ದ ತಾಂತ್ರಿಕರಿಗಿದ್ದ ಜ್ಞಾನವನ್ನು ಇಲ್ಲಿ ಅನಾವರಣಗೊಳಿಸಲಾಗಿದೆ.ಈ ಕಾರಣಕ್ಕಾಗಿಯೇ ಕಂಚಿನ ಯುಗದ ಕೈಗಾರಿಕಾ ನಗರ ನಿರ್ಮಾತೃಗಳೆಂದು ಹರಪ್ಪನರನ್ನು ಕರೆಯಲಾಗುತ್ತದೆ ಎಂಬ ಮಾಹಿತಿಯನ್ನು ಇನ್ನಷ್ಟು ವಿವರಣೆಯೊಂದಿಗೆ ಫಲಕದಲ್ಲಿ ಹಾಕಿರುವರು.ಅದರೊಟ್ಟಿಗೆ ಅದನ್ನು ತೋರಿಸುವ ಪ್ರತಿಕೃತಿಗಳನ್ನು ಅಲ್ಲಿ ಅಳವಡಿಸಲಾಗಿದೆ.

ಈ ಪ್ರದರ್ಶಿಕೆಯಲ್ಲಿ ಈ ನಾಗರಿಕೆಯು ಸಿದ್ದಿಸಿದ ಕೆಲವು ತಾಂತ್ರಿಕತೆಯನ್ನು ಜೀವತುಂಬಿದ ಮೂರ್ತಿಗಳ ಮೂಲಕ ಅನಾವರಣ ಮಾಡಲಾಗಿದೆ.ಅವೆಂದರೆ ಕುಂಬಾರಿಕೆ, ಸಿರಾಮಿಕ್ ಬಳೆ ತಯಾರಿಕೆ, ಮಣಿ ತಯಾರಿಕೆ, ಲೋಹ ವಿಜ್ಞಾನ, ಮಣಿಗಳಲ್ಲಿ ಕರಾರುವಕ್ಕಾಗಿ ರಂಧ್ರ ಮಾಡುವಿಕೆ, ನಗರ ಯೋಜನೆ, ಜವಳಿ ಉದ್ಯಮ, ಒಳ ಚರಂಡಿ ವ್ಯವಸ್ಥೆ, ದಾಸ್ತಾನು ಮಳಿಗೆ, ಹಡಗು ಕಟ್ಟುವಿಕೆ ಇವೆಲ್ಲದರ ಪರಿಕಲ್ಪನೆ ಆ ನಾಗರಿಕತೆಯಲ್ಲಿ ಹೇಗಿತ್ತು ಎಂಬುದನ್ನು ನಮಗೆ ಇಲ್ಲಿ ಅನಾವರಣಗೊಳಿಸಿದ್ದು ನಿಜಕ್ಕೂ ಅಭಿನಂದನಾರ್ಹ ಸಂಗತಿ.

ಸಂಯುಕ್ತ ತುಪಾಕಿಗಳನ್ನು ತಯಾರಿಸುವ ಮೊದಲ ಹಂತವೆಂದರೆ ಕಬ್ಬಿಣದ ಪಟ್ಟಿಗಳ ನಕಲಿ ವೆಲ್ಡಿಂಗ್ ಮಾಡುವುದು.ಕಬ್ಬಿಣದ ಅಗಲವಾದ ಪಟ್ಟಿಗಳನ್ನು ವೃತ್ತಾಕಾರದ ಆಧಾರದ ಸುತ್ತ ಜೋಡಿಸಲಾಗಿರುತ್ತದೆ. ಜೋಡಿಸಿದ ಕಬ್ಬಿಣದ ಪಟ್ಟಿಗಳೊಳಗೆ ವೃತ್ತಾಕಾರದ ಆಧಾರದ ಸುತ್ತಳತೆಗಿಂತಲೂ ಚಿಕ್ಕದಾದ ಕಬ್ಬಿಣದ ಉಂಗುರುಗಳನ್ನು ಕಾಯಿಸಿ ಸುತ್ತಿಗೆಯಿಂದ ಹೊಡೆದು ಎರಡು ಅಥವಾ ಮೂರು ಪದರದಲ್ಲಿ ಕೂರಿಸಲಾಗುತ್ತದೆ.ಈ ಪ್ರಕ್ರಿಯೆಯನ್ನು ಕುರಿತು ಹಲವು ಚಿತ್ರಗಳೊಡನೆ ತುಪಾಕಿಯ ಪ್ರತಿಕೃತಿ ಗಮನ ಸೆಳೆಯುತ್ತದೆ.

ಹರಪ್ಪ ನಾಗರಿಕತೆಯ ಕುಂಬಾರಿಕೆ:

ನಾಗರಿಕತೆಯತ್ತ ಮಾನವನ ನಡೆಯಲ್ಲಿ ಕುಂಬಾರಿಕೆಯ ಆವಿಷ್ಕಾರವೂ ಒಂದು.ಪ್ರೆಂಚ್ ಪುರಾತತ್ವ ಅಭಿಯಾನದಿಂದ ಮಾಡಲಾದ ರೇಡಿಯೋ ಕಾರ್ಬನ್ ಕಾಲನಿರ್ಣಯದ ತಂತ್ರದಿಂದ ಭಾರತದಲ್ಲಿ ಕೈಯಿಂದ ತಯಾರಿಸಲಾದ ಮಣ್ಣಿನ ವಸ್ತುಗಳ ಉತ್ಪಾದನೆಯ ಇತಿಹಾಸವನ್ನು ಕ್ರಿ.ಪೂ.೫೦೦೦ ರಷ್ಟು ಹಿಂದಕ್ಕೆ ತಗೆದುಕೊಂಡು ಹೋಗಬಹುದು. ಕುಂಬಾರಿಕೆಯಲ್ಲಿ ಚಕ್ರದ ಬಳಕೆ ಸುಮಾರು ಕ್ರಿ.ಪೂ.೪೦೦ ರ ಹೊತ್ತಿಗೆ ಆರಂಭವಾಯಿತು.ಪ್ರಾಚೀನ ಭಾರತದ ಕುಂಬಾರಿಕೆ ವಸ್ತುಗಳನ್ನು ಈ ರೀತಿ ವರ್ಗೀಕರಿಸಲಾಗಿದೆ.

ಕಪ್ಪು ಮತ್ತು ಕೆಂಪು ಸರಕುಗಳು, ಹರಪ್ಪನ್ ವಸ್ತುಗಳು.ಓಖ್ರೆ ಬಣ್ಣದ ವಸ್ತುಗಳು, ಸುಣ್ಣ ಹಚ್ಚಿದ ಚಾಲ್ಕೋಲಿಥಿಕ್ ವಸ್ತುಗಳು, ಬಣ್ಣ ಬಣ್ಣದ ಬೂದು ಸರಕುಗಳು, ಮಾಲ್ವಾ ಸರಕುಗಳು, ಜೋರ್ವೆ ವಸ್ತುಗಳು, ಹೊಳಪುಳ್ಳ ಕೆಂಪು ವಸ್ತುಗಳು, ಮತ್ತು ಉತ್ತರದ ಕಪ್ಪು ಪಾಲಿಷ್ ಮಾಡಿದ ಕುಂಬಾರಿಕೆ ವಸ್ತುಗಳು, ಪ್ರತಿಯೊಂದು ಬಗೆಯ ವಸ್ತುಗಳು ತಮ್ಮದೇ ಆದ ವೈಶಿಷ್ಟ್ಯವನ್ನು ಹೊಂದಿವೆ. ಈ ರೀತಿಯ ವಸ್ತುಗಳನ್ನು ಇಲ್ಲಿ ವ್ಯವಸ್ಥಿತ ರೀತಿಯಲ್ಲಿ ಇಡಲಾಗಿದೆ.

ಜೀವಯಾಂತ್ರಿಕ ಪ್ರದರ್ಶನಾಲಯ:

ದಶಲಕ್ಷಕ್ಕೂ ಹೆಚ್ಚು ವರ್ಷಗಳ ನಿರಂತರ ಪ್ರಯತ್ನದಿಂದ, ಯತ್ನಚ್ಯುತಿ ವಿಧಾನದಿಂದ ನಿಸರ್ಗದಲ್ಲಿ ಯಂತ್ರಗಳು ಈಗಿನ ರೂಪ ಪಡೆದಿವೆ,ನಿಸರ್ಗದಲ್ಲಿ ಕೆಳದರ್ಜೆಯ ಜೀವಿಯಿಂದ ಮೇಲ್ದರ್ಜೆಯ ಜೀವಿಗಳ ವಿಕಾಸವಾದುದನ್ನು ಮಾನವ ನಿರ್ಮಿತ ಉಪಕರಣಗಳಲ್ಲಿ ಅನುಕರಣೆಯಾದ ಬಗ್ಗೆ ತುಲನಾತ್ಮಕ ಪರಿಚಯ ಮಾಡಿಕೊಡುವ ಪ್ರಯತ್ನ ಮಾಡಲಾಗಿದೆ.

ಸೂಕ್ಷ್ಮಜೀವಿಗಳಿಂದ ಉನ್ನತ ಜೀವಿಗಳ ಜೀವ ಯಂತ್ರಗಳ ನೈಸರ್ಗಿಕ ಹೊಂದಾಣಿಕೆಯನ್ನು ಮಾನವ ನಿರ್ಮಿತ ಯಂತ್ರಗಳೊಂದಿಗೆ ಹೋಲಿಸಲಾಗಿದೆ. ಜ್ಞಾನೆಂದ್ರಿಯಗಳ ಕಾರ್ಯ, ಪಕ್ಷಿಗಳ ಹಾರಾಟ, ಮಾಂಸಖಂಡಗಳ ಚಲನೆ,ಪ್ರಾಪಂಚಿಕ ಗೃಹಿಕೆ, ಪ್ರಾಣಿಗಳು ಶತ್ರುಗಳಿಂದ ರಕ್ಷಣೆ ಪಡೆಯಲು ಬಣ್ಣ ಬದಲಾಯಿಸುವಿಕೆ, ಪ್ರತಿದ್ವನಿ, ತಂತ್ರಜ್ಞಾನ ಇತ್ಯಾದಿಗಳ ಬಗ್ಗೆ ಹಲವಾರು ಪ್ರದರ್ಶಿಕೆಗಳನ್ನು ಇಲ್ಲಿ ಇಡಲಾಗಿದೆ.

ಮೋಜಿನ ವಿಜ್ಞಾನ ಎನ್.ಸಿ.ಎಸ್,ಎಂ.ಹೆಗ್ಗುರುತೆಂದರೆ ಮೋಜಿನ ವಿಜ್ಞಾನ ಪ್ರದರ್ಶನಾಲಯ. ಈ ಪ್ರದರ್ಶನಾಲಯದಲ್ಲಿ ವೀಕ್ಷಕರ ಆಸಕ್ತಿಯನ್ನು ಕೆರಳಿಸಬಲ್ಲ ಕ್ರಿಯಾತ್ಮಕ ಪ್ರದರ್ಶಿಕೆಗಳಿವೆ. ೪೦೦ ಚದರ ಮೀಟರ್ ವಿಸ್ತೀರ್ಣದಲ್ಲಿರುವ ಈ ಪ್ರದರ್ಶನಾಲಯದಲ್ಲಿ ಮಕ್ಕಳು ದೊಡ್ಡವರು ಕೂಡ ಆಟವಾಡುತ್ತ ಅನ್ವೇಷಣೆ ಮಾಡುತ್ತ ಉಲ್ಲಾಸದಿಮದ ವಿಜ್ಞಾನದ ವಿವಿಧ ವಿಷಯಗಳನ್ನು ಮನವರಿಕೆ ಮಾಡಿಕೊಳ್ಳಬಹುದಾಗಿದೆ,ಗುರುತ್ವ ಕೇಂದ್ರದಿಂದ ವಾಯುವಿನ ಒತ್ತಡದಿಂದ ಚೆಂಡು ಹಾರುವುದು. ನೀರಿನ ಅಲೆಗಳ ಮೂಲಕ ಗುಳ್ಳೆಗಳು ಏಳುವುದು, ಮಾಂಸಖಂಡಗಳ ಚಲನೆಯ ಆಂಗಿಕ ಪ್ರಧರ್ಶನ ಸೈಕಲ್ ಹೊಡೆಯುವುದು.

ತ್ರೀಡಿ ಪರದೆಯಂತೆ ಕಂಡುಬರುವ ಪರದೆಯಲ್ಲಿ ಪ್ರಾಣಿಗಳ ಚಲನೆ. ತಲೆಕೆಳಗಾಗಿ ಕಾಣುವ ದೃಶ್ಯದ ನೋಟ ತಿಮಿಂಗಿಲಿನ ಪ್ರತಿಕೃತಿ ಸಂಗೀತ ನುಡಿಸುವ ಕೊಳವೆಗಳು ಇತ್ಯಾದಿ ಒಂದೇ ಎರಡೇ ಹೇಳಲು ಮಾತೇ ಬಾರದಂತೆ ಮೋಜಿನ ವಿಜ್ಞಾನದ ಪ್ರದರ್ಶನಾಲಯವು ತನ್ನೊಳಗೆ ಅನೇಕ ವಿಸ್ಮಯಗಳನ್ನು ಒಳಗೊಂಡಿದೆ.

ನಿಮ್ಮ ಕೈ ಒಂದು ವಿದ್ಯುತ್ಕೋಶ:

ರಾಸಾಯನಿಕ ವಿದ್ಯುತ್ಕೋಶಗಳು ರಾಸಾಯನಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ.,ಸರಳ ವಿದ್ಯುತ್ಕೋಶವು ಒಂದು ಧನ ವಿದ್ಯುದಾಗ್ರವನ್ನು ಒಂದು ಋಣ ವಿದ್ಯುದಾಗ್ರವನ್ನು ಮತ್ತು ವಿದ್ಯುದ್ವಿಚ್ಚೇದವನ್ನು ಹೊಂದಿರುತ್ತದೆ.

ಇಲ್ಲಿರುವ ಕೈ ವಿದ್ಯುತ್ಕೋಶವು ಅಲ್ಯುಮಿನಿಯಂ ತಟ್ಟೆಯನ್ನು ಋಣವಿದ್ಯುದಾಗ್ರವನ್ನಾಗಿಯೂ, ತಾಮ್ರದ ತಟ್ಟೆಯನ್ನು ಧನ ವಿದ್ಯುದಾಗ್ರವನ್ನಾಗಿಯೂ ಮತ್ತು ನಮ್ಮ ಕೈಯಲ್ಲಿರುವ ಬೆವರಿನಲ್ಲಿರುವ ಉಪ್ಪಿನಾಂಶವನ್ನು ವಿದ್ಯುದ್ವಿಚ್ಚೇದವನ್ನಾಗಿಯೂ ಹೊಂದಿರುತ್ತದೆ.ನೀವು ನಿಮ್ಮ ಎರಡೂ ಕೈಗಳಿಂದ ತಾಮ್ರದ ತಟ್ಟೆ ಹಾಗೂ ಅಲ್ಯುಮಿನಿಯಂ ತಟ್ಟೆಗಳನ್ನು ಮುಟ್ಟಿದ ತಕ್ಷಣ ಉಪ್ಪಿನಲ್ಲಿಯ ಸೋಡಿಯಂ ಧನ ಆಯಾನುಗಳಾಗಿಯೂ, ಕ್ಲೋರಿನ್ ಋಣ ಆಯಾನುಗಳಾಗಿಯೂ, ವಿಂಗಡಿಸಲ್ಪಡುತ್ತದೆ.

ಅಲ್ಯುಮಿನಿಯಂ ತಟ್ಟೆಯು ಋಣ ಆಯಾನುಗಳನ್ನು ಪಡೆದುಕೊಂಡು ಋಣಾಗ್ರತೆಯನ್ನು ಹೊಂದುತ್ತದೆ.ತಾಮ್ರದ ತಟ್ಟೆಯು ಋಣ ಆಯಾನುಗಳನ್ನು ಬಿಡುಗಡೆಯಾಗಿ ಧನಾಗ್ರತೆಯನ್ನು ಹೊಂದುತ್ತದೆ. ವಿದ್ಯುದಾಗ್ರಗಳ ನಡುವೆ ಎಲೆಕ್ಟ್ರಾನುಗಳ ಅಸಮತೋಲನ ಏರ್ಪಟ್ಟು ವಿಭವಾಂತರ ಏರ್ಪಡುತ್ತದೆ.

ಎಲೆಕ್ಟ್ರಾನುಗಳು ತಾಮ್ರದ ತಟ್ಟಯಿಂದ ನಮ್ಮ ದೇಹದ ಮೂಲಕ ಹರಿದು ಅಲ್ಯುಮಿನಿಯಂ ತಟ್ಟೆಯನ್ನು ಸೇರುತ್ತದೆ.ಆಗ ವಿದ್ಯುತ್ ಪ್ರವಾಹವು ಉಂಟು ಮಾಡುತ್ತದೆ.ಈ ವಿದ್ಯುತ್ ಪ್ರವಾಹದ ಪರಿಮಾಣವನ್ನು ಮೈಕ್ರೋಆಂಪಿಯರ್ ಗಳಲ್ಲಿ ಮಲ್ಟಿ ಮೀಟರಿನಲ್ಲಿ ಕಾಣಬಹುದು.

ದ್ವಿ ಆಯಾಮದಿಂದ ತ್ರಿ ಆಯಾಮದ ಚಿತ್ರ. ಧ್ರುವೀಕರಣ ಹಾಳೆಯಿಂದ ಮೂರು ಆಯಾಮದ ನೋಟ. ಸೀಬೆಕ್ ಸೈರನ್,ಗೈರೋ ಸೂಟಕೇಸ್.ಅನುಕಂಪನಾ ಉಯ್ಯಾಲೆ.ಬಿಸಿ ತಾಣ. ದೊಂಬರಾಟವಾಡುವ ಕಡ್ಡಿ. ತೇಲುವ ಚಂಡು. ಟೆಸ್ಲಾ ಸುರುಳಿ.ಶಬ್ದದ ಅಲೆಗಳ ದೃಶ್ಯ. ಕಾಂತೀಯ ಬಲರೇಖೆಗಳು.ಸಂಭವನೀಯತೆಯ ವಕ್ರತೆ ಕ್ಯೂರಿ ಬಿಂದು.ಮೇಲೆರುವ ಆರ್ಕ. ಹಾರುವ ತಟ್ಟೆ.ಕಾಂತೀಯ ತೇಲುವಿಕೆ.ಫೋರಿಫೇರಾ ಒಂದು ಸರಳ ಜೈವಿಕ ಯಂತ್ರ.ಭ್ರಮಾ ವೇಷಧಾರಣೆ.ಶ್ರವಣ ಶಕ್ತಿ.ಮೊದಲಾದವುಗಳನ್ನು ಪ್ರಾಯೋಗಿಕವಾಗಿ ಇಲ್ಲಿ ನೋಡಲು ಸಾದ್ಯವಾಗುವಂತೆ ಮಾಡಿರುವರು.

ಮಕ್ಕಳ ಚಟುವಟಿಕೆ ತಾಣ:

ಇಲ್ಲಿ ಮಕ್ಕಳು ಆಡಲೆಂದೆ ಆಟದ ಪರಿಕರಗಳನ್ನು ಮತ್ತು ಬುದ್ದಿಚಾತುರ್ಯಕ್ಕೆ ಸವಾಲೊಡ್ಡುವ ಸಮಸ್ಯೆಯ ಕಿಟ್ಟುಗಳನ್ನು ಹರಡಿರುವರು ಅವುಗಳನ್ನು ಸ್ವತಃ ಮಕ್ಕಳು ತಗೆದುಕೊಂಡು ಆಟವಾಡಲು ಅನುಕೂಲವಾಗಿವೆ.

ಬಳೆಗಳಿಂದ ಭ್ರಮೆ:

ಇಲ್ಲಿರುವ ತಿರುಗುತ್ತಿರುವ ಉಂಗುರವನ್ನು ನೋಡುತ್ತಿದ್ದರೆ ಅವು ಒಂದರ ಮೇಲೊಂದು ಉರುಳಿದಂತೆ ಭಾಸವಾಗುತ್ತದೆ.ಇಲ್ಲಿರುವ ಸ್ವಿಚ್ ನ್ನು ಒತ್ತಿದಾಗ ಅವುಗಳ ತಿರುಗುವಿಕೆ ನಿಲ್ಲುತ್ತದೆ.ಇದೊಂದು ದೃಷ್ಟಿ ಭ್ರಮೆ.ಈ ಕಾರಣದಿಂದ ನಮ್ಮ ಕಣ್ಣು ಬಳೆಗಳು ನಿರಂತರವಾಗಿ ಒಂದರ ಮೇಲೊಂದು ತೇಲಾಡಿದಂತೆ ಕಂಡು ಬರುತ್ತದೆ.ಬಳೆಗಳನ್ನು ಒಂದರ ಮೇಲೊಂದಿಟ್ಟು ಒಂದು ಕೋಣದಲ್ಲಿ ಜಾಯಿಂಟ್ ಮಾಡಿರುವುದರಿಂದ ಅವು ಚಲಿಸುವಾಗ ಜಾಯಿಂಟ್ ಮಾಡಿದ ಸ್ಥಾನಗಳು ತಿರುಗಿ ಒಂದರ ಮೇಲೊಂದು ಉರುಳಿದಂತೆ ಕಾಣುತ್ತವೆ.

ವಿಜ್ಞಾನ ಪ್ರಾತ್ಯಕ್ಷಿಕೆ ಕೊಠಡಿ:

ವಿಜ್ಞಾನ ಕೇಂದ್ರಕ್ಕೆ ಬರುವ ವೀಕ್ಷಕರಿಗೆ ಹಲವಾರು ಪ್ರಯೋಗಗಳನ್ನು ಪ್ರಾತ್ಯಕ್ಷಿಕೆ ಮೂಲಕ ಮಾಡಿ ತೋರಿಸಲಾಗುತ್ತದೆ ಅದಕ್ಕೆಂದೇ ಈ ಕೊಠಡಿ ಮೀಸಲು. ಈ ಪ್ರಾತ್ಯಕ್ಷಿಕೆಗಳು ವಿಜ್ಞಾನದ ಕಲಿಕೆಯತ್ತ ಆಕರ್ಷಿಸಲು ಸಹಾಯಕಾರಿ.

ವಿಜ್ಞಾನ ಉದ್ಯಾನವನ:

ವಿಜ್ಞಾನ ಕೇಂದ್ರದ ಸುತ್ತಲೂ ೮ ಎಕರೆ ಜಾಗದಲ್ಲಿ ಹಸಿರಿನಿಂದ ಕಂಗೊಳಿಸುತ್ತಿರುವ ಉದ್ಯಾನವನವನ್ನು ನಿರ್ಮಿಸಲಾಗಿದ್ದು. ಇದರಲ್ಲಿ ಗುರುತ್ವ, ಅಪ್ಟಿಕ್ಸ, ರಾಟೆಗಳು, ಪ್ರತಿಧ್ವನಿ ಕೊಳವೆ, ಉಯ್ಯಾಲೆಗಳು ಲೋಲಕವೇ ಎಂದು ತಿಳಿಸಬಲ್ಲ ಪ್ರದರ್ಶಿಕೆಗಳಲ್ಲದೇ ಕ್ರಿಯಾತ್ಮಕವಾದ ವೀಕ್ಷಕರ ಆಸಕ್ತಿಯನ್ನು ಕೆರಳಿಸಬಲ್ಲ ೪೩ ಪ್ರದರ್ಶಿಕೆಗಳಿವೆ,ಕೇಂದ್ರದ ಮುಖ್ಯದ್ವಾರಗಳ ಇಕ್ಕೆಲಗಳ ದಾರಿಯಲ್ಲಿ ನಮ್ಮ ದೇಶದ ೮ ವಿಜ್ಞಾನಿಗಳ ಮೂರ್ತಿಗಳಿವೆ.,ಪ್ರಾಗೈತಿಹಾಸಿಕ ಪ್ರಾಣಿಗಳ ಉದ್ಯಾನವನ ಇಲ್ಲಿನ ಪ್ರಮುಖ ಆಕರ್ಷಣೆ. ಒಟ್ಟಾರೆ ಬೆಳಗಿನ ೧೦ ಗಂಟೆಗೆ ಆರಂಭವಾಗುವ ಈ ವಿಜ್ಞಾನ ಕೇಂದ್ರ ಸಂಜೆ ೬ ರವರೆಗೂ ತೆರೆದಿದ್ದು. ಯಾವುದೇ ಸಂದರ್ಭದಲ್ಲಿ ಭೇಟಿ ನೀಡಬಹುದು. ಹೊರಗಡೆ ಪ್ರವೇಶ ದ್ವಾರದ ಒಂದು ಬದಿಯಲ್ಲಿ ಯುದ್ದದ ಪುಟ್ಟ ವಿಮಾನ ಮತ್ತು ಯುದ್ದ ಟ್ಯಾಂಕರ್ ಪ್ರತಿಕೃತಿಯನ್ನು ಇಡಲಾಗಿದೆ.

ಇಲ್ಲಿನ ಹುಲ್ಲು ಹಾಸಿನಲ್ಲಿ ವಿಶ್ರಮಿಸಿ.ಮಕ್ಕಳು ಜಾರುಪಟ್ಟೆ. ಜೋಕಾಲಿಗಳನ್ನು ಆಡಲು ಬಿಡಿ. ಇಷ್ಟು ಹೊತ್ತು ಏನೆಲ್ಲ ನೋಡಿರುವಿರೋ ಅವುಗಳ ಕುರಿತು ನಿಮ್ಮ ಮನೆಯಲ್ಲಿ ಚರ್ಚಿಸಿದರೆ ವಿಜ್ಞಾನ ಮತ್ತು ಸಮಾಜ ವಿಷಯಗಳ ಜ್ಞಾನ ಮಕ್ಕಳಿಗೆ ಪ್ರತ್ಯಕ್ಷ ನೋಡಿರುವ ದೃಶ್ಯ ನೋಟಗಳ ಮೂಲಕ ಪರಿಣಾಮಕಾರಿಯಾಗಿರುವುದರಲ್ಲಿ ಯಾವ ಸಂದೇಶವೇ ಇಲ್ಲ. ಇಂತಹ ಒಂದು ಪ್ರಾದೇಶಿಕ ವಿಜ್ಞಾನ ಕೇಂದ್ರ ಧಾರವಾಡದಲ್ಲಿರುವುದು ನಮ್ಮೆಲ್ಲರ ಸೌಭಾಗ್ಯ. ಒಂದು ಕೊರತೆ ನನ್ನನ್ನು ಕಾಡಿತು.ತ್ರೀಡಿ ಆಯಾಮದ ಚಲನಚಿತ್ರ ಮಂದಿರ ಈಗ ಕಾರ್ಯಗತವಿಲ್ಲ ಎಂಬ ಸಂಗತಿ. ಅದು ಕೂಡ ಮಕ್ಕಳಿಂದ ದೊಡ್ಡವರವರೆಗೂ ಒಂದು ವಿಶಿಷ್ಟ ಅನುಭವ ಹೊಂದಿರುವ ಮಿನಿ ಥಿಯೇಟರ್ ಈ ಹಿಂದೆ ನಾನು ಭೇಟಿ ಕೊಟ್ಟ ಸಂದರ್ಭದಲ್ಲಿ ಕನ್ನಡಕ ಹಾಕಿಕೊಂಡು ತ್ರೀಡಿ ಆಯಾಮವನ್ನು ನಾನು ಅನುಭವಿಸಿ ಬಂದಿದ್ದ ನೆನಪು ಮತ್ತೆ ಮರುಕಳಿಸಿತು. ಇದರ ಸಂಘಟಿಕರು ಅದನ್ನು ಮತ್ತೆ ಸರಿ ಮಾಡಿದರೆ ಅನುಕೂಲ.ವೀಕ್ಷಣೆಗೆ ಅವಕಾಶ ಒದಗಿಸಿದಂತಾಗುವುದು.

ಧಾರವಾಡಕ್ಕೆ ಬಂದರೆ ಪಾವಟೆನಗರ, ಅಥವ ಶ್ರೀನಗರ ಬಸ್ ಹತ್ತಿದರೆ ಸಾಕು ಪಾವಟೆನಗರದ ಕರ್ನಾಟಕ ವಿಶ್ವವಿದ್ಯಾಲಯ ಒಳಪ್ರವೇಶಿಸುವ ಮೊದಲು ಬರುವ ರೈಲ್ವೆಗೇಟ್ ಬಳಿ ಈ ವಿಜ್ಞಾನ ಕೇಂದ್ರವಿದ್ದು.ಇದರ ಆವರಣದಲ್ಲಿ ನಿಂತು ರೈಲು ಹೋಗುವ ಬರುವ ದೃಶ್ಯಗಳನ್ನು ಕೂಡ ಸವಿಯಬಹುದು.ಇಲ್ಲಿ ಪ್ರತಿಯೊಂದು ವಿಭಾಗಕ್ಕೂ ಪ್ರವೇಶ ದರ ನಿಗದಿಪಡಿಸಿದ್ದು ಸಾರ್ವಜನಿಕರಿಗೆ ಪ್ರತಿಯೊಬ್ಬರಿಗೆ ೩೦ ರೂ. ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ಪ್ರತಿಯೊಬ್ಬರಿಗೆ ತಲಾ ೧೦ ರೂ.

ಒಟ್ಟಾರೆ ಈ ವಿಜ್ಞಾನ ಕೇಂದ್ರ ವೀಕ್ಷಕರನ್ನು ಮನೋರಂಜಿಸುವ ಜೊತೆಗೆ ವಿಜ್ಙಾನದ ಆಸಕ್ತಿಯನ್ನು ಮೂಡಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಉತ್ತರಕರ್ನಾಟಕದಲ್ಲಿ ಇಂಥ ಒಂದು ಪ್ರಾದೇಶಿಕ ವಿಜ್ಞಾನ ಕೇಂದ್ರದ ಅವಶ್ಯಕತೆಯನ್ನು ಈ ವಿಜ್ಞಾನ ಕೇಂದ್ರ ತುಂಬಿ ಕೊಟ್ಟಿದೆ ಎಂದರೆ ಅತಿಶಯೋಕ್ತಿಯಾಗದು.

ನನ್ನೆಲ್ಲ ಸನ್ಮಿತ್ರರೊಂದಿಗೆ ಇದನ್ನೆಲ್ಲ ವೀಕ್ಷಿಸಿ ಹಳೆಯ ನೆನಪುಗಳನ್ನು ನನ್ನ ಪದವಿ ಮತ್ತು ಸ್ನಾತಕೋತ್ತರ ಅಧ್ಯಯನದ ನನ್ನ ವಿಶ್ವವಿದ್ಯಾಲಯದ ಕಮಾನಿನ ಮುಂದೆ ನಿಂತು ನಾವೆಲ್ಲ ಪೋಟೋ ತೆಗೆದುಕೊಂಡಾಗ ಮತ್ತೆ ಹಳೆಯ ನೆನಪಿನತ್ತ ಧಾರವಾಡದ ವಾತಾವರಣ ನನ್ನನ್ನು ಕೊಂಡ್ಯೊಯ್ದಿತ್ತು.

ಪ್ರವಾಸದ ಈ ಅನುಭವ ನಾವು ಯಾವುದೇ ಮಿತಿ ಇಲ್ಲದೇ ಎಲ್ಲಾ ಒತ್ತಡಗಳನ್ನು ಬದಿಗಿಟ್ಟು ಸಂತಸ ಅನುಭವಿಸುವ ಉದ್ದೇಶದಿಂದ ಬಂದಾಗ ಮಾತ್ರ ಆ ಸುಖದ ಅನುಭವ ಹೊಂದಲು ಸಾಧ್ಯ.ಇಲ್ಲಿ ಕಚೇರಿ ಕೆಲಸಗಳ ಕುರಿತು ತಲೆ ಕೆಡಿಸಿಕೊಳ್ಳುವ ಯಾವ ಗೋಜು ಹತ್ತಿರ ಸುಳಿಯದು.ನಾವೆಲ್ಲ ಸಂತೋಷದಿಂದ ನಮ್ಮ ಬೈಕ್ ಪ್ರಯಾಣ ಮುಂದುವರೆಸಿದ ಎಲ್.ಇ.ಎ ಕ್ಯಾಂಟೀನಿಗೆ ಬಂದು ಅಲ್ಲಿ ತುಪ್ಪ ಹಚ್ಚಿದ ಅವಲಕ್ಕಿ ತಿಂದು ಚಹಾ ಕುಡಿದು ನನ್ನ ಮೃತ್ಯುಂಜಯ ಮಹಾವಿದ್ಯಾಲಯವನ್ನು ನನ್ನ ಸನ್ಮಿತ್ರರಿಗೆ ತೋರಿಸುವಾಗ ನನ್ನ ಕಾಲೇಜಿನ ಹಳೆಯ ನೆನಪುಗಳು ಮತ್ತೊಮ್ಮೆ ನನ್ನ ಸ್ಮೃತಿಪಟಲದಲ್ಲಿ ಮೂಡಿದವು. ಹತ್ತಿರದ ದುರ್ಗಾದೇವಿ ದೇವಾಲಯದ ಪಕ್ಕದ ಹಾದಿಯ ಮೂಲಕ ಎ.ಪಿ.ಎಂ.ಸಿ ಮಾರ್ಗದಿಂದ ಮುರುಘಾಮಠದ ಹೊರ ಆವರಣದ ರಸ್ತೆಯಲ್ಲಿ ನಮ್ಮ ಊರಿನತ್ತ ಪ್ರಯಾಣ ಬೆಳೆಸಿದಾಗ ಸೂರ್ಯ ಆಗಸದಿಂದ ಮರೆಯಾಗಿ ಕತ್ತಲಾವರಿಸತೊಡಗಿತು.


ವೈ.ಬಿ.ಕಡಕೋಳ
ಸಂಪನ್ಮೂಲ ವ್ಯಕ್ತಿಗಳು, ಮುನವಳ್ಳಿ

- Advertisement -
- Advertisement -

Latest News

ಬಿಜೆಪಿ ಮಂಡಲ ನೂತನ ಪದಾಧಿಕಾರಿಗಳಿಗೆ ಸನ್ಮಾನ

ಸಿಂದಗಿ: ಪಟ್ಟಣದ ವೈಷ್ಣವಿ ಹೋಟೆಲಿನಲ್ಲಿ ಸಿದ್ದು ಗೌಡ ಪಾಟೀಲ್ ಇವರ ಪರಿವಾರ ವತಿಯಿಂದ ಬಿಜೆಪಿ ಮಂಡಲದ ನೂತನ ಪದಾಧಿಕಾರಿಗಳಿಗೆ  ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಮಾಜಿ...
- Advertisement -

More Articles Like This

- Advertisement -
close
error: Content is protected !!
Join WhatsApp Group