spot_img
spot_img

ಸಾಹಿತ್ಯಕ್ಷೇತ್ರದ ಚುನಾವಣೆಗೂ ರಾಜಕೀಯ ಕ್ಷೇತ್ರದ ಚುನಾವಣೆಗೂ ಇರುವ ವ್ಯತ್ಯಾಸವೇನು?

Must Read

spot_img

ಚುನಾವಣೆ ಎಂದ ಮೇಲೆ ನಮ್ಮ ಮತದಾನವೇ ಮುಖ್ಯವಾಗುತ್ತದೆ. ರಾಜಕೀಯ ಚುನಾವಣೆಯಲ್ಲಿ ಜನರು ಅಭ್ಯರ್ಥಿಗಳನ್ನು ಅವರ ಯೋಗ್ಯತೆಯನ್ನಳೆದು ಆರಿಸಿ ಅಧಿಕಾರ ಕೊಡುವುದಾಗಿತ್ತು. ಈಗಿದು ವಿರುದ್ದ ದಿಕ್ಕಿನಲ್ಲಿ ನಡೆದಿರೋದು ಕಣ್ಣಿಗೆ ಕಾಣುತ್ತಿರುವ ಸತ್ಯ. ಎಲ್ಲಿ ಹಣಬಲ ಜನಬಲವಿರುವುದೋ ಅಲ್ಲಿ ಅಹಂಕಾರ,ಸ್ವಾರ್ಥ ಇದ್ದೇ ಇರುತ್ತದೆ.ಅದರ ಜೊತೆಗೆ ಅಜ್ಞಾನವೂ,ಅಸತ್ಯ ಅಧರ್ಮವನ್ನು ಬೆಳೆಸಿಕೊಂಡು ಜನರನ್ನೇ ದಾರಿ ತಪ್ಪಿಸುತ್ತದೆ.

ಹೀಗಾಗಿ ಹಿಂದಿನ ಮಹಾತ್ಮರುಗಳು ರಾಜಕೀಯದಿಂದ ದೂರ ಇದ್ದು ರಾಜರಿಗೆ ಸನ್ಮಾರ್ಗದಲ್ಲಿ ನಡೆಯಲು ಉಪದೇಶ ನೀಡಿ ಸಹಕರಿಸಿ ಆಶೀರ್ವಾದ ಮಾಡುತ್ತಿದ್ದರು. ಹಾಗೆಯೇ ಸ್ವಯಂ ಗುರುವಾಗಿದ್ದು ಧರ್ಮದ ಮೂಲಕ ರಾಜ್ಯಭಾರ ನಡೆಸಲು  ಶಿಕ್ಷಣವನ್ನು ಗುರುಕುಲದಲ್ಲಿ ನೀಡುತ್ತಿದ್ದರು. ಅಂದಿನ ವರ್ಣ  ಪದ್ದತಿ ಇಂದಿನ ಜಾತಿ ಪದ್ದತಿ ಯುಗದ ಪ್ರಭಾವಕ್ಕೆ ಒಳಗಾಗಿಿ ದ್ರಛಿದ್ರವಾಗಿದೆ.

ಆದರೆ, ಅಂದಿನ ರಾಜಾಡಳಿತಕ್ಕೂ ಈಗಿನ  ಪ್ರಜಾಪ್ರಭುತ್ವಕ್ಕೂ ವ್ಯತ್ಯಾಸವಿದೆ.ಅಂದಿನ ಗುರು ಹಿರಿಯರಲ್ಲಿ ಜ್ಞಾನವಿದ್ದು  ರಾಜರನ್ನು ಪ್ರತಿಫಲಾಪೇಕ್ಷೆ ಇಲ್ಲದೆ ಉತ್ತಮ ಮಾರ್ಗದರ್ಶನದಲ್ಲಿ ನಡೆಸುವ ಸ್ವಾತಂತ್ರ್ಯ ಪಡೆದು ನಡೆಸಿದ್ದರು. ಅಂದರೆ ಸ್ವತಂತ್ರ  ಜ್ಞಾನ ಅವರಲ್ಲಿತ್ತು. ಕಾಲಕ್ರಮೇಣ‌ ಇದು ಒಂದು ಚೌಕಟ್ಟಿನಲ್ಲಿ  ಬಂಧಿಯಾಗಿ ಹೊರಗಿನ ರಾಜಕೀಯವೆ ಬೇರೆ,ಧರ್ಮವೆ ಬೇರೆ ಎನ್ನುವ ಮಟ್ಟಿಗೆ ಬೆಳೆದು ರಾಜರಾಜರ ನಡುವೆ ಅಂತರ ಬೆಳೆದು ಇಡೀ ದೇಶ ಪರಕೀಯರ ವಶವಾಯಿತು.

ಇದರಿಂದ ಬಿಡುಗಡೆ ಪಡೆಯಲು ತಮ್ಮ ಜೀವವನ್ನೇ ಬಿಟ್ಟ ಮಹಾತ್ಮರನ್ನು ನಾವೀಗಲೂ ದೇಶಭಕ್ತರು ಎನ್ನುತ್ತೇವೆ. ಇಲ್ಲಿ ದೇಶವನ್ನೇ ಆಳುವ ಅಧಿಕಾರ ಪ್ರಜೆಗೆ ಇದೆ. ರಾಜಕೀಯದಲ್ಲಿ ಅಸತ್ಯ, ಅನ್ಯಾಯ, ಭ್ರಷ್ಟಾಚಾರ ತುಂಬಿಕೊಂಡಿದೆ. ಹೀಗಿರುವಾಗ ನಮ್ಮ ದೇಶದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಅಧಿಕಾರಕ್ಕಾಗಿ ಚುನಾವಣೆ ನಡೆಯುತ್ತಿದೆ ಅದರಲ್ಲಿಯೂ ಮುಖ್ಯವಾದ ರಾಜಕೀಯ ಕ್ಷೇತ್ರದ ಚುನಾವಣೆ,ಸಾಹಿತ್ಯ,ಶಿಕ್ಷಣಕ್ಷೇತ್ರ ದೇಶದ ಭವಿಷ್ಯವನ್ನು ತೋರಿಸುತ್ತದೆ.

ಇಲ್ಲಿ ಎಷ್ಟು ಜನ ಸ್ಪರ್ಧಿಸುತ್ತಾರೆನ್ನುವ ಬದಲು ಸ್ಪರ್ಧಿಗಳು ಎಷ್ಟು ಹಣ ಚುನಾವಣೆಗಾಗಿ ಸುರಿಯುತ್ತಾರೆ.ನಂತರದ ದಿನಗಳಲ್ಲಿ ಅದನ್ನು ಮತ್ತೆ ಹೇಗೆ ಸಂಪಾದನೆ ಮಾಡುತ್ತಾರೆ ಎನ್ನುವ ಬಗ್ಗೆ ಜನಸಾಮಾನ್ಯರು ಮತದಾನ ಮಾಡುವವರು ಚಿಂತನೆ ನಡೆಸೋದಿಲ್ಲ. ಪ್ರತಿಯೊಂದು ರುಪಾಯಿಯೂ ದೇಶದ ಋಣವಾಗಿರುತ್ತದೆ. ಅದನ್ನು ತಿರುಗಿ ಕೊಡಲು ಸತ್ಕರ್ಮ ಮಾಡಲೇಬೇಕಿದೆ.

ರಾಜಕೀಯದಲ್ಲಿ ಇದನ್ನು ಯಾವ ರೀತಿ ಕಾಣಬಹುದು? ಆರ್ಥಿಕ ವಾಗಿ ಸಬಲರಾದವರಷ್ಟೆ ಚುನಾವಣೆಗೆ ನಿಂತು ಗೆದ್ದು ಅಧಿಕಾರ ಪಡೆದು ನಂತರ ಆಳುತ್ತಾರೆ. ರಾಜಕೀಯ ಚುನಾವಣೆಗಳಲ್ಲಿ ಎಷ್ಟೋ ಭ್ರಷ್ಟಾಚಾರ ನಡೆದರೂ ಎಲ್ಲಾ‌ ಮಾಡುತ್ತಾರೆ ಎಂದು ಒಪ್ಪಿಕೊಂಡು ಸುಮ್ಮನಿರುವ ಪ್ರಜೆಗಳಿಗೆ ಸಿಕ್ಕಿದ್ದೇನು? ಹಾಗೆಯೇ ಸಾಹಿತ್ಯ ಕ್ಷೇತ್ರದಲ್ಲಿ ಯಾವ ರೀತಿಯ ಬದಲಾವಣೆ ಆಗಿದೆ ಎನ್ನುವ‌ ಪ್ರಶ್ನೆಗೆ ಉತ್ತರ ಹೋರಾಟ ಹಾರಾಟ, ಮಾರಾಟ, ಕಾದಾಟಗಳು ಇದೆ.

ಸಾಹಿತ್ಯ ಎಂದರೆ ಸಾಮಾಜಿಕ ಹಿತಕ್ಕಾಗಿ ಸತ್ಯವನ್ನು ಬರವಣಿಗೆ ಮೂಲಕ ಹೊರಹಾಕುವ ಒಂದು ಪ್ರಾಕಾರ ಆದರೆ ಸತ್ಯ ಎಲ್ಲಿದೆ?  ಧರ್ಮ ಯಾವುದು? ಶಿಕ್ಷಣದಲ್ಲಿಯೇ ಸಾಹಿತ್ಯ  ಮರೆಯಾಗಿರುವಾಗ ಇದನ್ನು ನಾವು ಯಾವ ರೀತಿಯಲ್ಲಿ  ಸರಿಪಡಿಸಬಹುದೆನ್ನುವ ಚಿಂತನೆ ಸಾಹಿತ್ಯಕ್ಷೇತ್ರದವರು  ಮಾಡುವುದು ಪ್ರಜಾ ಧರ್ಮವಾಗುತ್ತದೆ. ಆದರೆ,  ಚುನಾವಣೆಯಲ್ಲಿ ನಿಲ್ಲಲು ಸಾಕಷ್ಟು ಹಣಬಲ, ಜನಬಲವಿದ್ದವರಿಗೆ ಸತ್ಯದ ಅರಿವಿಲ್ಲ ಇನ್ನು ಸತ್ಯ ತಿಳಿದವರಿಗೆ ಅಧಿಕಾರ ಸಿಗೋದಿಲ್ಲ. ಹೀಗಾಗಿ ದೇಶದ ತುಂಬಾ ರಾಜಕೀಯ ತುಂಬಿಕೊಂಡು ಜನರ ಸಾಮಾನ್ಯಜ್ಞಾನ ಹಿಂದುಳಿದು ಉತ್ತಮ ವಿಚಾರಗಳು ಮೂಲೆಸೇರುತ್ತಾ ಪ್ರಬುದ್ದತೆ ಮಕ್ಕಳೊಳಗೆ ಮನೆ  ಮಾಡಿದೆ.

ಹಾಗಾದರೆ ಭಾರತದಂತಹ ದೇಶದ ಧರ್ಮ ಸಂಸ್ಕೃತಿ, ಭಾಷೆಯಲ್ಲಿದ್ದ ಸತ್ಯ ಸತ್ವ ಇಂದು ಎಲ್ಲಿದೆ?  ಪ್ರಚಾರಕರಲ್ಲಿದೆ. ಕೇವಲ ಓದಿ ಪ್ರಚಾರ ಮಾಡಿದಾಕ್ಷಣ ಸತ್ಯರಕ್ಷಣೆ,ಧರ್ಮ. ರಕ್ಷಣೆ ಆಗೋದಾಗಿದ್ದರೆ ಜನರಲ್ಲಿ ಈ ಅಜ್ಞಾನವೇ ಇರುತ್ತಿರಲಿಲ್ಲ. ಹಿಂದಿನ ಮಹಾಕವಿಗಳು, ಸಾಹಿತಿಗಳು, ಜ್ಞಾನಿಗಳು, ಗುರು ಹಿರಿಯರಲ್ಲಿದ್ದ ದೇಶಭಕ್ತಿ ಇಂದಿನವರಲ್ಲಿ ಕಾಣೋದು ಕಡಿಮೆಯಾಗುತ್ತಿದೆ ಎಂದರೆ ಪ್ರಚಾರಕ್ಕಷ್ಟೇ ಸೀಮಿತವಾಗಿರುವ ವಿಚಾರ ಜನರಿಗೆ ಮನರಂಜನೆ ಕೊಟ್ಟರೂ ಆತ್ಮಜ್ಞಾನದವರೆಗೆ ಹೋಗದೆ ಹೊರಗುಳಿದಿದೆ.

ಇದನ್ನು ನಿಜವಾದ ಜ್ಞಾನಿಗಳಾದವರು ಸ್ವಯಂ ಶಿಕ್ಷಕರಾಗಿ, ಗುರುವಾಗಿ ರಾಜಕಾರಣಿಗಳಿಂದ ಹಿಡಿದು ಸಾಮಾನ್ಯರವರೆಗೆ ಶಿಕ್ಷಣದ ಮೂಲಕ ಕಲಿಸಿ ಬೆಳೆಸಿದ್ದರೆ ನಮ್ಮ ರಾಜಕೀಯ ಕ್ಷೇತ್ರವೂ ಶುದ್ದವಾಗಿದ್ದು ಅದನ್ನು ಅಂಟಿಕೊಂಡಿರುವ ಸಾಹಿತ್ಯ ಕ್ಷೇತ್ರವೂ ಸ್ವತಂತ್ರವಾಗಿ ಇರಬಹುದಿತ್ತು.

ಸತ್ಯ ತಿಳಿಸಲು ಹಣ ಬೇಕೆ? ಜ್ಞಾನ ಬೇಕೆ? ಈಗಲೂ ಕಾಲಮಿಂಚಿಲ್ಲ. ಸಾಹಿತ್ಯದಲ್ಲಿ ಸತ್ಯವಿರಲಿ,ಧರ್ಮವಿರಲಿ ದೇಶಭಕ್ತಿ ಅಗತ್ಯವಿರಲಿ. ಪ್ರಜಾಪ್ರಭುತ್ವ ದೇಶದೊಳಗಿರುವ ಪ್ರಜೆಗಳಿಗೆ ಅವರ ಜ್ಞಾನಕ್ಕೆ ತಕ್ಕಂತೆ ಶಿಕ್ಷಣ ನೀಡಿದಾಗಲೇ ಧರ್ಮ ರಕ್ಷಣೆ. ಇದಕ್ಕೆ ವಿರುದ್ದದ ವಿಷಯಗಳನ್ನು ಮೊದಲೇ ತಲೆಗೆ ತುಂಬಿ ‌ಮಕ್ಕಳ ಮುದ್ಗತೆ ನಾಶಮಾಡಿ ಮನರಂಜನೆಯ ವಸ್ತುವಾಗಿಸಿ ಕುಣಿಸಿದರೆ ಕಷ್ಟ ನಷ್ಟ ಯಾರಿಗೆ? ಕೆಲವರು ಶುದ್ದವಾಗಿದ್ದರೂ ಗುಂಪಿನಲ್ಲಿರುವಾಗ ಗೋವಿಂದ.

ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳು ಮಠ, ಮಂದಿರಗಳು, ನಡೆದಿರೋದೆ ಸಾಹಿತ್ಯದಿಂದ. ಇದು ಸತ್ಯದ ಪರವಿದ್ದರೆ ಜ್ಞಾನ. ಜ್ಞಾನಿಗಳಿಂದ ದೇಶ. ಸಾಹಿತ್ಯ ಕ್ಷೇತ್ರದ ಚುನಾವಣೆಗೆ ಕೋಟ್ಯಾಂತರ ಹಣ ಬಳಕೆಮಾಡುತ್ತಾರೆಂದರೆ ಹಣದ‌ ಮೂಲ ಸ್ವಚ್ಚವಾಗಿದೆಯೆ? ಎಲ್ಲಿ ಮೂಲ ಸ್ವಚ್ಚವಿರುವುದೋ ಅಲ್ಲಿ ಶಾಂತಿಯಿರುತ್ತದೆ.

ಧಾರ್ಮಿಕ ಕ್ಷೇತ್ರದಿಂದ ಹಿಡಿದು ಶೈಕ್ಷಣಿಕ,ಸಾಹಿತ್ಯಕ, ಸಾಂಸ್ಕೃತಿಕ, ರಾಜಕೀಯ, ಆರ್ಥಿಕ ಕ್ಷೇತ್ರದಲ್ಲಿರುವ ವ್ಯವಹಾರ ಜ್ಞಾನದಲ್ಲಿ ಹಣದ ಲಾಭವೆಮುಖ್ಯವಾದರೆ ಗುಣ ಜ್ಞಾನದ ನಷ್ಟವಿದೆ ಎಂದರ್ಥ.

ಈಗಾಗಲೇ ಸಾಕಷ್ಟು ರೀತಿಯಲ್ಲಿ ಜನಸಾಮಾನ್ಯರಿಗೆ ಸತ್ಯದರ್ಶನ ವಾಗುತ್ತಿದೆ. ಇದು ಸಾಹಿತಿಗಳಿಗೆ, ಧಾರ್ಮಿಕ ವರ್ಗದವರಿಗೆ, ಶಿಕ್ಷಕರಿಗೆ ಎಷ್ಟು ಅರ್ಥ ವಾಗಿದೆ ಎಂದು ಅವರ ಜೀವನ ಶೈಲಿಯೇ ತಿಳಿಸಬೇಕಿದೆ. ಸರಳ, ಸುಂದರ, ಸ್ವಚ್ಚ, ಮುಕ್ತ, ಸ್ವಾತಂತ್ರ್ಯ ಕ್ಕಾಗಿ ನಮ್ಮ ಹಿಂದಿನ ಮಹಾತ್ಮರುಗಳು ಜೀವಭಯ ಬಿಟ್ಟು ಹೋರಾಟ ನಡೆಸಿ ದೇಶವನ್ನು ಪರಕೀಯರಿಂದ ಬಿಡುಗಡೆ ಪಡೆದು ಕೊಟ್ಟರು.

ಈಗನಾವೇನುಮಾಡಿದ್ದೇವೆ. ಅಧಿಕಾರ, ಸ್ಥಾನಮಾನ, ಸನ್ಮಾನ, ಪ್ರಶಸ್ತಿ ಪದಕಗಳಿಗಾಗಿ ರಾಜಕೀಯಕ್ಕೆ ಇಳಿದು ಪರಕೀಯರಿಗೆಮಣೆ ಹಾಕಿ ಸ್ವಾಗತಿಸಿ ಅವರ ಸಾಲದ ಹೊರೆ ಮೇಲೆಹಾಕಿಕೊಂಡು ಅಧಿಕಾರಕ್ಕೆ ಬಂದರೆ ಹೊರೆ
ಇಳಿಸಲುಅವರ ಕೆಳಗೆ ದುಡಿಯಲೇಬೇಕಲ್ಲವೆ? ಹಾಳಾಗಿರುವುದನ್ನು ಸರಿಪಡಿಸಲು ಹಣ ಬೇಡ.ಜ್ಞಾನ  ಬೇಕಿತ್ತು.

ಸತ್ಯ ಬೇಕಿತ್ತು. ಧರ್ಮ ವಿರಬೇಕಿತ್ತು.ವಿಜ್ಞಾನ ಎಂದರೆ ವಿದೇಶಜ್ಞಾನವಲ್ಲ. ಚುನಾವಣೆಯ ಉದ್ದೇಶ ಸ್ವಚ್ಚ ಭಾರತವಾಗಬೇಕಿದೆ. ಶಿಕ್ಷಣದಲ್ಲಿ ಸ್ವದೇಶಿ ಶಿಕ್ಷಣದ
ಅಗತ್ಯವಿದೆ. ನಂತರ ವಿದೇಶಿ ಜ್ಞಾನ ಬೇಕಾದಷ್ಟು ಪಡೆದು ಸ್ವತಂತ್ರ ಪ್ರಜೆಗಳಾಗಬಹುದು. ಇವೆಲ್ಲವೂ ಪ್ರಜೆಗಳ ಜ್ಞಾನದ ಮೇಲಿದೆ.ಅವರ ಮತದಾನವೇ ಮುಖ್ಯ.

ದಾನವನ್ನು ದಾನವರಿಗೆ ಕೊಟ್ಟರೆ ಹೇಗೆ? ಇಲ್ಲಿ “ಉಳ್ಳವರು ಶಿವಾಲಯವ ಕಟ್ಟುವರು ನಾನೇನು ಮಾಡಲಿ ಬಡವನಯ್ಯಾ” ಎನ್ನುವ ದಾಸರ ಪದ ನೆನಪಾಗುತ್ತದೆ.ದಾಸರ ಕಾಲದಲ್ಲಿಯೂ ಸಾಹಿತ್ಯವಿತ್ತು ಅದು ಸಮಾಜದಲ್ಲಿ ಜ್ಞಾನವನ್ನು  ಬೆಳೆಸುತ್ತಿತ್ತು. ಈಗಿನ ಸಾಹಿತ್ಯವು ಮಾಧ್ಯಮಗಳಲ್ಲಿಿ ಟಕ,ಧಾರಾವಾಹಿ ಚಲನಚಿತ್ರ ರೂಪ ತಳೆದರೆ ಪ್ರಸಿದ್ದವಾಗುತ್ತದೆ.

ಆದರೆ ಅದರಿಂದ ಎಷ್ಟು ಮನೆಯ ಶಾಂತಿ ಉಳಿಯುತ್ತದೆನ್ನುವ ಬಗ್ಗೆ ಚಿಂತನೆ ನಡೆಸುವುದು ಸಾಹಿತ್ಯ ಕ್ಷೇತ್ರದಲ್ಲಿ ಚರ್ಚೆ ಮಾಡಬೇಕಲ್ಲವೆ? ನಮ್ಮ ಬರವಣಿಗೆಯಿಂದ ನಮಗೆ ಹಣ ಸನ್ಮಾನ,ಪದವಿ ಪದಕಗಳು ಸಿಗುತ್ತಿದ್ದರೆ ಜನರಿಗೇನು ಲಾಭ?  ದೇಶಕ್ಕೇನು ಸಿಕ್ಕಿದೆ? ಈ ಬಗ್ಗೆ ಹೆಚ್ಚಿನ‌ ಗಮನಕೊಟ್ಟರೆ ಉತ್ತಮ ಸಾಹಿತ್ಯವೂ ಜನಸಾಮಾನ್ಯರವರೆಗೆ ತರುವ ಕೆಲಸ ಸಾಹಿತ್ಯ ಕ್ಷೇತ್ರದಲ್ಲಿ ಆಗುತ್ತದೆ.

ಹೀಗಾಗಿ ಅದರಲ್ಲಿ ಜ್ಞಾನವಿರುವ‌ ಅಭ್ಯರ್ಥಿಗಳನ್ನು ಮತದಾನ ಮಾಡುವವರು ಗೆಲ್ಲಿಸಬೇಕಿದೆ. ಪುಸ್ತಕಗಳಿಗೇನೂ ಕೊರತೆಯಿಲ್ಲ. ಅದರಲ್ಲಿ ಸತ್ಯದ ಕೊರತೆಯಿದೆ. ಸಮಾಜದ ಹಿತಕ್ಕಾಗಿ ನಮ್ಮ ಸತ್ಯಕ್ಕೆ ನಾವು ರಾಜರಾಗಿರಬೇಕು. ಪ್ರಜಾಪ್ರಭುತ್ವ ಪ್ರಜೆಗಳ ಸುಜ್ಞಾನದಲ್ಲಿದೆ. ವಿಜ್ಞಾನ ಭೌತಿಕ ಜಗತ್ತಿನಲ್ಲಿ ಮುಂದಿದೆ. ಹಾಗೆಯೇ ಧಾರ್ಮಿಕ ಜಗತ್ತಿನಲ್ಲಿ ಸತ್ಯ ಧರ್ಮಮುಂದೆ ಬರುವ  ಹಾಗೆ ಸಾಹಿತ್ಯಕ್ಷೇತ್ರ,ಶೈಕ್ಷಣಿಕ ಕ್ಷೇತ್ರ,ಧಾರ್ಮಿಕ ಕ್ಷೇತ್ರಗಳು ಒಂದಾಗಿ ರಾಜಕೀಯ ಕ್ಷೇತ್ರ ಶುದ್ದಗೊಳಿಸುವುದೆ ಪ್ರಜಾ ಧರ್ಮ. ದೇಶ ಒಂದೆ.ಅದರೊಳಗಿರುವ ಎಲ್ಲಾ ಕ್ಷೇತ್ರ ದೇಶದ ಪರ ನಿಲ್ಲಲು ದೇಶಭಕ್ತಿಯ ಕೊರತೆಯಿದೆ.

ಇದನ್ನು ಇದ್ದಲ್ಲಿಯೇ ಜನರು ಅರ್ಥ ಮಾಡಿಕೊಳ್ಳಲು ಮೊದಲು ನಾವು ನನ್ನಿಂದ ದೇಶಕ್ಕೆ ಏನು ಲಾಭವಿದೆ? ಎನ್ನುವ ಪ್ರಶ್ನೆ ಹಾಕಿಕೊಂಡರೆ ನಮಗೆ ಸಿಕ್ಕಿರುವ ಅಧಿಕಾರ, ಹಣಬಲ, ಜನಬಲವನ್ನು ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಿದೆ. ಇದಕ್ಕೆ ಸತ್ಯಜ್ಞಾನದ ಅಗತ್ಯವಿದೆ.ಹೊರಗಿನ ಭೌತಿಕ ವಿಜ್ಞಾನದ ಮೊದಲು ನಮ್ಮ ಹಿಂದಿನ ಮಹಾತ್ಮರ ನಡೆ  ನುಡಿಯಲ್ಲಿದ್ದ ಧರ್ಮ, ಸತ್ಯ, ನ್ಯಾಯ, ನೀತಿ, ಪ್ರೀತಿ, ವಿಶ್ವಾಸ,  ಕರುಣೆ, ಮಮತೆ, ಜ್ಞಾನವನ್ನು ನಾವು ತಿಳಿದು ಅಲ್ಪ ಸ್ವಲ್ಪ ಅಳವಡಿಸಿಕೊಳ್ಳುತ್ತಾ ಮುಂದೆ ನಡೆದರೆ, ನಮ್ಮ ಹಿಂದಿನವರೂ ಅದೇ ದಾರಿಯಲ್ಲಿ ನಡೆಯಬಹುದಷ್ಟೆ.

ಎಲ್ಲಾ ರಾಜಕೀಯವೇ. ಆದರೆ ಯಾರು ಯಾರನ್ನು ಹೇಗೆ ಯಾಕೆ ಎಷ್ಟು ಆಳಿದರೆ ಒಳ್ಳೆಯದು ಕೆಟ್ಟದ್ದು ಎನ್ನುವ ಪರಿಜ್ಞಾನದ ಅಗತ್ಯವಿದೆ. ಕೆಲವರಿದ್ದಾರೆ.ಹಣನೋಡದೆ ಗೆಲ್ಲಿಸಬಹುದು. ಚುನಾವಣೆಗೆ ಬಳಸುವ ಹಣವನ್ನು ಸದ್ಬಳಕೆ ಮಾಡಿಕೊಂಡರೆ  ಉತ್ತಮ. ದೇಶದ ಸಮಸ್ಯೆಗೆ ಕಾರಣವೇ ಅಜ್ಞಾನದ ಶಿಕ್ಷಣ.ಅಜ್ಞಾನಕ್ಕೆ ಕಾರಣ‌ ಜ್ಞಾನಿಗಳ ರಾಜಕಾರಣ. ರಾಜಕಾರಣಕ್ಕೆ ಕಾರಣವೆ ಪ್ರಜೆಗಳ ಸಹಕಾರ.

ಈ ಪ್ರಜೆಗಳಿಗೇ ನಾವು ಯಾರಿಗೆ ಸಹಕಾರ ನೀಡಿದರೆ ಧರ್ಮ ವೆನ್ನುವ ಜ್ಞಾನ ಎಲ್ಲಿಯವರೆಗೆ ಜನರಿಗೆ ಬರುವುದಿಲ್ಲೋ ಅಲ್ಲಿಯವರೆಗೆ ಸರ್ಕಾರ ಸರಿ ಆಗೋದಿಲ್ಲ.ಸಮಸ್ಯೆಗೆ ಹಣದಿಂದ ಪರಿಹಾರವಿಲ್ಲ. ಜ್ಞಾನದಲ್ಲಿದೆ. ಅನುಭವದ ಜ್ಞಾನ  ಪ್ರಜೆಗಳಲ್ಲಿದೆ. ಅದಕ್ಕೆ ಪೂರಕವಾದ ಶಿಕ್ಷಣ ಮಕ್ಕಳು ಮಹಿಳೆಯರಿಗೆ ಕೊಡುವುದೆ ಪ್ರಜಾಧರ್ಮ.

ಮುಂದಿನ ದಿನಗಳಲ್ಲಿ ಸ್ವಚ್ಚ  ಭಾರತವಾದರೆ ಉತ್ತಮ. ಹಿಂದಿನ ಸಾಹಿತಿಗಳ ಜೀವನ ಅವರ ಆತ್ಮಜ್ಞಾನದ ಮೇಲಿತ್ತು. ವಿಜ್ಞಾನ ಎಂದರೆ ವಿಶೇಷ ಜ್ಞಾನ.ಇದನ್ನು ವಿದೇಶದವರೆಗೆ ತಲುಪಿಸುವ ಮೊದಲು ಸ್ವದೇಶದ ಬಗ್ಗೆ ಕಾಳಜಿವಹಿಸಲು ನಾವು  ನಾವಾಗಿರಬೇಕಷ್ಟೆ. ಮತದಾನ ಪ್ರಜಾಪ್ರಭುತ್ವವನ್ನುು ಳಿಸುವಂತಿದ್ದರೆ ಕ್ಷೇಮವಲ್ಲವೆ? ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಹೋಗಿ ಎಲ್ಲರೂ ಮಾಡುವುದು ನೋಟಿಗಾಗಿ ಓಟು ಸೀಟಿಗಾಗಿ ಎಂದರೆ ನಮ್ಮ ದೇಶ ಎತ್ತ  ಸಾಗುತ್ತಿದೆ? ಸಾಮಾನ್ಯಪ್ರಜೆಗಳಿಗೆ ಕಾಣುವ ಸತ್ಯ ಮೇಲೇರಿದವರಿಗೆ ಕಾಣದಿರೋದೆ ದುರಂತಕ್ಕೆ ಕಾರಣ. ಇಲ್ಲಿ  ಯಾರೂ ಶಾಶ್ವತವಲ್ಲ. ಸತ್ಯ ಧರ್ಮ ಜ್ಞಾನ ಮಾನವನ ಆಸ್ತಿ ಎನ್ನುತ್ತಾರೆ ಮಹಾತ್ಮರು. ಆದರೆ ಇದರಿಂದ ರಾಜಕೀಯ ನಡೆಸಲಾಗದು.


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ವಿದ್ಯುತ್ ಕಳ್ಳತನ ಮಹಾಪರಾಧ: ಎಇಇ ಧರೆಪ್ಪಗೋಳ

ಸಿಂದಗಿ: ವಿದ್ಯುತ್ ಕಳ್ಳತನ ಮಹಾಪರಾಧ, ಕಳ್ಳತನ ಮಾಡಿದ ಗ್ರಾಹಕರಿಗೆ ಜೈಲುವಾಸ ಮತ್ತು ದಂಡ ಕಟ್ಟಿಟ್ಟಬುತ್ತಿ ಎಂದು ಸಿಂದಗಿ ಸಹಾಯಕ ಕಾರ್ಯನಿರ್ವಾಹಕ ವಿಶಾಲ್ ಧರೆಪ್ಪಗೋಳ ಹೇಳಿದರು. ತಾಲೂಕಿನ ಮೋರಟಗಿ...
- Advertisement -

More Articles Like This

- Advertisement -
close
error: Content is protected !!