ಬೀದರ – ಬೀದರನಲ್ಲಿ ಸದ್ದು ಮಾಡಿರುವ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದ ಕೆಲವು ಸಂಗತಿಗಳು ಈಗ ಹೊರಬಿದ್ದಿವೆ.
ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ಡಿ. ೨೪ ರಂದು ನಗರದ ರಾಯಲ್ ಹೆರಿಟೇಜ್ ಹೊಟೇಲಿಗೆ ಬಂದು ಬೀಯರ್ ಕುಡಿದು ಊಟ ಮಾಡಿದ್ದಲ್ಲದೆ ಊಟ ಪಾರ್ಸೆಲ್ ತೆಗೆದುಕೊಂಡು ಹೋಗಿರುವ ಘಟನಾಕ್ರಮಗಳು ಈಗ ಗೊತ್ತಾಗುತ್ತಿವೆ.
ಹೊಟೇಲಿನ ಸಿಸಿ ಕ್ಯಾಮರಾದಲ್ಲಿ ಸಚಿನ್ ಚಲನವಲನ ದಾಖಲಾಗಿದ್ದು ಸಚಿನ್ ಹೊಟೇಲಿನ ಒಳಗೆ ಬಂದು ಊಟ ಕಟ್ಟಿಸಿಕೊಂಡು ಹೊರಡುವ ಮುಂಚೆ ಅಲ್ಲಿನ ವೇಯ್ಟರ್ ಕೃಷ್ಣ ಎಂಬುವವನ ಫೋನ್ ನಿಂದ ಸೋದರಿಯರಿಗೆ ಕಾಲ್ ಮಾಡಿ ಮಾತನಾಡಿದ್ದಾನೆ.
ನಂತರ ಅದೇ ಫೋನಿಗೆ ೧೫೦೦ ರೂ. ಹಣ ಹಾಕಿಸಿಕೊಂಡು ಹೊಟೇಲ್ ಬಿಲ್ ಕೊಟ್ಟು ಹೋಗುವಾಗ ತನಗೆ ಸಂಬಂಧಿಸಿದ ಯಾವುದೇ ಕಾಲ್ ಬಂದರೂ ಮಾತನಾಡಬೇಡ ಎಂದು ಹೇಳಿ ಹೋಗಿದ್ದನಂತೆ.
ಮರುದಿನ ಸಚಿನ್ ನ ವಿಡಿಯೋ ವೈರಲ್ ಆದ ನಂತರ ಆತನ ಸೋದರಿಯರು ಆತನಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಸಚಿನ್ ರೇಲ್ವೆ ಟ್ರಾಕ್ ಮೇಲೆ ಶವವಾಗಿ ಸಿಕ್ಕಿದ್ದು ಸಚಿವ ಖರ್ಗೆಯವರ ಆಪ್ತನ ಕಿರುಕುಳದಿಂದಾಗಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪತ್ರ ಬರೆದಿಟ್ಟು ಹೋಗಿದ್ದಾನೆ.
ಈ ಪ್ರಕರಣವೀಗ ಬಿಜೆಪಿ ಪಕ್ಷಕ್ಕೆ ರಾಜಕೀಯ ದಾಳವಾಗಿದ್ದು ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಯೋಗಿಸಲು ಬಿಜೆಪಿ ಸಜ್ಜಾಗಿದೆ. ಖರ್ಗೆಯವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಹಾಗೂ ತನಿಖೆ ಎದುರಿಸಬೇಕು ಎಂದು ಭಾರತೀಯ ಜನತಾ ಪಕ್ಷ ಹೇಳಿದರೆ, ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಸಿಎಮ್ ಕೂಡ ಸಚಿವರ ಬೆಂಬಲಕ್ಕೆ ನಿಂತಿದ್ದು ಮುಂದೇನಾಗುವುದೋ ಕಾದು ನೋಡಬೇಕು.
ವರದಿ : ನಂದಕುಮಾರ ಕರಂಜೆ, ಬೀದರ