ವೀ ರಶೈವರಿಗೆ ಪರ್ಯಾಯ ಸಂಘಟನೆಯೊಂದೇ ಪರಿಹಾರವಲ್ಲ . ಅಖಿಲ ಭಾರತ ವೀರಶೈವ ಮಹಾಸಭೆ ಸ್ಥಾಪಿತವಾಗಿ 121 ವರ್ಷಗಳು ಕಳೆದಿವೆ .ಅಂದಿನ ಕಾಲಕ್ಕನುಗುಣವಾಗಿ ವೀರಶೈವ ಲಿಂಗಾಯತ ಒಂದೇ ಎನ್ನುವ ಭಾವವಿತ್ತು ಅಭಿಪ್ರಾಯಗಳು ಒಂದೇ ಇದ್ದವು. ಉತ್ತರ ಕನ್ನಡ ಭಾಷೆಯಲ್ಲಿ ಕೇವಲ ಲಿಂಗಾಯತ ಇತ್ತು 1978 ರ ಈಚೆಗೆ ವೀರಶೈವ ದಕ್ಷಿಣದಿಂದ ಉತ್ತರ ಗಂಡು ಕನ್ನಡಿಗರ ಹೆಗಲ ಮೇಲೇರಿತು
ಇಂದು ಪರ್ಯಾಯ ಸಂಘಟನೆ ಮಾಡಿ ಸಂಘರ್ಷಕ್ಕೆ ಇಳಿಯುತ್ತೇವೆ ಎಂದೆನ್ನುವುದು ಒಂದು ಭ್ರಾಂತಿ, ಭ್ರಮೆ.
ಎಲ್ಲವೂ ಕೊನೆಗೊಳ್ಳುವುದು ರಾಜಕೀಯ ಲೆಕ್ಕಾಚಾರ.
ನನ್ನ ಕೆಲವು ಪ್ರಶ್ನೆಗಳು ಸಂಬಂಧಿತರು ಉತ್ತರಿಸಲಿ.
ನ್ಯಾಯಮೂರ್ತಿ ಶ್ರೀ ನಾಗಮೋಹನದಾಸ ಅವರು ಸಲ್ಲಿಸಿದ ವರದಿ ಆಧಾರದ ಮೇಲೆ ಕರ್ನಾಟಕ ಅಂದಿನ ಸರಕಾರವು ಕೇಂದ್ರ ಮೈನಾರಿಟಿ ಇಲಾಖೆಗೆ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದ ಮೇಲೆ ಸಂಬಂಧಿತ ಲಿಂಗಾಯತ ಮಠಗಳು ಸಂಘಟನೆಗಳು ಕಳೆದ ಏಳು ವರ್ಷಗಳಿಂದ ಮತ್ತೆ ಪುಷ್ಟೀಕರಿಸಿದ ಅರ್ಜಿಯನ್ನು ಏಕೆ ಸಲ್ಲಿಸಲಿಲ್ಲ.
ಅವತ್ತಿನ ಸಮ್ಮಿಶ್ರ ಸರಕಾರ ಕೇಂದ್ರ ಸರಕಾರಕ್ಕೆ ಏಕೆ ಮತ್ತೆ ಮೆಲ್ಮನವಿ ಸಲ್ಲಿಸಲಿಲ್ಲ ?
ಲಿಂಗಾಯತ ಧರ್ಮದ ಮಾನ್ಯತೆ ಮತ್ತು ಅಲ್ಪ ಸಂಖ್ಯಾತ ಮಾನ್ಯತೆಗೆ ಲಿಂಗಾಯತರ ಪ್ರಾಮಾಣಿಕ ಗುಣಮಟ್ಟದ ಪ್ರಯತ್ನವು ನಡೆಯಲಿಲ್ಲ.ಇದೊಂದು ರಾಜಕೀಯ ಸಮಾವೇಶ ಅಥವಾ ಮತಗಳ ವಿಭಜನೆ ಧ್ರುವೀಕರಣ ಎಂದರೆ ತಪ್ಪಾಗದು.
1 ) 1963 ರಲ್ಲಿ ಸಿಖ್ 1993 ರಲ್ಲಿ ಬೌದ್ಧ 2013 ರಲ್ಲಿ ಜೈನ ಸ್ವತಂತ್ರ ಧರ್ಮ ಮಾನ್ಯತೆ ಪಡೆದವು ಅವುಗಳನ್ನು ಯಾವ ಯಾವ ರಾಜ್ಯಗಳು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದವು ?
2 ) ಅಲ್ಪ ಸಂಖ್ಯಾತ ಆಯೋಗದ ರಚನೆಯಾದ ಮೇಲೆ ಸಿಖ್ ಮತ್ತು ಬೌದ್ಧ ಧರ್ಮಗಳು ಅವುಗಳ ಮಾನ್ಯತೆ ಪಡೆದವು.
3 ) ಕಾನೂನಾತ್ಮಕ ಉಲ್ಲೇಖವಿರಲು ನಾವು ಅಂದರೆ ಸಮಸ್ತ ಲಿಂಗಾಯತರು ಬಸವಣ್ಣನ ಒಪ್ಪಿಕೊಂಡವರು.ಇಂತಹ ಬಿಡಿ ರಂಪಾಟ ಮಾಡುವ ಅಗತ್ಯವೇನಿತ್ತು ಯಾವ ಪುರುಷಾರ್ಥಕ್ಕೆ ಬೃಹತ್ ಸಮಾವೇಶಗಳು?
4 ) ಅರಿವು ಜಾಗೃತಿ ಮೂಡಿಸಲು ಇನ್ನು ಅನೇಕ ಯೋಜನೆಗಳನ್ನು ಕೈಕೊಳ್ಳಬಹುದಿತ್ತು.
5 ) ಸಂಘಟನೆಯು ಯಾವುದೊ ಒಂದು ರಾಜಕೀಯ ಪಕ್ಷದ ಅಣತಿಯಂತೆ ನಡೆಯಬಾರದು.
6 ) ಧಾರ್ಮಿಕ ಮುಖಂಡರು ಮಠಾಧೀಶರು ಅನೇಕರು ಇಂದು ಚುನಾವಣೆ ಸಿದ್ಧತೆ ನಡೆಸಿದ್ದಾರೆ.
7 ) ಧಾರ್ಮಿಕ ಮಾನ್ಯತೆ ಅಲ್ಪ ಸಂಖ್ಯಾತ ಮಾನ್ಯತೆಗೆ ಅಟಾರ್ನಿ ಜನರಲ್ ಆಫ್ ಇಂಡಿಯಾ ಮತ್ತು ಮೈನಾರಿಟಿ ಕಮಿಷನ್ ಇದ್ದಾಗ ನಾವು ದೆಹಲಿಯ ಅವರ ಕಚೇರಿಗೆ ನಮ್ಮ ಅರ್ಜಿಯನ್ನು ಪಿಟಿಷನ್ ಏಕೆ ಕೊಡಲಾಗುತ್ತಿಲ್ಲ.?
8 ) ಇವತ್ತು ಕಾರ್ಯಕರ್ತರನ್ನು ಬಾಯಿ ಮುಚ್ಚಿಸುವ ವರ್ಚಸ್ವಿ ನಾಯಕರು ಮಠಾಧೀಶರ ತಪ್ಪನ್ನು ಏಕೆ ತಿದ್ದುತ್ತಿಲ್ಲ ?
9 ) ಲಿಂಗಾಯತ ವಿರೋಧಿ ಶಕ್ತಿಗಳು ಒಗ್ಗಟ್ಟಾಗಿ ಕಾರ್ಯ ನಡೆಸುತ್ತಿವೆ ಆದರೆ ಬಸವಣ್ಣ ಎಂದೆನ್ನುವ ಅಕ್ಕ ಮಾತೆ ಸ್ವಾಮಿಗಳು ಕಾರ್ಯಕರ್ತರು ಕಚ್ಚಾಡುತ್ತಿದ್ದೇವೆ ಆರೋಪ ಪ್ರತ್ಯಾರೋಪ ಪರಸ್ಪರ ಕೆಸರು ಎರಚುವ ಕಾರ್ಯ ನಿಲ್ಲಬೇಕು.
10 ) ಲಿಂಗಾಯತ ಸಂಘಟನೆ ಕಾಲ ಕ್ರಮೇಣ ರಾಜಕೀಯ ಮುಖವಾಣಿಗಳಾಗುತ್ತವೆ.
11 ) ಕೆಲವೇ ಕೆಲವು ಜನರು ತೆಗೆದುಕೊಳ್ಳುವ ನಿರ್ಧಾರಕ್ಕೆ ಇಡೀ ಸಮಾಜವೇ ಒಪ್ಪಿಕೊಳ್ಳಬೇಕೇ ?
12 ) ದುಡ್ಡು ದರ್ಪ ಅಧಿಕಾರ ಸ್ವಾಮಿ ಅಕ್ಕ ಮಾತೆ ಶ್ರೇಣೀಕೃತ ವ್ಯವಸ್ಥೆ ಸಂಘಟನೆಯಲ್ಲಿ ಅಗತ್ಯವೇ ?
ವೀರಶೈವರು ಲಿಂಗಾಯತ ಧರ್ಮದ ಒಂದು ಉಪ ಪಂಗಡ . ಅವರಿಗಿರುವ ಪೌರಾಣಿಕ ಕಾಲ್ಪನಿಕ ದಾಖಲೆಗಳಿಗಿಂತ- ಲಿಂಗಾಯತ ಒಂದು ಸ್ವತಂತ್ರ ಧರ್ಮ ಎಂದೆನ್ನಲು ಅವರಿಗಿಂತ ನೂರು ಪಟ್ಟು ದಾಖಲೆಗಳಿರುವಾಗ ನಾವು ಕೇಂದ್ರಕ್ಕೆ ಅರ್ಜಿ ಸಲ್ಲಿಸಿ ಮಾನ್ಯತೆ ಮತ್ತು ಕಾನೂನಾತ್ಮಕ ಸವಲತ್ತುಗಳನ್ನು ಪಡೆಯಲು ಶೀಘ್ರವಾಗಿ ಚಿಂತಿಸಬೇಕು.
13 ) ನ್ಯೂಟನ್ ಲಾ ದಂತೆ ಕ್ರಿಯೆ ಪ್ರತಿಕ್ರಿಯೆ ಸಮ ಹಾಗು ಪರಸ್ಪರ ವಿರುದ್ಧವಾಗಿರುತ್ತವೆ.ಸಮಾವೇಶದ ಅಬ್ಬರಕ್ಕೆ ಪ್ರತಿ ತಂತ್ರ ರೂಪಿಸುವ ಶಕ್ತಿಗಳು ಜಯವನ್ನು
ಸಾಧಿಸುವ ನಿಟ್ಟಿನಲ್ಲಿ ಕುತಂತ್ರ ಯೋಜನೆ ರಚಿಸುತ್ತವೆ, ಆದರೆ ಲಿಂಗಾಯತರೆನ್ನುವವರು ಇನ್ನು ವೀರಶೈವ ಮಹಾಸಭೆಗೆ ರಾಜೀನಾಮೆ ಮತ್ತು ಪರ್ಯಾಯ ಸಂಘಟನೆಯಲ್ಲಿ ತೊಡಗಿದ್ದೇವೆ. ಮೈಸೂರು ತುಮಕೂರು ಶ್ರೀಗಳು ವೀರಶೈವರ ಬೆಂಬಲಕ್ಕೆ ನಿಂತಿದ್ದಾರೆ.
14 ) ಎಲ್ಲಿಯವರೆಗೆ ವೀರಶೈವ ಲಿಂಗಾಯತ ಕಾನೂನಾತ್ಮಕ ದೃಷ್ಟಿಯಲ್ಲಿಒಂದೇ ಅಲ್ಲ ಬೇರೆ ಬೇರೆ ಎಂದು ನಿರೂಪಿಸಲು ಆಗುವದಿಲ್ಲವೋ ಇಂತಹ ಇನ್ನು ನೂರು ಸಮಾವೇಶ, ಸಭೆಗಳು ನಡೆದರೂ ವ್ಯರ್ಥ.
15 ) ಅಖಿಲ ಭಾರತ ವೀರಶೈವ ಮಹಾಸಭೆ ಲಿಂಗಾಯತರ ಪ್ರಾತಿನಿಧಿಕ ಸಂಸ್ಥೆಯಲ್ಲವೆಂದು ಸಾಧಿಸಲು ವಿಫಲರಾಗಿದ್ದೇವೆ ಈ ಕೂಡಲೇ ಇಂತಹ ಪ್ರಯತ್ನಕ್ಕೆ ಮುಂದಾಗಬೇಕು.
16 ) ನೆಂಟರ ಮೇಲೆ ಪ್ರೀತಿ ಗೋಧಿಯ ಮೇಲೆ ಕಣ್ಣು ಎಂದೆನ್ನುವ ಹಾಗೆ ಒಂದು ಕಡೆಗೆ ಪರ್ಯಾಯ ಸಂಘಟನೆ ಇನ್ನೊಂದು ಅವರ ವೈರತ್ವವನ್ನು ಕಟ್ಟಿಕೊಳ್ಳಲಾಗದ ಒತ್ತಡ .
17 ) ಬಸವಣ್ಣ ಲಿಂಗಾಯತ ಧರ್ಮ ಎಲ್ಲಿಯವರೆಗೆ ಸಾಂಸ್ಥೀಕರಣದಿಂದ ಹೊರ ಬರುವದಿಲ್ಲವೋ ಅಲ್ಲಿಯವರೆಗೆ ನಾವು ಅತಂತ್ರರು.
18 ) ಲಿಂಗಾಯತ ಚಳವಳಿ ಎಲ್ಲ ವರ್ಗದವರ ಬಡವರ ಸಾಮಾನ್ಯರ ಹೋರಾಟವಾಗಲಿ ಹೊರತು ಶ್ರೀಮಂತರ ರಾಜಕೀಯ ಕಪಿ ಮುಷ್ಠಿಗೆ ಸಿಲುಕಿಸುವ ಪ್ರಯತ್ನವಾಗಬಾರದು.
ನಮಗೆ ಲಿಂಗಾಯತ ಧರ್ಮ ಎಂದೆನ್ನುವುದು ಸ್ವಾಭಿಮಾನದ ಪ್ರಶ್ನೆ ಈ ನೆಲದಲ್ಲಿ ಹುಟ್ಟಿದ ಶ್ರೇಷ್ಠ ಸಾಮಾಜಿಕ ಕ್ರಾಂತಿಕಾರ ದಾರ್ಶನಿಕನ ಮೌಲ್ಯಗಳಿಗೆ ದೊರಕುವ ಸ್ಥಾನಮಾನ .
ನಾನಿಲ್ಲಿ ಯಾರನ್ನು ಟೀಕಿಸುತ್ತಿಲ್ಲ ಉದ್ವೇಗ ಉತ್ಸಾಹ ಉನ್ಮಾದಗಳಲ್ಲಿ ನಡೆಯುವ ಕ್ರಿಯೆಗಳು ಹುಸಿ ಹೋರಾಟವಾದಲ್ಲಿ ಹೋರಾಟಗಾರನಲ್ಲಿ ಮಾನಸಿಕ ಧೈರ್ಯ ಸ್ಥೈರ್ಯ ಕುಗ್ಗುತ್ತದೆ.
ಲಿಂಗಾಯತರಿಗೆ ಕೇವಲ ಮಾನ್ಯತೆ ದೊರಕಿಸಿಕೊಡಬೇಕೆನ್ನುವದೊಂದೇ ಗುರಿಯಲ್ಲ ಬಸವ ತತ್ವದಂತೆ ಆಚರಣೆಗೆ ತರುವಲ್ಲಿ ಒಟ್ಟುಗೂಡಬೇಕು.
ಹೋರಾಟ ಗುಣಾತ್ಮಕವಾಗಿರಲಿ ಅಬ್ಬರದ ಘೋಷಣೆಗಳು ಹಸಿದ ಹೊಟ್ಟೆಯನ್ನು ತುಂಬಿಸಲಾರವು.
ಲಿಂಗಾಯತ ಧರ್ಮದ ಮಾನ್ಯತೆ ನಮ್ಮ ಹಕ್ಕುಗಳೇ ಭಿಕ್ಷೆ ಅಥವಾ ಬೇಡಿಕೆಯಾಗದಿರಲಿ.
ಸತ್ಯ ಕಠಿಣ ಅದನ್ನು ಜನರಿಗೆ ತಲುಪಿಸುವುದು ಇನ್ನೂ ಕಠಿಣ ಸತ್ಯದ ಅರಿವಾದಾಗ ಸಮಯ ಮೀರಿ ಹೋಗುತ್ತದೆ ಸತ್ಯದ ಪ್ರತಿಪಾದಕರಾದ ಡಾ ಎಂ ಎಂ ಕಲ್ಬುರ್ಗಿಯವರಂತೆ ಹುತಾತ್ಮರಾಗಬೇಕಾಗುತ್ತದೆ. ಚಳವಳಿ ಸಮ್ಮೋಹನವಾಗದಿರಲಿ.
( ತಮ್ಮ ಪ್ರತಿಕ್ರಿಯೆಗಳನ್ನು ವಾಟ್ಸಾಪ್ ಮಾಡಿ ; 9448863309 )
ಡಾ.ಶಶಿಕಾಂತ.ಪಟ್ಟಣ ಪುಣೆ