spot_img
spot_img

ಮೂಡಲಗಿ; ಹಳ್ಳ ದಾಟಿಸುವ ಸೇತುವೆಯೇ ಹಳ್ಳವಾದಾಗ…

Must Read

- Advertisement -

ಮೂಡಲಗಿ – ಈ ಫೋಟೋಗಳನ್ನು ನೋಡಿ ಇದೊಂದು ಸಣ್ಣ ಕೆರೆ ಇರಬಹುದು ಎಂಬ ಭಾವನೆ ನಿಮ್ಮಲ್ಲಿ ಬರಬಹುದು. ಆದರೆ ಕೆರೆಯಂತೆ ಕಾಣುವ ಈ ಜಾಗವೇ ನಮ್ಮೂರಿನ ಹಳ್ಳ ದಾಟಿಸುವ ಸೇತುವೆ !

ಆಶ್ಚರ್ಯವಾದರೂ ಇದು ಸತ್ಯ. ಜಿರ್ರೆಂದು ಸುರಿಯುವ ಮಳೆಯಲ್ಲಿ ಜನರನ್ನು ಕಾಲೆತ್ತಿ ಜಿಗಿದು ಓಡುವಂತೆ ಮಾಡುವ ಇದು ಮೂಡಲಗಿಯ ಹಳೆಯ ಪೂಲ್. ಇತ್ತೀಚೆಗೆ ತಾಲೂಕಾಗಿ ಘೋಷಣೆಯಾಗಿರುವ ಮೂಡಲಗಿಯ ಪುರಸಭೆಯ ಕಾರ್ಯ ವೈಖರಿಗೆ ಕನ್ನಡಿ ಹಿಡಿದಂತಿದೆ ಅಲ್ಲವೆ?

ಹಳೆಯ ಸೇತುವೆಯ ಮಧ್ಯದಲ್ಲಿ ಹಲವು ವರ್ಷಗಳಿಂದ ಇದ್ದ ತಗ್ಗು ಹಾಗೆಯೇ ಇದೆ. ಅದರ ಪಕ್ಕದಲ್ಲಿ ಮತ್ತೊಂದು ಸೇತುವೆ ಆದ ನಂತರ ಈ ಸೇತುವೆಯ ಬಗ್ಗೆ ಜನರು, ವಾಹನಗಳು ಅಷ್ಟೇ ಯಾಕೆ ಪುರಸಭೆಯವರು ಕೂಡ ಮಲತಾಯಿ ಧೋರಣೆ ತೋರಿ ಇದರ ದೇಖರೇಕಿ ಮಾಡುವುದನ್ನು ಮರೆತು ಬಿಟ್ಟಿದ್ದಾರೆ.

- Advertisement -

ಬೈಕ್, ಕಾರು ಸೇರಿ ಟ್ರಕ್, ಟ್ರ್ಯಾಕ್ಟರ್ ನವರು ಈ ಸೇತುವೆಯ ಮೇಲೆ ಹಾಯುವುದನ್ನು ಬಿಟ್ಟಿದ್ದಾರೆ. ಅಷ್ಟೇ ಯಾಕೆ ಪಾದಚಾರಿಗಳು ಕೂಡ ಈ ಸೇತುವೆಯನ್ನು ಕ್ಯಾರೆ ಅನ್ನುವುದಿಲ್ಲ. ಹೀಗಾಗಿ ಈ ಸೇತುವೆ ಸುರಿಸಿದ ಕಣ್ಣೀರೇ ಮಡುವಾಗಿ ಸೇತುವೆಯ ಮೇಲೆ ನಿಂತಿರುತ್ತದೆ ಅದರ ಮೇಲೆ ಮಳೆಯಾದರಂತೂ ಮುಗಿದೇ ಹೋಯಿತು. ಮೂಡಲಗಿ ಎಂಬ ತಾಲೂಕಾ ಪಟ್ಟಣಕ್ಕೆ ನಜರ ಚುಕ್ಕಿಯಂತೆ ಇದು ಅನಾಥವಾಗಿ ನಿಂತು ಬಿಟ್ಟಿದೆ.

ಹಾ…ತಗ್ಗು ದಿನ್ನೆಗಳು ಬರೀ ಈ ಸೇತುವೆಯ ಮೇಲಷ್ಟೇ ಇವೆಯೆಂದರೆ ತಪ್ಪು. ಇಡೀ ಮೂಡಲಗಿಯ ಯಾವ ದಿಕ್ಕಿಗೆ ಹೋದರೂ ನೀವು ಸರ್ಕಸ್ ಮಾಡಲಾರದೆ ಬೈಕ್ ಅಥವಾ ಯಾವುದೆ ವಾಹನ ಚಲಾಯಿಸಲು ಆಗುವುದಿಲ್ಲ. ರಸ್ತೆಗಳೆಂಬ ರಸ್ತೆಗಳು ಹದಗೆಟ್ಟು ಹೈದರಾಬಾದ್ ಆಗಿದ್ದರೂ ಪುರಸಭೆಯವರು, ಸಂಬಂಧಪಟ್ಟ ಇಲಾಖೆಯವರು ಕನಿಷ್ಠ ಗರಸು ಹಾಕಿ ಪುಣ್ಯ ಕಟ್ಟಿಕೊಳ್ಳುವ ಗೋಜಿಗೆ ಹೋಗಿಲ್ಲ.

- Advertisement -

ಇನ್ನೊಂದು ವಿಶೇಷವೆಂದರೆ, ಕಳೆದ ಅಗಷ್ಟ್ ಪಂಧರಾ ಆಚರಣೆಯನ್ನು ಸಂಭ್ರಮದಿಂದ ಆಚರಿಸಬೇಕೆಂದು ತಹಶೀಲ್ದಾರ ನೇತೃತ್ವದಲ್ಲಿ ಪೂರ್ವಭಾವಿ ಸಭೆಯಲ್ಲಿ ನಗರದ ರಸ್ತೆಗಳಲ್ಲಿನ ತಗ್ಗುಗಳನ್ನು ಮುಚ್ಚಬೇಕೆಂದು ಬೇಡಿಕೆ ಇಡಲಾಗಿತ್ತು. ಅದು ಆಗಲಿಲ್ಲ. ದೇಶದ ಎಪ್ಪತ್ತೈದನೇ ಸ್ವಾತಂತ್ರ್ಯೋತ್ಸವ ಹಾಗೆಯೇ ತಗ್ಗುಗಳಲ್ಲಿ ಪ್ರಭಾತಫೇರಿಯೊಂದಿಗೆ ಸಂಪನ್ನವಾಯಿತು.

ಮೊನ್ನೆ ಮೊನ್ನೆ ಕರ್ನಾಟಕ ರಾಜ್ಯೋತ್ಸವ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸಲು ತಗ್ಗುಗಳನ್ನು ಮುಚ್ಚಲು ಕೇಳಿಕೊಂಡರೂ ಅದಕ್ಕೆಲ್ಲ ದುಡ್ಡಿಲ್ಲ (?) ಎಂಬ ನೆಪದೊಂದಿಗೆ ಅದನ್ನು ತಳ್ಳಿಹಾಕಿ ಅದೇ ತಗ್ಗು ದಿನ್ನೆಗಳ ನಡುವೆಯೇ “ಸಂಭ್ರಮದಿಂದ ” ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು. ಈಗ ಧೋ ಎಂದು ಮಳೆ ಸುರಿಯುತ್ತಿದೆ. ಊರಿನ ರಸ್ತೆಗಳೆಲ್ಲ ಕೆಸರುಮಯವಾಗಿವೆ. ಸ್ವಲ್ಪ ಬಿಸಿಲು ಬಿದ್ದರೆ ಧೂಳುಮಯವಾಗುತ್ತವೆ. ತಾಲೂಕಾಡಳಿತ, ಪುರಸಭೆ, ಪಿಡಬ್ಲ್ಯೂಡಿ, ನೀರಾವರಿ ಇಲಾಖೆ, ಭೂ ಸೇನಾ ನಿಗಮ…..ಈ ರಸ್ತೆಗಳಿಗೆ ಯಾರು ಸಂಬಂಧಿಕರೋ ಅವರು ಕಣ್ಮುಚ್ಚಿ ಕುಳಿತಿದ್ದಾರೆ. ಮೂಡಲಗಿ ತಾಲೂಕಾಯಿತಾ ? ಎಂದು ಪಕ್ಕದ ಊರಿನವರು…..ದೂರದ ಊರಿನವರು ಕಣ್ಣರಳಿಸಿ ಕೇಳುತ್ತಾರೆ. ತಾಲೂಕಾ ಪಟ್ಟಣವಾದರೆ ಎಲ್ಲಾ ರೀತಿಯ ಸುಧಾರಣೆಗಳು “ಧರೆಗಿಳಿದು” ಬರುತ್ತವೆ ಎಂಬ ಭಾವನೆ ಎಲ್ಲರಲ್ಲಿ ಇರುತ್ತದೆ. ಆದರೆ ಮೂಡಲಗಿ ನಗರದ ವಿಷಯದಲ್ಲಿ ಅದು ಸುಳ್ಳಾಗಿದೆ.

ಮೂಡಲಗಿಯತ್ತ ದೇವರೇ ಕಣ್ಣು ತೆರೆಯಬೇಕು….


ಉಮೇಶ ಬೆಳಕೂಡ

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group