ನರಕ ಎಲ್ಲಿ ಅತ್ಯುತ್ತಮವಾಗಿದೆ ?
ಒಮ್ಮೆ ಓರ್ವ ಸತ್ತ ಮೇಲೆ ನರಕಕ್ಕೆ ಹೋದ.
ಅಲ್ಲಿ ಅವನಿಗೆ ಒಂದು ಬ್ಯಾನರಿನಲ್ಲಿ ಹೀಗೆ ಬರೆದಿರುವುದು ಕಾಣುತ್ತದೆ.
ಅದೆಂದರೆ , ” ಇಲ್ಲಿ ಬರುವವರು ವಿಶ್ವದಲ್ಲಿನ ಯಾವುದೇ ದೇಶದ ‘ನರಕ’ದಲ್ಲಿ ಮುಕ್ತವಾಗಿ ಪ್ರವೇಶ ಪಡೆಯಬಹುದು ” ಎಂದು ಬರೆಯಲಾಗಿತ್ತು.
ಈತ ಯೋಚಿಸ ತೊಡಗಿದ…..
ಹ್ಞಾಂ… ಜೀವಂತ ಇದ್ದಾಗ ಅಮೇರಿಕಾ ನೋಡಲು ಆಗಲಿಲ್ಲ. ಇದೀಗ ಸತ್ತಮೇಲೆ ಅಲ್ಲಿನ ನರಕವನ್ನಾದರೂ ನೋಡಬಹುದು . ಆದ್ದರಿಂದ ತಾನು ಅಮೆರಿಕದ ನರಕಕ್ಕೆ ಹೋಗೋಣ ಅಂತ ಯೋಚಿಸಿ ಅಲ್ಲಿ ಹೋದ.
ಆತ ಅಮೆರಿಕದ ನರಕಲೋಕಕ್ಕೆ ಹೋಗಿ ಅಲ್ಲಿನ ನಿಯಮ, ಕಟ್ಟಳೆಗಳ ಬಗ್ಗೆ ಚೌಕಾಶಿ ಮಾಡಿದ.
ಇಲ್ಲಿನ ಅಮೆರಿಕದ ನರಕಲೋಕದ ನೀತಿ ನಿಯಮಗಳು ಏನೇನು ? ಎಂದು ಅಲ್ಲಿನ ಅಧಿಕಾರಿಗೆ ಕೇಳುತ್ತಾನೆ.
ಅಮೆರಿಕದ ನರಕಲೋಕದ ಅಧಿಕಾರಿ ಈತನಿಗೆ , “ಅಂಥದ್ದೇನೂ ಬಹಳ ಕಠಿಣ ನಿಯಮವಿಲ್ಲ. ಇಲ್ಲಿ ಬರುವವರನ್ನು ಎಲ್ಲಕ್ಕಿಂತಲೂ ಮೊದಲು ಒಂದು ವಿದ್ಯುತ್ ಪ್ರವಹಿಸುವ ಆಸನದ ಮೇಲೆ ಒಂದು ಗಂಟೆಯವರೆಗೆ ಕುಳ್ಳಿರಿಸಿ ಆತನಿಗೆ ವಿದ್ಯುತ್ತಿನ ಶಾಕ್ ಕೊಡಲಾಗುತ್ತದೆ.
ನಂತರ ಒಂದು ಸಣ್ಣ ಸಣ್ಣ ಕಬ್ಬಿಣದ ಮೊಳೆ ಹೊಡೆದು ತಯಾರಿಸಿದ ಮಂಚದ ಮೇಲೆ , ಬಟ್ಟೆಗಳನ್ನು ಬಿಚ್ಚಿ ಒಂದು ಗಂಟೆಯವರೆಗೆ ಮಲಗಿಸಲಾಗುತ್ತದೆ.
ಮೂರನೆಯದಾಗಿ , ಕಬ್ಬಿಣದ ಮೊಳೆ ಚುಚ್ಚಿ ಗಾಯಗೊಂಡ ನಿಮ್ಮ ಬೆತ್ತಲೆ ಬೆನ್ನಿನ ಮೇಲೆ ಬಾರಕೋಲಿನಿಂದ ಐವತ್ತು ಸಲ ಹೊಡೆಯುತ್ತಾನೆ. ನಂತರ ಅಲ್ಲಿ ಆದ ಗಾಯಕ್ಕೆ ಖಾರಪುಡಿ ,ಉಪ್ಪು ಸವರುತ್ತಾನೆ.
ಇದನ್ನು ಕೇಳಿದ ಮೇಲೆ ಆತ ಅಯ್ಯೋ ಅಮೆರಿಕದ ನರಕಕ್ಕೆ ಹೋಗುವುದು ಬೇಡವೇ ಬೇಡ ಎಂದು ನಿರ್ಧರಿಸಿ ಬೇರೆ ದೇಶದ ನರಕಕ್ಕೆ ಹೋಗಲು ಯೋಚಿಸತೊಡಗುತ್ತಾನೆ.
ಅಲ್ಲಿಂದ ಆತ ರಷಿಯಾ ದೇಶದ ನರಕಕ್ಕೆ ಹೋಗಿ ಅಲ್ಲಿನ ನರಕಲೋಕದ ನೀತಿ ನಿಯಮ ಬಗ್ಗೆ ವಿಚಾರಿಸುತ್ತಾನೆ . ಅವನಿಗೆ ಅಮೆರಿಕದ ನರಕಲೋಕದ ನೀತಿ ನಿಯಮ ರಷಿಯಾದ ನರಕಲೋಕದಲ್ಲಿಯೂ ಇವೆ ಎಂದು ತಿಳಿಯುತ್ತದೆ.
ಆಗ ಆತ ಮತ್ತೇ ಬೇರೆ ದೇಶದ ನರಕಕ್ಕೆ ಹೋಗಿ ಅಲ್ಲಿನ ಕಾನೂನು ಕಟ್ಟಳೆಗಳ ಬಗ್ಗೆ ಮಾಹಿತಿ ಕೇಳಿದಾಗ ಅಲ್ಲಿಯೂ ಅದೇ ಉತ್ತರ ಬರುತ್ತದಲ್ಲದೇ, ಆತ ನೂರಾರು ದೇಶಗಳ ನರಕಲೋಕಕ್ಕೆ ಹೋಗಿ ವಿಚಾರಿಸಿದಾಗಲೂ , ಎಲ್ಲ ದೇಶದ ನರಕಲೋಕದಲ್ಲಿ ಅಮೆರಿಕದ ನರಕಲೋಕದಲ್ಲಿ ಇರುವ ನೀತಿ ನಿಯಮಗಳೇ ಇರುತ್ತವೆ.
ಕೊನೆಗೆ ಈತ ಮತ್ತೊಂದು ದೇಶದ ನರಕಕ್ಕೆ ಹೋಗುತ್ತಾನೆ. ಆ ದೇಶದ ನರಕಲೋಕದ ಬಾಗಿಲಿನ ಮೇಲೆ ” ಭಾರತ ದೇಶದ ನರಕಲೋಕ ” ಎಂದು ಬರೆಯಲಾಗಿರುತ್ತದೆ.
ಮತ್ತು ಅಲ್ಲಿ ಒಳಗೆ ಪ್ರವೇಶ ಪಡೆಯಲು ನೂಕು ನುಗ್ಗಲು ಉಂಟಾಗಿರುತ್ತದೆ. ಕೆಲವು ಜನ ತಮಗೆ ಅಲ್ಲಿ ಪ್ರವೇಶ ಸಿಗಲೇ ಬೇಕೆಂದು ದೊಡ್ಡ ದೊಡ್ಡ ಮಂದಿಯ ಶಿಫಾರಸು ಪತ್ರಗಳನ್ನು ಹಿಡಿದು ನಿಂತಿರುತ್ತಾರೆ.
“ಭಾರತ ದೇಶದ ನರಕಲೋಕಕ್ಕೆ ಹೋಗಲು ಇಷ್ಟೊಂದು ಜನರು ಹಾತೊರೆಯುತ್ತಿರುವುದನ್ನು ನೋಡಿದರೆ , ಇಲ್ಲಿ ಜಗತ್ತಿನ ಉಳಿದೆಲ್ಲ ದೇಶದಲ್ಲಿಯಕ್ಕಿಂತ ಕಡಿಮೆ ಶಿಕ್ಷೆ ಇರಬಹುದು ” ಎಂದು ಈತ ಯೋಚಿಸಿ , ತಾನೂ ಇಲ್ಲಿಯೇ ಪ್ರವೇಶ ಪಡೆಯಬೇಕೆಂದು ನಿರ್ಧರಿಸುತ್ತಾನೆ.
ಭಾರತ ದೇಶದ ನರಕಲೋಕದ ನೀತಿ ನಿಯಮಗಳು ಏನೇನು ಎಂದು ಕೇಳುತ್ತಾನೆ.
ಅಂಥದ್ದೇನೂ ವಿಶೇಷ ಇಲ್ಲ. ಎಲ್ಲಕ್ಕಿಂತಲೂ ಮೊದಲು ನಿಮ್ಮನ್ನು ಒಂದು ವಿದ್ಯುತ್ ಹರಿಯುವ ಆಸನದ ಮೇಲೆ ಕುಳ್ಳಿರಿಸಲಾಗುತ್ತದೆ. ಅಲ್ಲಿ ಒಂದು ಗಂಟೆಯವರೆಗೆ ನಿಮಗೆ ಕರೆಂಟ್ ಶಾಕ್ ಕೊಡಲಾಗುತ್ತದೆ.
ನಂತರ ಒಂದು ಕಬ್ಬಿಣದ ಮೊಳೆಗಳನ್ನು ಹೊಡೆದಿರುವ ಮಂಚದ ಮೇಲೆ ಮಲಗಿಸಲಾಗುವುದು.
ಆ ಬಳಿಕ ನಿಮ್ಮ ಬತ್ತಲೆ ದೇಹಕ್ಕೆ ಬಾರಕೋಲಿನಿಂದ ಐವತ್ತು ಬಾರಿ ಥಳಿಸಲಾಗುವುದು.
ಇದನ್ನು ಕೇಳಿ ಈತ ಆಶ್ಚರ್ಯಚಕಿತನಾಗಿ , ಇವೆಲ್ಲ ಶಿಕ್ಷೆಗಳು ತಾನು ಎಲ್ಲಾ ದೇಶಗಳಲ್ಲಿ ಇರುವುದನ್ನು ನೋಡಿ , ಕೊನೆಯದಾಗಿ ಇಲ್ಲಿ ಭಾರತ ದೇಶದ ನರಕ ಲೋಕಕ್ಕೆ ಬಂದಿದ್ದೇನೆ. ಅಲ್ಲಿ ಇರುವ ಶಿಕ್ಷೆ ಇಲ್ಲಿಯೂ ಇವೆ. ಹೀಗಿದ್ದಾಗ್ಯೂ ಇಲ್ಲಿ ಜನರು ಒಳಗೆ ಹೋಗಲು ಇಷ್ಟೊಂದು ನೂಕು ನುಗ್ಗಲು ಏತಕ್ಕಾಗಿ ಮಾಡುತ್ತಿದ್ದಾರೆ ? ಎಂದು ಅಲ್ಲಿನ ಅಧಿಕಾರಿಗೆ ಕೇಳುತ್ತಾನೆ.
ಆಗ ಅಧಿಕಾರಿ , ” ಇಲ್ಲಿ ಅಂದರೆ ಭಾರತ ದೇಶದ ನರಕದಲ್ಲಿ , ವಿದ್ಯುತ್ ಕುರ್ಚಿಯ ಮೇಲೆ ಕುಡ್ರಿಸಲಾಗುತ್ತದೆ. ಆದರೆ ಅದರಲ್ಲಿ ಕರೆಂಟ್ ಇರುವುದಿಲ್ಲ. ಕರೆಂಟಿನ ಕೊರತೆ ಇಲ್ಲಿ ಬಹಳ ಇದೆ.
ಇನ್ನು ಕಬ್ಬಿಣದ ಮೊಳೆ ಹೊಡೆದು ತಯಾರಿಸಿದ ಮಂಚ ಇದೆ. ಆದರೆ ಅದರ ಮೊಳೆಗಳು ಸವಿದು ಹೋಗಿದ್ದು ಅವು ಶರೀರದ ಮೇಲೆ ಯಾವುದೇ ಗಾಯ ಮಾಡುವದಿಲ್ಲ ; ಕೆಲವು ಮೊಳೆಗಳನ್ನು ಮೋಡಕಾ ಅಂಗಡಿಗಳಲ್ಲಿ ಮಾರಾಟ ಮಾಡಿದ್ದಾರೆ.
ಇನ್ನು ಮೂರನೆಯ ಶಿಕ್ಷೆ , ಬಾರಕೋಲಿನಿಂದ ಐವತ್ತು ಏಟು ಹಾಕಲು ಬರುವವನು ಜಿಲ್ಲಾ ಪಂಚಾಯತನ ಎರವಲು ನೌಕರನು ! ಅವನು ಒಂದು ದಿನವೂ ಸರಿಯಾದ ಸಮಯಕ್ಕೆ ಡ್ಯೂಟಿಗೆ ಬಂದಿಲ್ಲ. ಅವನು ದಿನಾಲೂ ತಡಮಾಡಿಯೇ ಬರುತ್ತಾನೆ. ಹಾಜರಿ ಪುಸ್ತಕದಲ್ಲಿ ತನ್ನ ಸಹಿ ಮಾಡುತ್ತಾನೆ ಮತ್ತು ಹೊರಗೆ ಚುಟ್ಟಾ ಸೇದಲು ಹೋಗುತ್ತಾನೆ. ಅಲ್ಲಿಂದ ಒಳಗೆ ಬಂದಾಗ ಏನಾದರೂ ಸ್ವಲ್ಪ ಕಾಲ ಆತನ ಡ್ಯೂಟಿ ಇನ್ನೂ ಇದ್ದರೆ , ನಾಲ್ಕೈದು ಛಡಿ ಏಟು ಬಾರಿಸಿ ಹೋಗುತ್ತಾನೆ ಹಾಗೂ ಐವತ್ತು ಹೊಡೆದೆ ಅಂತ ಬರೆಯುತ್ತಾನೆ.
ಈಗ ತಿಳಿಯಿತೆ ಇಲ್ಲಿನ ನರಕಲೋಕಕ್ಕೆ ಬರಲು ಇಷ್ಟೊಂದು ನೂಗು ನುಗ್ಗಲು ಯಾತಕ್ಕಾಗಿ ಎಂದು ?
– ನೀಲಕಂಠ ದಾತಾರ,ರಬಕವಿ