spot_img
spot_img

ಗಣೇಶನ ಇನ್ನೊಂದು ಹೆಸರು “ಸ್ವಾನಂದೇಶ” – ವಿನಾಯಕನ ಲೋಕ ಯಾವುದು !?

Must Read

- Advertisement -

ಸತ್ಯಲೋಕದಲ್ಲಿ ಬ್ರಹ್ಮ, ವೈಕುಂಠದಲ್ಲಿ ಮಹಾವಿಷ್ಣು, ಕೈಲಾಸದಲ್ಲಿ ಮಹೇಶ್ವರ, ಹೀಗೆ ಒಬ್ಬೊಬ್ಬ ದೇವನಿಗೂ ಒಂದೊಂದು ಲೋಕ. ಹಾಗಿದ್ದಲ್ಲಿ ವಿಶ್ವಮಾನ್ಯನಾದ ವಿನಾಯಕನು ಇರುವ ಲೋಕ ಯಾವುದು?

ಇದನ್ನು ತಿಳಿಯಲು ನಾವು ಶ್ರೀ ಗಣೇಶ ಪುರಾಣದ ಉಪಾಸನಾ ಖಂಡದ ಐವತ್ತೊಂದನೇ ಅಧ್ಯಾಯವನ್ನು ನೋಡಬೇಕು. ಶ್ರೀ ಗಣೇಶ ಮೂರ್ತಿಯ ಲೋಕ, ಅದರ ಹೆಸರು, ಆ ಲೋಕ ಸ್ವರೂಪ ಹೇಗಿದೆ ಎಂಬ ಎಲ್ಲಾ ಪ್ರಶ್ನೆಗಳಿಗೂ ಈ ಅಧ್ಯಾಯದಲ್ಲಿ ಪರಿಹಾರ ಲಭಿಸುತ್ತದೆ.

ಪುರಾಣಗಳಲ್ಲಿ ವರ್ಣಿಸಲ್ಪಟ್ಟಿರುವ ಇತರ ಲೋಕಗಳಿಗಿಂತ ಗಣೇಶ ಲೋಕಕ್ಕೆ ಪ್ರತ್ಯೇಕತೆಯ ವೈಶಿಷ್ಟ್ಯವಿದೆ. ಅಂಡಾಂಡ ಪಿಂಡಾಂಡಗಳನ್ನು ಶ್ರೀ ಗಣಪತಿಯ ರೂಪ ಕಲ್ಪನೆಯಲ್ಲಿ ಸಮನ್ವಯ ಮಾಡಿರುವಂತೆ ಗಣೇಶ ಲೋಕದ ನಿರ್ದೇಶನದಲ್ಲೂ ಮಾಡಿರುವುದು ಈ ವೈಶಿಷ್ಟ್ಯ

- Advertisement -

ಮುದ್ಗಲ ಮಹರ್ಷಿಗಳು ಶ್ರೀ ಗಣೇಶನ ಲೋಕದ ವರ್ಣನೆಯನ್ನು ಗಣೇಶನ ಪರಮ ಭಕ್ತನಾದ ಕಾಶಿ ರಾಜನಿಗೆ ವಿಸ್ತಾರವಾಗಿ ವರ್ಣಿಸುತ್ತಾ ಗಣೇಶ ದೇವನು ನೆಲೆಸಿರುವ ಲೋಕಕ್ಕೆ `ಸ್ವಾನಂದ’ ಲೋಕವೆಂದು ಹೆಸರು. ಇದನ್ನು ನಿಜಲೋಕ, ದಿವ್ಯಲೋಕವೆಂತಲೂ ಕರೆಯುತ್ತಾರೆ.

ಕಾಶಿ ರಾಜನು ವಿನಾಯಕನ ಅನನ್ಯ ಭಕ್ತ. ಗಣನಾಥನ ವಿರಹ ವ್ಯಥೆಯಲ್ಲಿ ಉಳಿದೆಲ್ಲಾ ದೇಹಧರ್ಮಗಳನ್ನು ತ್ಯಜಿಸಿ, ಹುಚ್ಚನಂತಾಗಿ, ಆತನಿಗೆ `ಸ್ವಾನಂದ’ ಲೋಕದಲ್ಲಿ ವಿನಾಯಕ ದೇವನೊಡನೆ ಸಾಯುಜ್ಯ ಮುಕ್ತಿ ಪಡೆಯುವ ಏಕೈಕವಾದ ಆಕಾಂಕ್ಷೆ ಇತ್ತು. ಅಂತಹ ಕಾರ್ಯಕಾರಣಗಳೊಡನೆ ಕಾಲ ಒದಗಿ ಬಂತು.

ಲೋಕದಲ್ಲಿ ದೇವಾಂತಕ ನರಾಂತಕವೆಂಬ ದೈತ್ಯರು ಪ್ರಬಲರಾಗಿ ನಡೆದ ಹಿಂಸಾಚಾರಗಳಿಂದ ಧರ್ಮಕ್ಕೆ ಚ್ಯುತಿ ಬಂದಿತು. ಬ್ರಹ್ಮದೇವರ ವರದಾನದಿಂದ ಮದಿಸಿದ ಅವರನ್ನು ಸಂಹರಿಸಲು ವಿನಾಯಕನು ಕಶ್ಯಪ ಮಹರ್ಷಿಗಳ ಮನೆಯಲ್ಲಿ ಅವರ ಪುತ್ರನಾಗಿ ಲೀಲಾಮಯ ದೇಹದಿಂದ ಅವತರಿಸಿದನು.

- Advertisement -

ದೈತ್ಯರನ್ನು ಸಂಹರಿಸಿದ ಮೇಲೆ ಬಾಲ ಗಣಪತಿಯು ಪ್ರದರ್ಶಿಸಿದ ಹಲವಾರು ಲೀಲಾ ವಿನೋದಗಳಲ್ಲಿ ಮುಖ್ಯವಾದುದೆಂದರೆ, ಕಾಶಿ ರಾಜನನ್ನು ಬಾಲಕ್ರೀಡೆಗಳಿಂದ ಸಂಪೂರ್ಣವಾಗಿ ತನ್ನೆಡೆಗೆ ಸೆಳೆದಿದ್ದು. ಇದ್ದಕ್ಕಿದ್ದಂತೆ ಕಾಶಿರಾಜನನ್ನು ಬಿಟ್ಟು ತನ್ನ ಸ್ವಾನಂದ ಲೋಕಕ್ಕೆ ಸೇರಿಕೊಂಡನು ಬಾಲ ಗಣಪತಿ. ಆದರೆ ಭಕ್ತ ಪರಾಧೀನನಾದ ಭಗವಂತನಿಗೆ ಸ್ವಾನಂದ ಲೋಕದಲ್ಲೂ ನೆಮ್ಮದಿ ಸಿಕ್ಕಲಿಲ್ಲ. ಕೊನೆಗೆ ಪ್ರಮೋದ ಮತ್ತು ಆಮೋದರೆಂಬ ತನ್ನ ದೂತರನ್ನು ಕಳುಹಿಸಿ, ಕಾಶಿರಾಜನನ್ನು ದಿವ್ಯ ವಿಮಾನದಲ್ಲಿ ಕರೆಸಿಕೊಂಡು, ಸ್ವಾನಂದ ಲೋಕದಲ್ಲಿ ಸಾಯುಜ್ಯ ಮುಕ್ತಿಯನ್ನು ಕರುಣಿಸುತ್ತಾನೆ. ಕಾಶಿರಾಜನು ದಿವ್ಯ ವಿಮಾನದಲ್ಲಿ ಅಂತರಿಕ್ಷ ಮಾರ್ಗವಾಗಿ ಪ್ರಯಾಣ ಮಾಡುವಾಗ, ಮುದ್ಗಲನು ಕಾಶಿರಾಜನಿಗೆ ಸ್ವಾನಂದ ಲೋಕದ ಬಗ್ಗೆ ವರ್ಣಿಸಿದ ವಿವರಣೆ ಇದೆ.

ಈ ಸ್ವಾನಂದ ಭವನಕ್ಕೆ (ಗಣೇಶನ ಸ್ವಗೃಹಕ್ಕೆ) ವೇದಾಧ್ಯಯನ, ಮಹಾದಾನ, ತಪಸ್ಸು, ಯಜ್ಞ, ವ್ರತ, ಜಪಗಳಿಂದ ಸಹ ಈ ಲೋಕ ದೊರೆಯುವಂಥದ್ದಲ್ಲ. ನಿತ್ಯವೂ ಭಕ್ತಿಯಿಂದ ಮಾಡುವ ಶ್ರೀ ವಿನಾಯಕನ ಸೇವೆಯಿಂದ ಮಾತ್ರ ಈ ದುಃಖ ಮೋಹಗಳಿಲ್ಲದ ಲೋಕವು ಲಭಿಸುವುದು. ಅಂದರೆ ಶ್ರೀ ಗಣೇಶನಿಗೆ ಬೇಕಾಗಿರುವುದು ನಿಷ್ಕಲ್ಮಶವಾದ, ನಿರ್ಮಲವಾದ, ನಿಜವಾದ ಭಕ್ತಿಯೇ ಹೊರತು ಬೇರೇನೂ ಅಲ್ಲ.

`ಸ್ವಾನಂದ ಲೋಕ’ ದವರೆಗೆ ಇರುವ ಭೂತ (ಪಿಶಾಚಿ), ದಾನವ, ಗಂಧರ್ವ, ಇಂದ್ರ, ಅಗ್ನಿ, ಯಮ, ಕುಬೇರ, ವರುಣ, ವಾಯು, ಸೂರ್ಯ, ಚಂದ್ರ, ನಕ್ಷತ್ರ, ಗೋ, ಸತ್ಯ, ವೈಕುಂಠ, ಕೈಲಾಸವೇ ಮೊದಲಾದ `೨೧’ ಲೋಕಗಳ ಬಳಿಕ `ಶೂನ್ಯ’ ಲೋಕವೆಂಬ ಲೋಕದಲ್ಲಿ ಸೂರ್ಯ-ಚಂದ್ರರಿಲ್ಲ. ಪುಣ್ಯಜೀವಿಗಳ ಪುಣ್ಯದ ಬೆಳಕಿನಿಂದ ಮಾತ್ರವೇ ಈ ಸ್ಥಾನವನ್ನು ದಾಟಿ `ಸ್ವಾನಂದ ಲೋಕ’ ಕ್ಕೆ ಸಾಗಬೇಕು.

ಶೂನ್ಯದ ನಂತರ ಭ್ರಾಮರಿಕ ಶಕ್ತಿಸ್ಥಾನವಿದೆ. ಆಧಾರ ಶಕ್ತಿ ದೇವತೆಯು ಸರ್ವಶಕ್ತಿಮಯಿ. ಆಕೆಯ ಒಂದು ನಿಶ್ವಾಸ ಮಾತ್ರದಿಂದಲೇ ಪರ್ವತಗಳು ತರಗೆಲೆಗಳಂತೆ ಅಲುಗಾಡುತ್ತವೆ.

ಈ ಲೋಕವು ಐದು ಸಹಸ್ರ ಯೋಜನೆಗಳಷ್ಟು ವಿಸ್ತಾರವಾದುದು. ರತ್ನಖಚಿತವಾದ ಸುವರ್ಣಭೂಮಿಯಲ್ಲಿ ಹತ್ತು ದಿಕ್ಕುಗಳನ್ನು ಬೆಳಗುತ್ತಾ ಶ್ರೀ ವಿನಾಯಕನು ಸಮಷ್ಟಿ ವೃಷ್ಟಿ ರೂಪ ಜಗದಾತ್ಮಕವಾಗಿ ಇಲ್ಲಿ ನೆಲೆಸಿದ್ದಾನೆ.
ಶ್ರೀಮನ್ನಾರಾಯಣನು ಅನ್ನಮಯ ಕೋಶಕ್ಕೂ, ಶಿವನು ಪ್ರಾಣಮಯ ಕೋಶಕ್ಕೂ, ಪರಾಶಕ್ತಿಯು ಮನೋಮಯ ಕೋಶಕ್ಕೂ, ಸೂರ್ಯನು ವಿಜ್ಞಾನಮಯ ಕೋಶಕ್ಕೂ ಒಡೆಯರಾದರೆ, ಶ್ರೀ ಗಣಪತಿಯು ಆನಂದಮಯ ಕೋಶಕ್ಕೆ ಅಧಿಪತಿಯಾಗಿದ್ದಾನೆ. ಆನಂದ, ಪರಮಾನಂದ, ಬ್ರಹ್ಮಾನಂದಗಳನ್ನು ಬಯಸುವವರು ಗಣಪತಿಯನ್ನು ಉಪಾಸಿಸಬೇಕೆಂದು ತಿಳಿದುಕೊಳ್ಳಬಹುದು. ಶ್ರೀ ಗಣಪತಿಯ ವಾಸ ಸ್ಥಳವೇ `ಆನಂದ ಭವನ’ `ಸ್ವಾನಂದ ಭವನ’ ಎನ್ನಲ್ಪಡುತ್ತದೆ. ಈತನು ಸ್ವಾನಂದ ಮತ್ತು ಆನಂದ ಎಂಬ ಎರಡು ಸ್ಥಿತಿಗಳಿಗೂ ಅಧಿದೇವತೆಯಾದ್ದರಿಂದ ಈತನಿಗೆ ಸ್ವಾನಂದೇಶ ಎಂಬ ಹೆಸರುಂಟು.

ಈ ಲೋಕದ ತುಂಬೆಲ್ಲಾ ಇಕ್ಷುಸಾರ (ಕಬ್ಬಿನ ರಸದ ಸಮುದ್ರ). ಅದರ ಮಧ್ಯೆ ಸಹಸ್ರ ದಳಗಳ ಶ್ವೇತ ಕಮಲದ ಕರ್ಣಿಕೆಯಲ್ಲಿ ರತ್ನಖಚಿತವಾದ ಸುವರ್ಣ ಮಂಚವು ಶೋಭಿಸುತ್ತದೆ. ಆ ಮಂಚದ ಮೇಲೆ ಬಾಲಸ್ವರೂಪಿಯೂ, ದಿವ್ಯಾಲಂಕಾರಭೂಷಿತನೂ, ಹಿಮಕರ್ಪೂರಕೋಮಲಶರೀರವುಳ್ಳ ರಕ್ತವರ್ಣದ ಪೀತಾಂಬರವನ್ನು ಧರಿಸಿದ ಕಸ್ತೂರಿ ತಿಲಕವೇ ಮೊದಲಾದ ಸುಗಂಧ ದ್ರವ್ಯಾರ್ಚಿತನೂ, ಅರ್ಧಚಂದ್ರ ಕಿರೀಟ ಮತ್ತು ಮಣಿ ಮಾಣಿಕ್ಯಾದಿ ಹೊನ್ನಾಭರಣ ಧರಿಸಿದ, ಅನಂತ ಕೋಟಿ ಸೂರ್ಯಪ್ರಕಾಶದ ತ್ರಿನೇತ್ರಧಾರಿಯಾದ, ಶಯನಭಂಗಿಯಲ್ಲಿ ಇರುವ (ಯೋಗನಿದ್ರಾರೂಢನಾದ) ಶ್ರೀ ವಿನಾಯಕಸ್ವಾಮಿಯ ದರ್ಶನವು ಪರಮ ಪಾವನೆ ಗಂಗೆಯಂತೆ ತನ್ನ ಭಕ್ತರ ಸಕಲ ಪಾಪಗಳನ್ನು ಸ್ಮರಣೆ ಮಾತ್ರದಿಂದ ಪರಿಹರಿಸುವನಾಗಿ ಅಲ್ಲಿ ವ್ಯಕ್ತನಾಗಿರುವನು, ವಿರಾಜಿಸುತ್ತಿರುವನು.

ಸರ್ವ ಸಿದ್ಧಿಗಳಿಗೂ ಕಾರಣರಾದ ಸಿದ್ಧಿ-ಬುದ್ಧಿ ದೇವಿಯರಿಂದ ಪಾದಸೇವನೆಗೊಳ್ಳುತ್ತಾ, ಅಣಿಮಾ-ಗರಿಮಾ ದೇವಿಯರು ಶ್ವೇತಚಾಮರಸೇವೆಗೈಯುತ್ತಾ, ಜ್ವಾಲಿನಿ-ತೇಜಿನಿ ದೇವಿಯರೀರ್ವರೂ ದೇವದೇವನ ಎರಡೂ ಪಾರ್ಶ್ವಗಳಲ್ಲಿಯೂ ಪುಷ್ಪಾರ್ಚನೆಗೈಯುತ್ತಾ ಛತ್ರಿಯನ್ನು ಹಿಡಿದು ಶೋಭಿಸುತ್ತಿರುವರು ಮತ್ತು ಮಹಿಮ-ಪ್ರತಿಮೆಯರು ದೇವನ ದೃಷ್ಟಿಗೋಚರವಾಗಿ ಸಮೀಪದಲ್ಲೇ ರತ್ನಖಚಿತವಾದ ಸುವರ್ಣ ಜಲಪಾತ್ರೆಯನ್ನು, ಗಂಡೂಷ ಪಾತ್ರೆಯನ್ನು ಹಿಡಿದು ನಿಂತಿರುವರು. ಸಾಮವೇದ ಪುರುಷರು ಬಂದು, ನಿಂತು, ಶ್ರೀ ಗಣೇಶನ ಮಹಿಮಾ ಗುಣಗಾನವನ್ನು ಮಾಡುತ್ತಿರುತ್ತಾರೆ. ಎಲ್ಲಾ ಶಾಸ್ತ್ರಗಳು, ಇತಿಹಾಸ ಪುರಾಣಗಳು ಮೂರ್ತಿವತ್ತಾಗಿ ಬಂದು, ಶ್ರೀ ಗಣೇಶನ ದಿವ್ಯ ಮಹಿಮೆಯನ್ನು ಕೊಂಡಾಡುತ್ತಿರುತ್ತವೆ.

ಈ ಎಲ್ಲಾ ರಸಮಯ ಸನ್ನಿವೇಶಗಳನ್ನೊಳಗೊಂಡ `ಸ್ವಾನಂದ’ ಲೋಕವನ್ನು ಶ್ರೀ ಗಣೇಶನ ಅನುಗ್ರಹದೊಡನೆ ಮೂರ್ತರೂಪದಲ್ಲಿ ಸಾಂಪ್ರದಾಯಿಕ ಹೊಯ್ಸಳ ಶೈಲಿಯಲ್ಲಿ `ಸಿಂಹದ್ವಾರ’ ದ ಒಡಗೂಡಿದ ದೇವಾಲಯವು ಬೆಂಗಳೂರಿಗೆ ಅನತಿ ದೂರದಲ್ಲಿರುವ ಕನಕಪುರ ರಸ್ತೆಯ ಅಗರ ತಾತಗುಣಿ ಗ್ರಾಮದ ಪ್ರಶಾಂತ ವಾತಾವರಣದ `ಶ್ರೀ ಸ್ವಾನಂದಾಶ್ರಮ’ ದ ಆವರಣದಲ್ಲಿ ನಿರ್ಮಿಸುವ ಪ್ರಯತ್ನವು ಗಣೇಶ ಭಕ್ತಾಭಿಮಾನಿಗಳ ಸಹಕಾರ ದೊಡನೆ ಸೋಂದಾ ಸ್ವರ್ಣವಲ್ಲಿ ಮಠದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಲೋಕಾರ್ಪಣೆಗೊಂಡು ವಿನಾಯಕ ಸದ್ಭಕ್ತಿ ತಾಣವಾಗಿದೆ.

ಪಿ.ಎಸ್.ಗುರುರಾಜ್

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕಲ್ಲು ಮಠದ ಶ್ರೀ ಪ್ರಭು ಸ್ವಾಮಿಗಳ ಲಿಂಗ ದೇವರ ಲೀಲಾ ವಿಳಾಸ ಚಾರಿತ್ರ

ಅಂತಾರಾಷ್ಟ್ರೀಯ ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ವಚನ ಅಧ್ಯಯನ ವೇದಿಕೆ ಮತ್ತು ಅಕ್ಕನ ಅರಿವು ಬಳಗದ ಸಂಯುಕ್ತ ಆಶ್ರಯದಲ್ಲಿ ಕಲ್ಲು ಮಠದ ಶ್ರೀ...
- Advertisement -

More Articles Like This

- Advertisement -
close
error: Content is protected !!
Join WhatsApp Group