ಯಾರು ದೊಡ್ಡವರು..?

Must Read

ಕುಡಿಯುವ ನೀರು ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ರುದ್ರೇಶ ಘಾಳೆ

ಬೆಳಗಾವಿ - ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಡೆಸಿದ ಮುಷ್ಕರದಿಂದಾಗಿ ಬೆಳಗಾವಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಿದ್ದು ವಿಷಾದನೀಯವಾಗಿದೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿ...

ಹೆಣ್ಣು ಮಕ್ಕಳು ಪೌಷ್ಠಿಕ ಆಹಾರ ಸೇವನೆ ಮಾಡಬೇಕು – ಡಾ.ನಯನಾ ಭಸ್ಮೇ

ಸವದತ್ತಿ - “ಹೆಣ್ಣು ಮಕ್ಕಳು ಮಾನಸಿಕವಾಗಿ ಹಾಗೂ ದೈಹಿಕವಾಗಿಯೂ ಸದೃಢವಾಗಿರಬೇಕು ಅವರು ಹದಿ ಹರೆಯದ ವಯಸ್ಸಿಗೆ ಬಂದಾಗ ಅವರಲ್ಲಿ ನೈಸರ್ಗಿಕವಾದ ಬದಲಾವಣೆಗಳು ಆಗುತ್ತವೆ ಅಂತಹ ಸಂದರ್ಭದಲ್ಲಿಯೂ...

ಪ್ರೊ.ಅಲಕಾ ಕುರಣೆ ಯವರಿಗೆ ‘ ಶಿಕ್ಷಕ ಶ್ರೀ ‘ ರಾಜ್ಯ ಮಟ್ಟದ ಪ್ರಶಸ್ತಿ

ಬೆಳಗಾವಿ: ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ, ಧಾರವಾಡ ಬೆಂಗಳೂರು ಘಟಕದಿಂದ ನೀಡಲಾಗುವ ರಾಜ್ಯ ಮಟ್ಟದ ಶಿಕ್ಷಕ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಳಗಾವಿಯ...

ಯಾರು ದೊಡ್ಡವರು? ಏಕೆ ದೊಡ್ಡವರು? ಯಾವುದಕ್ಕೆ ದೊಡ್ಡವರು? ಈ ಪ್ರಶ್ನೆಗಳನ್ನು ಕೇಳಲು ಹೋದರೆ ನಾವೆಲ್ಲರೂ ಗೊಂದಲದಲ್ಲಿದ್ದಿವಿ. ನಮಗಿಂತ ವಯಸ್ಸಿನಲ್ಲಿ ದೊಡ್ಡವರು ಎಂದು ಕರೆಯಲಾಗುತ್ತದೆ. ಏಕೆ ದೊಡ್ಡವರು ಎಂದರೆ ಅನುಭವದಲ್ಲಿ ದೊಡ್ಡವರು. ಇವುಗಳನ್ನು ಪರಿಗಣಿಸಲಾಗುತ್ತದೆ. ಆದರೆ ಇದು ವಾಸ್ತವವಲ್ಲ ಮನುಷ್ಯ ದೊಡ್ಡವನಾಗುವುದು ತನ್ನ ಜ್ಞಾನದಿಂದ, ತಿಳುವಳಿಕೆಯಿಂದ, ಅನುಭವದಿಂದ.ಹಾಗಾದರೆ ಶಿಕ್ಷಣ ಪಡೆದವರು ದೊಡ್ಡವರಾ? ಶಿಕ್ಷಣ ಎನ್ನುವುದು ಒಬ್ಬ ವ್ಯಕ್ತಿಯ ಮನಸ್ಸಿನಲ್ಲಿ ಅಕ್ಷರಗಳನ್ನು ತುಂಬುವುದಲ್ಲ.

ಅಥವಾ ಇನ್ಯಾವುದೋ ಉನ್ನತ ಮಟ್ಟದ ಅಧಿಕಾರ ಇರುವ ಕೆಲಸ ಮಾಡಲು ಅವಕಾಶ ಮಾಡಿಕೊಡುವ ಸಂವಹನ ಮಾಧ್ಯಮವೂ ಅಲ್ಲ. ಅಧಿಕಾರ ಲಾಲಸೆಯಿಂದ ಇಡೀ ಜೀವನ ಹಣವೆಂಬ ಕಾಗದವನ್ನು ಗುಡ್ಡೆ ಹಾಕಲು ಮಾಡಿಕೊಂಡ ಒಂದು ಸಾಂಪ್ರದಾಯಿಕ ಒಳ ಒಪ್ಪಂದವಲ್ಲ. ಇದು ಇಂದಿನ ದಿನಗಳಲ್ಲಿ ಕೇವಲ ಒಂದು ಸೊಗಸಾಗಿ (Fashion) ಬದಲಾಗಿದೆ. ಶಿಕ್ಷಣ ಎನ್ನುವುದು, ಕೇವಲ ಈ ಮೇಲಿನ ಕೆಲಸಕ್ಕೆ ಮಾತ್ರ ಸೀಮಿತವಾಗಿದೆ. ಬದಲಿಗೆ ಶಿಕ್ಷಣಕ್ಕೆ ಮತ್ತೊಂದು ಮುಖವಿದೆ.

ಶಿಕ್ಷಣ ಮಾನವೀಯ ಮೌಲ್ಯಗಳನ್ನು ಬಿಂಬಿಸಬೇಕು.ಇಂದು ನಾವು ವಿದೇಶಿ ಸಂಸ್ಕ್ರತಿಯನ್ನು ಅನಾವರಣ ಮಾಡಿ, ನಮ್ಮ ನೆಲದ ಸಂಸ್ಕ್ರತಿಯನ್ನು ಒದ್ದು ಮುನ್ನಡೆಯುತ್ತಿದ್ದೇವೆ. ಕಾರಣ ಇಷ್ಟೇ ನಾವು ಬದಲಾಗುತ್ತಿದ್ದೇವೆ ಎಂದು. ಇಂದಿನ ದಿನಗಳಲ್ಲಿ ಶಿಕ್ಷಣ ಎನ್ನುವುದು ಕೇವಲ ವ್ಯಾಪಾರ ವಹಿವಾಟು ನಡೆಸುವ ಪ್ರಮುಖ ಶಕ್ತಿ ಉತ್ಪಾದನಾ ಘಟಕಗಳಾಗಿವೆ. ಇಲ್ಲಿ ನಾವೆಲ್ಲರೂ ಈ ಹಿಂದೆ ಗಳಿಸಿ ಗುಡ್ಡೆ ಹಾಕಿದ ಹಣವೆಂಬ ಕಾಗದವನ್ನು ಮರುಬಳಕೆ ಮಾಡಲು ಸಿದ್ದರಿದ್ದೇವೆ.ಅದಕ್ಕಾಗಿ ನಮ್ಮ ಮಕ್ಕಳು ಉನ್ನತ ಮಟ್ಟದ ಅಧಿಕಾರದ ಮೇಲೆ ಅವಲಂಬಿತರಾಗಿದ್ದಾರೆ.ಎಲ್ಲಿಯವರೆಗೆ ಇದು ಮುಂದುವರೆಯುತ್ತದೆಯೋ ಅಲ್ಲಿಯವರೆಗೆ.

- Advertisement -

ನಮ್ಮ ಇಂದಿನ ಶಿಕ್ಷಣ ಕೇವಲ ಅಂಕಗಳನ್ನು ಗಳಿಸಿ ದಾಖಲೆ ನಿರ್ಮಿಸಲು ಹೊರಟಿದೆಯೇ ವಿನಃ ಬೇರೆನೂ ಅಲ್ಲ. ನಮ್ಮ ಮಕ್ಕಳು ೯೯% ಅಂಕ ಗಳಿಸಿದರೆ ಮಾತ್ರ ನಮಗೆ ನಮ್ಮ ಸಮಾಜದಲ್ಲಿ ಉತ್ತಮ ಗೌರವ. ಇಲ್ಲದೇ ಹೋದರೆ ನಮ್ಮ ಗೌರವ ಮಣ್ಣು ಪಾಲಾಗುತ್ತದೆ.ಕೇವಲ ಸ್ವಪ್ರತಿಷ್ಟೆಗಾಗಿ ನಾವು ಏನೆಲ್ಲವನ್ನು ತ್ಯಾಗ ಮಾಡಲು ಹೊರಟಿರುವ ತ್ಯಾಗರಾಜರು ನಾವು. ಎಲ್ಲಿಯವರೆಗೆ ಎಂದರೆ ನಮ್ಮನ್ನು ನಾವು ಮಾರಿಕೊಳ್ಳುವ ಮಟ್ಟಿಗೆ ನಾವು ತ್ಯಾಗರಾಜರು.ಯಾವುದಕ್ಕಾಗಿ ಈ ತ್ಯಾಗ.

ಒಂದು ಕ್ಷಣ ಯೋಚಿಸಿ ಇಷ್ಟೆಲ್ಲ ತ್ಯಾಗ ಮಾಡಿದ ನಾವು ಇಳಿವಯಸ್ಸಿನಲ್ಲಿ ನಮ್ಮ ನೆಲೆ ಎಲ್ಲಿ ಎಂಬುದನ್ನು? ಆಗ ಗೋಚರಿಸಿದ್ದು ಯಾವುದೋ ಅನಾಥಾಶ್ರಮದ ಮಂಚದಲ್ಲಿ ನೆಲ ಕಚ್ಚಿ ಮಲಗಿ,ಯಾರೋ ದಾನಿಗಳು ನೀಡಿದ ಗಂಜಿಯನ್ನು ತಿನ್ನಲು, ಕಿಟಕಿಯಾಚೆಗಿನ ಕೈಗಳನ್ನು ನೋಡುತ್ತ ಕುಳಿತುಕೊಳ್ಳಲೋ? ನಮ್ಮ ಶಿಕ್ಷಣ. ಪಕ್ಕದಲ್ಲಿ ಮಲಗಿರುವ ಯಾರು ನನ್ನವರಲ್ಲ.ಆದರೂ ನನ್ನವರೇ! ಎತ್ತಿ ಆಡಿಸಿ,ಹೆಗಲ ಮೇಲೆ ಕುಳ್ಳಿರಿಸಿಕೊಂಡು, ನಾನು ನೋಡದ ಪ್ರಪಂಚವನ್ನು ,ನನ್ನೊಲುಮಿನ ಮಗನಿಗೆ ತೋರಿಸಿದ್ದೆನಲ್ಲ ಅವನೆಲ್ಲಿ?ಅಪ್ಪ ಅಮ್ಮ ಎಂದಾಗ ತಬ್ಬಿ ಮುದ್ದಾಡಿದ ಮಗಳೆಲ್ಲಿ? ಎಲ್ಲರೂ ಊತೀರ್ಥ! ರೆಕ್ಕೆ ಬಲಿತ ಹಕ್ಕಿ ಗೂಡು ಬಿಡುತ್ತದೆ. ಹೊಳೆ ದಾಟಿದ ಮೇಲೆ ಅಂಬಿಗನ ಹಂಗೇಕೆ? ಎನ್ನುವ ಜಾಯಮಾನ ನಮ್ಮದು.

ಇದಕ್ಕೆ ಅಲ್ಲವೇ? ಈ ವೈಕುಂಠಕ್ಕೆ ಅಲ್ಲವೇ? ಈ ರಾಜ ಮರ್ಯಾದೆಗೆ ಅಲ್ಲವೇ? ನಾವು ಕಲಿಸಿದ್ದು.ಸುತ್ತುತ್ತಿರುವ ಭೂಮಿಯಲ್ಲಿ ಸತ್ತು ಹೋಗುವವರು ನಾವು. ಒಂದಷ್ಟಾದರೂ ಮೌಲ್ಯಗಳು ಬೇಡವೇ? ಏಕೆ ಮೌಲ್ಯಗಳು ನಮ್ಮನ್ನು ಬದಲಿಸಲು ಸಾದ್ಯವಿಲ್ಲವೇ? ಸಾದ್ಯತೆ ಇತ್ತು. ನಾವು ನಮ್ಮ ಮಕ್ಕಳು ಉನ್ನತ ಮಟ್ಟದ ಅಧಿಕಾರ ವಹಿಸಿಕೊಳ್ಳುವ ಮೊದಲು ಮಾನವೀಯ ಮೌಲ್ಯಗಳನ್ನು ತುಂಬಿದ್ದರೆ,ಇಂದು ಈ ಗತಿ ಬರುತ್ತಿರಲಿಲ್ಲ. ನಾವು ನಮ್ಮ ಮಕ್ಕಳನ್ನು ಉನ್ನತ ಮಟ್ಟದಲ್ಲಿ ಇರಲೆಂದು ಕೇಳಿಕೊಂಡೆವು,ಹೊರತಾಗಿ ಸಾಮಾಜಿಕ ಪ್ರಜ್ಞೆಯನ್ನು ಬೆಳೆಸಲಿಲ್ಲ.ಅದಕ್ಕಾಗಿ ಇಂದು ಈ ಗತಿ ಬಂದೊರಗಿರುವುದು.

ಒಂದು ಕ್ಷಣ ಯೋಚಿಸಿ ಹಣವೆಂಬ ಮಾಯಾಂಗನೆಯ ಹಿಂದೆ ಹೋಗಿದ್ದುದರ ಫಲವಿದು. ಹಣ ಎಲ್ಲವನ್ನೂ ಒಳಗೊಂಡಿರುತ್ತದೆ.ಆದರೆ ಮಾನವೀಯ ಮೌಲ್ಯಗಳನ್ನು ಬಿಟ್ಟು. ಈ ಮೌಲ್ಯಗಳನ್ನು ಯಾವುದೋ ದಿನಸಿ ಅಂಗಡಿಯಲ್ಲಿ ಖರೀದಿಸಲು ಸಾದ್ಯವಿಲ್ಲ. ಈ ಮೌಲ್ಯಗಳನ್ನು ನಾವು ಅನುಭವಿಸಿ,ಮಕ್ಕಳಿಗೆ ಅನುಭವಿಸಲು ಕೊಡಬೇಕಿತ್ತು. ಒಂದು ಕಲ್ಲು ಹಲವಾರು ಉಳಿ ಪೆಟ್ಟುಗಳನ್ನು ತಿಂದಾಗಲೆ ಅದು ಅಗ್ರ ಪೂಜೆಗೆ ಅರ್ಹತೆಯನ್ನು ಪಡೆಯುವುದು. ಹಾಗೆ ನಮ್ಮ ಮಕ್ಕಳಿಗೆ ಮಾನವೀಯ ಮೌಲ್ಯಗಳ ಪೆಟ್ಟುಗಳನ್ನು ಕೊಟ್ಟಿದ್ದರೆ,ಅವರು ಮೂರ್ತಿಗಳಾಗುತ್ತಿದ್ದರು.

ಕೊನೆಯ ಭಾಗದ ಹೊತ್ತಿಗೆ ನಾಲ್ಕು ಜನರ ಮೇಲೆ ಅಂತಿಮ ಯಾತ್ರೆ ಕೈಗೊಂಡಾಗ ಶವಾಗಾರದ ಹಾದಿಯಲ್ಲಿ ಮೌಲ್ಯಗಳು ಒಟ್ಟುಗೂಡಿ ಗಹಗಹಿಸಿ ನಗುತ್ತಿದ್ದರೆ,ಸಂಬಂಧದ ಕೊಂಡಿಗಳು ಒಂದೊಂದಾಗಿ ಕಳಚಿಕೊಳ್ಳುತ್ತ ಸಮಾಧಿಯಲ್ಲಿ ಮಣ್ಣಾಗುತ್ತವೆ. ಮಾನವ ಮಾನವೀಯ ಮೌಲ್ಯಗಳನ್ನು ತಿಳಿಯದೆ,ತಿಳಿಸದೆ ಲೀನನಾಗುತ್ತಾನೆ. ಭವ ಸಾಗರ ಈಜಿದಷ್ಟು ಬಲೂ ದೂರ. ದೂರ ತೀರ ಯಾನ. ನಮ್ಮ ಸಮಾಧಿಯಲ್ಲಿನ ಕಲ್ಲು ಕರಗಿ ಹೋಗಿ ಮತ್ತೆ ಉದಿಸಬಹುದೇ? ನನ್ನೊಳಗಿನ ಅಂತಃಸತ್ವ.ಬದುಕು ನಾವು ಅಂದುಕೊಂಡಷ್ಟು ಸುಲಭವಲ್ಲ.ಕಾರಣ ಬದುಕು ಯಾವತ್ತಿಗೂ ಅದೊಂದು ಅಗಮ್ಯ, ಅಗೋಚರ ಬರಹ ಅಲ್ಲವೇ?

ಹಾಗಾದರೆ ಯಾವುದು ದೊಡ್ಡದು ಎಂಬ ಭಾವ ಕಾಡುತ್ತಿದೆ.ನಾವು ಧಾರ್ಮಿಕ ನೆಲೆಗಟ್ಟಿನ ಆಧಾರದ ಮೇಲೆ ಬದುಕು ಕಟ್ಟಿಕೊಂಡಿದ್ದೇವೆ. ಧರ್ಮ ಎಂಬುದು ಇತ್ತೀಚಿನ ದಿನಗಳಲ್ಲಿ ಹೊರೆಯಾಗುತ್ತಿದೆ. ಕಾರಣ ಅದರಲ್ಲಿರುವ ವಿಪರೀತ ವೈಭವೀಕರಣ. ಕಾರಣ ಇಷ್ಟೆ ಧರ್ಮದ ಹೆಸರಲ್ಲಿ ನಡೆಯುವ ಮೂಢನಂಬಿಕೆಗಳು ಹಾಗೂ ರಾಜಕೀಯ. ಧಾರ್ಮಿಕ ನೆಲೆಗಟ್ಟು ಬೇರೆ ಆದರೆ ಅದಕ್ಕೆ ನಾವು ಲೇಪಿಸುತ್ತಿರುವುದು ಅಂಧ ಆಚರಣೆಗಳು. ಕೆಟ್ಟ ರಾಜಕೀಯ.

ಅಂಧ ಆಚರಣೆಗಳ ಹೆಸರಿನಲ್ಲಿ ಬಹು ದೊಡ್ಡ ಮೊತ್ತದ ಹಣವನ್ನು ಲೂಟಿ ಮಾಡಲಾಗುತ್ತದೆ. ಅದಕ್ಕೊಂದು ಧರ್ಮದ ಲೇಪನ. ಪ್ರಪಂಚದ ಯಾವ ಧರ್ಮವೂ ಕೂಡ ಹೀಗೆ ಬದುಕು.ಇದನ್ನೇ ತಿನ್ನು.ಹೀಗೆ ಮಾಡು ಎಂದು ಎಲ್ಲಿಯೂ ಕೂಡ ಹೇಳಿಲ್ಲ.ನಿನ್ನ ಬದುಕನ್ನು ನೀನು ಬದುಕು.ಆದರೆ ಅದಕ್ಕೊಂದು ಅರ್ಥ ಇರಬೇಕೆಂದಿದೆ. ಬದುಕುವುದಕ್ಕೇನು ಬೇಕು ಅದನ್ನು ಮಾತ್ರ ತಿನ್ನುವಂತೆ ಹೇಳಿದೆ ವಿನಃ ಇಂಥಹದ್ದನ್ನೇ ತಿನ್ನು ಎಂದು ಎಲ್ಲಿಯೂ ಹೇಳಿಲ್ಲ. ಯಾವ ಶಾಸ್ತ್ರ, ಪುರಾಣ ಗ್ರಂಥಗಳಲ್ಲಿ ಇಲ್ಲ.ಧರ್ಮದ ರಕ್ಷಣೆ ಮಾಡು.ಅದು ನಿನ್ನನ್ನು ರಕ್ಷಿಸುತ್ತದೆ ಎಂದು ಮಾತ್ರ ಹೇಳಿದೆ.(ಧರ್ಮೋ ರಕ್ಷತಿ ರಕ್ಷಿತಃ) ಇದರರ್ಥ ನಾವು ಮತ್ತೊಬ್ಬರನ್ನು ಬದಲಾಯಿಸಿ,ಹೊಡೆದಾಡಿ ಬದಲಾಯಿಸಬೇಕೆಂದಲ್ಲ.ಆಚರಣೆ ಅವನ ಇಷ್ಟ.

ಶ್ರೀಮದ್ಭಗವದ್ಗೀತೆಯಲ್ಲಿ ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಹೇಳಿದ್ದು ಇದನ್ನೇ

ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತಃ. ಅಭ್ಯುತಾನಂ ಅಧರ್ಮಸ್ಯ ತದಾತ್ಮಾನಾಂ ಸೃಜಾಮ್ಯ ಹಂ. ಪರಿತ್ರಾಣಾಯಾ ಸಾಧೂನಾಂ.ವಿನಾಸಾಯಚ ದುಷ್ಕೃತಾಂ. ಧರ್ಮ ಸಂಸ್ಥಾಪ ನಾರ್ಥಾಯ ಸಂಭವಾಮಿ ಯುಗೆ ಯುಗೆ

ಇದರ ಅರ್ಥ ಇಷ್ಟೇ ಯಾವಾಗ ಧರ್ಮ ಕ್ಷಯಿಸಿ ಅಂದರೆ ಭಾರತದಲ್ಲಿ ಧರ್ಮ ಹಾಳಾಗುತ್ತದೆಯೋ? ಅಧರ್ಮ ಹೆಚ್ಚಾಗುತ್ತದೆಯೋ? ಆಗ ಒಳ್ಳೆಯವರನ್ನು ರಕ್ಷಿಸಲು ಕೆಟ್ಟವರನ್ನು ಶಿಕ್ಷಿಸಲು ನಾನು ಯುಗ ಯುಗಗಳಲ್ಲಿ ಅವತರಿಸಿ ಬರುತ್ತೇನೆ ಎಂದು.

ಧರ್ಮ ಆಚರಣೆಗೆ ಇರಬೇಕೆ ಹೊರತು. ಒತ್ತಡ ಉಂಟು ಮಾಡಲು ಅಲ್ಲ.ಯಾವಾಗ ಧರ್ಮ ಎಂಬುದು ಒತ್ತಡ ಉಂಟು ಮಾಡುತ್ತದೆಯೋ ಆಗ ಧರ್ಮ ಹೊರೆಯಾಗುತ್ತದೆ. ಧರ್ಮ ಹೊರೆಯಾದರೆ ಮನುಷ್ಯ ಮೃಗತ್ವವನ್ನು ಪಡೆಯುತ್ತಾನೆ. ಧರ್ಮ ಆಚರಿಸುವಂತಿರಬೇಕೆ ವಿನಃ. ಸಂಕಟವನ್ನು ಉಂಟು ಮಾಡುವಂತಿರಬಾರದು. ಮನುಷ್ಯ ತನ್ನ ಧರ್ಮದ ಮೇಲೆ ನಂಬಿಕೆ ಕಳೆದುಕೊಂಡರೆ ಧರ್ಮ ಕ್ಷಯಿಸುತ್ತಾ ಹೋಗುತ್ತದೆ. ಆಗ ಮತ್ತೊಮ್ಮೆ ಶ್ರೀ ಕೃಷ್ಣ ಅವತರಿಸಿ ಬರುತ್ತಾನೆ.ಹಾಗಾದರೆ ನಾವು ಧರ್ಮ ಎಂಬುದನ್ನು ನಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದೇವೆ.

ಧಾರ್ಮಿಕ ನಂಬಿಕೆಗಳು ಬದಲಾಗಬಾರದು.ಧರ್ಮ ಬದಲಾಗಬಾರದು. ನಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಬಾರದು. ಧರ್ಮ ಹೇಳಿದಂತೆ ನಾವು ಕೇಳಬೇಕೆ ವಿನಃ ನಾವು ಹೇಳಿದಂತೆ ಧರ್ಮ ಕೇಳಬಾರದು. ಧಾರ್ಮಿಕ ನೆಲೆಗಟ್ಟು ತನ್ನದೇ ಆದ ಮಹತ್ವವನ್ನು ಹೊಂದಿದೆ.ಧರ್ಮದ ತಳಹದಿಯಲ್ಲಿ ಬದುಕಬೇಕು. ಜಗತ್ತಿನ ಯಾವ ಧರ್ಮವೂ ಯಾವತ್ತಿಗೂ ಒಬ್ಬರನ್ನು ನೋಯಿಸು ಎಂದು ಎಲ್ಲಿಯೂ ಹೇಳಿಲ್ಲ.ಒಬ್ಬನನ್ನು ಪ್ರೀತಿಸು ಎಂದು ಹೇಳಿದೆ.ಭರತಮಾತೆಯ ನಿಜ ಸಂತ. ಪ್ರಾಂಜಲ ವದನಿ ಶ್ರೀ ಸ್ವಾಮಿ ವಿವೇಕಾನಂದರು ಹೇಳಿದಂತೆ ” ಜಗತ್ತಿನ ಕಣ್ಣೀರು ಒರೆಸದ ಧರ್ಮಗಳಲ್ಲಿ ನನಗೆ ನಂಬಿಕೆ ಇಲ್ಲ ” ಎನ್ನುವುದು ಅಷ್ಟೇ ಸತ್ಯ.ಧರ್ಮ ಆಚರಣೆಗೆ ಇರಬೇಕು. ಅದನ್ನು ಬಿಟ್ಟು ಅನಾಚರಣೆಗೆ ಇರಬಾರದು.

ಧರ್ಮ ಎಂದರೆ ಯಾವುದು? ಹಿಂದೂ? ಮುಸ್ಲಿಂ? ಕ್ರಿಸ್ಚಿಯನ್ಯಾ ವುದು ಧರ್ಮ. ಮೇಲೆ ಹೇಳಿದ ಜಾತಿಗಳೆ? ಧರ್ಮಗಳೆಂದರೆ? ಅಲ್ಲ.ನಾವು ಯಾವುದನ್ನು ಇಷ್ಟ ಪಟ್ಟು ಮಾಡುತ್ತೇವೆಯೋ ಅದೇ ನಿಜವಾದ ಧರ್ಮ. ಹಸಿದವರಿಗೆ ಅನ್ನ ನೀಡಿ ಅದು ಧರ್ಮ. ನೊಂದ ಮನಸ್ಸಿನವರಿಗೆ ಸಾಂತ್ವನ ಹೇಳಿ ಅದು ನಿಜವಾದ ಧರ್ಮ. ಅನಾಥರಿಗೆ ಸಹಾಯ ಮಾಡಿ.ಎಲ್ಲಕ್ಕಿಂತ ಹೆಚ್ಚಾಗಿ ತಂದೆ ತಾಯಿಯರನ್ನು ವೃದ್ದಾಶ್ರಮಕ್ಕೆ ಕಳುಹಿಸಿ ಕೊಡಬೇಡಿ. ಇದನ್ನೆಲ್ಲ ಮಾಡಿದರೆ ಧರ್ಮ ಹೊರೆಯಲ್ಲ.ನಾನು ಯಾವ ವೃತ್ತಿಯನ್ನು ಮಾಡುತ್ತೇನೆ ಅದೇ ನನ್ನ ನಿಜವಾದ ಧರ್ಮ. ನನಗೆ ಒಂದು ತುತ್ತು ಅನ್ನ ಕೊಟ್ಟ ವೃತ್ತಿ ನನ್ನ ಧರ್ಮ.

ಧರ್ಮ ನನಗೇನು ಕೊಟ್ಟಿದೆ ಎನ್ನುವುದಕ್ಕಿಂತ ಧರ್ಮಕ್ಕೆ ನಾನೇನು ಕೊಟ್ಟೆ ಎಂದು ಯೋಚಿಸು.ಹಾಗಾದರೆ ಧರ್ಮ ದೊಡ್ಡದೆ ಒಮ್ಮೆ ಯೋಚಿಸಿದಾಗ ಅಂತರ್ಜಾಲದ ಒಂದು ತುಣುಕು ನೆನಪಾಗುತ್ತದೆ ಅದೆಂದರೆಹತ್ತು ನಿಮಿಷ ಕುಡುಕರ ಮುಂದೆ ಕುಳಿತರೆ ಜೀವನ ತುಂಬಾ ಸರಳ ಅನಿಸುತ್ತೆ ಹತ್ತು ನಿಮಿಷ ಮಹಿಳೆಯರ ಮುಂದೆ ಕುಳಿತರೆ ಜೀವನ ತುಂಬಾ ಕಷ್ಟ ಅನಿಸುತ್ತೆ ಹತ್ತು ನಿಮಿಷ ಸಾಧು ಸನ್ಯಾಸಿಗಳ ಮುಂದೆ ಕುಳಿತರೆ ಇದ್ದಿದ್ದೆಲ್ಲ ದಾನ ಮಾಡಬೇಕು ಅನಿಸುತ್ತೆ ಹತ್ತು ನಿಮಿಷ ನಾಯಕರ ಮುಂದೆ ಕುಳಿತರೆ ನಾವು ಓದಿದ್ದು ವ್ಯರ್ಥ ಅನಿಸುತ್ತೆ ಹತ್ತು ನಿಮಿಷ ಜೀವ ವಿಮೆ ಮಾಡುವವರ ಮುಂದೆ ಕುಳಿತರೆ ಸತ್ತರೆ ಒಳ್ಳೆಯದು ಅನಿಸುತ್ತೆ ಹತ್ತು ನಿಮಿಷ ವ್ಯಾಪಾರಿಗಳ ಮುಂದೆ ಕುಳಿತರೆ ನಮ್ಮ ಗಳಿಕೆ ಎದಕ್ಕು ಬರಲ್ಲ ಅನಿಸುತ್ತೆ ಹತ್ತು ನಿಮಿಷ ಅಧಿಕಾರಗಳ ಮುಂದೆ ಕುಳಿತರೆ ಯಾಕೂ ಜಗತ್ತು slow ಅನಿಸುತ್ತೆ ಹತ್ತು ನಿಮಿಷ ವಿಜ್ಞಾನಿಗಳ ಮುಂದೆ ಕುಳಿತರೆ ನಾವು ಎಷ್ಟು ಅಜ್ಞಾನಿಗಳು ಅನಿಸುತ್ತೆ ಹತ್ತು ನಿಮಿಷ ಶಿಕ್ಷಕರ ಮುಂದೆ ಕುಳಿತರೆ ನಾವು ಮಕ್ಕಳ ಹಾಗೆ ಇರಬೇಕಿತ್ತು ಅನ್ನಿಸುತ್ತೆ ಹತ್ತು ನಿಮಿಷ ರೈತ  ,ಕಾರ್ಮಿಕರ ಮುಂದೆ ಕುಳಿತರೆ ನಾವು ಅವರಷ್ಟು ಕಷ್ಟ ಪಡಲ್ಲ ಅನಿಸುತ್ತ ಹತ್ತು ನಿಮಿಷ ಸೈನಿಕರ ಮುಂದೆ ಕುಳಿತರೆ ನಮ್ಮ ತ್ಯಾಗ ,ಸೇವೆ ಅವರ ಮುಂದೆ ಏನು ಇಲ್ಲ ಅನಿಸುತ್ತೆ. ಇದು ವಾಸ್ತವ ಸತ್ಯ. ಹಾಗಾದರೆ ಎಲ್ಲವನ್ನೂ ಬಿಟ್ಟು ಎಲ್ಲಿಗೆ ಹೋಗುವುದು. ಎಂ.ಗೋಪಾಲಕೃಷ್ಣ ಅಡಿಗರ ಮಾತು ನೆನಪಾಗುತ್ತದೆ “ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೀ ಜೀವನ” ಎಂಬುದಾಗಿ.ಹಾಗಾದರೆ ಯಾರು ದೊಡ್ಡವರು ಎನ್ನುವುದು ಕಷ್ಟ.

‘ಗುಡ್ಡಕ್ಕೆ ಗುಡ್ಡವೇ ಅಡ್ಡ’ ಎಂಬ ಮಾತಿನಂತೆ ಈ ಪ್ರಪಂಚದಲ್ಲಿ ಯಾರು ದೊಡ್ಡವರು ಎಂದು ಹುಡುಕಲು ಹೊರಟರೆ, ಸೂಕ್ತ ಉತ್ತರ ಕಂಡುಹಿಡಿಯುವುದು ಬಹಳ ಕಷ್ಟದ ಕಾರ್ಯ. ಏಕೆಂದರೆ ದೊಡ್ಡಸ್ತಿಕೆಗೆ, ಹಿರಿಮೆಗೆ ಒಂದು ಪರಿಭಾಷೆ ಬೇಕು. ಆರ್ಥಿಕ ಶಕ್ತಿಯಿಂದ ಯಾರು ದೊಡ್ಡವರು ಎಂದು ಶೋಧಿಸಿದರೆ ಅತಿ ದೊಡ್ಡ ಕೋಟ್ಯಧೀಶನೇ ಆಯ್ಕೆಯಾಗಬಹುದು.

ದೊಡ್ಡವರು ಯಾರು?

ಬೌದ್ಧಿಕ ಶಕ್ತಿ, ಶಾರೀರಿಕ ಬಲ, ಜನಪ್ರಿಯತೆ ಇತ್ಯಾದಿ ನಾನಾ ದೃಷ್ಟಿಕೋನಗಳಿಂದ ಹಲವು ಬಗೆಯ ಜನರಲ್ಲಿ ಸ್ಪರ್ಧೆಯೇ ಉಂಟಾಗಬಹುದು. ಆದರೆ, ಈ ಪ್ರಪಂಚದ ದೃಷ್ಟಿಯಿಂದ ವಾಸ್ತವದಲ್ಲಿ ದೊಡ್ಡವನಾರು? ಹಿರಿಮೆಯ ಪರಿಭಾಷೆಯೇನು? ಎಂದು ಶೋಧಿಸಲು ಹೊರಟ ರಾಜನೊಬ್ಬನ ಅನುಭವ ಅತ್ಯಂತ ಮನೋಜ್ಞವಾಗಿದೆ.

ಹಿಂದೆ ದೇವಗಿರಿಯಲ್ಲಿ ಶ್ವೇತವರ್ಮ ಎಂಬ ರಾಜನು ಉತ್ತಮ ರಾಜ್ಯಭಾರದಿಂದ ಅತ್ಯಂತ ಜನಪ್ರಿಯನಾಗಿ ಖ್ಯಾತಿ ಗಳಿಸಿದ್ದ. ದಯಾಳುವೂ, ದೂರದರ್ಶಿಯೂ ಆಗಿದ್ದ ರಾಜನು ಗಾಢ ಚಿಂತೆಯಲ್ಲಿ ಮುಳುಗಿದ್ದ. ಇದನ್ನು ಕಂಡ ಮಂತ್ರಿಗೆ ಅಚ್ಚರಿಯೆನಿಸಿತು. ‘‘ಮಹಾಪ್ರಭುಗಳೇ, ತಮ್ಮ ಗಾಢ ಚಿಂತೆಗೆ ಕಾರಣವೇನು?’’ ಎಂದು ಮಂತ್ರಿ ಪ್ರಶ್ನಿಸಿದ.

ಆಗ ಮಹಾರಾಜನು ‘‘ನನ್ನ ಚಿಂತೆಗೆ ಕಾರಣವೆಂದರೆ ನಮ್ಮ ರಾಜ್ಯದಲ್ಲಿ ಅಪ್ರಾಮಾಣಿಕರು, ವಂಚಕರು, ದಗಾಕೋರರ ಸಂಖ್ಯೆ ಜಾಸ್ತಿಯಾಗುತ್ತಿದೆ. ಯಾರಾದರೂ ದೇವರಂಥವರಿದ್ದಾರೆಯೇ?’’ ಎಂದ.

ಮಹಾರಾಜನನ್ನು ಮೆಚ್ಚಿಸಲು ಇದೇ ಸದವಕಾಶವೆಂದು ಭಾವಿಸಿದ ಮಂತ್ರಿ ತಕ್ಷಣವೇ ‘‘ಯಾಕಿಲ್ಲ ಮಹಾರಾಜರೇ? ತಾವಿಲ್ಲವೇ? ಸತ್ಯದ ಜಿಜ್ಞಾಸೆಯುಳ್ಳವನೇ ಮಹಾಮಾನವನು,’’ ಎಂದ. ಮಂತ್ರಿಯ ಉತ್ತರದಿಂದ ಪ್ರಸನ್ನನಾದ ರಾಜನು ‘‘ನನಗಿಂತಲೂ ಉತ್ತಮನಾದವನು ಸಿಗಬಹುದೇ?’’ ಎಂದು ಪ್ರಶ್ನಿಸಿದಾಗ ‘‘ನಾನಿಲ್ಲವೇ?’’ ಎಂದು ಮಂತ್ರಿ ಉತ್ತರಿಸಿದ. ಆಗ ರಾಜನು ‘‘ಇನ್ನಷ್ಟು ಮಹಾನ್ ವ್ಯಕ್ತಿ ಸಿಗಲಾರನೇ?’’ ಎಂದು ಪ್ರಶ್ನಿಸಿದ.

ಮಂತ್ರಿಯು ಮಹಾರಾಜನನ್ನು ಸಮಾಧಾನಪಡಿಸುತ್ತ ಹೇಳಿದ, ‘‘ಹುಡುಕಿದರೆ ಇನ್ನಷ್ಟು ಮಹಾನ್ ವ್ಯಕ್ತಿಗಳು ಸಿಕ್ಕೇಸಿಗುತ್ತಾರೆ. ಅಲ್ಲಿ ನೋಡಿ, ಒಬ್ಬಳು 80 ವರ್ಷದ ಮುದುಕಿ ಬಾವಿ ತೋಡಿಸುತ್ತಿದ್ದಾಳೆ. ಯಾರಿಗಾಗಿ? ಯಾರು ಬದುಕು ಮತ್ತು ಸಾವಿನ ಗಡಿ ದಾಟಿ, ಯಾವುದೇ ವೈಯಕ್ತಿಕ ಸ್ವಾರ್ಥ-ಮೋಹಗಳಿಲ್ಲದೆ, ಕೇವಲ ಲೋಕೋಪಕಾರಿಯ ದೃಷ್ಟಿಯಿಂದ ಸೇವಾಕಾರ್ಯ ಮಾಡುತ್ತಾರೋ ಅವರು ಅಮರಕೀರ್ತಿಗೆ ಪಾತ್ರರಾಗಿ ಬಿಡುತ್ತಾರೆ,’’ ಎಂದು ನುಡಿದ ಮಂತ್ರಿಯ ಬಗ್ಗೆ ಮಹಾರಾಜನು ಮೆಚ್ಚುಗೆಯಿಂದ ಚಪ್ಪಾಳೆ ತಟ್ಟಿದ ಹಾಗೂ ಖುಷಿಯಿಂದ ಮಂತ್ರಿಯನ್ನು ಬಿಗಿದಪ್ಪಿದ.

ಈ ಪ್ರಪಂಚದಲ್ಲಿ ಜನರು ದೊಡ್ಡವರಾಗಿ ಕೀರ್ತಿಶಾಲಿಗಳಾಗಬೇಕೆಂದು ಏನೇನೋ ಒದ್ದಾಟ ನಡೆಸುತ್ತಾರೆ. ಚುನಾವಣೆಗಳಲ್ಲಿ ಸ್ಪರ್ಧಿಸುತ್ತಾರೆ, ಭರ್ಜರಿ ಭಾಷಣಗಳನ್ನು ಮಾಡುತ್ತಾರೆ, ಪತ್ರಿಕೆಗಳಲ್ಲಿ ಭಾವಚಿತ್ರ ಮತ್ತು ಜಾಹೀರಾತುಗಳನ್ನು ಹಾಕಿಸುತ್ತಾರೆ. ಆದರೆ, ಯಾವುದೇ ಸ್ವಾರ್ಥವೂ ಇಲ್ಲದೆ ಜನೋಪಕಾರದ ಕಾರ್ಯಗಳಲ್ಲಿ ಯಾರು ಪ್ರವೃತ್ತರಾಗುತ್ತಾರೋ ಅವರೇ ದೊಡ್ಡವರಾಗಿದ್ದು ಅಂಥವರನ್ನು ಸಮಾಜವು ಸದಾ ಕೃತಜ್ಞತೆಯಿಂದ ಸ್ಮರಿಸುತ್ತದೆ. ನಮ್ಮ ನಾಡಿನಲ್ಲಿ ಇಂಥ ಸಮಾಜ ಸೇವಾಸಕ್ತರ ಸಂಖ್ಯೆ ಎಲ್ಲೆಲ್ಲೂ ಹೆಚ್ಚಾಗಬೇಕಾಗಿದೆ ಅಲ್ಲವೆ?

ಇದೆಲ್ಲದರ ನಡುವೆ ನಮಗೆ ಜನ್ಮ ನೀಡಿದ ತಾಯಿ ದೊಡ್ಡವಳೆ? ಇರಬಹುದು. ಹಾಗಾದರೆ ಮೇ ತಿಂಗಳ ಎರಡನೆಯ ಭಾನುವಾರ ವಿಶ್ವ ತಾಯಂದಿರ ದಿನ. ಅವತ್ತು ನಮಗೆ ತಿಳಿದಿರುವ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ತಾಯಿಯೊಂದಿಗೆ ನಮ್ಮ ಭಾವಚಿತ್ರಗಳನ್ನು ಹಾಕಿ ಅಮೋಘ ತಾಯಿ ಪ್ರೀತಿ, ಪ್ರೇಮ ತೋರಿಸುವ ನಮಗೆ. ಆಟೋದಲ್ಲಿ ಹೆಣ ಸಾಗಿಸುವಾಗ ಎಲ್ಲಿತ್ತು ನಮ್ಮ ಮಾತೃತ್ವ.ಕೇವಲ ಮೇ ತಿಂಗಳ ಎರಡನೇ ಭಾನುವಾರಕ್ಕೆ ಮಾತ್ರ ಸೀಮಿತವಾ?ಉಳಿದ ದಿನಗಳಲ್ಲಿ ನಮ್ಮ ತಾಯಿ ಅನಾಥಾಶ್ರಮದಲ್ಲಿರೇ ಸಾಕು.ಏಕೆಂದರೆ ವಯಸ್ಸಾದಂತೆ ಅವರ ಬುದ್ಧಿ ನಮಗೆ ಸರಿ ಹೋಗುವುದಿಲ್ಲ. ನಮ್ಮ ಭಾವನೆಗಳಿಗೆ ಸ್ಪಂದಿಸುವುದಿಲ್ಲ ಅಲ್ಲವೇ?ಒಂದು ವಿಷಯವನ್ನು ಸುಮಾರು ಬಾರಿ ಹೇಳಬೇಕು ಅಲ್ಲವೇ? ಒಂದು ಕ್ಷಣ ಯೋಚಿಸಿ ನೋಡಿ ನಾವು ಚಿಕ್ಕವರಿದ್ದಾಗ ಎಷ್ಟು ಸಾರಿ ಕೇಳಿಲ್ಲ ಒಂದೇ ವಿಷಯವನ್ನು.ಅದೆಷ್ಟು ಸಾರಿ ಹೇಳಿಲ್ಲ ಅಮ್ಮ ನಮಗೆ. ನಾವೀಗ ದೊಡ್ಡವರು. ಅವರು ಎರಡು ಮೂರು ಸಾರಿ ಕೇಳುವುದು ಹಿಂಸೆಯಾಗುತ್ತದೆ ಅಲ್ಲವೇ?

ಆಟೋದಲ್ಲಿದ್ದವಳು ನಮ್ಮ ತಾಯಿಯಾಗಿದ್ದರೆ,ನಾವು ನಮ್ಮ ಪ್ರತಿಕ್ರಿಯೆ ಹೇಗಿರುತ್ತಿತ್ತು.ಕರುಳು ಬಾಯಿಗೆ ಬಂದಿತಲ್ಲವೇ?ಏಕೆಂದರೆ ನಮ್ಮ ತಾಯಿ ತುಂಬ ಸುರಕ್ಷಿತವಾಗಿದ್ದಾಳೆ.ಹಾಗಾದರೆ ಅವಳು ತಾಯಿಯಲ್ಲವೇ? ಇತರರ ತಾಯಿಯಲ್ಲಿ ನಮ್ಮ ತಾಯಿಯನ್ನು ಕಾಣುವವನು ಮನುಷ್ಯನಾಗುತ್ತಾನೆ.ಮಾಧ್ಯಮಗಳಲ್ಲಿ ಬಿತ್ತರಗೊಳ್ಳುವ ಸುದ್ದಿಯನ್ನು ನೋಡಿ ಎರಡು ಹನಿ ಕಣ್ಣೀರು ಹಾಕಿದ ಕಣ್ಣುಗಳೆಷ್ಟು?ಒಮ್ಮೆ ಯೋಚಿಸಿ ಕೇವಲ ಒಂದು ದಿನ ತಾಯಿಯನ್ನು ಹಾಡಿ ಹೊಗಳಿದರೆ ಸಾಲದು. ಜನನಿ ಜನ್ಮ ಭೂಮಿ ಸ್ವರ್ಗಾದಪಿ ಗರಿಯಸಿ ಎಂದರೆ “ತಾಯಿ ಮತ್ತು ತಾಯ್ನೆಲ ಸ್ವರ್ಗಕ್ಕಿಂತಲೂ ಮಿಗಿಲು” ಎಂದು ಘಂಟಾಘೋಷವಾಗಿ ಹೇಳಿ ತಾಯಿಯನ್ನು ಮೂಲೆ ಗುಂಪು ಮಾಡುತ್ರಿದ್ದೇವೆ.ತಾಯಿ ಮತ್ತು ತಾಯಿಯ ಆಸೆ ಆಕಾಂಕ್ಷೆಗಳನ್ನು ಹಾಳು ಮಾಡಿ ತಾಯಿಯನ್ನು ಮರೆತು ಹೋಗಿದ್ದೇವೆ.

ಕನ್ನಡದ ಖ್ಯಾತ ಸಾಹಿತಿ ಶ್ರೀ ಜೋಗಿಯವರು ತಮ್ಮ ಒಂದು ಪುಸ್ತಕದಲ್ಲಿ “ತಂದೆ ತಾಯಿಯರನ್ನು ಪೂಜಿಸಬೇಡಿ,ಗೌರವಿಸಿ” ಎನ್ನುತ್ತಾರೆ. ಕಾರಣ ನಾವು ಅವರನ್ನು ಪೂಜಿಸುವುದಕ್ಕಿಂತ ಗೌರವಿಸಿದರೆ ಸಾಕು. ತಾಯಿಯನ್ನು ತಾಯಿಯಂತೆ ನೋಡೋಣ. ಕೇವಲ ಅದೊಂದು ದಿನಕ್ಕೆ ಸೀಮಿತಗೊಳಿಸದೆ,ನಿತ್ಯ ಗೌರವಿಸುವಂತಾಗಲಿ. ಮಾಧ್ಯಮಗಳಲ್ಲಿ ಬಿತ್ತರಿಸುವ ಬಿಸಿ ಬಿಸಿ ಸುದ್ದಿ ಎಂದು ಪ್ರಚಾರ ಮಾಡಲು ಒಂದು ಅವಕಾಶ ನೀಡುತ್ತದೆ.

ಹಾಗಾದರೆ ಒಬ್ಬ ತಾಯಿಯ ಹೆಣವನ್ನು ಆಟೋದಲ್ಲಿ ಅಥವಾ ಇತರೆ ದ್ವಿ ಚಕ್ರ ವಾಹನಗಳಲ್ಲಿ ಕೊಂಡೊಯ್ಯುವುದು,ಒಂದು ದಿನದ ಮಹಾ ಸುದ್ದಿಯಲ್ಲವೇ?ಹಾಗಾದರೆ ಅಲ್ಲಿರುವ ಶವ ನಮ್ಮ ತಾಯಿಯದಾಗಿದ್ದರೆ, ಅವರ ಸ್ಥಾನದಲ್ಲಿ ನಾವಿದ್ದಿದ್ದರೆ,ನಮ್ಮನ್ನೆ ದಿನವಿಡೀ ತೋರಿಸುತ್ತಿದ್ದರೆ ನಾವು ಹೇಗೆ ಪ್ರತಿಕ್ರಿಯಿಸುತ್ತಿದ್ದೆವು.ಇದಕ್ಕೆ ಉತ್ತರವಿಲ್ಲ.ಮನೆಯಲ್ಲಿ ತಾಯಿಯಿದ್ದಾಗ ತಾತ್ಸಾರ ಮಣ್ಣು ಸೇರಿದ ಮೇಲೆ ಸಾಕ್ಷಾತ್ಕಾರ ಎನ್ನುವ ಮೂರ್ಖರು ನಾವು. ಒಬ್ಬ ಕವಿ ಹೇಳುತ್ತಾನೆ,”ದೇವರನ್ನು ಪೂಜಿಸಿದರೆ ತಾಯಿ ಬರುವುದಿಲ್ಲ. ತಾಯಿಯನ್ನು ಪೂಜಿಸು ದೇವರೇ ಬರುತ್ತಾನೆ ” ಈ ಮಾತು ಸಾರ್ಥಕ ಎನಿಸುತ್ತದೆ.

ಆಟೋದಲ್ಲಿದ್ದ ತಾಯಿ ಇನ್ನೆಂದೂ ತಿರುಗಿ ಬರುವುದಿಲ್ಲ. ಈ ಸತ್ಯ ನಮಗೆ ಗೊತ್ತು. ಆದರೆ ನಾವು ದೊಡ್ಡವರಾದಂತೆ ಏಕೀ ತಾತ್ಸಾರ ಮನೋಭಾವ. ಕವಿವಾಣಿ ಹತ್ತು ದೇವರನ್ನು ಪೂಜಿಸುವುದಕ್ಕಿಂತ ಹೆತ್ತ ತಾಯಿಯನ್ನು ಪೂಜಿಸು ಮನೋಜ್ಞವಾಗಿದೆ.‌ ನಾವೆಲ್ಲ ಆಧುನಿಕ ಭರಾಟೆಯಲ್ಲಿ ನಮ್ಮತನವನ್ನು ಕಳೆದುಕೊಂಡು ಅಧೋಗತಿಗೆ ಬಂದು ನಿಂತಿದ್ದೇವೆ. ಒಮ್ಮೆ ಯೋಚಿಸಿ ನೋಡಿದಾಗ ನಾವು ಮುಂದೊಂದು ದಿನ ಅಪ್ಪ ಅಮ್ಮ ಆಗುವ ಕಾಲವಿದೆ. ಆಗ ನಮ್ಮ ಮಕ್ಕಳು ನಮ್ಮನ್ನು ಹೀಗೆ ನೋಡುತ್ತಾರೆ. ಅವರಿಗೊಂದು ಸಂಸ್ಕಾರ ನೀಡಲು ಅಮ್ಮ ಬೇಕಿತ್ತು ಎನಿಸುತ್ತದೆ.

ಜಾನಪದ ಗಾದೆ ಮಾತು ಒಲೆಗೊಂದು ಸೌದೆ ಕೊರಡು,ಮನೆಗೊಂದು ಮುದಿ ಕೊರಡು ಚಂದ ಎರಡು ಬೇಕು. ಏಕೆಂದರೆ ಒಲೆ ಉರಿಯಲು ಸೌದೆ ಬೇಕು. ಮನೆ ಚೆನ್ನಾಗಿರಲು ತಾಯಿ ಬೇಕು. ಅಪ್ಪ ಸತ್ತು ಅಮ್ಮ ಇರಬೇಕು.ಹಿರಿಯರ ಅನುಭವದ ಮಾತು. ತಾಯಿದ್ರೆ ಬಾಯಿ.ಅಂತಹ ತಾಯಿಯನ್ನು ಕಳೆದುಕೊಂಡ ಆ ಮನಸ್ಸು ಆಟೋದಲ್ಲಿ ಕರೆದುಕೊಂಡು ಹೋಯಿತು ಎಂದಾಗ ಎಷ್ಟು ಘಾಸಿಯಾಯಿತು.ಸಮಾಜದಲ್ಲಿ ಕೆಟ್ಟ ಅಪ್ಪ ಸಿಗುತ್ತಾನೆ.ಆದರೆ ಕೆಟ್ಟ ತಾಯಿ ಯಾವತ್ತಿಗೂ ಸಿಗಲಾರಳು.ಹಾಗಾದರೆ ಈ ಸಮಾಜದಲ್ಲಿ ತಾಯಿ ದೊಡ್ಡವಳಾ?

ಸಮಾಜದ ನಿರ್ಮಾತೃಗಳಲ್ಲಿ ಯಾರು ದೊಡ್ಡವರು ಎನ್ನುವ ಪ್ರಶ್ನೆ ಕಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಜಗತ್ತಿನಲ್ಲಿ ಕಾಡುತ್ತಿರುವ ಮಾರಣಾಂತಿಕ ಕಾಯಿಲೆ ಕೊರೋನಾ. ಇದನ್ನು ದೂರ ಮಾಡಲು ಹಗಲಿರುಳು ಶ್ರಮಿಸುತ್ತಿರುವ ಆರೋಗ್ಯ ಇಲಾಖೆಯ ದಾದಿಯರು ದೊಡ್ಡವರಾ?ದಾದಿಯರು ಬಹುಶಃ ಈ ಪದ ನಮ್ಮ ಜೀವನದಲ್ಲಿ ಹುಟ್ಟಿನಿಂದ ಮರಣದವರೆಗೂ ಬರುತ್ತದೆ. ಕಾರಣ ದಾದಿಯರು ನಮಗೆ ಇನ್ನೊಂದು ತಾಯಿಯ ಹಾಗೆ. ಭೂಮಿಗೆ ಬರಲು ಒಂದು ಮಗು ತಾಯಿಯ ಗರ್ಭದಲ್ಲಿ ಒಂಭತ್ತು ತಿಂಗಳ ಕಾಲ ಇದ್ದು, ಭೂಮಿಗೆ ಬಂದ ತಕ್ಷಣ ದಾದಿಯ ಕೈಯಲ್ಲಿ ಇರುತ್ತದೆ. ಅವರೇ ಸ್ವತಃ ನಮ್ಮ ತಾಯಿಗೆ ಹೇಳುತ್ತಾರೆ.

ಅಮ್ಮ ನಿಮ್ಮ ಮಗು ಜೋಪಾನ ಎಂದು.ಹುಟ್ಟುವ ಮೊದಲು ಅನೇಕ ಬಾರಿ ಈ ದಾದಿಯನ್ನು ಅಮ್ಮ ಭೇಟಿ ಮಾಡಿರುತ್ತಾಳೆ.ನನಗೀಗ ಮೂರು ತಿಂಗಳು, ದಿನಕ್ಕೆ ಎಷ್ಟು ಪ್ರಮಾಣದಲ್ಲಿ ಆಹಾರ ಸೇವಿಸಬೇಕು? ಯಾವ ಮಾತ್ರೆ ತೆಗೆದುಕೊಂಡರೆ ಒಳ್ಳೆಯದು? ಯಾವಾಗ ಆಸ್ಪತ್ರೆಗೆ ದಾಖಲಿಸಲಾಗಬೇಕು? ಇತ್ಯಾದಿಯಾಗಿ ಮಾಹಿತಿ ಕೊಡುವವರು ದಾದಿಯರು. ಅಲ್ಲಿಂದ ನಮ್ಮ ಮತ್ತು ದಾದಿಯರ ಒಡನಾಟ ಪ್ರಾರಂಭವಾಗುತ್ತದೆ. ಹುಟ್ಟಿದ ಮೇಲೆ ಯಾವ ಆಹಾರ? ಎಷ್ಟು ಪ್ರಮಾಣದಲ್ಲಿ? ಮಗುವಿನ ಆರೋಗ್ಯ, ತಾಯಿಯ ಆರೋಗ್ಯ ಇವೆಲ್ಲವನ್ನೂ ಲೆಕ್ಕ ಹಾಕುವವಳು ದಾದಿ.

ಇಲ್ಲಿಂದ ನಮ್ಮ ಪಾಲನೆ, ಪೋಷಣೆ ಆರೋಗ್ಯ ರಕ್ಷಣೆ ನೀಡುತ್ತದೆ. ಯಾವ ತಿಂಗಳಲ್ಲಿ ಯಾವ ಚುಚ್ಚುಮದ್ದು ಹಾಕುವುದು? ಒಂದು ಚುಚ್ಚುಮದ್ದಿನಿಂದ ಇನ್ನೊಂದು ಚುಚ್ಚುಮದ್ದಿಗೆ ಎಷ್ಟು ಕಾಲಾವಧಿ? ಹೀಗೆ ಸಾಗುತ್ತದೆ. ಹಾಗಾದರೆ ನಾವು ದಾದಿಯರನ್ನು ಹೇಗೆ ನೋಡಿಕೊಂಡಿದ್ದೇವೆ?ಅವರಿಗೆ ನಮ್ಮ ಗೌರವ ಹೇಗಿದೆ? ಇವುಗಳನ್ನು ನೋಡೋಣ. ಒಂದು ಅರ್ಥದಲ್ಲಿ ದಾದಿ ನಮ್ಮ ಎರಡನೇ ತಾಯಿ ಎಂದು ಕರೆದರೆ ತಪ್ಪಾಗಲಾರದು.

ಇತ್ತೀಚಿನ ದಿನಗಳಲ್ಲಿ ದಾದಿಯರು ನಮ್ಮ ನಡುವೆ ಕೇವಲ ದಾದಿಯರಾಗಿದೆ ಕೊರೊನಾ ವಾರಿಯರ್ ಆಗಿದ್ದು ನಮ್ಮ ಸೌಭಾಗ್ಯ. ಹೌದು ಇಡೀ ವಿಶ್ವವನ್ನು ತಲ್ಲಣಗೊಳಿಸುತ್ತಿರುವ ಮಹಾ ಮಾರಿ ರೋಗ ಕೋವಿಡ್. ಇದು ಇಂದು ವಿಶ್ವವ್ಯಾಪಿ. ಕೋವಿಡ್ ಪಾಸಿಟಿವ್ ಇರುವ ರೋಗಿ ಹತ್ತಿರ ಇದ್ದರೂ ಈ ರೋಗ ಬರುತ್ತದೆ.ಇಂತಹ ಕಷ್ಟ ಕಾಲದಲ್ಲಿ ಹಗಲು ರಾತ್ರಿ ಎನ್ನದೇ ದುಡಿಯುತ್ತಿರುವ ಒಂದು ಸಮುದಾಯ ಎಂದರೇ ಅದು ದಾದಿಯರು.ಆಸ್ಪತ್ರೆಗೆ ದಾಖಲಾಗುವ ರೋಗಿ ಯಾರು?ಅವನು ಎಲ್ಲಿಂದ ಬಂದ? ಅವನ ರೋಗ ಯಾವುದು? ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಕೊಡುವ ಏಕೈಕ ಸಮುದಾಯ ದಾದಿಯರು. ಕೋವಿಡ್ ಸಂದರ್ಭದಲ್ಲಿ ಮನೆಯವರು ದೂರ ಇದ್ದರೂ ದಾದಿಯರು ಹತ್ತಿರ ಇರಬೇಕು. ಕೊರೋನಾ ರೋಗಿ ಸತ್ತ ಹೋದರೆ ಅವನ ಅಂತ್ಯಕ್ರಿಯೆ ಮಾಡಲೂ ಹಿಂದೇಟು ಹಾಕುವುದಿಲ್ಲ.ತಮ್ಮ ಮನೆ,ಮಕ್ಕಳು, ಗಂಡ ಇವರೆಲ್ಲರನ್ನೂ ಬಿಟ್ಟು ಈ ರೋಗದ ವಿರುದ್ಧ ಹೋರಾಡುತ್ತಿದ್ದಾರೆ.ದಾದಿಯರು ತಾವು ಜನ್ಮ ನೀಡಿದ ಮಕ್ಕಳನ್ನು ದೂರದಿಂದ ಗಾಜಿನ ಪರದೆಯ ಮೂಲಕ ವಿಚಾರಿಸುವ ದೃಶ್ಯ ಮನಕಲಕುವಂತೆ ಮಾಡುತ್ತದೆ.

ಯಾವುದೋ ಅನಾಥ ಮಗುವಿನ ತಾಯಿಯಾಗುತ್ತಾರೆ.ಬಂಧನಗಳು ಇಲ್ಲದಿದ್ದ ಸಮಯದಲ್ಲಿ ಸಂಬಂಧ ಬೆಸೆದು ಮಾನವೀಯತೆಯ ಮೌಲ್ಯವನ್ನು ಸಾರುತ್ತಾರೆ.ಮಗು ಹೇಗೆ ಜನನವಾಯಿತು? ಅದೆಲ್ಲವೂ ಬೇಕಿಲ್ಲ. ಆದರೆ ಅದಕ್ಕೊಂದು ತಾಯಿಯ ಸ್ಥಾನ ಮೊದಲು ಕೊಟ್ಟವಳು ದಾದಿ.ಅನಾಥ ಶವಗಳಿಗೆ ಮುಕ್ತಿ ಹೊಂದಲು ತಮ್ಮನ್ನು ತಾವು ಮುಡಿಪಾಗಿಟ್ಟ ಸಮುದಾಯ.ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸದೆ ಸದಾಕಾಲವೂ ಪರರ ಹಿತಕ್ಕಾಗಿ ಸಕ್ರಿಯವಾಗಿ ಹೋರಾಡುತ್ತಿದೆ.

ನಮ್ಮನ್ನೆಲ್ಲ ಪ್ರತಿದಿನ ಸಾಕುವ ಮತ್ತೊಂದು ಜೀವ ರೈತ.ಇವನನ್ನು ಈ ದೇಶದ ಬೆನ್ನೆಲುಬು ಎಂದು ಕರೆಯಲಾಗುತ್ತದೆ ಹಾಗಾದರೆ ರೈತ ದೊಡ್ಡವನಾ?

ರೈತನು ಬೇಸಾಯಮಾಡುವ ಜಮೀನಿನ ಮಾಲೀಕನಾಗಿರಬಹುದು ಅಥವಾ ಇತರರು ಒಡೆಯರಾಗಿರುವ ಜಮೀನಿನಲ್ಲಿ ಕಾರ್ಮಿಕನಾಗಿ ಕೆಲಸ ಮಾಡಬಹುದು, ಆದರೆ ಮುಂದುವರಿದ ಅರ್ಥವ್ಯವಸ್ಥೆಗಳಲ್ಲಿ, ರೈತನು ಸಾಮಾನ್ಯವಾಗಿ ಜಮೀನಿನ ಒಡೆಯನಾಗಿರುತ್ತಾನೆ, ಮತ್ತು ಜಮೀನಿನ ಉದ್ಯೋಗಿಗಳನ್ನು ಜಮೀನು ಕಾರ್ಮಿಕರು, ಅಥವಾ ಆರಂಭದಾಳುಗಳೆಂದು ಕರೆಯಲಾಗುತ್ತದೆ. ಆದರೆ, ಸ್ವಲ್ಪ ಕಾಲದ ಹಿಂದಿನವರೆಗೂ, ರೈತನು ಪರಿಶ್ರಮ ಮತ್ತು ಗಮನದಿಂದ ಸಸ್ಯ, ಬೆಳೆ ಇತ್ಯಾದಿಗಳ ಬೆಳವಣಿಗೆಯನ್ನು ಉತ್ತೇಜಿಸುವ ಅಥವಾ ಸುಧಾರಿಸುವ ಅಥವಾ ಪ್ರಾಣಿಗಳನ್ನು (ಜಾನುವಾರು ಅಥವಾ ಮೀನು) ಬೆಳೆಸುವ ವ್ಯಕ್ತಿಯಾಗಿದ್ದನು.

ಕೃಷಿಯ ಕಾಲಮಾನ ನವಶಿಲಾಯುಗದಷ್ಟು ಹಿಂದಿನದ್ದು ಎಂದು ನಿರ್ಧರಿಸಲಾಗಿದೆ. ಕಂಚಿನ ಯುಗದ ವೇಳೆಗೆ, ಸುಮೇರಿಯನ್ನರು ಕೃಷಿ ವಿಶೇಷ ಕಾರ್ಮಿಕ ಪಡೆಯನ್ನು ಹೊಂದಿದ್ದರು (ಕ್ರಿ.ಪೂ. ೫೦೦೦-೪೦೦೦), ಮತ್ತು ಬೆಳೆಗಳನ್ನು ಬೆಳೆಯಲು ನೀರಾವರಿ ಮೇಲೆ ಬಹಳವಾಗಿ ಅವಲಂಬಿಸಿದ್ದರು. ಅವರು ವಸಂತ ಋತುವಿನಲ್ಲಿ ಕೊಯ್ಲು ಮಾಡುವಾಗ ಮೂರು ವ್ಯಕ್ತಿಗಳ ತಂಡಗಳ ಮೇಲೆ ಅವಲಂಬಿಸಿದ್ದರು. ಪ್ರಾಚೀನ ಈಜಿಪ್ಟ್‌ನ ರೈತರು ಬೇಸಾಯ ಮಾಡುತ್ತಿದ್ದರು ಮತ್ತು ನೈಲ್ ನದಿಯಿಂದ ತಮ್ಮ ನೀರನ್ನು ಒದಗಿಸಿಕೊಳ್ಳುತ್ತಿದ್ದರು ಮತ್ತು ಅದರ ಮೇಲೆ ಅವಲಂಬಿಸಿದ್ದರು.

ನಿರ್ದಿಷ್ಟ ಪಳಗಿಸಿದ ಪ್ರಾಣಿಗಳನ್ನು ಬೆಳೆಸುವ ರೈತರನ್ನು ಸೂಚಿಸಲು ಹೆಚ್ಚು ವಿಶಿಷ್ಟ ಪದಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಉದಾಹರಣೆಗೆ, ಪಶುಪಾಲಕರು ಅಥವಾ ಜಾನುವಾರು ಸಾಕುವವರೆಂದರೆ ದನಗಳು, ಕುರಿಗಳು, ಆಡುಗಳು, ಮತ್ತು ಕುದುರೆಗಳಂತಹ ಮೇಯುವ ಜಾನುವಾರುಗಳನ್ನು ಬೆಳೆಸುವವರು. ಮುಖ್ಯವಾಗಿ ಹಾಲು ಉತ್ಪಾದನೆಯಲ್ಲಿ (ದನಗಳು, ಮೇಕೆಗಳು, ಕುರಿಗಳು ಅಥವಾ ಇತರ ಹಾಲು ಉತ್ಪಾದಿಸುವ ಪ್ರಾಣಿಗಳಿಂದ) ತೊಡಗಿರುವವರಿಗೆ ಹೈನು ಕೃಷಿಕ ಪದವನ್ನು ಅನ್ವಯಿಸಲಾಗುತ್ತದೆ. ಕೋಳಿ ಸಾಕಣೆಗಾರನೆಂದರೆ ಮಾಂಸ, ಮೊಟ್ಟೆ ಅಥವಾ ಗರಿ ಉತ್ಪಾದನೆಗಾಗಿ (ಸಾಮಾನ್ಯವಾಗಿ ಎಲ್ಲ ಮೂರು) ಕೋಳಿಗಳು, ಟರ್ಕಿಗಳು, ಬಾತುಕೋಳಿಗಳು ಅಥವಾ ಹೆಬ್ಬಾತುಗಳನ್ನು ಸಾಕುವುದರ ಮೇಲೆ ಗಮನಹರಿಸುವವನು.

ರೈತ ದೇಶದ ಬೆನ್ನೆಲುಬು ಎನ್ನುತ್ತೇವೆ. ಕೃಷಿಯೇ ದೇಶದ ಆರ್ಥಿಕತೆಯ ಮೂಲ ಎಲ್ಲರಿಗೂ ತಿಳಿದ ಸಂಗತಿಯೂ ಹೌದು. ಆದರೆ ಬದಲಾದ ಪರಿಸ್ಥಿತಿಯಲ್ಲಿ ರೈತನ ಸ್ಥಿತಿಗತಿ ಹೇಗಿದೆ. ಆಹಾರ ಭದ್ರತೆ ಇಲ್ಲದಿದ್ದರೆ ಏನಾಗುತ್ತದೆ?, ಕೃಷಿ ಜೀವನದ ಉಸಿರು ಏಕೆ ಎಂಬ ಪ್ರಶ್ನೆ ಕಾಡಬೇಕು ಅಲ್ಲದೆ ಚಿಂತನ ಮಂಥನವಾಗಬೇಕಿದೆ. ಇಂಥ ಚಿಂತನ ಮಂಥನ ನಿರಂತರ ಆದರೆ ರೈತ ದಿನಾಚರಣೆಗೆ ಹೆಚ್ಚು ಅರ್ಥ ಬರಲಿದೆ.

ರೈತ ದೇಶದ ಬೆನ್ನೆಲುಬು ಎನ್ನುತ್ತೇವೆ. ಕೃಷಿಯೇ ದೇಶದ ಆರ್ಥಿಕತೆಯ ಮೂಲ ಎಲ್ಲರಿಗೂ ತಿಳಿದ ಸಂಗತಿಯೂ ಹೌದು. ಆದರೆ ಬದಲಾದ ಪರಿಸ್ಥಿತಿಯಲ್ಲಿ ರೈತನ ಸ್ಥಿತಿಗತಿ ಹೇಗಿದೆ. ಆಹಾರ ಭದ್ರತೆ ಇಲ್ಲದಿದ್ದರೆ ಏನಾಗುತ್ತದೆ?, ಕೃಷಿ ಜೀವನದ ಉಸಿರು ಏಕೆ ಎಂಬ ಪ್ರಶ್ನೆ ಕಾಡಬೇಕು ಅಲ್ಲದೆ ಚಿಂತನ ಮಂಥನವಾಗಬೇಕಿದೆ. ಇಂಥ ಚಿಂತನ ಮಂಥನ ನಿರಂತರ ಆದರೆ ರೈತ ದಿನಾಚರಣೆಗೆ ಹೆಚ್ಚು ಅರ್ಥ ಬರಲಿದೆ.

ಭಾರತದ ದೇಶದ 5ನೇ ಪ್ರಧಾನ ಮಂತ್ರಿ ಹಾಗೂ ಕಡಿಮೆ ಅವಧಿಗೆ ಪ್ರಧಾನಿ ಹುದ್ದೆ ಅಲಂಕರಿಸಿದ್ದ ಚೌಧರಿ ಚರಣ್‌ಸಿಂಗ್‌ರ ಜನ್ಮ ದಿನವನ್ನೇ ದೇಶದಲ್ಲಿ ರೈತ ದಿನಾಚರಣೆಯನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

ಚರಣ್‌ಸಿಂಗ್‌ರು ಅಧಿಕಾರಾವಧಿಯಲ್ಲಿ ರೈತರ ಜೀವನ ಸುಧಾರಿಸಲು ಅನೇಕ ನೀತಿಗಳನ್ನು ಪರಿಚಯಿಸಿದರು. ಚೌಧರಿ ಚರಣ್‌ಸಿಂಗ್‌ರು ಒಬ್ಬ ಯಶಸ್ವಿ ಬರಹಗಾರರಾಗಿದ್ದರು. ಅಲ್ಲದೆ ರೈತರು ಮತ್ತು ಅವರ ಸಮಸ್ಯೆಗಳ ಕುರಿತು ಅವರ ಆಲೋಚನೆಗಳನ್ನು ಚಿತ್ರಿಸುವ ಹಲವು ಪುಸ್ತಕಗಳನ್ನು ಬರೆದರು. ಸಮಾಜವಾದಿ ರಾಮಮನೋಹರ್‌ ಲೋಹಿಯಾ ಮತ್ತು ಜಯಪ್ರಕಾಶ್‌ ನಾರಾಯಣ್‌ರ ಒಡನಾಡಿಯಾಗಿ ಗುರುತಿಸಿಕೊಂಡರು. ಚರಣ್‌ಸಿಂಗ್‌ರು ಉತ್ತರ ಪ್ರದೇಶದ ಘಾಜಿಯಾಬಾದ್‌ನವರು. ಎಕಾನಮಿಕ್ಸ್‌ ಸ್ನಾತಕ ಪದವಿ ಹಾಗೂ ಕಾನೂನು ಪದವಿ ಪಡೆದ ಚರಣ್‌ಸಿಂಗ್‌ ತನ್ನ 34ನೇ ವಯಸ್ಸಿಗೆ ಮೊದಲ ಬಾರಿಗೆ 1937ರಲ್ಲಿ ಚಪ್ರೌಲಿ ಪ್ರದೇಶದಿಂದ ಶಾಸಕರಾದರು. 1938ರಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಮಸೂದೆಯನ್ನು ರೈತರ ಹಿತಾಸಕ್ತಿಯಿಂದ ವಿಧಾನಸಭೆಯಲ್ಲಿ ಮಂಡಿಸಿದರು. ಆ ಮೂಲಕ ರೈತ ಪರ ಧೋರಣೆ ಪ್ರದರ್ಶಿಸಿದರು. ಮಧ್ಯವರ್ತಿಗಳು ಹಾಗೂ ವ್ಯಾಪಾರಿಗಳಿಂದ ರೈತರ ಶೋಷಣೆ ತಡೆಯಲು ಈ ಮಸೂದೆ ಅವಕಾಶ ಕಲ್ಪಿಸಿತು. ಮುಂದೆ ಈ ಮಸೂದೆಯನ್ನು ದೇಶದ ಎಲ್ಲ ರಾಜ್ಯಗಳು ಅಳವಡಿಸಿಕೊಂಡು ಅನುಷ್ಠಾನಕ್ಕೆ ತಂದವು. ಪಂಜಾಬ್‌ ರಾಜ್ಯ ಇದನ್ನು ಅನುಷ್ಠಾನಕ್ಕೆ ತಂದ ಮೊದಲ ರಾಜ್ಯವಾಯಿತು.

1952ರಲ್ಲಿ ಉತ್ತರ ಪ್ರದೇಶದ ಕಂದಾಯ ಸಚಿವರಾಗಿದ್ದಾಗ ಜಮೀನ್ದಾರಿ ಪದ್ಧತಿ ನಿಷೇಧಿಸುವ ಮತ್ತು ಭೂ ಸುಧಾರಣೆ ಕಾಯಿದೆ ಜಾರಿಗೆ ತರುವ ಮಹತ್ವದ ನಿಧಾರ ಕೈಗೊಂಡರು. ಮುಂದೆ ಇದು ಸಹ ದೇಶದ ರೈತರ ಬದುಕಿನಲ್ಲಿ ಮಹತ್ವದ ಕ್ರಾಂತಿಕಾರಕ ಬದಲಾವಣೆಗೆ ನಾಂದಿಹಾಡಿತು.

ದೇಶದ ಕೃಷಿ ಬದುಕಿಗೆ 1970ರ ಹಸಿರು ಕ್ರಾಂತಿಯ ನಂತರವೂ ಹೊಸ ಆಲೋಚನೆಗಳ ಮೂಲಕ ಚರಣ್‌ಸಿಂಗ್‌ ರೈತ ಸಮುದಾಯದಲ್ಲಿ ಚಿರಸ್ಥಾಯಿಯಾದರು. ಹಾಗಾಗಿ ಅವರ ಹೆಸರಿನಲ್ಲಿ ರೈತ ದಿನಾಚರಣೆ ಆಚರಣೆಗೆ ಬಂದಿದೆ. ನವ ದೆಹಲಿಯಲ್ಲಿರುವ ಪ್ರಸಿದ್ಧ ‘ಕಿಸಾನ್‌ ಘಾಟ್‌’ನ್ನು ರೈತ ಸಮುದಾಯಕ್ಕೆ ಸಂಬಂಧಿಸಿದ ಕಾರಣ ಚೌಧರಿ ಚರಣ್‌ಸಿಂಗ್‌ ಅವರಿಗೆ ಸಮರ್ಪಿಸಲಾಗಿದೆ. ಭಾರತದಲ್ಲಿನ ಕೃಷಿ ಸಮುದಾಯಗಳಿಗೆ ಪ್ರಿಯವಾದ ಕಾರಣಗಳೊಂದಿಗಿನ ಅವರ ಸಂಬಂಧವು ದೆಹಲಿಯಲ್ಲಿ ಅವರ ಸ್ಮಾರಕವನ್ನು ಕಿಸಾನ್‌ ಘಾಟ್‌ ಎಂದು ಹೆಸರಿಸಿತು. ಡಿ.23 ರಂದು ಅವರ ಜನ್ಮದಿನವನ್ನು ಭಾರತದಲ್ಲಿ ಕಿಸಾನ್‌ ದಿವಸ್‌ ಎಂದು ಆಚರಿಸಲಾಗುತ್ತದೆ.

ಇಷ್ಟೇನಾ ರೈತನ ಬೆಲೆ.ಪ್ರತಿವರ್ಷ ಅವರ ದಿನಾಚರಣೆ ಮಾಡಿ ಮುಗಿಸಿ ಕೈತೊಳೆದುಕೊಂಡು ಬಿಟ್ಟರಾಯಿತಲ್ಲವೇ?ಹಾಗಾದರೆ ಯಾರು ದೊಡ್ಡವರು? ಕೊನೆಯವರೆಗೂ ಉಳಿಯುವ ಪ್ರಶ್ನೆ ಇದು.


ಶ್ರೀ ಇಂಗಳಗಿ ದಾವಲಮಲೀಕ
ಶಿಕ್ಷಕ ಸಾಹಿತಿಗಳು, ಹತ್ತಿಮತ್ತೂರು

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕುಡಿಯುವ ನೀರು ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ರುದ್ರೇಶ ಘಾಳೆ

ಬೆಳಗಾವಿ - ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಡೆಸಿದ ಮುಷ್ಕರದಿಂದಾಗಿ ಬೆಳಗಾವಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಿದ್ದು ವಿಷಾದನೀಯವಾಗಿದೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿ...
- Advertisement -

More Articles Like This

- Advertisement -
close
error: Content is protected !!