ಮೂಡಲಗಿ – ಮಂಡ್ಯದಲ್ಲಿ ನಡೆಯಲಿರುವ ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯಾದ್ಯಂತ ಸಂಚರಿಸುವ ಕನ್ನಡ ಜ್ಯೋತಿ ಹೊತ್ತ ಕನ್ನಡಮ್ಮನ ರಥ ಯಾತ್ರೆಯು ಬೆಳಗಾವಿಯ ಎಲ್ಲ ತಾಲೂಕು ಸ್ಥಳಗಳಿಗೆ ಆಗಮಿಸುತ್ತಿದ್ದು ಅದರಲ್ಲಿ ಮೂಡಲಗಿಯ ಹೆಸರಿಲ್ಲದೇ ಇರುವುದು ಖಂಡನೀಯ.
ಇದು ಯಾರ ನಿರ್ಲಕ್ಷ್ಯದಿಂದ ಹೀಗಾಯಿತು ಎಂಬುದಕ್ಕೆ ತಾಲೂಕಾಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಮೂಡಲಗಿ ತಾಲೂಕಿನ ಪದಾಧಿಕಾರಿಗಳು ಉತ್ತರಿಸಬೇಕು.
ಸಂಪ್ರದಾಯದಂತೆ ಕನ್ನಡ ಜ್ಯೋತಿ ರಥ ಯಾತ್ರೆಯು ಎಲ್ಲಾ ಜಿಲ್ಲೆಗಳ ಎಲ್ಲಾ ತಾಲೂಕು ಸ್ಥಳಗಳಿಗೆ ಭೇಟಿಯಾಗುತ್ತದೆ. ತಾಲೂಕಿನ ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು, ತಾಲೂಕು ಕಸಾಪ ಅಧ್ಯಕ್ಷರು, ಪದಾಧಿಕಾರಿಗಳು, ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು, ತಹಶೀಲ್ದಾರರು, ತಾಲೂಕು ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ, ಪೊಲೀಸ್ ಅಧಿಕಾರಿಗಳು, ಕನ್ನಡ ಪರ ಸಂಘಟನೆಗಳು, ವಿದ್ಯಾ ಸಂಸ್ಥೆಗಳ ಪ್ರತಿನಿಧಿಗಳು, ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಎನ್ ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ರೋಟರಿ, ಲಯನ್ಸ್ ಸಂಸ್ಥೆಗಳು ಎಲ್ಲ ಸೇರಿಕೊಂಡು ಅದ್ದೂರಿಯಾಗಿ ಸ್ವಾಗತಿಸಿ, ವಸತಿ ಇದ್ದರೆ ಸೂಕ್ತ ಭದ್ರತೆ ಕೊಟ್ಟು ಮರುದಿನ ಬೀಳ್ಕೊಡಬೇಕಾಗುತ್ತದೆ.
ಈ ಎಲ್ಲಾ ಸಂಭ್ರಮದಿಂದ ಮೂಡಲಗಿ ತಾಲೂಕು ಹಾಗೂ ತಾಲೂಕಿನ ಕನ್ನಡ ಪರ ಮನಸುಗಳು, ಸಾಹಿತ್ಯಾಸಕ್ತರು ವಂಚಿತರಾದಂತಾಗಿದೆ.
ಜಿಲ್ಲಾ ಅಧಿಕಾರಿಗಳ ಕಚೇರಿಯಿಂದ ಎಲ್ಲಾ ತಾಲೂಕಾಡಳಿತಗಳಿಗೆ ಆದೇಶ ಹೊರಡಿಸುವಾಗ ಮೂಡಲಗಿ ಎಂಬ ತಾಲೂಕು ಸ್ಥಳವೊಂದಿದೆ ಎಂಬುದು ಜಿಲ್ಲಾಧಿಕಾರಿಗಳ ಗಮನಕ್ಕೆ ಹಾಗೂ ಸರ್ಕಾರದ ಗಮನಕ್ಕೆ ಬರಲೇ ಇಲ್ಲವೆ ಎಂಬುದು ಕುತೂಹಲಕಾರಿಯಾಗಿದೆ.
ಮೊದಲೇ ಮೂಡಲಗಿ ಪಟ್ಟಣವು ಹಲವು ರೀತಿಯಲ್ಲಿ ಜಿಲ್ಲಾಡಳಿತ ಹಾಗೂ ಸರ್ಕಾರದಿಂದ ಮಲತಾಯಿ ಧೋರಣೆಗೆ ಒಳಪಟ್ಟು ಯಾವುದೇ ಅಭಿವೃದ್ಧಿ ಕಾಣದೆ ಅಥವಾ ಹಲವು ಇಲಾಖೆಗಳ ಸ್ಥಾಪನೆಯಲ್ಲಿ ವಿಳಂಬ ನೀತಿ ಅನುಭವಿಸಿ ಕೊರಗುತ್ತಿದೆ ಅದೆಲ್ಲದರ ಮೇಲೆ ಸ್ಥಳೀಯ ಶಾಸಕರು ಹಾಗೂ ಜಿಲ್ಲಾಡಳಿತ ಇದೊಂದು ಬರೆಯನ್ನು ನೀಡಿ ತಾಲೂಕಿನ ಸಾಹಿತ್ಯಾಸಕ್ತರ ಹಾಗೂ ಕನ್ನಡಾಭಿಮಾನಿಗಳ ಸಂಭ್ರಮವನ್ನು ಕಸಿದುಕೊಂಡಂತಾಗಿದೆ.
ಮೂಡಲಗಿಯಲ್ಲಿ ತಾಲೂಕಾ ಸಮ್ಮೇಳನ ಸಡಗರದಿಂದ ಜರುಗಿದೆ, ಪ್ರತಿ ತಿಂಗಳೂ ಸಾಹಿತ್ಯಿಕ ಕಾರ್ಯಕ್ರಮಗಳು ಜ್ಞಾನದೀಪ್ತಿ ಪ್ರಕಾಶನದಿಂದ ನಡೆಯುತ್ತಲಿವೆ, ಹಲವು ಸಾಹಿತಿಗಳು ಮೂಡಲಗಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕನ್ನಡ ಸೇವೆಯಲ್ಲಿ ತೊಡಗಿದ್ದಾರೆ. ನವರಾತ್ರಿ ಉತ್ಸವ ಬೃಹತ್ ಪ್ರಮಾಣದಲ್ಲಿ ನೆರವೇರುತ್ತದೆ, ಇಷ್ಟರಲ್ಲಿಯೇ ಬೃಹತ್ ಕೃಷಿ ಮೇಳ ಹಾಗೂ ಅದರಡಿಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ, ಗಣೇಶ ಹಬ್ಬದಲ್ಲಿ ಪ್ರಥಮ ಬಾರಿಗೆ ಮೂಡಲಗಿಯಲ್ಲಿ ‘ಮೂಡಲಗಿ ಮಹಾರಾಜ’ ಶ್ರೀ ಗಣೇಶನ ಬೃಹತ್ ಮೂರ್ತಿಯನ್ನು ೨೧ ದಿನಗಳ ಕಾಲ ಪೂಜಿಸಿ ಬೀಳ್ಕೊಡುವಾಗ ಶಾಸಕರಾದಿಯಾಗಿ ಇಡೀ ಊರ ಜನರು ಜಾತಿ ಭೇದವಿಲ್ಲದೆ ಗಣೇಶ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಪಟ್ಟರು. ಆದರೆ ಕನ್ನಡಾಂಬೆಯ ಸೇವೆಯ ಈ ಕನ್ನಡ ರಥದ ಸೇವೆಯನ್ನೇಕೆ ಮೂಡಲಗಿಯ ಜನರಿಗೆ ತಪ್ಪಿಸಲಾಯಿತು ?
ಇದು ನಿಜವಾಗಲೂ ಖಂಡನೀಯ. ಯಾಕೆಂದರೆ ಯಾವತ್ತೂ ಸಾಹಿತ್ಯಿಕ ಚಟುವಟಿಕೆಯಲ್ಲಿರುವ ಮೂಡಲಗಿಯಂಥ ಸ್ಥಳಕ್ಕೆ ಕನ್ನಡ ಜ್ಯೋತಿ ರಥ ಯಾತ್ರೆ ಬರದೇ ಇರುವುದನ್ನು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಪದಾಧಿಕಾರಿಗಳು, ಮೂಡಲಗಿ ತಾಲೂಕಿನ ಬರಹಗಾರರು, ಕಲಾವಿದರು, ಸಾಂಸ್ಕೃತಿಕ ಪ್ರತಿನಿಧಿಗಳು, ಕನ್ನಡಾಭಿಮಾನಿಗಳು ತೀವ್ರತರವಾಗಿ ಪ್ರತಿಭಟಿಸಬೇಕಾಗುತ್ತದೆ. ಅದು ಮೂಡಲಗಿ ಕನ್ನಡಿಗರ ಕರ್ತವ್ಯ ಕೂಡಾ.
ಉಮೇಶ ಬೆಳಕೂಡ, ಮೂಡಲಗಿ 9448863309