ಮೈಸೂರು-‘ಬಹಳ ಸಂಕೀರ್ಣ ಮನಸ್ಥಿತಿಯಲ್ಲಿರುವ ಇಂದಿನ ಆಧುನಿಕ ಮಹಿಳೆಯ ವಿಕ್ಷಿಪ್ತ ಚಿಂತನೆಗಳಿಗೆ ಬ್ರೇಕ್ ಹಾಕಿ ಸಂತೃಪ ಜೀವನ ನಡೆಸಲು ಆಧ್ಯಾತ್ಮಿಕ ಜೀವನ ಶೈಲಿ ಮತ್ತು ಧ್ಯಾನವು ಸಹಕಾರಿಯಾಗುತ್ತದೆ ‘ಎಂದು ಶಿರಸಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕರು ಹಾಗೂ ಖ್ಯಾತ ಉಪನ್ಯಾಸಕರಾದ ರಾಜಾಯೋಗಿನಿ ಬ್ರಹ್ಮಾಕುಮಾರಿ ವೀಣಾಜಿ ತಿಳಿಸಿದರು.
ಅವರು ಮೈಸೂರಿನ ಜ್ಞಾನ ಸರೋವರ ರಿಟ್ರೀಟ್ ಸೆಂಟರಿನಲ್ಲಿ ಆಯೋಜಿಸಲಾಗಿದ್ದ ಜ್ಞಾನದೇವಿ ಜಗದಂಬಾ ಸರಸ್ವತಿಯವರ 59 ನೇ ಪುಣ್ಯ ಸ್ಮರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾಭ್ಯಾಸವು ವ್ಯಕ್ತಿ ವಿಕಾಸಕ್ಕೆ ಉಪಯೋಗಿಯಾದರೂ ಅನ್ಯರ ಮನಸ್ಸನ್ನು ಅರ್ಥ ಮಾಡಿಕೊಂಡು ಸೂಕ್ತವಾಗಿ ಸ್ಪಂದಿಸಲು ರಾಜಯೋಗ ಶಿಕ್ಷಣದ ಅವಶ್ಯಕತೆ ಇದೆ. ಹೀಗಾಗಿ ಮನಸ್ಸನ್ನು ಜಾಗೃತಗೊಳಿಸಿದರೆ ಅಂತಹ ಮಹಿಳೆ ಮನೆಗೆ ಬೆಳಕಾಗಬಲ್ಲಳು, ಎಂದು ವೀಣಾಜೀ ಅಭಿಪ್ರಾಯಪಟ್ಟರು.
ಜಗದಂಬಾ ಸರಸ್ವತಿ ಮಮ್ಮಾರವರು 45 ನೇ ವಯಸ್ಸಿಗೆ ಅವ್ಯಕ್ತರಾದರೂ ತಮ್ಮ ದೃಢತೆ, ಏಕಾಗ್ರತೆ, ಗಂಭೀರತೆ, ಹಸನ್ಮುಖತೆ ಮುಂತಾದ ಶ್ರೇಷ್ಠ ಸದ್ಗುಣಗಳಿಂದ ಅಧ್ಯಾತ್ಮ ಕ್ಷೇತ್ರದಲ್ಲಿ ಎತ್ತರದ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಭಾರತದ ಸಾವಿರಾರು ಕುಟುಂಬಗಳಿಗೆ ದಾರಿದೀವಿಗೆಯಾದರು ಎಂದು ರಾಜಯೋಗಿ ಬ್ರಹ್ಮಾಕುಮಾರ ರಂಗನಾಥ ಶಾಸ್ತ್ರೀಜೀ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮೈಸೂರು ಈಶ್ವರೀಯ ವಿಶ್ವ ವಿದ್ಯಾಲಯಗಳ ಉಪ ವಿಭಾಗದ ಮುಖ್ಯ ಸಂಚಾಲಕರಾದ ರಾಜ ಯೋಗಿನಿ ಬ್ರಹ್ಮಾಕುಮಾರಿ ಲಕ್ಷ್ಮೀಜಿ, ಆಧ್ಯಾತ್ಮಿಕ ಪಥದಲ್ಲಿ ಜಗದಂಬಾ ಸರಸ್ವತೀಜೀ, ಅವರಂತಹ ಅಪರೂಪದ ಜ್ಞಾನ ನಕ್ಷತ್ರಗಳು ತಮ್ಮ ಅದ್ಭುತ ಜೀವನದಿಂದ ನಮ್ಮೆಲ್ಲರಿಗೂ ಪ್ರೇರಕ ಶಕ್ತಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮೌಂಟ್ ಅಬುವಿನ ರಾಜಯೋಗಿ ಬ್ರಹ್ಮಾಕುಮಾರ ಶಕ್ತಿ ರಾಜ್ ಸಿಂಗ್ ಠಾಕೂರ್ ರಾಜ ಯೋಗಿ ಬ್ರಹ್ಮಾ ಕುಮಾರ್ ಪ್ರಾಣೇಶ್ ಜೀ ಬಿಕೆ ರಾಮಚಂದ್ರ, ರಾಜಾಯೋಗಿನಿ ಬ್ರಹ್ಮಾಕುಮಾರಿ ಶಾರದಾಜೀ ಸೇರಿದಂತೆ ಮಂಡ್ಯ ಮೈಸೂರು ಹಾಸನ ಕೊಡಗು ಚಾಮರಾಜನಗರ ಜಿಲ್ಲೆಗಳ 200ಕ್ಕೂ ಹೆಚ್ಚು ರಾಜಯೋಗ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು