ಸಿಂದಗಿ; ಮಹಿಳೆಯರು ಮುಟ್ಟಾದ ದಿನಗಳಲ್ಲಿ ತಮ್ಮ ಜನನಾಂಗ ಸೇರಿ ಇಡೀ ದೇಹದ ನೈರ್ಮಲ್ಯ ಕಾಪಾಡಿಕೊಳ್ಳುವುದು ತುಂಬ ಮುಖ್ಯ ಎಂದು ಜಿಲ್ಲಾ ಸಂಯೋಜಕಿ ಸಾವಿತ್ರಿ ಹಿಪ್ಪರಗಿ ಸಲಹೆ ನೀಡಿದರು.
ತಾಲೂಕಿನ ಗುಬ್ಬೇವಾಡ ಗ್ರಾಮದ ಮೂರಾರ್ಜಿ ವಸತಿ ಶಾಲೆಯಲ್ಲಿ ಉಪನ್ಯಾಸ ನೀಡಿ, ಅದು ಎಲ್ಲ ಸ್ತ್ರೀಯರಿಗೂ ಸಾಧ್ಯವಾಗುವುದಿಲ್ಲ. ಅದೆಷ್ಟೋ ಮಂದಿಗೆ ಮನೆಯಿರುವುದಿಲ್ಲ. ಇದ್ದರೂ ಸಹ ಶೌಚಗೃಹ, ಸ್ವಚ್ಛ ನೀರು ಲಭ್ಯ ಇರುವುದಿಲ್ಲ. ಇನ್ನು ಮುಟ್ಟಿನ ಬಗ್ಗೆ ಮಾತಾಡಲೂ ಮುಜುಗರ ಪಡುವ ಪರಿಸ್ಥಿತಿ ಈಗಲೂ ಇದೆ.
ಸ್ಯಾನಿಟರಿ ಪ್ಯಾಡ್ಗಳನ್ನು ಕೊಳ್ಳಲು ಅನೇಕರಿಗೆ ಹಣ ಇರುವುದಿಲ್ಲ. ಇನ್ನು ಕಾಟನ್ ಬಟ್ಟೆ ಹಾಕಿದರೂ ಅದನ್ನು ಶುದ್ಧವಾಗಿ ತೊಳೆಯಲು, ಬಿಸಿಲಿಲ್ಲಿ ಒಣಗಿಸಲು ಸಾಧ್ಯವಾಗುವುದಿಲ್ಲ. ಇಂದಿಗೂ ಸಹ ಮಹಿಳೆಯರು ಆ ದಿನಗಳಲ್ಲಿ ಬಳಸುವ ಕಾಟನ್ ಬಟ್ಟೆಯನ್ನು ಹೊರಗೆ ಬಿಸಿಲಲ್ಲಿ ಒಣಗಿಸಲು ನಾಚಿಕೆ ಪಟ್ಟುಕೊಳ್ಳುತ್ತಾರೆ.
ಆದರೆ ಈ ಎಲ್ಲ ಮುಜುಗರದಿಂದ ಮಹಿಳೆಯರು ಹೊರಗೆ ಬರಬೇಕು. ಇದು ನೈಸರ್ಗಿಕ ಕ್ರಿಯೆ ಎಂಬುದನ್ನು ಪ್ರತಿ ಮಹಿಳೆ-ಪುರುಷ ಸಮಾಜ ಅರ್ಥ ಮಾಡಿಕೊಳ್ಳಬೇಕು. ಋತುಸ್ರಾವದ ದಿನಗಳಲ್ಲಿ ಆಗುವ ದೈಹಿಕ ಆರೋಗ್ಯದ ಏರುಪೇರು, ಮಾನಸಿಕ ಸ್ಥಿತಿಯ ಏರುಪೇರನ್ನು ಸಂಭಾಳಿಸುವುದು ತೀರ ಸುಲಭದ ಮಾತಲ್ಲ.
ಆದರೆ ನೆನಪಿರಲಿ ಮುಟ್ಟಿನ ದಿನಗಳ ಅನೈರ್ಮಲ್ಯ ಅದೆಷ್ಟೋ ಕಾಯಿಲೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ಮುಜುಗರ ಬೇಡ. ಆ ದಿನಗಳಲ್ಲಿ ಮಹಿಳೆಯರು ತಮ್ಮ ಅವಶ್ಯಕತೆಯನ್ನು ನಾಚಿಕೆ ಬಿಟ್ಟು ಹೇಳಿಕೊಳ್ಳಬೇಕು. ಮಹಿಳೆಯರ ಋತುಸ್ರಾವದ ದಿನಗಳ ಜಾಗೃತಿ ವಹಿಸಬೇಕು ಎಂದರು.
ಶಾಲೆಯ ನಿಲಯ ಪಾಲಕ ಪಿ.ಪಿ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಆಪ್ತ ಸಮಾಲೋಚಕ ಶ್ರೀನಾಥ ಹಿಟ್ಟಿನ, ಸಂತೋಷ ಕುಂಬಾರ, ಸಾಯಬಣ್ಣ ಗಣಜಲಿ, ಬಿ.ಎಮ್. ಕೊಪ್ಪದ, ಶ್ರೀಮತಿ ಎ.ಎಸ್.ಡೊಮನಾಳ, ಆರೋಗ್ಯ ನೀರಿಕ್ಷಣಾಧಿಕಾರಿ ಭೀಮಾಶಂಕರ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಇದ್ದರು.
ಆಪ್ತ ಸಮಾಲೋಚಕ ಶ್ರೀನಾಥ ಹಿಟ್ಟಿನ ಸ್ವಾಗತಿಸಿದರು. ಸಂತೋಷ ಕುಂಬಾರ ನಿರೂಪಿಸಿ ವಂದಿಸಿದರು.