spot_img
spot_img

ವಚನ ಸಾರ: ಚನ್ನಬಸವಣ್ಣನವರ ವಚನ

Must Read

spot_img
- Advertisement -

ಚನ್ನಬಸವಣ್ಣನವರ ವಚನ

ಆರಂಬವ ಮಾಡಿ ಸಂಸಾರಸ್ಥಿತಿ

ಕಳೆಯದಿದ್ದರೆ ಆ ಆರಂಬವೆ ಕೇಡು.

ವ್ಯವಹಾರವ ಮಾಡಿ ಸಂಸಾರಸ್ಥಿತಿ

- Advertisement -

ಕಳೆಯದಿದ್ದರೆ ಆ ವ್ಯವಹಾರವೆ ಕೇಡು.

ಓಲಗವ ಮಾಡಿ ಸಂಸಾರಸ್ಥಿತಿ

ಕಳೆಯದಿದ್ದರೆ ಆ ಓಲಗವೆ ಕೇಡು.

- Advertisement -

ಭಕ್ತಿಯ ಮಾಡಿ ಜನನ ಮರಣ

ವಿರಹಿತನಾಗದಿದ್ದರೆ, ಆ ಭಕ್ತಿಯ ಕೇಡು.

ಕೂಡಲಚೆನ್ನಸಂಗಮದೇವಾ.

ಕೃಷಿಕನಾಗಿ ಕೃಷಿ ಕಾಯಕವನ್ನು ಮಾಡಿಯೂ ಸಾಂಸಾರಿಕವಾದ ಕಷ್ಟಕಾರ್ಪಣ್ಯಗಳನ್ನು ನೀಗಿಸಿಕೊಳ್ಳದಿದ್ದರೆ ಅಂತ ವ್ಯವಸಾಯವೇ ಬೇಡ.  ವ್ಯಾಪಾರಸ್ಥನಾಗಿ ವ್ಯವಹಾರ ಮಾರ್ಗವನ್ನು ಅನುಸರಿಸಿಯೂ ಸಾಂಸಾರಿಕ  ತೊಂದರೆ – ತಾಪತ್ರಗಳನ್ನು ನೀಗಿಕೊಳ್ಳದಿದ್ದರೆ ಅಂತ ವ್ಯಾಪಾರವೇ ಬೇಡ.   ನೌಕರಿ ಚಾಕರಿ ಮಾಡಿಕೊಂಡು ಬಂದ ವೇತನದಲ್ಲಿ ಚೆನ್ನಾಗಿ ಜೀವನೋಪಾಯ ಮಾಡಿದರೂ ಸಂಸಾರದಲ್ಲಿ ಬರಬಹುದಾದ ಅಡ್ಡಿ, ಅಡಚಣೆಗಳನ್ನು ನಿವಾರಿಸಲಾಗದಿದ್ದರೆ ಹೇಗೆ?  ಅವನಿಗೆ ಆ ಕೆಲಸವೊಂದು  ಕೇಡು.   ಹೀಗೆ ಕೃಷಿ, ವ್ಯವಹಾರ, ಉದ್ಯೋಗ ಮಾಡಿಯೂ ಕೂಡ ಸಂಸಾರವನ್ನು ಕಷ್ಟ – ನಷ್ಟ, ತೊಂದರೆ –  ತಾಪತ್ರಯಗಳಿಂದ ಮುಕ್ತಗೊಳಿಸಲು ಸಾಧ್ಯವಾಗದಿದ್ದರೆ ಆ ಎಲ್ಲ ಕರ್ಮಗಳನ್ನು ಏಕೆ ಮಾಡಬೇಕು ಎಂದು  ಚನ್ನಬಸವಣ್ಣನವರು ಪ್ರಶ್ನಿಸುತ್ತಾರೆ.  ಅದೇ ರೀತಿ ಭಕ್ತಿಯನ್ನು ಮಾಡಿಯೂ ಜನನ – ಮರಣಗಳ ಚಕ್ರದಲ್ಲಿ ಸಿಲುಕದೆ ಪಾರಾಗದಿದ್ದರೆ ಆ ಭಕ್ತಿಗೆ ಯಾವುದೇ ಬೆಲೆ ಇಲ್ಲವೆಂದು ಹೇಳುತ್ತಾರೆ.

      ಲೌಕಿಕ ಜಗತ್ತಿನಲ್ಲಿ ಪ್ರತಿಯೊಬ್ಬ ಮನುಷ್ಯನೂ ಸಂಸಾರ ನಿರ್ವಹಣೆಯ ಜೀವನೋಪಾಯಕ್ಕಾಗಿ  ವ್ಯವಸಾಯ, ವ್ಯವಹಾರ, ಉದ್ಯೋಗ ಹೀಗೆ ಒಂದಿಲ್ಲೊಂದು ಕೆಲಸದಲ್ಲಿ ತೊಡಗಿಕೊಳ್ಳುವುದು ಅನಿವಾರ್ಯ.  ತಾನು ಮಾಡುವ ಯಾವುದೇ ಕೆಲಸದಿಂದ ತನ್ನ ಸಂಸಾರದ ನಿರ್ವಹಣೆಯನ್ನು ಚೆನ್ನಾಗಿ ಮಾಡಿಕೊಳ್ಳಬೇಕು. ಅದು ಸಾಧ್ಯವಾಗದಿದ್ದರೆ ಅಂತಹ ಉದ್ಯೋಗವನ್ನು  ಮಾಡದಿರುವುದೇ ಲೇಸು. ಇದು ಲೌಕಿಕ ಜಗತ್ತಿನ ಅನುಭವದ ಮಾತು.  ಆದರೆ ಭಕ್ತಿಯೆಂಬುದು ಲೌಕಿಕದ ಕರ್ಮವಲ್ಲ.  ಅದು ಅಂತರಂಗ ಶುದ್ಧಿಗಾಗಿ ಹಾಗೂ ಜೀವನದ ಮುಕ್ತಿಗಾಗಿ ಮಾಡುವ ಸಾಧನೆಯ ಮಾರ್ಗ.  ಲೌಕಿಕದ ಕರ್ಮಗಳ ಯಶಸ್ವಿಗಾಗಿ ಹತ್ತು ಹಲವು ಸಾಧನ ಸಲಕರಣೆಗಳು ಉಂಟು, ಸಹಾಯಕ್ಕಾಗಿ ಕೈಜೋಡಿಸುವವರೂ ಉಂಟು.  ಆದರೆ ಜೀವನ್ಮುಕ್ತಿಗಾಗಿ ನಡೆಸುವ ಸಾಧನೆಯಮಾರ್ಗ ಸಂಪೂರ್ಣವಾಗಿ ಸಾಧಕನ ಮೇಲೆಯೇ ಅವಲಂಬಿತವಾಗಿರುತ್ತದೆ.  ಈ ಮಾರ್ಗದಲ್ಲಿ ಅಡ್ಡದಾರಿಗಳಿಲ್ಲ (Short cut ), ಕೈ ಹಿಡಿದು ಮುನ್ನಡೆಸುವವರೂ ಇರುವುದಿಲ್ಲ . ಈ ಮಾರ್ಗದ ಪಥಿಕ ಯಾವಾಗಲೂ ಏಕಾಂಗಿ. ಕಷ್ಟಗಳ ಪರಂಪರೆ ಸಹಜ.  

 ಭಕ್ತಿಯೆಂಬುದ ಮಾಡಬಾರದು:

ಗರಗಸದಂತೆ ಹೋಗುತ್ತ ಕೊಯ್ವುದು, 

ಬರುತ್ತ ಕೊಯ್ವುದು!

ಘಟಸರ್ಪನಲ್ಲಿ ಕೈದುಡುಕಿದರೆ ಹಿಡಿವುದ ಮಾಣ್ಬುದೆ, ಕೂಡಲಸಂಗಮದೇವಾ!

  ಎಂದು ಬಸವಣ್ಣನವರು ಹೇಳಿಲ್ಲವೇ !  ಇವೆಲ್ಲವುಗಳನ್ನು ಮೀರಿ ಮುನ್ನಡೆಯಬೇಕು.  ಭವಾವಳಿಯ ಚಕ್ರದಿಂದ ಮುಕ್ತನಾಗಿ ಪರಮಾತ್ಮನ ಸನ್ನಿಧಿಯಲ್ಲಿ ಸೇರಬೇಕು. ಇದು ಸಾಧ್ಯವಾಗದಿದ್ದರೆ ಆ ಭಕ್ತಿಯೇ ಕೇಡು, ನಿಷ್ಪಲವಾಗುತ್ತದೆ ಎಂದು ಚನ್ನಬಸವಣ್ಣನವರು ಹೇಳುತ್ತಾರೆ. 

 ಜೀವನೋಪಾಯಕ್ಕಾಗಿ ಲೌಕಿಕದಲ್ಲಿ ನಾವು ಮಾಡುವ ಕರ್ಮಗಳಿಗಿಂತ ಅಂತರಂಗದಲ್ಲಿ ಮಾಡುವ ಭಕ್ತಿ ಸಾಧನೆಯ ಕರ್ಮ ವಿಭಿನ್ನವಾದದ್ದು.  ಅಂತರಂಗಿಕವಾಗಿಯೂ ಸಾಧನ ಮಾರ್ಗದ ಕೃಷಿ ಮಾಡುತ್ತಾ, ಮನ ಬುದ್ಧಿಗಳ ಜೊತೆ  ವ್ಯವಹರಿಸುತ್ತಾ, ಕಿಂಕರನಾಗಿ ಸೇವೆ ಗೈಯ್ಯುತ್ತ, ಭಕ್ತಿಯ ಮಾರ್ಗದಲ್ಲಿ ನಡೆದು  ಜನನ ಮರಣಗಳ ಚಕ್ರದಿಂದ ಬಿಡುಗಡೆಗೊಂಡು ಪರಮ ಪದವಿಯನ್ನು ಪಡೆದುಕೊಳ್ಳುವ ಆಶಯವನ್ನು ಚನ್ನಬಸವಣ್ಣನವರು ಈ ವಚನದಲ್ಲಿ ವ್ಯಕ್ತಪಡಿಸಿದ್ದಾರೆ. ಇದನ್ನೇ ಬಸವಣ್ಣನವರು ಹೀಗೆ ಹೇಳಿದ್ದಾರೆ.

ನಾನು ಆರಂಭವ ಮಾಡುವೆನಯ್ಯಾ ಗುರುಪೂಜೆಗೆಂದು,

ನಾನು ಬೆವಹಾರವ ಮಾಡುವೆನಯ್ಯಾ, ಲಿಂಗಾರ್ಚನೆಗೆಂದು,

ನಾನು ಪರಸೇವೆಯ ಮಾಡುವೆನಯ್ಯಾ, ಜಂಗಮದಾಸೋಹಕ್ಕೆಂದು;

ನಾನಾವಾವ ಕರ್ಮಂಗಳ ಮಾಡಿದರೆಯೂ

ಆ ಕರ್ಮಫಲಭೋಗವ ನೀ ಕೊಡುವೆ ಎಂಬುದ ನಾನು ಬಲ್ಲೆನು,

ನೀ ಕೊಟ್ಟ ದ್ರವ್ಯವ ನಿಮಗಲ್ಲದೆ 

ಮತ್ತೊಂದ ಕ್ರೀಯ ಮಾಡೆನು;

ನಿಮ್ಮ ಸೊಮ್ಮಿಂಗೆ ಸಲಿಸುವೆನು, 

ನಿಮ್ಮಾಣೆ ಕೂಡಲಸಂಗಮದೇವಾ.


ಪ್ರೊ. ಜಿ.ಎ ತಿಗಡಿ.

 ಸವದತ್ತಿ

- Advertisement -
- Advertisement -

Latest News

ದೂರದೃಷ್ಟಿಯ ನಾಯಕ ಎಸ್ ಎಮ್ ಕೃಷ್ಣ

ಸಿಂದಗಿ: ಸರಕಾರ ಆರ್ಥಿಕ ಅವಲಂಬನೆ ಹೆಚ್ಚಾಗಿರೋಕೆ ಮಾಜಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣಾ ಅವರ ದೂರ ದೃಷ್ಟಿಯೇ ಕಾರಣ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group