ಬೈಲಹೊಂಗಲ: ಶರಣ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಬಸವ ಸಮಿತಿಯ ಕಾರ್ಯ ಶ್ಲಾಘನೀಯ ಎಂದು ಪಟ್ಟಣದ ಮೂರುಸಾವಿರಮಠದ ಪೂಜ್ಯಶ್ರೀ ಪ್ರಭುನೀಲಕಂಠ ಮಹಾಸ್ವಾಮಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಶ್ವಬಸವ ಜಯಂತಿಯ ನಿಮಿತ್ತ ಬೆಂಗಳೂರಿನ ಕೇಂದ್ರ ಬಸವ ಸಮಿತಿ ಏರ್ಪಡಿಸಿದ್ದ ರಾಜ್ಯಮಟ್ಟದ ಪ್ರಬಂಧ ಹಾಗೂ ಕವನ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಅಭಿನಂದನಾ ಸಮಾರಂಭದಲ್ಲಿ ಪ್ರಮಾಣಪತ್ರ ವಿತರಣೆ ಮಾಡಿ ಅವರು ಮಾತನಾಡಿದರು.
1964 ರಲ್ಲಿ ಸ್ಥಾಪನೆಯಾಗಿ ಅಂದಿನಿಂದ ಇಲ್ಲಿಯವರೆಗೆ ಬಸವ ತತ್ವ ಪ್ರಸಾರ ಮಾಡುತ್ತ ಮುನ್ನಡೆಯುತ್ತಿರುವ ಸಮಿತಿಯ ಸಾಮಾಜಿಕ ಜವಾಬ್ದಾರಿ ಕಳಕಳಿ ಪ್ರಶಂಸನೀಯ ಎಂದು ಅವರು ಅಭಿಪ್ರಾಯಪಟ್ಟರು.
ಅನೇಕ ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳು, ಪುಸ್ತಕ ಪ್ರಕಟಣೆ, ಉಪನ್ಯಾಸಗಳು ಮುಂತಾದ ವಿಭಿನ್ನ ಚಟುವಟಿಕೆಗಳನ್ನು ಮಾಡುವುದರ ಮೂಲಕ ಜನರ ಸಾಂಸ್ಕೃತಿಕ ಗುಣಮಟ್ಟವನ್ನು ಹೆಚ್ಚಿಸುತ್ತಿರುವುದು ಅನುಕರಣೀಯ ಎಂದು ಹರ್ಷ ವ್ಯಕ್ತಪಡಿಸಿದರು.
ಕೇಂದ್ರ ಬಸವ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರಾದ ಮೋಹನ ಬಸನಗೌಡ ಪಾಟೀಲ ಮಾತನಾಡಿ 450 ಕವನಗಳು, 350 ಪ್ರಬಂಧಗಳು ಸ್ವೀಕೃತವಾಗಿದ್ದು ಸ್ಪರ್ಧೆಯ ವಿಶೇಷವಾಗಿದೆ ಎಂದರು.
ಅತ್ಯಂತ ಪಾರದರ್ಶಕವಾಗಿ ಮೌಲ್ಯಮಾಪನ ಮಾಡಿ ಅತ್ಯುತ್ತಮ ಕವನ ಹಾಗೂ ಪ್ರಬಂಧಗಳಿಗೆ ಬಹುಮಾನ ಘೋಷಣೆ ಮಾಡಿದ್ದು ಬಸವ ಸಮಿತಿಯ ಹೆಗ್ಗಳಿಕೆ ಎಂದು ಅವರು ಹೇಳಿದರು.
ನೇಸರಗಿ ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ. ಎಫ್.ಡಿ. ಗಡ್ಡಿಗೌಡರ ಮಾತನಾಡಿ, ಸಮಿತಿಯಿಂದ ಏರ್ಪಡಿಸಿದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಜ್ಞಾನವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಸಹಕಾರಿಯಾಯಿತು ಎಂದರು. ಪ್ರಬಂಧಕ್ಕಾಗಿ ಉತ್ತಮ ವಿಷಯಗಳನ್ನು ನೀಡಲಾಗಿತ್ತು ಅದರಲ್ಲಿ ವಚನ ಚಳವಳಿ-ಸಾಂಸ್ಕೃತಿಕ ಮುಖಾಮುಖಿ ಎಂಬ ವಿಷಯದ ಕುರಿತು ಸಾಕಷ್ಟು ಅಧ್ಯಯನ ಮಾಡಿದ್ದು ಖುಷಿ ತಂದಿದೆ ಎಂದು ಅವರು ಹೇಳಿದರು.
ಬೈಲಹೊಂಗಲ ಕಸಾಪ ಅಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಮಾತನಾಡಿ ಭಾರತೀಯ ಭಕ್ತಿ ಪರಂಪರೆಯಲ್ಲಿ ಭಕ್ತಿಭಂಡಾರಿ ಬಸವಣ್ಣ ವಿಷಯದ ಬಗ್ಗೆ ಸಾಕಷ್ಟು ಅರಿವು ಮೂಡಿತಲ್ಲದೇ ಹೊಸ ಹೊಸ ವಿಚಾರಗಳು ತಿಳಿದವು ಎಂದು ಹೇಳಿದರು.
ಚಿಕ್ಕೊಪ್ಪ ಸರಕಾರಿ ಪ್ರೌಢಶಾಲೆಯ ಶಿಕ್ಷಕರಾದ ಡಾ. ಮಲ್ಲಿಕಾರ್ಜುನ ಛಬ್ಬಿ ಮಾತನಾಡಿ ಸ್ಪರ್ಧೆಯಲ್ಲಿ ಬಹುಮಾನ ಮುಖ್ಯವಲ್ಲ ಭಾಗವಹಿಸುವಿಕೆ ಮುಖ್ಯವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು. ತಾಲೂಕು ಮಾರ್ಕೆಟಿಂಗ್ ಸೊಸೈಟಿಯಲ್ಲಿ ಸೇವೆ ಸಲ್ಲಿಸುತ್ತಿರುವ ದಯಾನಂದ ಆಲದಕಟ್ಟಿ ಮಾತನಾಡಿ ಸಾಕಷ್ಟು ಅಧ್ಯಯನ ಮಾಡಲು ಒಂದು ಅವಕಾಶ ದೊರೆಯಿತು ಎಂದರು.
ಆಕ್ಸಫರ್ಡ ಪ್ರೌಢಶಾಲೆಯ ವಿದ್ಯಾರ್ಥಿನಿ ನೇಹಾ ಬಡಿಗೇರ ಮಾತನಾಡಿ, ಪಠ್ಯಪುಸ್ತಕವನ್ನು ಹೊರತುಪಡಿಸಿ ಬೇರೆ ಪುಸ್ತಕಗಳನ್ನು ಓದಿ ಪ್ರಬಂಧ ಬರೆದು ಕಳಿಸಿದ್ದು ಮನಸ್ಸಿಗೆ ಖುಷಿ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು. ನಯಾನಗರ ಪ್ರೌಢಶಾಲೆಯ ಶಿಕ್ಷಕರಾದ ಬಸವರಾಜ ಪತ್ತಾರ ಮಾತನಾಡಿ, ಬಸವ ಸಮಿತಿಯ ಏರ್ಪಡಿಸುವ ಎಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸುವುದೇ ಒಂದು ತೃಪ್ತಿ ಎಂದು ಹೇಳಿದರು. ಉದಯೋನ್ಮುಖ ಕವಿ ಬಾಬು ಕೋಲಕಾರ ಮಾತನಾಡುತ್ತ ಬಸವಾದಿ ಶರಣರ ಜೀವನ ತತ್ವಗಳನ್ನು ಮತ್ತೊಮ್ಮೆ ಮೆಲುಕು ಹಾಕಿದ್ದು ಮನಸ್ಸಿಗೆ ಮುದ ನೀಡಿತು ಎಂದರು.
ಕವಯಿತ್ರಿ ಸರಸ್ವತಿ ಬನ್ನಿಗಿಡದ ಸಾಹಿತ್ಯಿಕ ಕಾರ್ಯಕ್ರಮಗಳು, ವ್ಯಕ್ತಿತ್ವದ ವಿಕಸನಕ್ಕೆ ಕಾರಣವಾಗುವ ಸ್ಪರ್ಧೆಗಳು ಬಹಳ ಇಷ್ಟವಾಗುತ್ತವೆ ಎಂದು ಅಭಿಪ್ರಾಯಪಟ್ಟರು. ವಕ್ಕುಂದ ಗ್ರಾಮದ ವಿದ್ಯಾರ್ಥಿನಿ ಚನ್ನಮ್ಮ ಪಾಟೀಲ ನನ್ನ ಗುರುಗಳ ಪ್ರೋತ್ಸಾಹ ಹಾಗೂ ಸಹಕಾರದಿಂದ ಕವನ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಾಯಿತು ಎಂದು ಅನಿಸಿಕೆ ವ್ಯಕ್ತಪಡಿಸಿದರು. ಕವಿಗಳಾದ ರಮೇಶ ಇಂಗಳಗಿ ಮಾತನಾಡುತ್ತ 12 ನೆಯ ಶತಮಾನದ ಶರಣ ಸಂಸ್ಕೃತಿ, ವಚನಕಾರರ ತತ್ವ, ಸಂದೇಶಗಳನ್ನು ಅರಿತು ರಚಿಸಿದ ಕವನ ಆತ್ಮತೃಪ್ತಿ ನೀಡಿದೆ ಎಂದರು. ಉದಯೋನ್ಮುಖ ಬರಹಗಾರ್ತಿ ಸುಮಂಗಲಾ ಹತ್ತರಕಿ ಮಾತನಾಡಿ ಅರಿವು ಆಚಾರ ಅನುಭಾವ ಎಂಬ ವಿಷಯದ ಕುರಿತು ಪ್ರಬಂಧ ಬರೆಯುವಾಗ ಬದುಕಿನ ಎಲ್ಲ ಸಮಸ್ಯೆ, ಸವಾಲುಗಳಿಗೆ ವಚನಗಳಲ್ಲಿ ಉತ್ತರ ಸಿಗುತ್ತದೆ ಎಂಬ ಸತ್ಯ ಅರಿವಾಯಿತು ಎಂದು ಅಭಿಪ್ರಾಯಪಟ್ಟರು ಕವಯಿತ್ರಿ ಸವಿತಾ ಪಾಟೀಲ ತನ್ನ ಕವನದ ಕೆಲವು ಸಾಲುಗಳನ್ನು ಹೇಳಿ ಸ್ಪರ್ಧೆಯಿಂದ ಹೊಸದನ್ನು ಕಲಿಯುವ ಅವಕಾಶ ದೊರೆತಂತಾಯಿತು ಎಂದು ಹೇಳಿದರು. ಶಿವನಗೌಡ ಪಾಟೀಲ ಸ್ವಾಗತಿಸಿ ವಂದಿಸಿದರು.