ಬೀದರ – ಜಿಲ್ಲೆಯ ಹುಮನಾಬಾದ ತಾಲೂಕು ಹಳ್ಳಿಖೇಡ ಬಿ ಗ್ರಾಮದ ಪುರಸಭೆಯ ನೂತನ ಕೊಠಡಿ ಉದ್ಘಾಟನೆ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ಉಂಟಾಗಿದ್ದು ಸ್ಥಳೀಯ ಸಿದ್ದು ಪಾಟೀಲ ಹಾಗೂ ರಾಜಶೇಖರ ಪಾಟೀಲ ಸಹೋದರರ ನಡುವಿನ ಶೀತಲ ಸಮರ ಮುಂದುವರೆದ ಸೂಚನೆ ಸಿಕ್ಕಂತಾಗಿದೆ.
ಪುರಸಭೆಯ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ರಾಜಶೇಖರ ಪಾಟೀಲ ಭಾಗಿಯಾಗಿದ್ದರು. ಈ ವೇಳೆ ಶಿಷ್ಟಾಚಾರ ಪಾಲನೆಯಾಗಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಗಲಾಟೆ ಮಾಡಿದರು.
ಪುರಸಭೆಗೆ ದಲಿತ ಮಹಿಳೆ ಅಧ್ಯಕ್ಷೆಯಾಗಿದ್ದನ್ನು ಬಿಜೆಪಿ ಸಹಿಸುತ್ತಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಯಾಗಿ ಗಲಾಟೆ ಆರಂಭಿಸಿದರು. ಇದು ಮುಂದುವರೆದು ಮಾತಿನ ಚಕಮಕಿಯಾಗಿ ಕಾರ್ಯಕರ್ತರು ಪರಸ್ಪರ ತಳ್ಳಾಟದಲ್ಲಿ ತೊಡಗಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಪೊಲೀಸರು ತಡೆದು ನಿಯಂತ್ರಿಸಿದರು.
ನಂತರ ಪರಸ್ಪರರ ಮೇಲೆ ದೂರುಗಳು ದಾಖಲಾಗಿದ್ದು ಹುಮನಾಬಾದ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.
ವರದಿ ; ನಂದಕುಮಾರ ಕರಂಜೆ, ಬೀದರ