ಬೈಲಹೊಂಗಲ: ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಜಗತ್ತಿಗೆ ವಿಶ್ವ ಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನವನ್ನು ಆಚರಿಸಲಾಯಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಭಾಷಾ ಶಿಕ್ಷಕಿಯರಾದ ರೇಖಾ ಸೊರಟೂರ ಮನುಜ ಮತ ವಿಶ್ವ ಪಥ ಎಂಬ ತತ್ವದಡಿ ಕನ್ನಡ ಸಾಹಿತ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸಿದ ಕುವೆಂಪು ಅವರು ಕರ್ನಾಟಕದ ಹೆಮ್ಮೆ ಎಂದರು. ವಿದ್ಯಾರ್ಥಿನಿಯಾದ ಕಾವೇರಿ ಬೋಬಡೆ ಕುವೆಂಪು ಅವರ ಜೀವನ ಸಾಧನೆ ಕೃತಿಗಳ ಬಗ್ಗೆ ಪರಿಚಯ ಮಾಡಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮುಖ್ಯಶಿಕ್ಷಕರಾದ ಎನ್.ಆರ್.ಠಕ್ಕಾಯಿ ಮಾತನಾಡಿ ಸಹ್ಯಾದ್ರಿಯ ಮಡಿಲಿನಿಂದ, ಮಲೆನಾಡಿನ ಸೆರಗಿನಿಂದ ಪುಟ್ಟಪ್ಪನಾಗಿ ಹೊರಹೊಮ್ಮಿದ ದೈತ್ಯ ಪ್ರತಿಭೆಯ ಸಾಹಿತ್ಯದ ಸಾಧನೆ ಬಹು ದೊಡ್ಡದು ಎಂದು ಹೇಳಿದರು. ವಿದ್ಯಾರ್ಥಿಗಳು ಕುವೆಂಪುರವರ ವಿಶಿಷ್ಟ ಕೃತಿಗಳನ್ನು ಓದುವುದರ ಜೊತೆಗೆ ಬದುಕಿನಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಜಗದೀಶ ನರಿ, ಶ್ರೀಪಾಲ ಚೌಗಲಾ, ಶಿವಾನಂದ ಬಳಿಗಾರ, ವೀರೇಂದ್ರ ಪಾಟೀಲ ಉಪಸ್ಥಿತರಿದ್ದರು. ತನುಜಾ ಬಡಿಗೇರ ಪ್ರಾರ್ಥಿಸಿದರು. ರಾಜೇಶ್ವರಿ ಸೊಗಲದ ಸ್ವಾಗತಿಸಿ ನಿರೂಪಿಸಿದರು. ಐಶ್ವರ್ಯ ಕುಲಕರ್ಣಿ ವಂದಿಸಿದರು.