ಮೈಸೂರಿನ ಮಾನಸಗಂಗೋತ್ರಿಯು ಇಂದು ಮನಸ್ಸನ್ನು ಮುದಗೊಳಿಸುವ ಅಪರೂಪದ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಯಿತು. ವಿಶ್ವ ಸಂಸ್ಥೆಯು 21 ಡಿಸೆಂಬರ್ ವಿಶ್ವ ಧ್ಯಾನದ ದಿನವನ್ನಾಗಿ ಆಚರಿಸಲು ಕರೆಕೊಟ್ಟ ಕೆಲವೇ ದಿನಗಳಲ್ಲಿ ಗಂಗೋತ್ರಿಯ ಬಯಲುರಂಗಮಂದಿರದ ಪ್ರಶಾಂತ ವಾತಾವರಣವು ಧ್ಯಾನಾಸಕ್ತರಿಗೆ ಶಾಂತಿಯ ಸಿಂಚನ ಸಿಂಪಡಿಸುವ ತಾಣವಾಯಿತು.
ಮನುಷ್ಯನ ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸುವ ಸಲುವಾಗಿ ವಿಶ್ವ ಸಂಸ್ಥೆಯು ತೆಗೆದುಕೊಂಡ ಈ ಸಮಯೋಚಿತ ನಿರ್ಣಯವನ್ನು ಸಾಕಾರಗೊಳಿಸಲು ನಗರದ ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯವು ಆಯುಷ್ ಇಲಾಖೆ ಮತ್ತು ಅನೇಕ ಸಮಾನ ಮನಸ್ಕ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಇಂದು ಬಯಲು ರಂಗಮಂದಿರದಲ್ಲಿ ಸಾರ್ವಜನಿಕರಿಗೆ ಧ್ಯಾನದ ಅನುಭೂತಿಯನ್ನು ಮಾಡಿಸುವ ಸಲುವಾಗಿ ಏರ್ಪಡಿಸಿದ್ದ ವಿಶಾಲ ಕಾರ್ಯಕ್ರಮವು ಸಾವಿರಾರು ಜನರ ಹಾಜರಿಯೊಂದಿಗೆ ದಿನ ನಿತ್ಯದ ಜೀವನದಲ್ಲಿ ಧ್ಯಾನದ ಅವಶ್ಯಕತೆಯನ್ನು ಒತ್ತಿ ಹೇಳಿತು.
ಶಿರಸಿಯಿಂದ ಆಗಮಿಸಿದ್ದ ರಾಜ ಯೋಗಿನಿ ಬ್ರಹ್ಮಾಕುಮಾರಿ ವೀಣಾಜೀ ಮಾತನಾಡಿ ಧ್ಯಾನದಿಂದ ಆಗುವ ಲಾಭಗಳನ್ನು ವಿವರಿಸುತ್ತಾ ಮನುಷ್ಯ ಇಂದು ಕೋಪ
ಮಾಡಿಕೊಳ್ಳುವುದು, ಅಸಹಾಯಕತೆಯ ಅನುಭವ ಮಾಡುವುದು, ಸಂಬಂಧಗಳಲ್ಲಿ ತಿಕ್ಕಾಟಗಳನ್ನು ಕಾಣುವುದು ಮುಂತಾದ ಅನೇಕ ಸ್ವಭಾವಗಳನ್ನು ಹೊಂದಿದ್ದು ಜೀವನಕ್ಕೆ ಅವಶ್ಯ ಅಥವಾ ಅನಿವಾರ್ಯ ಎಂದೇ ತಿಳಿದಿದ್ದಾನೆ. ಆದರೆ ನಮ್ಮ ಸ್ಥಿತಿ ಗತಿಗಳ ಅವಲೋಕನ ಮಾಡಿಕೊಂಡಾಗ ಇವೆಲ್ಲವುಗಳಿಂದ ಹೊರತಾದ ಸಂತೃಪ್ತಿಯ ಜೀವನ ನಡೆಸುವುದು ಸಾಧ್ಯ ಎಂಬ ಅರಿವು ಮೂಡುತ್ತದೆ. ಇಂತಹ ಅರಿವು ಮೂಡಲು ಮತ್ತು ಸಹಜ ಜೀವನ ನಡೆಸಲು ಧ್ಯಾನದ ಅಭ್ಯಾಸದ ಅಗತ್ಯತೆ ಇದೆ ಎಂಬ ಸಂಕೇತವನ್ನು ವೀಣಾಜಿ ಸ್ಪಷ್ಟವಾಗಿ ನೀಡಿದರು.
ಧ್ಯಾನದ ಅಭ್ಯಾಸದ ಪ್ರಕ್ರಿಯೆಯ ಬಗೆಗಿನ ಅನೇಕ ವಿಚಾರಗಳನ್ನು ಬೆಂಗಳೂರಿನಿಂದ ಆಗಮಿಸಿದ್ದ ರಾಜಯೋಗಿನಿ ಬ್ರಹ್ಮಾಕುಮಾರಿ ರೂಪಾಜೀ ಪ್ರಾಯೋಗಿಕವಾಗಿ ಮಾಡಿ ತೋರಿಸಿದರು. ಇವುಗಳಲ್ಲಿ ಸಂಕಲ್ಪಗಳನ್ನು ಉಪಯೋಗಿಸಿಕೊಳ್ಳುವುದು, ದೃಶೀಕರಣ ಮಾಡುವುದು, ಉಸಿರಾಟದ ಮೇಲೆ ಗಮನ ನೀಡುವುದು, ವರ್ತಮಾನದಲ್ಲಿರುವ ಅಭ್ಯಾಸ ಮುಂತಾದವುಗಳು ಮನಸ್ಸನ್ನು ಕೇಂದ್ರೀಕೃತ ಮಾಡುವುದರಿಂದ ಧ್ಯಾನದ ಶಕ್ತಿಯನ್ನು ಸಂಚಯ ಮಾಡಿಕೊಳ್ಳಹುದು. ಜೊತೆಗೆ ಪರಮ ಚೇತನದ ಜೊತೆಯಲ್ಲಿ ನಮ್ಮ ಮನಸ್ಸನ್ನು ಜೋಡಿಸಿದಾಗ ಶಾಂತಿ, ಪ್ರೀತಿ, ಸಂತೋಷ, ಶಕ್ತಿ ಮುಂತಾದ ಶಕ್ತಿಗಳು ನಮ್ಮಲ್ಲಿ ಹೇಗೆ ಪ್ರವೇಶಿಸುತ್ತವೆ ಎಂಬುದನ್ನೂ ಕೂಡ ರೂಪಾಜಿ ಎಲ್ಲರಿಗೂ ಅರ್ಥವಾಗುವಂತೆ ತೋರಿಸಿಕೊಟ್ಟರು.
ಆಯುಷ್ ಇಲಾಖೆಯ ಜಿಲ್ಲಾ ಅಧಿಕಾರಿ ಡಾ. ಪುಷ್ಪ ಕಾರ್ಯಕ್ರಮದ ಬಗ್ಗೆ ತಮ್ಮ ಸಂತೋಷ ವ್ಯಕ್ತಪಡಿಸಿ ಇಂತಹ ಪ್ರಾಯೋಗಿಕ ಮತ್ತು ಅನುಭವಯುಕ್ತ ಕಾರ್ಯಕಲಾಪಗಳು ಇಂದಿನ ಒತ್ತಡದ ಬದುಕಿನಲ್ಲಿ ಸಿಲುಕಿರುವ ಜನರಿಗೆ ಸಂಜೀವಿನಿಯ ಹಾಗೆ ಕೆಲಸ ಮಾಡಬಲ್ಲವು ಎಂದರು.
ದಿವ್ಯ ಸಾನ್ನಿದ್ಯ ವಹಿಸಿದ್ದ ಮೈಸೂರು ಉಪ ವಲಯದ ಮುಖ್ಯ ಸಂಚಾಲಕಿ ರಾಜ ಯೋಗಿನಿ ಬ್ರಹ್ಮಾಕುಮಾರಿ ಲಕ್ಷ್ಮೀಜೀ ಕಾರ್ಯಕ್ರಮದ ಸಫಲತೆಗೆ ಶ್ರಮಿಸಿದ ಎಲ್ಲ ಸಂಘ ಸಂಸ್ಥೆಗಳ ಗಣ್ಯರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಡಾ. ಶಿಲ್ಪಾ ಸ್ವಾಗತ ಗೀತೆ ಹಾಡಿದರು. ಡಾ. ಗಣೇಶ್ ಕುಮಾರ್ ಸಭಿಕರಿಂದ ಪ್ರಾಣಯಾಮ, ಓಂ ಧ್ವನಿ ಮಾಡಿಸಿದರು. ಈ ಸಂದರ್ಭದಲ್ಲಿ ಐಗಿರಿ ನಂದಿನಿ ಹಾಡನ್ನು ಯೋಗಾಸನಗಳ ಮೂಲಕ ಮಕ್ಕಳು ಮಾಡಿ ತೋರಿಸಿ ಎಲ್ಲರಿಗೂ ಸಂತೋಷ ಉಂಟುಮಾಡಿದರು. ರಾಜ ಯೋಗಿ ಬ್ರಹ್ಮಾಕುಮಾರ ರಂಗನಾಥ ಶಾಸ್ತ್ರೀಜಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿವಿದ ಸೇವಾ ಕೇಂದ್ರಗಳ ರಾಜ ಯೋಗಿನಿ ಬ್ರಹ್ಮಾ ಕುಮಾರಿಯರುಗಳಾದ, ಶಾರದಾಜೀ, ಶಿವಲೀಲಾಜೀ, ಮಹಾಲಕ್ಷ್ಮೀಜೀ,ಸಂಧ್ಯಾಜೀ, ಮಂಜುಳಾಜೀ, ವೀಣಾಜೀ, ಪುಷ್ಪಾಜೀ, ರೇಖಾಜೀ, ಯೋಗೇಶ್ವರೀಜೀ, ಪ್ರಾಣೀಶ್ ಜೀ, ನಾಗರಾಜ್ ಭಾಯೀಜೀ, ಮಣಿಯಣ್ಣ ಗಂಗಣ್ಣ, ಮಲ್ಲಿಕಾರ್ಜುನಣ್ಣ, ರಾಮಚಂದ್ರಣ್ಣ, ರಾಜಣ್ಣ ಹಾಜರಿದ್ದರು.