ಮೂಡಲಗಿ: ‘ಗುಬ್ಬಿಗಳ ಸಂತತಿಯನ್ನು ಸಂರಕ್ಷಣೆ ಮಾಡುವ ಮೂಲಕ ಜೀವ ವೈವಿಧ್ಯತೆಯನ್ನು ಉಳಿಸಿಕೊಳ್ಳುವುದು ಇಂದಿನ ಪರಿಸರಕ್ಕೆ ಅತ್ಯಂತ ಅವಶ್ಯವಿದೆ’ ಎಂದು ಭೂಗೋಳಶಾಸ್ತ್ರ ಪ್ರಾಧ್ಯಾಪಕ ಪ್ರೊ. ಸಂಗಮೇಶ ಗುಜಗೊಂಡ ಹೇಳಿದರು.
ಇಲ್ಲಿಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಗ್ರಂಥಾಲಯದ ಆವರಣದಲ್ಲಿ ಶನಿವಾರ ಆಚರಿಸಿದ ‘ವಿಶ್ವ ಗುಬ್ಬಚ್ಚಿ’ ದಿನಾಚರಣೆಯಲ್ಲಿ ಮಾತನಾಡಿದ ಅವರು, ಗುಬ್ಬಿಗಳು ಮನುಷ್ಯನ ಬದುಕಿನೊಂದಿಗೆ ಬದುಕುವ ಪಕ್ಷಿ ಪ್ರಬೇಧವಾಗಿದೆ ಎಂದರು.
ಆಧುನಿಕತೆಯ ಆರ್ಭಟಕ್ಕೆ ಹಾಗೂ ಕಾಂಕ್ರಿಟ್ ಕಾಡಾಗಿ ಪರಿವರ್ತನೆಯಾಗುತ್ತಿರುವ ಜನವಸತಿಯಲ್ಲಿ ಗುಬ್ಬಿಗಳು ಮರೆಯಾಗುತ್ತಲಿವೆ. ಜನರು ಜಾಗೃತರಾದರೆ ಪಕ್ಷಿ ಸಂಕುಲ ಉಳಿಯುತ್ತದೆ ಎಂದರು.
ಅತಿಥಿಯಾಗಿ ಭಾಗವಹಿಸಿದ್ದ ಬಾಲಶೇಖರ ಬಂದಿ ಮಾತನಾಡಿ, ಪ್ರಸಕ್ತ ವಿಶ್ವ ಗುಬ್ಬಿ ದಿನದ ಸಂದೇಶವು ‘ಗುಬ್ಬಿಗಳನ್ನು ಪ್ರೀತಿಸುವೆ’ ಎನ್ನುವುದಾಗಿದೆ. ಈ ಸಂದೇಶವು ಸಮಾಜದ ಎಲ್ಲ ಜನರಿಂದ ಕಾರ್ಯರೂಪಕ್ಕೆ ಬಂದರೆ ಮಾತ್ರ ಗುಬ್ಬಿಗಳ ಸಂತತಿ ಉಳಿಯುತ್ತದೆ.
ವಿದ್ಯಾರ್ಥಿಗಳು ತಮ್ಮ ಮನೆಯ ಆವರಣ, ಗಿಡಕ್ಕೆ ಮಣ್ಣಿನ ತಟ್ಟೆ, ಪ್ಲಾಸ್ಟಿಕ್ ಡಬ್ಬಿಯಲ್ಲಿ ನಿತ್ಯ ನೀರು ಇಟ್ಟು, ಒಂದಿಷ್ಟು ಕಾಳು ಹಾಕಿದರೆ ಸಾಕು ಗುಬ್ಬಿಗಳಿಗೆ ತೋರುವ ಪ್ರೀತಿಯಾಗುತ್ತದೆ ಎಂದರು.
ಸಂಗೀತಾ ಪೂಜಾರಿ, ಜ್ಯೋತಿ ಉಪ್ಪಾರ ಗುಬ್ಬಿಗಳ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು.
ಆವರಣದಲ್ಲಿಯ ಗಿಡಗಳಿಗೆ ಮಣ್ಣಿನ ತಟ್ಟೆಗಳನ್ನು ಕಟ್ಟಿ ನೀರು ಹಾಕಿದರು.
ಗ್ರಂಥಾಲಯದ ಪ್ರಭಾರಿ ಗ್ರಂಥಪಾಲಕ ಬಿ.ಎಂ. ಬರಗಾಲಿ ಪ್ರಾಸ್ತಾವಿಕ ಮಾತನಾಡಿದರು, ಎಂ.ಎಸ್. ಲಮಾಣಿ ವಂದಿಸಿದರು. ವಿದ್ಯಾರ್ಥಿಗಳು ಭಾಗವಹಿಸಿದ್ದರು.