
ಗಿರೀಶ್ ಕಾಸರವಳ್ಳಿ ಅವರಿಂದ 10 ಕೃತಿಗಳು ಲೋಕಾರ್ಪಣೆ –
ವೀರಲೋಕ ಪ್ರಕಾಶನವು ಹೊರ ತಂದ ಹತ್ತು ಕೃತಿಗಳನ್ನು ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಭಾನುವಾರ ಲೋಕಾರ್ಪಣೆ ಮಾಡಿ ಮಾತನಾಡುತ್ತಾ, ಯಾವುದೇ ಕ್ಷೇತ್ರಕ್ಕೆ ಸಂಬಂಧಿಸಿದ ಜ್ಞಾನದ ವಿಸ್ತರಣೆಯು ಸಾಹಿತ್ಯ ಮತ್ತು ಓದುವಿಕೆಯಿಂದ ಸಾಧ್ಯವಾಗುತ್ತದೆ ಹೊರತು ಸಾಮಾಜಿಕ ಮಾಧ್ಯಮ ಅಥವಾ ಗೂಗಲ್ ನಿಂದಲ್ಲ, ಓದು ಎಲ್ಲರ ಜೀವನದ ಜ್ಞಾನ ವೃದ್ಧಿಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ, ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಬೇಕು ಎಂದು ಕರೆ ನೀಡಿದರು.
ಮಾರ್ಚ್ 23ರ ಭಾನುವಾರ ಮಾಯಾನಗರಿಯ ಪುಟ್ಟಣ್ಣ ಚೆಟ್ಟಿ ಪುರ ಭವನ (ಟೌನ್ ಹಾಲ್) ನಲ್ಲಿ ವೀರಲೋಕ 2025 ಸಾಹಿತ್ಯ ಯುಗಾದಿ ಕಾರ್ಯಕ್ರಮದಲ್ಲಿ ಬಿಡುಗಡೆಯಾದ 10 ಕೃತಿಗಳು (1) ಎಸ್ ದಿವಾಕರ್ ಅವರ ವಾಸ್ತವ ಪ್ರತಿ ವಾಸ್ತವ (2) ಡಾಕ್ಟರ್ ಎಂ ವೆಂಕಟಸ್ವಾಮಿ ಅವರ ಟೈಟಾನಿಕ್ (3) ಜಯಶ್ರೀ ಕಾಸರವಳ್ಳಿ ಅವರ ಈ ಒಂದು ಹೀಗೊಂದು ಏರೋ ಸ್ಪೇಸ್ ಪುರಾಣ (4) ನಟರಾಜ್ ಅರಳ ಸುರಳಿ ಅವರ ಆಕಾಶಬುಟ್ಟಿ (5) ರಾಜಶೇಖರ ಎಂ ಅವರ ಶತಮಾನಂಭವತಿ (6) ಅರ್ಜುನ ದೇವಾಲದ ಕೆರೆ ಅವರ ಮಿಕ್ಸ್ ಅಂಡ್ ಮ್ಯಾಚ್ (ಸಣ್ಣ ಕಥೆಗಳು) (7) ಚೇತನ್ ನಾಡಿಗೇರ್ ಅವರ ಚಂದನ ವನದೋಳ್ (8) ನಡಹಳ್ಳಿ ವಸಂತ ಅವರ ಮಹಿಳೆಯರಿಗೆ ಮಾತ್ರವಲ್ಲ (9) ಪ್ರಸಾದ್ ನಾಯಕ ಅವರ ಮುಸ್ಸಂಜೆ ಮಾತು (10) ಪ್ರಸಾದ್ ಶೆಣೈ ಆರ್ ಕೆ ಅವರ ನೇರಳೆ ಐಸ್ ಕ್ರೀಮ್ , ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು.
ತಾಳಮದ್ದಲೆ ಮೂಲಕ ಪುಸ್ತಕ ಪರಿಚಯ
ಹತ್ತು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ವಿಶೇಷವಾಗಿ ಕೃತಿಗಳ ಕುರಿತು ಅಜಿತ್ ಕಾರಂತ ಮತ್ತು ರಾಧಾಕೃಷ್ಣ ಕಲ್ಚಾರ ಮತ್ತು ತಂಡದವರು ತಾಳಮದ್ದಲೆ ಮೂಲಕ ಪುಸ್ತಕ ಪರಿಚಯ ಮಾಡಿದರು
ವೀರಲೋಕ ಸಾಹಿತ್ಯದ ಪ್ರಕಾಶಕ ವೀರಕಪುತ್ರ ಶ್ರೀನಿವಾಸ ಅವರು ಕಾರ್ಯಕ್ರಮಕ್ಕೆ ಸರ್ವರನ್ನು ಸ್ವಾಗತಿಸಿದರೆ, ದಿವ್ಯ ಆಲೂರು ಅವರು ಕಾರ್ಯಕ್ರಮದ ನಿರೂಪಣೆಯನ್ನು ಬಹಳ ಸೊಗಸಾಗಿ ಮಾಡಿದರು.
ಬೇವು ಬೆಲ್ಲ !
ಕಾರ್ಯಕ್ರಮಕ್ಕೆ ಬಂದಿದ್ದ ಓದುಗರಿಗೆ ಯುಗಾದಿಯ ಸಂಕೇತವಾದ ಬೇವು ಬೆಲ್ಲ ಕೊಟ್ಟು ವಾರದ ಮುಂಚೆಯೇ ಯುಗಾದಿಯ ಶುಭಾಶಯ ಕೋರಿದ್ದು ವಿಶೇಷವಾಗಿತ್ತು .
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ. ಬೈರಮಂಗಲ ರಾಮೇಗೌಡ ಮತ್ತು ಕಾದಂಬರಿಗಾರ್ತಿ ಸಹನಾ ವಿಜಯಕುಮಾರ್ ಹಾಗೂ ಹಿರಿಯ ಸಾಹಿತಿ ಡಾ. ಬಸವರಾಜ ಸಬರದ ಮತ್ತು ವೀರಲೋಕ ಸಾಹಿತ್ಯದ ಅನಂತ ಕುಣಿಗಲ್ ಹಾಗೂ ಇತರರು ಉಪಸ್ಥಿತರಿದ್ದರು.
ವರದಿ : ತೀರ್ಥಹಳ್ಳಿ ಅನಂತ ಕಲ್ಲಾಪುರ