ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ) ಹೂವಿನಹಡಗಲಿ ಇವರ ವತಿಯಿಂದ ಕನ್ನಡ ನುಡಿ ವೈಭವ ರಾಜ್ಯಮಟ್ಟದ ಸಾಹಿತ್ಯ ಸಾಂಸ್ಕತಿಕ ಕಾರ್ಯಕ್ರಮ ದಾವಣಗೆರೆಯಲ್ಲಿ ಸ್ಥಳೀಯ ಗುರುಭವನದಲ್ಲಿ ಭಾನುವಾರ ಅತ್ಯಂತ ಅಚ್ಚುಕಟ್ಟಾಗಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಗೊರೂರು ಅನಂತರಾಜು ಮಾತನಾಡಿ ಸಾಹಿತ್ಯ ಬರವಣಿಗೆ ಜೊತೆಗೆ ಲೇಖಕರಾದವರು ನಾಡಿನ ಸಂಸ್ಕೃತಿ ಬೆಳವಣಿಗೆಗೂ ತಮ್ಮ ಚಿಂತನೆಗಳನ್ನು ಹರಿಸಬೇಕಿದೆ. ಪೆನ್ನಿಗೆ ಅದರದೇ ಆದ ಶಕ್ತಿ ಸಾಮರ್ಥ್ಯ ಇರುತ್ತದೆ. ಅದನ್ನು ಸಮರ್ಪಕವಾಗಿ ಬಳಸಿಕೊಂಡು ನಾಡು ನುಡಿ ಬೆಳವಣಿಗೆಯಲ್ಲಿ ಲೇಖಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ತಾವು ಬರೆಯುವ ಜೊತೆಗೆ ತಮ್ಮ ಜೊತೆಗಿನ ಬರಹಗಾರರನ್ನು ಬೆಳಸಬೇಕು. ಈ ದಿಶೆಯಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಸಂಘ ತನ್ನ ಸಾಹಿತ್ಯ ಚಟುವಟಿಕೆಯನ್ನು ರಾಜ್ಯಾದ್ಯಂತ ವಿಸ್ತರಿಸಿ ಉದಯೋನ್ಮುಖ ಬರಹಗಾರರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದೆ. ಆನ್‌ಲೈನ್ ಕಾರ್ಯಕ್ರಮ ಮುಖೇನ ಗಾಯಕರನ್ನು ಬೆಳಕಿಗೆ ತರುತ್ತಿದೆ. ಲೇಖಕರು ತಮ್ಮ ಬರವಣಿಗೆ ಸುಧಾರಿಸಿಕೊಳ್ಳಲು ಇತರ ಹೆಸರಾಂತ ಸಾಹಿತಿಗಳ ಕೃತಿಗಳನ್ನು ಓದುತ್ತಿರಬೇಕು. ಬರಹ ತನಗೆ ಸಿದ್ದಿಸುವುದಿಲ್ಲವೆಂದು ನಿರಾಶರಾಗಿ ಅರ್ಧಕ್ಕೆ ಕೈ ಬಿಟ್ಟವರನ್ನು ಕಂಡಿದ್ದೇನೆ. ಬರವಣಿಗೆಯನ್ನೇ ಚಿಂತಿಸಿ ಬರೆಯುತ್ತಾ ತಮ್ಮ ಬರಹ ಶೈಲಿ ಕೌಶಲ್ಯವನ್ನು ಸುಧಾರಿಸಿಕೊಂಡು ಹಿಡಿತ ಸಾಧಿಸಿದಲ್ಲಿ ಅದು ತಮ್ಮ ಕೈಹಿಡಿಯುತ್ತದೆ. ಇದಕ್ಕೆ ನಾನೇ ಸಾಕ್ಷಿ ಎಂದರು.
ತಮ್ಮ ೩೫ ವರ್ಷಗಳ ನಿರಂತರ ಬರವಣಿಗೆಯಲ್ಲಿ ೬೦ಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿಯೂ ನಾನಿನ್ನು ಸಾಹಿತ್ಯದ ವಿದ್ಯಾರ್ಥಿ ಎಂದುಕೊಂಡೆ ಓದುತ್ತಿರುತ್ತೇನೆ ಹಾಗೂ ಬರೆಯುತ್ತಿರುತ್ತೇನೆ ಅಷ್ಟೇ ಅಲ್ಲ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಬಂದಿರುವುದಾಗಿ ತಿಳಿಸಿದರು.
ಕ.ರಾ.ಬ.ಸಂಘದ ರಾಜ್ಯಧ್ಯಕ್ಷ ಮಧು ನಾಯ್ಕ ಲಂಬಾಣಿ ಮಾತನಾಡಿ ನಮ್ಮ ಸಂಸ್ಥೆ ಕಳೆದ ನಾಲ್ಕು ವರ್ಷಗಳಿಂದ ಕನ್ನಡ ನುಡಿ ವೈಭವ ಕಾರ್ಯಕ್ರಮ ಏರ್ಪಡಿಸಿ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದ ಸಾಧಕರನ್ನು ಪ್ರೋತ್ಸಾಹಿಸುತ್ತಿದೆ ಎಂದರು.
ಕ.ರಾ.ಬ.ಸಂಘ ಉಪಾಧ್ಯಕ್ಷ ವಿರೂಪಾಕ್ಷ ಯು. ಪ್ರಾಸ್ತಾವಿಕ ನುಡಿಗಳನ್ನಾಡಿದರು. ರಾಜ್ಯಾದ್ಯಂತ ಆಗಮಿಸಿದ್ದ ೭೦ ಮಂದಿ ಲೇಖಕರಿಗೆ ಸಾಹಿತ್ಯ ಸೌರಭ ಪ್ರಶಸ್ತಿ, ೪೦ ಶಿಕ್ಷಕರಿಗೆ ಶಿಕ್ಷಣ ಸೌರಭ, ಕಲಾಕ್ಷೇತ್ರದಿಂದ ೬ ಕಲಾವಿದರಿಗೆ ಮತ್ತು ೧೦ ಕವಯಿತ್ರಿಯರಿಗೆ ಕಾವ್ಯಶ್ರೀ ಪ್ರಶಸ್ತಿ ನೀಡಿ ಸಂಘದಿಂದ ಸನ್ಮಾನಿಸಲಾಯಿತು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಕೊಟ್ರೇಶ್ ಜಿ. ಕಾರ್ಯಕ್ರಮ ಉದ್ಘಾಟಿಸಿದರು. ಮಧುನಾಯ್ಕ್ ಲಂಬಾಣಿ ಸಂಪಾದಕತ್ವದ ಹೂ ಮುಡಿದ ಜಡೆ ಕವನ ಸಂಕಲನ, ಭಾಗ್ಯ ನಾಗರಾಜ ಅವರ ಚಿರುನಕ್ಷತ್ರ ಕೃತಿಗಳನ್ನು ಬಂಜಾರಾ ಭಾಷಾ ಅಕಾಡೆಮಿ ಅಧ್ಯಕ್ಷರು ಗೋವಿಂದಸ್ವಾಮಿ ಬಿಡುಗಡೆ ಮಾಡಿದರು. ಸಾಹಿತಿ ಹೆಚ್.ಡಿ.ಜಗ್ಗಿನ್ ಹೊಳಲು, ಗಾಯಕ ಉಮೇಶ ಚಿನ್ನಸಮುದ್ರ, ಕ.ರಾ.ಬ.ಸಂಘ ಹಾಸನ ಜಿಲಾಧ್ಯಕ್ಷ ಸುಂದರೇಶ್ ಡಿ. ಉಡುವೇರೆ ಮೊದಲಾದವರು ಇದ್ದರು.