spot_img
spot_img

ನಾಡು, ನುಡಿ, ಗಡಿ ರಕ್ಷಣೆಗೆ ಸಾಹಿತಿಗಳು ದನಿಯೆತ್ತಬೇಕು – ಅಶೋಕ ಚಂದರಗಿ

Must Read

spot_img
- Advertisement -

ಬೆಳಗಾವಿ: ‘ನಾಡು, ನುಡಿ, ಗಡಿಯ ರಕ್ಷಣೆ ವಿಚಾರ ಬಂದಾಗ, ಸಾಹಿತಿಗಳು ಮೌನ ವಹಿಸುವುದು ಸರಿಯಲ್ಲ’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅಭಿಪ್ರಾಯಪಟ್ಟರು.

ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 68ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬಿ.ಎ.ಸನದಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ‘ಕನ್ನಡ ಗಡಿತಿಲಕ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

‘ನಾಡು–ನುಡಿ ಹಾಗೂ ಗಡಿಯ ರಕ್ಷಣೆ ವಿಚಾರದಲ್ಲಿ ಆಡಳಿತ ಪಕ್ಷವನ್ನು ಎಚ್ಚರಿಸುವುದು ಕನ್ನಡ ಹೋರಾಟಗಾರರು ಮತ್ತು ಪತ್ರಕರ್ತರ ಕೆಲಸ ಮಾತ್ರವಲ್ಲ, ಇದರಲ್ಲಿ ಸಾಹಿತಿಗಳ ಪಾತ್ರವೂ ಮುಖ್ಯವಾಗಿದೆ. ಆದರೆ, ಕೆಲವೇ ಸಾಹಿತಿಗಳು ಧ್ವನಿ ಎತ್ತುತ್ತಾರೆ. ಉಳಿದವರು ಸುಮ್ಮನಾಗುತ್ತಾರೆ. ಈ ಮನೋಭಾವ ಮುಂದುವರಿಯಬಾರದು. ಯಾರೂ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು’ ಎಂದು ಹೇಳಿದರು.

- Advertisement -

‘ಬೆಳಗಾವಿಯಲ್ಲಿ ₹500 ಕೋಟಿ ವ್ಯಯಿಸಿ ಕಟ್ಟಿದ ಸುವರ್ಣ ವಿಧಾನಸೌಧಕ್ಕೆ ಗಡಿಗೆ ಸಂಬಂಧಿಸಿದ ಕಚೇರಿಗಳ ಸ್ಥಳಾಂತರಕ್ಕೆ ರಾಜ್ಯ ಸರ್ಕಾರ ಕ್ರಮ ವಹಿಸಬೇಕು. ಮಹಾರಾಷ್ಟ್ರದಲ್ಲಿ ಅಚ್ಚ ಕನ್ನಡ ಪ್ರದೇಶಗಳಾದ ಜತ್ತ, ಅಕ್ಕಲಕೋಟೆ, ಸೊಲ್ಲಾಪುರವನ್ನು ಮರಾಠೀಕರಣಗೊಳಿಸಲು ಅಲ್ಲಿನ ಸರ್ಕಾರ ಕ್ರಮ ವಹಿಸಿದೆ. ಅಂತೆಯೇ ಬೆಳಗಾವಿಯನ್ನೂ ಕನ್ನಡೀಕರಣಗೊಳಿಸಲು ಕರ್ನಾಟಕ ಸರ್ಕಾರ ಕ್ರಮ ಕೈಗೊಳ್ಳುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ಸಾನ್ನಿಧ್ಯ ವಹಿಸಿದ್ದ ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ, ‘ನಾಡು–ನುಡಿಯ ರಕ್ಷಣೆ ವಿಷಯದಲ್ಲಿ ರಾಜ್ಯ ಸರ್ಕಾರ ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದರಿಂದಾಗಿ ಗಡಿ ವಿವಾದ ಮತ್ತು ಭಾಷಾ ವಿವಾದ ಗಂಭೀರ ಸ್ವರೂಪ ತಾಳುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಕನ್ನಡ ಹೋರಾಟಗಾರರ ಪಾತ್ರ ಪ್ರಮುಖವಾಗಿದೆ’ ಎಂದು ಅಭಿಪ್ರಾಯಪಟ್ಟರು.

ಡಾ.ದಯಾನಂದ ನೂಲಿ, ‘ಬಿ.ಎ.ಸನದಿ ತಮ್ಮ ಕಾವ್ಯದುದ್ದಕ್ಕೂ ಮಾನವೀಯ ಪ್ರೀತಿ, ಜೀವನಮೌಲ್ಯ ಪ್ರತಿಷ್ಠಾಪಿಸಿದ್ದಾರೆ. ಗಡಿನಾಡಿನಲ್ಲಿ ಉತ್ಕೃಷ್ಟ ದರ್ಜೆಯ ಸಾಹಿತ್ಯ ರಚಿಸಿದ್ದಾರೆ. ಅವರ ಹೆಸರಿನಲ್ಲಿರುವ ಪ್ರತಿಷ್ಠಾನ ಅರ್ಥಪೂರ್ಣವಾಗಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದೆ’ ಎಂದು ಶ್ಲಾಘಿಸಿದರು.

- Advertisement -

ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ರಾಮಕೃಷ್ಣ ಮರಾಠ, ‘ಗಡಿಯಲ್ಲಿ ಕನ್ನಡ ಭಾಷೆ ಸಮೃದ್ಧವಾಗಲು ಸಾಹಿತಿಗಳು ಮತ್ತು ಸಾಂಸ್ಕೃತಿಕ ಸಂಘಟನೆಗಳ ಕೊಡುಗೆ ಅಪಾರ. ಇಂಥ ಸಂಘಟನೆ ಚಟುವಟಿಕೆಯನ್ನು ಯುವಪೀಳಿಗೆ ಪ್ರೇರಣೆಯಾಗಿಸಿಕೊಂಡು ಮುನ್ನಡೆಯಬೇಕು’ ಎಂದರು.

ಪ್ರೊ.ಪಿ.ಜಿ.ಕೆಂಪಣ್ಣವರ ಅಭಿನಂದನಾ ನುಡಿಗಳನ್ನಾಡಿದರು. ಶಿಕ್ಷಣ ತಜ್ಞ ಪ್ರೊ.ಶಿವಶಂಕರ ಹಿರೇಮಠ ಪ್ರಶಸ್ತಿ ಪ್ರದಾನ ಮಾಡಿದರು.

ಬಿ.ಎಸ್‌.ಗವಿಮಠ, ಡಾ.ಎಚ್‌.ಬಿ.ರಾಜಶೇಖರ, ಆರ್‌.ಬಿ.ಕಟ್ಟಿ, ಬಸವರಾಜ ಗಾರ್ಗಿ, ಎಂ.ವೈ.ಮೆಣಸಿನಕಾಯಿ, ಶಂಕರ ಬಾಗೇವಾಡಿ ಇತರರಿದ್ದರು. ಪ್ರತಿಷ್ಠಾನದ ಉಪಾಧ್ಯಕ್ಷ ಎ.ಎ.ಸನದಿ ಸ್ವಾಗತಿಸಿದರು. ಸಿ.ಎಂ.ಬೂದಿಹಾಳ ನಿರೂಪಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

10ರಂದು ಅಬ್ಬಿಗೇರಿ ದಂಪತಿಯ 15 ಕೃತಿ ಲೋಕಾರ್ಪಣೆ

ಬೆಳಗಾವಿ: ಜಿಲ್ಲಾ ಲೇಖಕಿಯರ ಸಂಘ ಬೆಳಗಾವಿ ಹಾಗೂ ಲೋಕವಿದ್ಯಾ ಪ್ರಕಾಶನ ಸಂಕೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಉಪನ್ಯಾಸಕಿ, ಲೇಖಕಿ ಜಯಶ್ರೀ ಮತ್ತು ಜಯಪ್ರಕಾಶ ಅಬ್ಬಿಗೇರಿ ದಂಪತಿಗಳ...
- Advertisement -

More Articles Like This

- Advertisement -
close
error: Content is protected !!
Join WhatsApp Group