ಬರಗೂರು ರಾಮಚಂದ್ರಪ್ಪ ಅವರ ಬರಹ ರಾಷ್ಟ್ರೀಯ ಶಿಕ್ಷಣ ನೀತಿ: ಕೆಲವೊಂದು ಪ್ರಶ್ನೆಗಳು

Must Read

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...

ಕಾಂಗ್ರೆಸ್ ಸರ್ಕಾರದ ಕೆಲಸಗಳು ಅದರ ಗೆಲುವಿಗೆ ಕಾರಣವಾಗುತ್ತದೆ – ಸುಜಾತಾ ಕಳ್ಳಿಮನಿ

ಸಿಂದಗಿ: ಸಿದ್ದರಾಮಯ್ಯನವರು ಐದು ವರ್ಷದ ಅಧಿಕಾರದ ಅವಧಿಯಲ್ಲಿ ಈ ಕರುನಾಡಿಗೆ ಬಡವರ ಪರ, ರೈತರ ಪರ ಜಾರಿಗೆ ತಂದ ಯೋಜನೆಗಳು ಈ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಬಿಜೆಪಿ ಅಲೆಮಾರಿ ಜನಾಂಗಕ್ಕೆ ಸುಳ್ಳು ಹೇಳಿ ಮತ ಪಡೆಯುತ್ತಿದೆ – ಮೇಘರಾಜ್ ಆರೋಪ

ಸಿಂದಗಿ: ಬಿಜೆಪಿಯ ಸರ್ಕಾರ  ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ  ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಆಶ್ರಯ ಮನೆಗಳನ್ನು  ಮಂಜೂರು ಮಾಡದೆ ಕೇವಲ ಕಾಗದ ಪತ್ರದಲ್ಲಿ ಮಂಜೂರು...

ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ‘ಮುಕ್ತ ಚರ್ಚೆಗೆ ಸಿದ್ಧ; ವಿವಿಧ ಆಯಾಮಗಳಲ್ಲಿ ಚರ್ಚೆ ನಡೆಯಬೇಕಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನ ಪರಿಷತ್ತಿನಲ್ಲಿ ಇತ್ತೀಚೆಗೆ ಸಮಚಿತ್ತದಿಂದ ಹೇಳಿದಾಗ, ಕಿರು ಕಿರಣವೊಂದು ಕಾಣಿಸಿತ್ತು.

ಆದರೆ ಮರುದಿನ ವಿಧಾನಸಭೆಯಲ್ಲಿ ‘ನಾಗಪುರ ಶಿಕ್ಷಣ ನೀತಿ’, ‘ಇಟಲಿ ಶಿಕ್ಷಣ ನೀತಿ’ ಎಂಬ ವೈಪರೀತ್ಯದ ಘೋಷಣೆಗಳಲ್ಲಿ ಜಿದ್ದಾಜಿದ್ದಿಯ ಮಾತೇ ಮುಖ್ಯವಾಗಿ ಶಿಕ್ಷಣ ಮತ್ತು ನೀತಿ- ಎರಡೂ ಕಾಣೆಯಾದವು.

ಅದೇನೇ ಇರಲಿ, ಮುಖ್ಯಮಂತ್ರಿಯವರು ಮುಕ್ತ ಚರ್ಚೆಯ ಮಾತಾಡಿರುವುದರಿಂದ ಕೆಲವು ಸರಳ ಪ್ರಶ್ನೆಗಳನ್ನು ಮುಂದಿಡಬಯಸುತ್ತೇನೆ. ಸಮಗ್ರ ಬದಲಾವಣೆಯ ನೀತಿಯೆಂದು ಬಿಂಬಿತವಾಗುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನವನ್ನು ಪ್ರಾಥಮಿಕ ಶಿಕ್ಷಣದಿಂದ ಪ್ರಾರಂಭಿಸಬೇಕೊ? ಉನ್ನತ ಶಿಕ್ಷಣದಿಂದ ಆರಂಭಿಸಬೇಕೊ? ಶಿಕ್ಷಣ ನೀತಿಯಲ್ಲಿ ಮೊದಲ ಎರಡು ವರ್ಷದ ಪೂರ್ವ ಪ್ರಾಥಮಿಕವನ್ನು ‘ತಳಹದಿಯ ಹಂತ’ವೆಂದೂ ಆನಂತರದ ಮೂರು ವರ್ಷಗಳು ‘ಸಿದ್ಧತಾ ಹಂತ’ವೆಂದೂ ಕರೆಯಲಾಗಿದೆ. ಆದರೆ ಪ್ರಾಥಮಿಕ ಹಂತದ ಬದಲು ಉನ್ನತ ಶಿಕ್ಷಣದಲ್ಲಿ ಅನುಷ್ಠಾನ ಮಾಡುತ್ತಿದ್ದು, ತಳಹದಿಯೇ ಇಲ್ಲದೆ, ಕಟ್ಟಡ ಕಟ್ಟಲು ಹೊರಟಂತೆ ಅಲ್ಲವೇ?

- Advertisement -

ಹೊಸ ಶಿಕ್ಷಣ ನೀತಿಯ ಪೀಠಿಕೆ, ಮೂಲತತ್ವಗಳು, ದೂರದರ್ಶಿತ್ವದ ಭಾಗಗಳಲ್ಲಿರುವ ಅನೇಕ ಆದರ್ಶದ ನುಡಿಗಟ್ಟುಗಳನ್ನು ನಿರಾಕರಿಸಲಾಗದು. ಪೀಠಿಕೆಯಲ್ಲಿ ವೈವಿಧ್ಯತೆಯ ಪ್ರಸ್ತಾಪವಿದೆ. ಮೂಲತತ್ವಗಳಲ್ಲಿ ಪ್ರಜಾಪ್ರಭುತ್ವ ಮನೋಧರ್ಮ, ವೈಜ್ಞಾನಿಕ ಮನೋಭಾವ ಮತ್ತು ಸಂವಿಧಾನಾತ್ಮಕ ಮೌಲ್ಯಗಳಿಗೆ ಮಹತ್ವ ನೀಡುವ ಮಾತುಗಳಿವೆ. ಭಾಗ ಎರಡರಲ್ಲಿ ನೈತಿಕತೆ, ಸಮಾನತೆ, ಮಾನವೀಯತೆ ಮತ್ತು ಬಹುತ್ವದ ಪ್ರಸ್ತಾಪವಿದೆ. ದೂರದರ್ಶಿತ್ವ ಭಾಗದಲ್ಲಿ ‘ಭಾರತ ದೇಶವನ್ನು ಸುಸ್ಥಿರವಾಗಿ ಸಮಾನತಾ ಮನೋಧರ್ಮ ಹಾಗೂ ಸೃಜನಶೀಲ ಜ್ಞಾನ ಸಮಾಜವಾಗಿ ಪರಿವರ್ತಿಸುವ ದಿಸೆಯಲ್ಲಿ ಭಾರತೀಯ ಅಸ್ಮಿತೆಯ ಮೇಲೆ ಆಧಾರಗೊಂಡ ಶಿಕ್ಷಣ ವ್ಯವಸ್ಥೆಯನ್ನು ಸಾಕಾರಗೊಳಿಸುವುದು ಈ ರಾಷ್ಟ್ರೀಯ ಶಿಕ್ಷಣ ನೀತಿಯ ಮಹಾನ್ ಉದ್ದೇಶವಾಗಿದೆ’ ಎಂದು ಘೋಷಿಸಲಾಗಿದೆ. ‌

ಪರಿಚ್ಛೇದ 6.1ರಲ್ಲಿ ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ಶಿಕ್ಷಣವು ಮಹತ್ವಪೂರ್ಣ ಸಾಧನ ಎಂದು ಪ್ರತಿಪಾದಿಸಲಾಗಿದೆ. ಇಲ್ಲಿರುವ ಆಶಯಗಳು ಸ್ವಾಗತಾರ್ಹ ವಾಗಿವೆ. ಆದರೆ ‘ಭಾರತೀಯ ಅಸ್ಮಿತೆ’ಯನ್ನು ಹೇಗೆ ವ್ಯಾಖ್ಯಾನಿಸುತ್ತಾರೆಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಚಲನಶೀಲ ಪರಂಪರೆಯಾಗಿ ಪರಭಾವಿಸುವುದು ಅಸ್ಮಿತೆಯ ಸಕಾರಾತ್ಮಕ ನೆಲೆಯಾದರೆ, ಜಡ ಜನವಿರೋಧಿ ಸಂಪ್ರದಾಯಗಳ ನೆಲೆ ನಕಾರಾತ್ಮಕವಾದುದು. ಇಷ್ಟೆಲ್ಲ ಪ್ರಶಂಸಾತ್ಮಕ ಪರಿಕಲ್ಪನೆಗಳ ಪ್ರಸ್ತಾಪ ಮಾಡಿರುವ ಶಿಕ್ಷಣ ನೀತಿಯ 11.1ನೇ ಪರಿಚ್ಛೇದದಲ್ಲಿ ‘ಭಾರತೀಯ ಶಿಕ್ಷಣ ನೀತಿಯನ್ನು ಮರಳಿ ತರುವ’ ಮಾತನ್ನೂ ಆಡಿರುವುದು ಅನುಮಾನಗಳಿಗೆ ಕಾರಣವಾಗಿದೆ.

ಇಲ್ಲೀವರೆಗೆ ಇದ್ದದ್ದು ಭಾರತೀಯವಲ್ಲವೆ? ಆರಂಭಿಕ ಮೆಕಾಲೆ ಮಾದರಿ ಬದಲಾಗುತ್ತ ಬಂದದ್ದು ಕಾಣಿಸುತ್ತಿಲ್ಲವೆ? ಇಲ್ಲೀವರೆಗಿನ ಶಿಕ್ಷಣ ನೀತಿಯಲ್ಲೇ ವ್ಯಾಸಂಗ ಮಾಡಿ ಭಾರತವನ್ನು ಬೆಳಗಿದ ವಿಜ್ಞಾನಿಗಳೂ ವಿವಿಧ ತಜ್ಞರೂ ಕಲಾಕಾರರೂ ಇತಿಹಾಸಕಾರರೂ ದೇಶಭಕ್ತರೂ ಸಾಕಷ್ಟು ಜನರಿಲ್ಲವೆ? ಭಾರತಕ್ಕೆ ಅಂತರರಾಷ್ಟ್ರೀಯ ಖ್ಯಾತಿ ತಂದುಕೊಟ್ಟಿಲ್ಲವೆ? ವಾಸ್ತವ ಹೀಗಿದ್ದರೂ ಭಾರತೀಯ ಶಿಕ್ಷಣ ನೀತಿಯನ್ನು ಮರಳಿ ತರುವ ಮಾತಿನ ಒಳಾರ್ಥವೇನು?

ಆದರ್ಶದ ಮಾತುಗಳು ಒಂದು ಕಡೆಗಾದರೆ, ಅನುಷ್ಠಾನದ ಮಾದರಿಗಳು ಇನ್ನೊಂದು ಕಡೆಗಿದ್ದು, ಕೆಲವು ಪ್ರಶ್ನೆಗಳಿಗೆ ಕಾರಣವಾಗಿವೆ. ಪೂರ್ವ ಪ್ರಾಥಮಿಕ ಹಂತವನ್ನು ಆರಂಭಿಸುವ ಪ್ರಸ್ತಾಪವನ್ನು ಸ್ವಾಗತಿಸುತ್ತಲೇ ನನ್ನದೊಂದು ಪ್ರಶ್ನೆಯಿದೆ. ಈ ಹಂತಕ್ಕೆ ಸೇರುವ ಮಕ್ಕಳ ವಯಸ್ಸು ಮತ್ತು ಅಂಗನವಾಡಿಗೆ ಹೋಗುವ ಮಕ್ಕಳ ವಯಸ್ಸಿನಲ್ಲಿ ಕೆಲವೇ ತಿಂಗಳ ಅಂತರವಿದೆ. ಮಕ್ಕಳು ಪೂರ್ವ ಪ್ರಾಥಮಿಕಕ್ಕೆ ಸೇರಿದರೆ ಅಂಗನವಾಡಿಗಳ ಗತಿ ಏನು? ಈ ಶಿಕ್ಷಣ ನೀತಿಯಲ್ಲಿ ಅಂಗನವಾಡಿಗಳನ್ನು ಶಕ್ತಿಶಾಲಿಯಾಗಿಸುವ ಮಾತನ್ನು ಆಡಿರುವುದು ನಿಜವಾದರೂ (1, 5, 6ನೇ ಅಂಶ) ಪೂರ್ವ ಪ್ರಾಥಮಿಕ ಮತ್ತು ಅಂಗನವಾಡಿಗಳನ್ನು ಒಟ್ಟಿಗೇ ನಿಭಾಯಿಸುವ ಪರಿಹಾರ ಮಾರ್ಗಗಳನ್ನು ಸೂಚಿಸಿಲ್ಲ.

ಇನ್ನು ಸಣ್ಣ ಶಾಲೆಗಳ ಬಗ್ಗೆ ಈ ಶಿಕ್ಷಣ ನೀತಿಯು ಆಕ್ಷೇಪಾರ್ಹ ನಿಲುವು ತಾಳಿದೆ. ಪರಿಚ್ಛೇದ 7.3ರಲ್ಲಿ ಸಣ್ಣ ಶಾಲೆಗಳು ಶಿಕ್ಷಣ ಕ್ಷೇತ್ರದಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತವೆಯೆಂದು ಹೇಳಲಾಗಿದೆ. ಇದು ಹಳ್ಳಿಹಳ್ಳಿಗಳಿಗೆ ಶಿಕ್ಷಣವನ್ನು ತಲುಪಿಸುವ ಉದ್ದೇಶಕ್ಕೆ ವಿರುದ್ಧವಾದ ನಿಲುವು; ಮಕ್ಕಳ ಶೈಕ್ಷಣಿಕ ಹಕ್ಕಿನ ಉಲ್ಲಂಘನೆ. ಅಂಗನವಾಡಿಯಿಂದ ಸೆಕೆಂಡರಿವರೆಗೆ ಸುಸಜ್ಜಿತವಾದ ಶಾಲಾ ಸಂಕೀರ್ಣಗಳನ್ನು 5ರಿಂದ 10 ಕಿಲೊ ಮೀಟರಿಗೆ ಒಂದರಂತೆ ಸ್ಥಾಪಿಸುವ ಪ್ರಸ್ತಾಪ ಮಾಡಿರುವುದು (7.6) ಸ್ವಾಗತಾರ್ಹ. ಆದರೆ ಇದು ಸಣ್ಣ ಶಾಲೆಗಳನ್ನು ನಾಶ ಮಾಡಬಾರದು, ಅಲ್ಲವೆ?

ರಾಜ್ಯಗಳ ಶೈಕ್ಷಣಿಕ ಸ್ವಾಯತ್ತತೆಗೆ ಧಕ್ಕೆ ತರುವ ಅಂಶಗಳು ಈ ಶಿಕ್ಷಣ ನೀತಿಯಲ್ಲಿರುವುದನ್ನು ಈಗ ಗಮನಿಸೋಣ. 8ನೇ ತರಗತಿಯವರೆಗಿನ ಪಠ್ಯಕ್ರಮವನ್ನು ಕೇಂದ್ರ ಸರ್ಕಾರದ ಎನ್‌ಸಿಇಆರ್‌ಟಿಯೇ ನಿರ್ಧರಿಸುತ್ತದೆ (1.3). ಶಿಕ್ಷಣದ ಕಲಿಕಾ ಕೌಶಲ, ಮೌಲ್ಯಮಾರ್ಗಗಳನ್ನೂ ಎನ್‌ಸಿಇಆರ್‌ಟಿಯೇ ಸೂಚಿಸುತ್ತದೆಯಲ್ಲದೆ (4.4) ತನ್ನದೇ ಪಠ್ಯಪುಸ್ತಕಗಳ ಸಾಮಗ್ರಿಯನ್ನೇ ರಾಜ್ಯಗಳು ಬಳಸಬೇಕೆಂದೂ ನಿರ್ಬಂಧಿಸಿ, ಸ್ಥಳೀಯವಾದದ್ದನ್ನು ತನ್ನ ಸಾಮಗ್ರಿಯ ಜೊತೆಗೆ ಸೇರಿಸಬಹುದೆಂದು ‘ರಿಯಾಯಿತಿ’ ನೀಡಲಾಗಿದೆ (4.3). ಹಾಗಾದರೆ ಇದೇ ಕೆಲಸಕ್ಕಾಗಿ ಇರುವ ರಾಜ್ಯದ ಡಿಎಸ್‌ಇಆರ್‌ಟಿಯ ಅಸ್ತಿತ್ವವನ್ನೇ ಗೌಣ ಮಾಡಿದಂತಲ್ಲವೆ? ಇದು ರಾಜ್ಯದ ಶೈಕ್ಷಣಿಕ ಸ್ವಾಯತ್ತತೆಯನ್ನು ಹತ್ತಿಕ್ಕುವ ಕ್ರಮವಲ್ಲವೆ?

ಪದವಿ ಶಿಕ್ಷಣದಲ್ಲಿ ಆಗಮನ (ಎಂಟ್ರಿ) ಮತ್ತು ನಿರ್ಗಮನ (ಎಕ್ಸಿಟ್) ಪದ್ಧತಿ ತಂದಿರುವುದು ಯಾವ ಸಾರ್ಥಕತೆಗೆಂದು ಅರ್ಥವಾಗುವುದಿಲ್ಲ.

ಒಂದು ವರ್ಷಕ್ಕೆ ನಿರ್ಗಮಿಸಿದರೆ ಒಂದು ಪ್ರಮಾಣಪತ್ರ, ಎರಡು ವರ್ಷಕ್ಕೆ ನಿರ್ಗಮಿಸಿದರೆ ಇನ್ನೊಂದು ಡಿಪ್ಲೊಮಾ ಪ್ರಮಾಣಪತ್ರ ಪಡೆದು ಯಾವ ಕೆಲಸಕ್ಕೆ ಹೋಗುತ್ತಾರೆ? ಪದವಿಯನ್ನು ಪೂರ್ಣಗೊಳಿಸಲು ಪ್ರೋತ್ಸಾಹಿಸುವ ಬದಲು, ಬಿಡಲು ಉತ್ತೇಜಿಸುವುದು ಶಿಕ್ಷಣ ವಿರೋಧಿ ನೀತಿಯಾಗುವುದಿಲ್ಲವೆ?

ಈ ನೀತಿಗೆ ಕಳಶವಿಟ್ಟಂತೆ ಪರಿಚ್ಛೇದ 10.4ರಲ್ಲಿ ಶಿಕ್ಷಣ ಕ್ಷೇತ್ರವನ್ನು ಹಂತ ಹಂತವಾಗಿ ಸ್ವಾಯತ್ತಗೊಳಿಸುವ ಉದ್ದೇಶವನ್ನು ವ್ಯಕ್ತಪಡಿಸಿದ್ದು, ಇದು ಖಾಸಗಿಯವರ ಕೈಗೆ ಕೊಡುವ ಕ್ರಮವಾಗಿದೆ. ಆಗ ಬಡವರಿಗೆ ಉನ್ನತ ಶಿಕ್ಷಣದ ವಂಚನೆ ಮತ್ತು ಸಂವಿಧಾನಾತ್ಮಕ ಸಾಮಾಜಿಕ ನ್ಯಾಯದ ನಿರಾಕರಣೆ ಆಗುತ್ತದೆ. ಇದು 6.1ರಲ್ಲಿ ಹೇಳಿರುವ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಆದರ್ಶಕ್ಕೆ ಮಾರಕವಲ್ಲವೆ? ಈ ಮಾರಕ ಮಾದರಿಗೆ ಪೂರಕವಾಗಿ 7-8-2021ರಂದು ಹೊರಡಿಸಿರುವ ಸರ್ಕಾರಿ ಆದೇಶವನ್ನು ನೋಡಬಹುದು. ಪದವಿ ಕಾಲೇಜುಗಳಲ್ಲಿ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸುವ ಮಾರ್ಗಸೂಚಿಯುಳ್ಳ ಈ ಆದೇಶವು ಉನ್ನತ ಶಿಕ್ಷಣ ಇಲಾಖೆಯಡಿಯಲ್ಲಿ ಬರುವ ವಿಶ್ವವಿದ್ಯಾಲಯಗಳು, ಸರ್ಕಾರಿ ಕಾಲೇಜುಗಳು ಮತ್ತು ಸಂಯೋಜಿತ ಕಾಲೇಜುಗಳಿಗೆ ಮಾತ್ರ ಅನ್ವಯಿಸುತ್ತದೆ. ಅಂದರೆ ಡೀಮ್ಡ್ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಿಗೆ, ಭಾಗಶಃ ಸ್ವಾಯತ್ತ ಕಾಲೇಜುಗಳಿಗೆ ಅನ್ವಯಿಸುವುದಿಲ್ಲ. ಇದು ಶಿಕ್ಷಣದ ಕಾರ್ಪೊರೇಟೀಕರಣಕ್ಕೆ ಅವಕಾಶ ನೀಡುತ್ತದೆ. ಅವಕಾಶವಂಚಿತ ಸಮುದಾಯಗಳಿಗೆ ಮತ್ತಷ್ಟು ವಂಚನೆಯಾಗುತ್ತದೆಯಲ್ಲವೆ? ಈ ನಡುವೆ ಶೇ 40ರಷ್ಟು ಆನ್‍ಲೈನ್ ಶಿಕ್ಷಣಕ್ಕೆ ಅವಕಾಶ ನೀಡಿರುವುದು ಶೈಕ್ಷಣಿಕ ಅಸಮಾನತೆಯನ್ನು ಅಧಿಕಗೊಳಿಸುತ್ತದೆ. ಉದ್ಯಮ ಪರ ನೀತಿಯಾಗುತ್ತದೆ. ಬಡವರ ವಿರೋಧಿಯಾಗುತ್ತದೆ.

ವಿದ್ಯಾರ್ಥಿಗಳಿಗೆ ಬಹುಶಿಸ್ತೀಯ ವಿಷಯಗಳ ಆಯ್ಕೆಗೆ ಅವಕಾಶವಿದೆಯೆಂಬುದು ಶಿಕ್ಷಣ ನೀತಿಯ ಒಂದು ಮುಖ್ಯಾಂಶವಾಗಿದ್ದರೂ ‘ಬಹುಪಾಲು’ ಕಾಲೇಜುಗಳಲ್ಲಿ ಬಹುಶಿಸ್ತಿನ ವಿಷಯಗಳಿಲ್ಲ, ಕೊಠಡಿಗಳಿಲ್ಲ, ಬೋಧಿಸುವ ಅಧ್ಯಾಪಕರೂ ಸಾಕಷ್ಟಿಲ್ಲ. ಇಷ್ಟಾದರೂ ಶಿಕ್ಷಣ ನೀತಿ ಯನ್ನು ತರಾತುರಿಯಲ್ಲಿ ಜಾರಿ ಮಾಡುವುದೇಕೆ? ಮುಕ್ತ ಚರ್ಚೆಯ ಆಶ್ವಾಸನೆ ನೀಡಿದ ಮುಖ್ಯಮಂತ್ರಿಯವರು ಈ ಸರಳ ಪ್ರಶ್ನೆಗಳನ್ನು ಪರಿಶೀಲಿಸುತ್ತಾರೆಯೆ?

( ಓದುಗರ ಅಭಿಪ್ರಾಯಗಳಿಗೆ ಸ್ವಾಗತ. ಇಲ್ಲಿಗೆ ವಾಟ್ಸಪ್ ಮಾಡಿ ; 9448863309 ಅಥವಾ ಈ ಮೇಲ್ umeshmbelakud@gmail.com ಮಾಡಿ )

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...
- Advertisement -

More Articles Like This

- Advertisement -
close
error: Content is protected !!