spot_img
spot_img

ಬಹುಮುಖ ಪ್ರತಿಭೆಯ ಕ್ರಿಯಾಶೀಲ ಶಿಕ್ಷಕ ವೈ.ಬಿ.ಕಡಕೋಳ

Must Read

ಕಲಿಸುವುದು ಜಗತ್ತಿನ ಅತ್ಯಂತ ಉದಾತ್ತವಾದ, ಉನ್ನತವಾದ ಕಸಬು. ಕಲಿಸುವುದು ಎಂದರೆ ಕಲಿಯುವುದು ಎಂದೇ ಅರ್ಥ. ಕಲಿಯುವುದರ ಹಾಗೂ ಕಲಿಸುವುದರ ಹಿಂದಿರುವ ಚೆಲುವನ್ನು ಕಂಡುಕೊಂಡರೆ ಅದರಿಂದ ಪಡೆಯುವ ಆನಂದ ಅವರ್ಣನಿಯವಾಗಿರುತ್ತದೆ.

ಈ ಸಾಲುಗಳು ಜಿಡ್ಡು ಕೃಷ್ಣಮೂರ್ತಿಯವರದು. ಇಂತಹ ಕಲಿಸುವ ಮತ್ತು ಕಲಿಯುವ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ವೈ.ಬಿ.ಕಡಕೋಳ ಅವರು ಚಿಂತನಾಶೀಲ ಶಿಕ್ಷಕ, ಸೂಕ್ಷ್ಮ ಸಂವೇದನೆಯ ಲೇಖಕರು.

ಮೂಲತಃ ಬೆಳಗಾವಿ ಜಿಲ್ಲೆಯ ಸವದತ್ತಿಯವರಾದ ಯಲ್ಲಪ್ಪ ಬಸಪ್ಪ ಕಡಕೋಳ ಅವರು.

ಇವರು ಜುಲೈ ೨೨, ೧೯೭೧ರಂದು ಜನಿಸಿದರು. ಅವರ ತಂದೆ ಬಸಪ್ಪ, ತಾಯಿ ಗಂಗವ್ವ. ಬಸಪ್ಪನವರು ನೀರಾವರಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರು ಪ್ರಾಥಮಿಕ ಶಿಕ್ಷಣವನ್ನು ಸವದತ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ , ಪ್ರೌಢ ಶಿಕ್ಷಣವನ್ನು ಮುನವಳ್ಳಿಯ ಎಸ್.ಪಿ.ಜೆ.ಜಿ ಪ್ರೌಢಶಾಲೆಯಲ್ಲಿ, ಪಿ.ಯು.ಸಿ ಯನ್ನು ಅಜ್ಜಪ್ಪ ಗಡಮಿ ಸಂಯುಕ್ತ ಪ.ಪೂ ಕಾಲೇಜಿನಲ್ಲಿ ಪೂರೈಸಿದರು. ಶಿಕ್ಷಣಶಾಸ್ತ್ರ ಅಧ್ಯಯನ ಮಾಡಿದ ವೈ.ಬಿ ಕಡಕೋಳರು ಕಾಲೇಜಿಗೆ ಮೊದಲಿಗರಾಗಿ ತೇರ್ಗಡೆಯಾದರು. ಹಾಗೆಯೇ ಶಿಕ್ಷಕ ತರಬೇತಿಯನ್ನು ಪೂರೈಸಿದರು.

ನಂತರ ಧಾರವಾಡದ ಕೆ. ಎಲ್. ಇ. ಸಂಸ್ಥೆಯ ಶ್ರೀ ಮೃತ್ಯುಂಜಯ ಪದವಿ ಕಾಲೇಜಿನಲ್ಲಿ ಬಿ.ಎ ಪದವಿಯನ್ನು ಕಾಲೇಜಿಗೆ ಮೊದಲಿಗರಾಗಿ ತೇರ್ಗಡೆಯಾಗಿದ್ದಲ್ಲದೇ ಕಾಲೇಜಿನಿಂದ ಆದರ್ಶ ವಿದ್ಯಾರ್ಥಿ ಪುರಸ್ಕಾರಕ್ಕೆ ಪಾತ್ರರಾದರು.

ಅವರು ೧೯೯೪ರಲ್ಲಿ ಮುನವಳ್ಳಿ ಸಮೀಪದ ತೆಗ್ಗಿಹಾಳ ಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಯನ್ನು ಪ್ರಾರಂಭಿಸಿದರು. ಅವರು ತರಗತಿಯಲ್ಲಿ ಮಕ್ಕಳ ಮಟ್ಟಕ್ಕಿಳಿದು ಪಾಠ ಮಾಡುತ್ತಾ ಮಕ್ಕಳ ಓದನ್ನು ಮತ್ತು ಜ್ಞಾನವನ್ನು ವಿಸ್ತರಿಸುತ್ತಾ, ಅವರಲ್ಲಿರುವ ವಿವಿಧ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಹೀಗೆಯೇ ೧೭ ವರ್ಷಗಳವರೆಗೆ ತೆಗ್ಗಿಹಾಳ ಶಾಲೆಯಲ್ಲಿಯೇ ನಿರಂತರವಾಗಿ ಸೇವೆ ಸಲ್ಲಿಸಿ ಮಕ್ಕಳ ನೆಚ್ಚಿನ ಶಿಕ್ಷಕರಾಗಿ ಮತ್ತು ಗ್ರಾಮಸ್ಥರ ಮೆಚ್ಚಗೆಗೆ ಪಾತ್ರರಾಗಿದ್ದಾರೆ. ಶಿಕ್ಷಕ ವೃತ್ತಿಯಲ್ಲಿನ ವೃತ್ತಿ ಬದ್ಧತೆಗೆ ಪ್ರಾಮಾಣಿಕತೆಗೆ ಶಿಕ್ಷಣ ಇಲಾಖೆ ನೀಡಿದ ಹಲವು ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದವರು. ತೆಗ್ಗಿಹಾಳ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಸರಕಾರದ ಜನ ಮೆಚ್ಚಿದ ಶಿಕ್ಷಕ ತಾಲೂಕು ಮಟ್ಟದ ಪ್ರಶಸ್ತಿ ಇವರಿಗೆ ದೊರೆಯಿತು. ನಂತರ ಅರ್ಟಗಲ್ ಶಾಲೆಗೆ ಹಾಜರಾದರು ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಗೌರವಕ್ಕೆ ಪಾತ್ರರಾದರು.

ಅವರು ಶಿಕ್ಷಣ ಇಲಾಖೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ಸಿ.ಆರ್.ಪಿ, ಬಿ.ಆರ್.ಪಿ ಯಾಗಿ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ ಮೇಲಾಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ರಾಜ್ಯ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿರುವ ವೈ.ಬಿ.ಕಡಕೋಳ ಅವರು ಶಿಕ್ಷಕ ವೃತ್ತಿಯೊಂದಿಗೆ ಎಂ.ಎ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಾಹ್ಯ ವಿದ್ಯಾರ್ಥಿಯಾಗಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿರುವುದು ವಿಶೇಷ.

ಅಲ್ಲದೇ ‘ಮುನವಳ್ಳಿ ಒಂದು ಸಾಂಸ್ಕೃತಿಕ ಅಧ್ಯಯನ”ದ ಡಾ.ವ್ಹಿ.ಎಸ್ ಮಾಳಿಯವರ ಮಾರ್ಗದರ್ಶನದಲ್ಲಿ ಸಾದರಪಡಿಸಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಎಂ.ಫಿಲ್ ಪದವಿ ಪಡೆದುಕೊಂಡಿದ್ದಾರೆ. ಹಾಗೆಯೇ ಪದವಿ ಕಾಲೇಜಿನ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ಕೆಸೆಟ್‌ನ್ನು ಅವರು ಪಾಸು ಮಾಡಿದ್ದಾರೆ.

ಸದ್ಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಿಂದ ಡಾ.ಮಹೇಶ ಗಾಜಪ್ಪನವರ ಮಾರ್ಗದರ್ಶನದಲ್ಲಿ ‘ತಲ್ಲೂರು ರಾಯನಗೌಡರ ಸಮಗ್ರ ಅಧ್ಯಯನ’ ದ ಕುರಿತು ಪಿಎಚ್.ಡಿ ಅಧ್ಯಯನ ಕೈಗೊಂಡಿರುವುದು ವಿಶೇಷವಾಗಿದೆ.

ವೃತ್ತಿಯಲ್ಲಿ ಶಿಕ್ಷಕ ಪ್ರವೃತ್ತಿಯಲ್ಲಿ ಲೇಖಕರಾಗಿರುವ ಅವರು ಸಮಕಾಲಿನ ಸಾಹಿತ್ಯ ಮತ್ತು ಸಾಮಾಜಿಕ ಬದುಕಿನಲ್ಲಿ ಸದ್ದುಗದ್ದಲವಿಲ್ಲದೇ ಹಲವಾರು ರೀತಿಯ ಬರಹ, ಕೆಲಸ-ಕಾರ್ಯಗಳಲ್ಲಿ ನಿರತರಾಗಿದ್ದಾರೆ. ವೈ.ಬಿ.ಕಡಕೋಳ ಅವರು ಕಥೆ, ಕವನ, ಪ್ರವಾಸ ಕಥನ ಮತ್ತು ಕ್ಷೇತ್ರ ಕಾರ್ಯದ ಅನುಭವದಲ್ಲಿ ಅರಳಿದ ಸಾಹಿತ್ಯ ಕೃತಿಗಳನ್ನು ಪ್ರಕಟಿಸಿ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ.

ಅವರು ‘ಸಾವು ಬದುಕಿನ ನಡುವೆ, ಕಥಾ ಸಂಕಲನ, ‘ಸಂಸ್ಕಾರ ಫಲ’ ಮಕ್ಕಳ ಕಥಾ ಸಂಕಲನ, ‘ಚರಿತ್ರೆಗೊಂದು ಕಿಟಕಿ’, ಸ್ಥಳ ನಾಮಗಳ ಪರಿಚಯ ಸಂಕಲನ, ‘ದೇಗುಲ ದರ್ಶನ’, ಮೂವತ್ನಾಲ್ಕು ದೇಗುಲಗಳ ಪರಿಚಯ,ಕತೆಯಲ್ಲ ಜೀವನ (ಸಂಪಾದಿತ) ಗುರು ಶಿಷ್ಯ ಸಂಬಂಧ (ಸಂಪಾದಿತ) ಒಂಟಿ ಪಯಣ ( ಸಂಪಾದಿತ) ಮನೆ ಮದ್ದು (ಸಂಪಾದಿತ) ಲೂಸಿ ಸಾಲ್ಡಾನಾ ಬದುಕು ಬರಹ (ಸಂಪಾದಿತ) ‘ಅಮೃತ ಧಾರೆ’ (ನುಡಿಮುತ್ತುಗಳ ಸಂಗ್ರಹ) ಮತ್ತು ‘ಪಯಣಿಗ’ ಸುಂದರವಾದ ೪೭ ಪ್ರವಾಸಿ ತಾಣಗಳು ಹವಳದ ಸಿರಿ (ಬಿಡಿ ಲೇಖನಗಳು). ಸ್ವರ್ಗ ನರಕ (ಮಕ್ಕಳ ಕಥಾ ಸಂಕಲನ) ತುಂಬಿದ ಹೊಳೆ (ಬಿಡಿ ಲೇಖನಗಳು) ವಚನ ದರ್ಪಣ (ಸಂಪಾದಿತ ಕೃತಿ) ಅಭಿಪ್ರೇರಣೆ (ಸಂಪಾದಿತ)ಹೀಗೆ ಒಟ್ಟು ೧೬ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಅಲ್ಲದೇ ಮರೆಯಲಾಗದ ಮಹಾನುಭಾವರು, ಹವಳದ ರಾಶಿ. ಬಲ್ಲವರ ಬಳಗ ಎರಡು ವ್ಯಕ್ತಿ ಚಿತ್ರಣಗಳು ಮತ್ತು ಇಳೆಗೆ ಹೊಸ ಕಳೆ (ಕವನ ಸಂಕಲನ). ಹುಲಿಯು ಹುಟ್ಟಿತ್ತು ಕಿತ್ತೂರ ನಾಡಾಗ ಕವಿ ಚಂದ್ರಪ್ಪ ಚಲವಾದಿ ( ಸಂಪಾದಿತ) ನಾಲ್ಕು ಕೃತಿಗಳು ಅಚ್ಚಿನಲ್ಲಿವೆ. ನಮ್ಮ ಸುತ್ತಣ ಬಾಳಿನಲ್ಲಿ ಹಲವು ವೈಷಮ್ಯಗಳನ್ನು ಗಮನಿಸುವುದಕ್ಕಿಂತ ಸಮನ್ವಯದ ಹಾದಿಯಲ್ಲಿ ಮಾನವೀಯ ಬದುಕು ಸಾಧಿಸಬೇಕು ಎಂಬ ಚಿಂತನೆಯುಳ್ಳ ಶಿಕ್ಷಕ, ಲೇಖಕರಾಗಿರುವ ವೈ.ಬಿ.ಕಡಕೋಳ ಅವರು ಬೋಧನೆ, ಚಿಂತನೆ, ಸಾಹಿತ್ಯ, ಸಂಸ್ಕೃತಿಗಳ ಸಂಗಮದ ವ್ಯಕ್ತಿತ್ವವುಳ್ಳವರಾಗಿದ್ದಾರೆ.

ಅವರು ಕರ್ನಾಟಕ ಇತಿಹಾಸ ಅಕಾಡೆಮಿ, ಕರ್ನಾಟಕ ವಿದ್ಯಾವರ್ಧಕ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು, ಜನಪದ ಸಾಹಿತ್ಯ ಪರಿಷತ್ತು ಮತ್ತು ಚುಟುಕು ಸಾಹಿತ್ಯ ಪರಿಷತ್ತು. ಮಕ್ಕಳ ಸಾಹಿತ್ಯ ವೇದಿಕೆ.ಅಖಿಲ ಭಾರತ ಸಾಹಿತ್ಯ ಪರಿಷತ್ತು ಮುಂತಾದ ಸಂಘ-ಸಂಸ್ಥೆಗಳ ಸದಸ್ಯರಾಗಿ ಅನುಪಮ ಸೇವೆ ಸಲ್ಲಿಸುತ್ತಿದ್ದಾರೆ.

ಸದ್ಯ ಕನ್ನಡ ಸಾಹಿತ್ಯ ಪರಿಷತ್ತು ಸವದತ್ತಿ ತಾಲೂಕಿನ ಗೌರವ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವರು. ಅವರು ಯಾವುದೇ ಬಿಗುಮಾನಗಳಿಲ್ಲದೆ ಎಲ್ಲರೊಂದಿಗೆ ಬೆರೆಯುವ ಸಹೃದಯಿ. ಉತ್ತಮ ನಡೆ, ಚಂದದ ಮಾತು, ದಿಟ್ಟ ನಿಲುವು, ಮುಕ್ತ ಮನಸ್ಸಿನ ವಿವೇಕವಂತರು. ಅವರು ತಾಯಿ ಗಂಗಮ್ಮ, ಪತ್ನಿ ಶಿವಲೀಲಾ, ಮಕ್ಕಳಾದ ಅಭಿನಂದನ ಆತ್ಮಾನಂದ ಹಾಗೂ ಪ್ರಜ್ವಲ್ ಇವರೆಲ್ಲರ ಪ್ರೋತ್ಸಾಹವನ್ನು ಸದಾ ನೆನಪಿಸಿಕೊಳ್ಳುತ್ತಾರೆ.

ವೈ.ಬಿ.ಕಡಕೋಳ ಅವರ ಸೇವೆಯನ್ನು ಗುರುತಿಸಿ ನಾಡಿನ ಹಲವಾರು ಸಂಘ-ಸಂಸ್ಥೆಗಳು ಗೌರವಿಸಿ ಸನ್ಮಾಸಿವೆ. ಕರ್ನಾಟಕ ಸರ್ಕಾರದ ಆದರ್ಶ ಶಿಕ್ಷಕ ರಾಜ್ಯ ಪ್ರಶಸ್ತಿ, ನರಗುಂದ ಪತ್ರಿವನದ ಬಿಲ್ವಶ್ರೀ ಪ್ರಶಸ್ತಿ, ಅಪ್ನಾದೇಶ ಬಳಗದ ಶಿಕ್ಷಕ ರತ್ನ, ಸಿರಿಗನ್ನಡ ವೇದಿಕೆಯ ಕಾವ್ಯಶ್ರೀ, ಗಾಣ ಸಿರಿ ಪ್ರಶಸ್ತಿ.ಶಿಕ್ಷಣ ಇಲಾಖೆಯ ಧಾರವಾಡ ಡಯಟ್‌ನ ಲೀಲಾ ಕಲಕೋಟಿ ದತ್ತಿ ನಿಧಿಯ ವಿಭಾಗ ಮಟ್ಟದ ಶಿಕ್ಷಕ ಸಾಹಿತಿ ಹೀಗೆ ವಿವಿಧ ಸಂಘಟನೆಗಳ ಪ್ರಶಸ್ತಿ ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದಾರೆ.

ಇವರು ಸಂಪಾದಿಸಿದ ಅಕ್ಷರ ತಾಯಿ ಲೂಸಿ ಸಾಲ್ಡಾನಾ ಗುರುಮಾತೆಯ ಜೀವನ ಚಿತ್ರಣದ ಕತೆಯಲ್ಲ ಜೀವನ ಕೃತಿ ಆಧರಿಸಿದ ದಾರವಾಡ ಜಿಲ್ಲೆಯ ಚಿತ್ರಕಲಾ ಶಿಕ್ಷಕ ಬಾಬಾಜಾನ್ ಮುಲ್ಲಾ ಅವರ ನಿರ್ದೇಶನದ ಬದುಕು ಬಂಡಿ ಚಲನಚಿತ್ರ ಪ್ರತಿಶತ ೮೦% ರಷ್ಟು ಚಿತ್ರೀಕರಣಗೊಂಡಿದ್ದು ಅದರಲ್ಲಿ ಪತ್ರಕರ್ತನ ಪಾತ್ರದಲ್ಲಿ ಅಭಿನಯಿಸುವ ಮೂಲಕ ಇವರೊಬ್ಬ ಕಲಾವಿದರಾಗಿ ಕೂಡ ಹೊರಹೊಮ್ಮಿರುವರು.

ಹಲವಾರು ಸೃಜನಾತ್ಮಕ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಅವರು ನಾಡಿನ ಸಾಂಸ್ಕೃತಿಕ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ವಿಶಿಷ್ಟವಾದ ಕೊಡುಗೆಯನ್ನು ನೀಡಲಿ, ಅವರ ಸಾಧನೆ ನಿರಂತರವಾಗಿರಲಿ. ಅವರನ್ನು ಅಭಿನಂದಿಸಲು ಮೊಬೈಲ್‌ ೯೪೪೯೫೧೮೪೦೦, ೮೯೭೧೧೧೭೪೪೨ ಇಲ್ಲಿಗೆ ಕರೆ ಮಾಡಬಹುದು.


ಸುರೇಶ ಗುದಗನವರ
ನಿವೃತ್ತ ಉಪನ್ಯಾಸಕರು
ರಾಮದುರ್ಗ
೯೪೪೯೨೯೪೬೯೪

- Advertisement -
- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!