ಎಷ್ಟು ಹುಡುಗರು ನಿನ್ನ ಹಿಂದೆ ಅಲೆದು ಅಲೆದು ಸುಸ್ತಾಗಿರುವರೋ ಲೆಕ್ಕಕ್ಕಿಲ್ಲ. ನಿನ್ನೊಂದಿಗೆ ಚೆಂದದ ಕನಸು ಕಟ್ಟಿದವರ ಕನಸೆಲ್ಲ ನುಚ್ಚುನೂರಾಗಿವೆ. ತ್ರಿಲೋಕವೆಲ್ಲ ಹುಡುಕಿದರೂ ನಿನ್ನಂತಹ ಚೆಂದದ ಚೆಲುವಿ ಸಿಗುವುದಿಲ್ಲ. ದೇವಲೋಕದ ಸುಂದರಿಯರಾದ ರಂಭೆ, ಮೇನಕೆ, ತಿಲೋತ್ತಮೆ ನಿನ್ನ ಮುಂದೆ ಯಾವ ಲೆಕ್ಕಕ್ಕೂ ಇಲ್ಲ. ಬರುವವರನ್ನು ಹೋಗುವವರನ್ನು ಸೂಜಿಗಲ್ಲಿನಂತೆ ಸೆಳೆಯುವ ನಿನ್ನನ್ನು ನೋಡುವುದೇ ಒಂದು ಸಡಗರ. ಪ್ರಶಾಂತವಾದ ಹುಣ್ಣಿಮೆ ಚಂದಿರನಂತೆ ಅಂದದ ಅನುರೂಪ ಹತ್ತಿರ ಇದ್ದರೂ ನನಗೆ ಸಿಗಲಿಲ್ಲ ಅಂತ ಮನಸ್ಸಿಗೆ ಬೇಜಾರು ಮಾಡಿಕೊಂಡು ದೇವದಾಸರಾದವರು, ದುಃಖ ತೋಡಿಕೊಳ್ಳುವವರು ಎಷ್ಟು ಜನ ಅಂತ ಲೆಕ್ಕ ಇಡಲು ಆಗುವುದಿಲ್ಲ. ಯಾರನ್ನೂ ಕಣ್ಣೆತ್ತಿ ನೋಡದ ನೀನು ನನ್ನ ಅದ್ಹೇಗೆ ಪ್ರೀತಿಸ್ತಿದಿಯಾ ಅಂತ ಆಶ್ಚರ್ಯಪಡುತ್ತಿದ್ದಾರೆ. ಮತ್ತೆ ಕೆಲವರು ನಮ್ಮಿಬ್ಬರ ಜೋಡಿ ನೋಡಿ ಖುಷಿಯಿಂದ ಇಬ್ಬರ ಜೋಡಿ ಹೇಳಿ ಮಾಡಿಸಿದಂತಿದೆ ಬೇಗ ಓಲಗ ಊದಲಿ ಅಂತ ಹರಿಸುತ್ತಿದ್ದಾರೆ.
ಚಿಕ್ಕಂದಿನಿಂದಲೂ ನಿನ್ನ ನೋಡುತ್ತ ಬಂದಿದ್ದರೂ ಈ ಹದಿಹರೆಯದ ವಯಸ್ಸಿನಲ್ಲಿ ಏನೋ ಒಂದು ಕೌತುಕದ ಕುತೂಹಲ. ನಿನ್ನ ನಿಲುವು, ಮುಂಗುರುಳುಗಳೊಂದಿಗೆ ನಿನ್ನ ಬೆರಳು ಆಡುವ ಆಟದ ಮೋಹಕತೆಯನ್ನು ಬೆರಗುಗಣ್ಣಿನಿಂದ ಕದ್ದು ಕದ್ದು ನೋಡುತ್ತಿರುತ್ತೇನೆ. ಊರಾಚೆಗಿನ ಕೆರೆ ಬಾಲ್ಯದಲ್ಲಿ ಕೂಡಿ ಆಡಿದಂತಹ ನಮ್ಮಿಬ್ಬರ ತುಂಟಾಟದ ಅವಿಸ್ಮರಣೀಯ ದಿನಗಳ ಸಾಕ್ಷಿಯಾಗಿದೆ. ನಮ್ಮೀರ್ವರ ಸುಮಧುರ ಪ್ರೀತಿಯ ಇತಿಹಾಸವನ್ನು ಹೇಳುತ್ತಿದೆ.
ಅಂದು ಭಾನುವಾರವಾದ್ದರಿಂದ ಕಾಲೇಜಿಗೆ ಹೋಗುವ ಧಾವಂತವಿಲ್ಲವೆಂದು ತಡವಾಗಿಯೇ ನಿನ್ನ ಗುಂಗಲ್ಲಿ ಕೆರೆ ದಡಕ್ಕೆ ವಾಕಿಂಗ್ ಹೋದೆ. ನೆನೆದವರ ಮನದಲ್ಲಿ ಅನ್ನುವಂತೆ ಅಲ್ಲಿ ನೀರು ತುಂಬಿದ ಬಿಂದಿಗೆ ಹೊತ್ತ ನೀನು ಸಿಕ್ಕೆ. ನಗೆ ಮಲ್ಲಿಗೆ ಅರಳಿಸಿ ನಕ್ಕೆ. ನಕ್ಷತ್ರಗಳಂತೆ ಹೊಳೆವ ಕಣ್ಣುಗಳನ್ನು, ಮುಡಿಗೆ ಮುಡಿದ ಸುವಾಸಿತ ಮಲ್ಲಿಗೆಯನ್ನು, ತೆಳ್ಳಗೆ, ಬೆಳ್ಳಗೆ ಇರುವ ಸುಂದರಿಯನ್ನು ತದೇಕ ಚಿತ್ತದಿಂದ ನೋಡುತ್ತ ನಿಂತೆ. ಆ ಕ್ಷಣ ಒಂದು ತರಹ ಭಾವ ಪುಳಕ. ನಿನ್ನೊಂದಿಗೆ ಗೆಳತಿಯರು ಇದ್ದುದರಿಂದ ಆಡಬೇಕೆಂದಿದ್ದ ನೂರಾರು ಮಾತುಗಳು ಮನದಲ್ಲೇ ಉಳಿದವು.
‘ಕಟ್ಟುಮಸ್ತಾದ ದೇಹ, ಅಲೆಯಂತಹ ದಟ್ಟ ಕೂದಲು, ಮುಖದಲ್ಲಿರುವ ಆ ತೇಜಸ್ಸು, ನೀಟಾಗಿ ಟ್ರಿಮ್ ಮಾಡಿದ ಗಡ್ಡ, ದುಂಡು ಮುಖಕ್ಕೆ ಹೊಂದುವಂತಹ ಮೀಸೆ, ಎಂಥವರನ್ನೂ ಆಕರ್ಷಿಸುವಂತಹ ಆಕರ್ಷಣೀಯ ಕಣ್ಣು ಒಟ್ಟಾರೆ ತಿದ್ದಿ ತೀಡಿ ಮಾಡಿದ ತೇಜೋಪೂರ್ಣವಾದ ಪ್ರತಿಮೆಯಂತಿರುವ ರಾಜಕುಮಾರ ನೀನು.’ ಎಂದು ನಾ ಬರೆದ ಪ್ರೇಮ ಪತ್ರಕ್ಕೆ ಪ್ರತ್ಯುತ್ತರವಾಗಿ ನೀನು ಬರೆದದ್ದನ್ನು ಮರೆಯುವದಾದರೂ ಹೇಗೆ ನೀನೇ ಹೇಳು? ಇಷ್ಟು ಸಣ್ಣ ವಯಸ್ಸಿಗೆ ಬಿಸಿನೆಸ್‌ನಲ್ಲಿ ಇಂಥ ದೊಡ್ಡ ಸಾಧನೆ ಮಾಡಿದ ಸಾಧಕ ನೀನು. ಹೀಗಿದ್ದರೂ ಎಷ್ಟು ಸರಳ ಸ್ವಭಾವ. ಎತ್ರಕ್ಕೇರಿದ ವ್ಯಕ್ತಿತ್ವವಿದ್ದರೂ ನಿಗರ್ವಿ ಅದಕ್ಕೆಂದೇ ಒಪ್ಪಿದೆ ಅಂತ ನನ್ನನ್ನು ಬಿಗಿದಪ್ಪಿ ಹೇಳಿದ್ದು ಇನ್ನೂ ಹಸಿರಾಗಿದೆ. ಏನೇ ಹೇಳು ಗೆಳತಿ ನೀ ಜೊತೆಗಿದ್ದರೆ ಸಾಕು ರೆಕ್ಕೆ ಮೂಡಿದಂತಾಗುತ್ತದೆ. ಮನಸ್ಸಿನ ಆಕಾಶದಲ್ಲಿ ಮನಬಂದಂತೆ ಹಾರುವಾಸೆ ಉಕ್ಕುತ್ತದೆ. ನಿಶ್ಚಿತಾರ್ಥದ ನಂತರ ಒಮ್ಮೆ ಸಿಗಲೇಬೇಕೆಂಬ ನನ್ನ ಒತ್ತಾಸೆಗೆ ಮಣಿದು ಅದೇ ಸಂಜೆ ನೀ ತೋಟಕ್ಕೆ ಹೋಗುತ್ತಿರುವ ಸುದ್ದಿ ನಿನ್ನ ಗೆಳತಿಯಿಂದ ಗೊತ್ತಾಯ್ತು.
ನೀ ಬರುವ ಸುದ್ದಿ ಕಿವಿಗೆ ಬಿದ್ದಾಗಿನಿಂದ ಸಂಜೆ ಯಾವಾಗ ಆಗುತ್ತೋ ಅಂತ ಕಾಯುತ್ತಲೇ ಇದ್ದೆ. ಮನೆಯಲ್ಲಿ ಶತಪಥ ಹಾಕುತ್ತಲೇ ಇದ್ದೆ. ಇವತ್ತೇಕೆ ಹೀಗೆ ಓಡಾಡ್ತಿದ್ದಿಯಾ ಅಂತ ಅಪ್ಪ ಅವ್ವ ಕೇಳಿದ್ದೂ ಆಯ್ತು. ತಡೆಯಲಾರದೆ ನಾಲ್ಕು ಗಂಟೆಗೆ ನಿಮ್ಮ ತೋಟದ ಮುಂದೆ ಪ್ರೇಮದೇವತೆಗಾಗಿ ಕಾಯತೊಡಗಿದೆ. ಬಂಗಾರ ಬಣ್ಣದ ರವಿಕೆಗೆ ಕೆಂಪು ಕಸೂತಿ ಹಾಕಿದ ರವಿಕೆ ಅದಕ್ಕೊಪ್ಪುವ ಕಡುನೀಲಿ ಸೀರೆಯುಟ್ಟು ನಾಗರ ಜಡೆ ಬಿಟ್ಟು ಬರುತ್ತಿದ್ದುದನ್ನು ನೋಡಿದಾಗ ಆಕಾಶ ಮೂರೇ ಗೇಣು ಉಳಿದಿದತ್ತು.
ಕೊಂಚ ದೂರದಿಂದಲೇ ನಿನ್ನ ಮುಖ ಕುತ್ತಿಗೆ ಹೀಗೆ ದೃಷ್ಟಿ ಹಾಯಿಸುತ್ತಿದ್ದೆ. ಅದೇ ಮೊದಲ ಬಾರಿಗೆ ಒಂದು ಹೆಣ್ಣನ್ನು ಇಷ್ಟು ಹತ್ತಿರದಿಂದ ಆಸೆಗಣ್ಣಿನಿಂದ ನೋಡಿದ್ದೆ. ಇದುವರೆಗೂ ಅದೆಷ್ಟೋ ಹುಡುಗಿಯರು ತಾವೇ ನನ್ನ ಬಳಿ ಬಂದರೂ ಯಾರನ್ನೂ ಭೇಟಿಯಾಗಿರಲಿಲ್ಲ. ಎಲ್ಲರನ್ನೂ ದೂರವೇ ಇಡುತ್ತಿದ್ದೆ. ಯಾವ ಹೆಣ್ಣಿಗೂ ನನ್ನ ಸಂಯಮವನ್ನು ಕಳೆದುಕೊಂಡಿರಲಿಲ್ಲ.ಆದರೆ ನಿನ್ನ ಕಂಡ ಮನಸ್ಸು ಸೇರಲು ತುದಿಗಾಲಲ್ಲಿ ಕುಣಿಯುತ್ತಿತ್ತು. ತೋಟದ ಮನೆಯಲ್ಲಿ ನಾವಿಬ್ಬರೇ ನಾನು ಮೂಗನಂತಿದ್ದೆ. ‘ಮುದ್ದಾಗಿ ನೀನು ನನ್ನ ಕೂಗಿದೆ.’ ನೀನೇ ಮಾತು ಆರಂಭಿಸಿದೆ. ಹೇಗೆ ಕಾಣಸ್ತಿದಿನಿ ಸೀರೆಯಲ್ಲಿ ಎಂದೆ. ಅದಕ್ಕೆ ನಾನು, ಅಪ್ಸರೆ ತರ ಕಾಣಸ್ತಿದಿಯಾ ಎನ್ನುತ್ತ ಹೆದರುತ್ತಲೇ ನಿನ್ನ ಮೃದುವಾದ ಕೋಮಲ ಕೈ ಅಮುಕಿದೆ.
ನೀ ಮುಂದಕ್ಕೆ ಸರಿದಂತೆ ನಾ ಹಿಂದಕ್ಕೆ ಹೆಜ್ಜೆ ಹಾಕದೇ ಮನಮೋಹಕ ನೋಟಕೆ ಮನಮೋಹಿತನಾಗಿ ನಿನ್ನ ಸೆಳೆತಕ್ಕೆ ಸೋತು ಹೋದೆ. ನೋಡನೋಡುತ್ತಲೇ ಎರಡು ಕೈಗಳು ನಿನ್ನ ಭುಜದ ಮೇಲಿದ್ದವು. ಕೈಗಳನ್ನು ಕೆಳಕ್ಕೆ ಇಳಿಸಲು ನಿನ್ನ ಕೈ ತಯಾರಾಗುವ ಹೊತ್ತಿಗೆ ಬೆರಳುಗಳನ್ನು ಬೆರಳುಗಳಿಂದ ಬೆರೆಸಿಯಾಗಿತ್ತು. ಗೊತ್ತಿಲ್ಲದೇ ಇನ್ನೊಂದು ಕೈಯಿಂದ ನಿನ್ನ ಬಳಸಿಯಾಗಿತ್ತು. ಭಯದಿಂದ ಕೆಂಪಾಗಿ ಕಂಪಿಸುತ್ತಿದ್ದ ಅದುರುವ ಅಧರಗಳಲ್ಲಿ ಅಡಗಿದ ಅಮೃತ ಹೀರಲು ಮುಂದಾದೆ. ಕಣ್ಣು ಕೆನ್ನೆ ಕಿವಿ ಹೀಗೆ ಮುಖದ ತುಂಬೆಲ್ಲ ಜೇನಿನ ಸುಧೆ ಹರಡಿಸಿದೆ.
ಕುತ್ತಿಗೆ ಮೇಲೆ ಬೆರಳಿನ ಚಿತ್ತಾರವೂ ನಡೆದಿತ್ತು. ಹರವಾದ ಎದೆಯ ಮೇಲೆ ನಿನ್ನ ಕೈ ಆಡುತ್ತಿತ್ತು. ಅದೇ ರೋಮಾಂಚಿತ ಕ್ಷಣದಲ್ಲಿ ಹೂವಿನಂತಹ ಕೆಂದುಟಿಗಳಲ್ಲಿ ತುಟಿಗಳು ಬಂಧಿಯಾಗಿದ್ದವು. ಮುತ್ತಿನ ಮತ್ತು ಹೆಚ್ಚುತ್ತ ಹೋಯಿತು. ನನಗೆ ಮೈಯೆಲ್ಲ ಮಿಂಚಿನ ಸಂಚಲನವಾದ ಅನುಭವ ನೀಡಿತ್ತು. ಮನಸ್ಸು ಬೇಡವೆಂದರೂ ನಿನ್ನ ಮೈ ಬಿಸಿ ಉಸಿರಿಗೆ ನನ್ನ ಮನಸ್ಸು ಕರಗಿ ಹೋಗಿತ್ತು. ಮೈ ಮರೆತೂ ಆಗಿತ್ತು. ಮೃದುವಾದ ಮೈ ಮೇಲೆ ಕೈ ಸಲೀಸಾಗಿ ಹರಿದಾಡಿಸಬೇಕು ಎಂಬ ಬಯಕೆ ಹುಟ್ಟತು. ಅದೇ ಕ್ಷಣದಲ್ಲಿ ನಿನ್ನತ್ತ ಅರೆಗಣ್ಣಿನಿಂದ ನೋಡಿದಾಗ ಬಾಗಿದ ಕಣ್ರೆಪ್ಪೆಗಳು ನಿನ್ನ ಸ್ಪರ್ಷಕೆ ಹಾತೊರೆಯುತ್ತಿದ್ದೇನೆ ಎಂದವು. ತಕ್ಷಣ ಕಣ್ರೆಪ್ಪೆಯನ್ನು ನೇವರಿಸಿದೆ. ತಟ್ಟನೆ ತಪ್ಪಿನ ಅರಿವಾದವಳಂತೆ ಮುಜುಗರದಿಂದ ‘ನನಗೆ ಹೋಗಲು ಬಿಡಿ.’ ಎನ್ನುತ್ತ ಅಲ್ಲಿಂದ ಹೆದರಿದ ಹರಿಣಿಯಂತೆ ಓಡಿದೆ.
ನಿನ್ನ ಪ್ರೀತಿಸಲೆಂದು ಹುಟ್ಟಿರುವ ಜೀವವಿದು. ಭಾರವಾಗುತ್ತಿದೆ ನೀನಿರದ ಜೀವನ. ಯೌವ್ವನ ಸವೆದು ಹೋಗುವ ಮುನ್ನ ತನು ವಿರಹದಲಿ ಬೇಕಾಗಿದೆ ಮಿಲನ. ಬೇಕಾಗಿದೆ ಬಳೆ ಹಾಕಿದ ಕೈಬೆರಳುಗಳ ತನನ ತಾನನ. ಅರ್ಧಕ್ಕೆ ನಿಂತ ಒಲವಿನ ಓಕುಳಿಯಾಟವನ್ನು ಮುಂದೆವರೆಸಲು ಮತ್ತು ಅದರಲ್ಲೇ ಕಳೆದುಹೊಗಲು. ಚಾತಕ ಪಕ್ಷಿಯಂತೆ ಕಾಯುತ್ತಿದ್ದೇನೆ. ಮೊದಲಿರಳ ಮೆತ್ತನೆಯ ಹೂವಿನ ಹಾಸಿಗೆಯ ಮೇಲೆೆ. ಸತಾಯಿಸದೇ ಬೇಗ ಬಂದುಬಿಡು. ಪ್ರತಿ ರಾತ್ರಿ ಮೈಯೆಲ್ಲ ಬೆಚ್ಚಗಾಗಿಸಿ ನಿನ್ನ ಸಿಹಿಯಾದ ನೆರಳಾಟದ ನೋವಿನ ಮೆಲುದನಿಯನು ನಿನಗೆ ಕೇಳಿಸುವೆ ಚೆಲುವೆ.
=============================================================
ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ ೯೪೪೯೨೩೪೧೪೨