ಹುಬ್ಬಳ್ಳಿ ವಿಭಾಗದ ಅರಣ್ಯ ಹಸಿರೀಕರಣ ಯೋಜನೆಯಲ್ಲಿ ವ್ಯಾಪಕ ಅವ್ಯವಹಾರ ನಡೆದಿದೆಯೆಂದು ದೂರು ಬಂದ ಹಿನ್ನೆಲೆಯಲ್ಲಿ ನಿವೃತ್ತ ಪ್ರಾದೇಶಿಕ ಅರಣ್ಯಾಧಿಕಾರಿಯೊಬ್ಬರು ಹಾಗೂ ಇಬ್ಬರು ಗುತ್ತಿಗೆದಾರರನ್ನು ಹುಬ್ಬಳ್ಳಿ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.
ಸನ್ ೨೦೨೪-೧೫ ಹಾಗೂ ೨೦೧೫-೧೬ ನೇ ಸಾಲಿನ ಹುಬ್ಬಳ್ಳಿ ವಲಯದ ಅರಣ್ಯ ಹಸಿರೀಕರಣ ಯೋಜನೆಯಲ್ಲಿ ಒಂದು ಕೋಟಿ ರೂ.ಗಳ ಅವ್ಯವಹಾರ ಮಾಡಿದ್ದಾರೆಂದು ನಿವೃತ್ತ ವಲಯ ಅರಣ್ಯಾಧಿಕಾರಿ ಸಿ ಎಚ್ ಮಾವಿನತೋಪ, ಗುತ್ತಿಗೆದಾರರಾದ ದತ್ತಾತ್ರೇಯ ಜಿ. ಪಾಟೀಲ ಹಾಗೂ ವಿನಾಯಕ ಡಿ. ಪಾಟೀಲ ಅವರುಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಎಸಿಬಿ ಉತ್ತರ ವಲಯ ಬೆಳಗಾವಿಯ ಪೊಲೀಸ್ ಅಧೀಕ್ಷಕ ಬಿ ಎಸ್ ನೇಮಗೌಡ ಅವರ ಮಾರ್ಗದರ್ಶನದಲ್ಲಿ ಡಿಎಸ್ ಪಿ ಎಲ್. ವೇಣುಗೋಪಾಲ ಹಾಗೂ ವಿನಾಯಕ ಕೆಲವಡಿಯವರು ದೂರಿನ ಬಗ್ಗೆ ತನಿಖೆ ಕೈಗೊಂಡು ಅವ್ಯವಹಾರ ಸಾಬೀತಾದ ಹಿನ್ನೆಲೆಯಲ್ಲಿ ಮೂವರೂ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದೆದುರು ಹಾಜರುಪಡಿಸಿದರು.
ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.