ಗಡಿ ಜಿಲ್ಲೆಯ ಬೀದರ – ಹೌದು, ಕೊರೋನಾ ಸಂಜೀವಿನಿ ಎಂದು ಕರೆಯಲ್ಪಡುವ ರೆಮ್ಡಿಸಿವಿರ್ ಎಂಬ ಔಷಧಿಯನ್ನು ಖದೀಮರು ಕಾಳಸಂತೆಯಲ್ಲಿ ಏಳೆಂಟು ಪಟ್ಟು ದರದಲ್ಲಿ ಮಾರಾಟ ಮಾಡುತ್ತಿರುವ ಕರಾಳ ಕಥೆಯಿದು.
ಆರೋಗ್ಯ ಇಲಾಖೆ ಸಚಿವರು ನೋಡಬೇಕಾದ, ಉಸ್ತುವಾರಿ ಸಚಿವರು ಕಣ್ತೆರೆಯಬೇಕಾದ ಕಥೆಯಿದು.
ರಾಜ್ಯದಲ್ಲಿ ಕೊರೋನಾ ೨ ನೇ ಅಲೆಯಿಂದಾಗಿ ಸೋಂಕಿತರ ಸಂಖ್ಯೆ ಸಿಕ್ಕಾಪಟ್ಟೆ ಹೆಚ್ಚುತ್ತಿದೆ. ಸೋಂಕಿತರಿಗೆಂದೇ ಸರ್ಕಾರ ರೆಮ್ಡಿಸಿವಿರ್ ಎಂಬ ಔಷಧಿಯನ್ನು ಬಿಡುಗಡೆ ಮಾಡಿದೆ. ಅದರ ಮೂಲ ಬೆಲೆ ಕೇವಲ ೩೪೯೦ ರೂ. ಗಳು. ಆದರೆ ಕೆಲವು ಖದೀಮರು ರೋಗಿಗಳ ಸಂಕಟವನ್ನೇ ದುರುಪಯೋಗಪಡಿಸಿಕೊಂಡು ಅದನ್ನು ೨೭೦೦೦ ರೂ.ಗಳಿಗೆ ಮಾರಾಟ ಮಾಡುತ್ತಿರುವ ಘಟನೆ ನಡೆದಿದ್ದು ಅದರ ವಿಡಿಯೋಗಳು ವೈರಲ್ ಆಗಿವೆ.
ವಿಪರ್ಯಾಸವೆಂದರೆ ಈ ಅಕ್ರಮ ದಂಧೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಔಷಧ ನಿಯಂತ್ರಣಾಧಿಕಾರಿಗಳು, ಕೆಲವು ಖಾಸಗಿ ಆಸ್ಪತ್ರೆಯವರು ಭಾಗಿಯಾಗಿ ಎಲ್ಲರೂ ಸೇರಿಕೊಂಡು ಕೊರೋನಾ ಹೆಸರಿನಲ್ಲಿ ಬಡವರ ರಕ್ತ ಹೀರುತ್ತಿದ್ದಾರೆ.ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿದೆ.
ರೆಮ್ಡಿಸಿವಿರ್ ಲಭ್ಯತೆಯಿಂದಾಗಿ ನೆರೆಯ ತೆಲಂಗಾಣ ಹಾಗೂ ಮಹಾರಾಷ್ಟ್ರ ರಾಜ್ಯದವರ ಕಣ್ಣು ಬೀದರ ಮೇಲೆ ಬಿದ್ದಿದ್ದು ರಾಜಾರೋಷವಾಗಿ ಈ ಔಷಧಿಯನ್ನು ೨೭ ಸಾವಿರದವರೆಗೂ ಮನಬಂದಂತೆ ಮಾರಾಟ ಮಾಡಲಾಗುತ್ತಿದೆ.
ವಿಡಿಯೋ ಒಂದರಲ್ಲಿ ಇರುವ ವ್ಯಕ್ತಿ ರಾಜು ಪಾಂಡೆ ರೆಮ್ಡಿಸಿವಿರ್ ಮಾರಾಟ ಮಾಡುತ್ತಿದ್ದು ಯಾವುದೇ ಭಯವಿಲ್ಲದೆ ರೋಗಿಯ ಸಂಬಂಧಿಕರ ಶೋಷಣೆ ಮಾಡುತ್ತಿದ್ದಾನೆ. ನಿನ್ನೆ ೨೦ ಸಾವಿರ ದರ ಹೇಳಿದವನು ಇಂದು ೨೭ ಸಾವಿರ ಹೇಳಿದ್ದಕ್ಕೆ ಯಾಕೆಂದು ಕೇಳಿದರೆ ಬೇಕಾದರೆ ತಗೊಳ್ಳಿ ಇಲ್ಲಾಂದ್ರೆ ಬೇರೆಯವರು ಇದ್ದಾರೆ ಎಂಬ ಉಡಾಫೆಯ ಮಾತಾಡಿ ೨೭ ಸಾವಿರ ಕೊಟ್ಟ ಕೂಡಲೇ ರೆಮ್ಡಿಸಿವಿರ್ ಬಾಟಲನ್ನು ನೀಡುವ ದೃಶ್ಯವಿದೆ.
ರಾಜ್ಯದಲ್ಲಿ ಕೊರೋನಾ ವಿಜೃಂಭಣೆ ಶುರು ಆದಾಗಿನಿಂದ ಇಂಥ ಖದೀಮರಿಗೆ ಹಬ್ಬ ಶುರುವಾಗಿದೆ. ಜನರ ಸೇವೆ ಮಾಡಬೇಕಾದ ಇಂಥ ಸಮಯದಲ್ಲಿ ಪಕ್ಕಾ ಶೋಷಣೆ ಮಾಡಿ ಬಡವರ ಹಣದ ಜೊತೆಗೆ ರಕ್ತವನ್ನೂ ಹೀರುತ್ತಿರುವ ಇಂಥವರಿಗೆ ಕಾನೂನಿನ ಮೂಲಕ ಪಾಠ ಕಲಿಸಬೇಕಾದ ಅಗತ್ಯವಿದೆ.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ