ಡೆಪ್ಯೂಟಿ ಚೆನ್ನಬಸಪ್ಪ ಪ್ರಶಸ್ತಿ ಸ್ಥಾಪನೆಗೆ ಸರಕಾರಕ್ಕೆ ಆಗ್ರಹ

Must Read

ಧಾರವಾಡ : ರಾಜ್ಯ ಸರಕಾರ ‘ಟಿಎಸ್ಸಾರ್ ಪ್ರಶಸ್ತಿ’ ಸ್ಥಾಪಿಸಿದಂತೆ ಕನ್ನಡ ನಾಡು-ನುಡಿಯ ವಿಕಾಸಕ್ಕೆ ತಮ್ಮ ಅಖಂಡ ಬದುಕನ್ನೇ ಸಮರ್ಪಿಸಿರುವ ಕನ್ನಡದ ಕಟ್ಟಾಳು, ಕನ್ನಡ ಪ್ರಾಥಮಿಕ ಶಿಕ್ಷಣದ ಪ್ರವರ್ತಕ ಡೆಪ್ಯೂಟಿ ಚೆನ್ನಬಸಪ್ಪನವರ ಹೆಸರಿನಲ್ಲಿ ‘ಡೆಪ್ಯೂಟಿ ಚೆನ್ನಬಸಪ್ಪ ಕನ್ನಡ ವಿಕಾಸ ರತ್ನ ಪ್ರಶಸ್ತಿ’ಯನ್ನು ಸ್ಥಾಪಿಸಬೇಕೆಂದು ಆಗ್ರಹಿಸಲಾಗಿದೆ.

ನಗರದ ರೊದ್ದ ಶ್ರೀನಿವಾಸರಾವ್ ರಸ್ತೆಯಲ್ಲಿರುವ ಡೆಪ್ಯೂಟಿ ಚೆನ್ನಬಸಪ್ಪ ಪುತ್ಥಳಿಯ ಆವರಣದಲ್ಲಿ ರವಿವಾರ ಜರುಗಿದ ಪ್ರತಿಷ್ಠಿತ ಗಂಡು ಮಕ್ಕಳ ಟ್ರೇನಿಂಗ್ ಕಾಲೇಜಿನ (ಅಂದರೆ ಈಗಿನ ಡಯಟ್) ಹಳೆಯ ವಿದ್ಯಾರ್ಥಿಗಳ ಪ್ರಥಮ ಸಮಾವೇಶದಲ್ಲಿ ಕೈಕೊಂಡ ೫ ಪ್ರಮುಖ ನಿರ್ಣಯಗಳಲ್ಲಿ ಈ ಒತ್ತಾಯ ಮಾಡಲಾಗಿದೆ.

ಸಮಾವೇಶದಲ್ಲಿ ಕೈಕೊಂಡ ಇತರ ನಿರ್ಣಯಗಳು ಈಗಿವೆ. ಕನ್ನಡ ಪತ್ರಿಕೋದ್ಯಮದ ಹಿರಿಯ ಪಾರಂಪರಿಕ ನಿಯತಕಾಲಿಕೆ ಮತ್ತು ಕನ್ನಡ ಪ್ರಾಥಮಿಕ ಶಿಕ್ಷಣ ಸಂವರ್ಧನೆಗೆ ಅಹರ್ನಿಶಿ ಶ್ರಮಿಸಿರುವ ಸಂಪೂರ್ಣ ಸರಕಾರಿ ಒಡೆತನದ ಶಿಕ್ಷಣ ಇಲಾಖೆಯ ‘ಜೀವನ ಶಿಕ್ಷಣ’ ಶೈಕ್ಷಣಿಕ ಮಾಸಪತ್ರಿಕೆಯ ಪ್ರಕಟಣಾ ವೆಚ್ಚವನ್ನು ಭರಿಸಲು ರಾಜ್ಯ ಸರಕಾರ ಪ್ರತೀ ಆರ್ಥಿಕ ವರ್ಷದಲ್ಲಿ ತನ್ನ ಬಜೆಟ್ ಮೂಲಕ ವಾರ್ಷಿಕ ಸುಮಾರು ೫೦ ಲಕ್ಷ ರೂ.ಗಳಷ್ಟು ಮೊತ್ತವನ್ನು ರಾಜ್ಯ ಸರಕಾರ ತನ್ನ ಒಡೆತನದ ಪಾರಂಪರಿಕ ಕನ್ನಡದ ನಿಯತಕಾಲಿಕೆಯ ಪ್ರಕಟಣಾ ವೆಚ್ಚ ಭರಿಸಲು ಒದಗಿಸಬೇಕೆಂದು ಒತ್ತಾಯಿಸಲಾಗಿದೆ.

ಕರ್ನಾಟಕ ಏಕೀಕರಣದ ಹೋರಾಟವೂ ಸೇರಿದಂತೆ ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ಅಭ್ಯುದಯದ ಪ್ರಾತಿನಿಧಿಕ ಸಂಸ್ಥೆಗಳಾದ ಕರ್ನಾಟಕ ವಿದ್ಯಾವರ್ಧಕ ಸಂಘ ಮತ್ತು ಕನ್ನಡ ಸಾಹಿತ್ಯ ಪರಿಷತ್ತುಗಳು ಹುಟ್ಟಿಕೊಳ್ಳುವಲ್ಲಿ ಮೊದಲ ಚಿಂತನೆ ಅಂಕುರಿಸಿರುವ ಧಾರವಾಡದ ಡಯಟ್ ಆವರಣವನ್ನು ‘ಕನ್ನಡದ ಶಕ್ತಿ ಕೇಂದ್ರ’ ಎಂದು ರಾಜ್ಯ ಸರಕಾರ ಘೋಷಣೆ ಮಾಡಿ ವಿಶೇಷ ಸ್ಥಾನ-ಮಾನ ಒದಗಿಸುವುದು. ಧಾರವಾಡದ ಡಯಟ್‌ನ ಒಟ್ಟು ಆವರಣವನ್ನು ‘ಪಾರಂಪರಿಕ ಆವರಣ’ ಎಂದು ಪರಿಗಣಿಸಿ ಅದರ ಸಂಪೂರ್ಣ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಬೇಕು. ರಾಜ್ಯ ಸರಕಾರ ಪ್ರತೀ ವರ್ಷ ರಾಜ್ಯ ಮಟ್ಟದ ಕನ್ನಡ ಜಾಗೃತಿ ಸಮಾವೇಶವನ್ನು ಧಾರವಾಡ ಡಯಟ್ ಆವರಣದಲ್ಲಿ ಹಮ್ಮಿಕೊಳ್ಳುವ ಮೂಲಕ ಕನ್ನಡದ ಕಟ್ಟಾಳು ‘ಡೆಪ್ಯೂಟಿ ಚೆನ್ನಬಸಪ್ಪ ಕನ್ನಡ ವಿಕಾಸ ರತ್ನ ಪ್ರಶಸ್ತಿ’ಯನ್ನು ಇದೇ ಸಮಾವೇಶದಲ್ಲಿಯೇ ಪ್ರದಾನ ಮಾಡುವಂತಾಗಬೇಕೆಂದು ಆಗ್ರಹಿಸಲಾಗಿದೆ.

ಸಮಾವೇಶದ ಸಂಚಾಲಕ ಡಾ. ಗುರುಮೂರ್ತಿ ಯರಗಂಬಳಿಮಠ ನಿರ್ಣಯಗಳನ್ನು ಮಂಡಿಸಿದರು. ಹಾವೇರಿ ಜಿಲ್ಲೆಯ ಎಚ್.ಜೆ. ಕಡೇಮನಿ, ಪ್ರಭಾಕರ ನರಗುಂದ, ಬೆಳಗಾವಿ ಜಿಲ್ಲೆಯ ಪಿ.ಎಂ. ಕಂಬಳಿ, ಶಂಕರ ಗಂಟಿ, ಸುರೇಶ ನೇಸರಗಿ, ಎ.ಎಚ್. ಕೋಟಿ, ಬಿ.ಎಸ್. ಜಗಾಪೂರ, ಎಸ್.ಆರ್. ಸಂಕ್ರಿ, ಬಿ.ಎಸ್. ಗುರನಗೌಡ್ರ, ಎಂ.ಎ. ದನದಮನಿ, ಅಶೋಕ ಕಮತ, ಬಿ.ಎಸ್.ಪರೀಟ, ಗದಗ ಜಿಲ್ಲೆಯ ಎಸ್.ಜಿ. ಕುಲಕರ್ಣಿ, ಎ.ಎಸ್. ಬಣಕಾರ, ಎಫ್.ಎಸ್. ಹಿರೇಗೌಡರ, ಎನ್.ಎಸ್. ನೇಕಾರ, ಬಾಗಲಕೋಟ ಜಿಲ್ಲೆಯ ಎಸ್.ಆರ್. ಮೂಗನೂರ, ಬಿ.ಎಸ್. ಮುದಿಗೌಡರ, ಧಾರವಾಡ ಜಿಲ್ಲೆಯ ಗೋವಿಂದರಾಜ ಜುಜಾರೆ, ಟಿ.ಟಿ. ದಾಸರ, ಡಿ.ಎನ್. ಬಡಿಗೇರ, ಎಸ್.ಡಿ. ಪವಾರ, ಜಿ.ಎನ್. ಹೊಸಮನಿ, ಎಸ್.ಕೆ.ಪೂಜಾರ ಇತರರು ಸಮಾವೇಶದಲ್ಲಿ ಮಾತನಾಡಿ ಧಾರವಾಡ ಡಯಟ್ ಕನ್ನಡ ನಾಡು-ನುಡಿಗೆ ಸಲ್ಲಿಸಿದ ಅಮೂಲ್ಯ ಸೇವೆಯ ಸಂಗತಿಗಳನ್ನು ಪ್ರತಿಪಾದಿಸಿದರು.

Latest News

ಮಕ್ಕಳಲ್ಲಿ ಸಂಸ್ಕಾರದ ಗುಣಗಳು ಕಡಿಮೆಯಾಗುತ್ತಿರುವುದು ವಿಷಾದನೀಯ – ಕಲಶೆಟ್ಟಿ

ಸಿಂದಗಿ-ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಮಾನವೀಯ ಸಂಬಂಧಗಳನ್ನು ಬೆಳೆಸಿಕೊಳ್ಳಬೇಕು ಇಂದು ಸಂಸ್ಕಾರದ ಗುಣಗಳು ಮಕ್ಕಳಲ್ಲಿ ಕಡಿಮೆಯಾಗುತ್ತಿರುವುದು ವಿಷಾದನೀಯ ಎಂದು ನಿವೃತ್ತ ಉಪನ್ಯಾಸಕ ಎಸ್.ಎಸ್.ಕಲಶೆಟ್ಟಿ ಹೇಳಿದರು.ಅವರು ಪಟ್ಟಣದ ಶ್ರೀ ಸಾತವೀರೇಶ್ವರ...

More Articles Like This

error: Content is protected !!
Join WhatsApp Group