ಮೂಡಲಗಿ: ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದರೇ ಮನುಷ್ಯನ ಜೀವನ ಸಾರ್ಥಕವಾಗುತ್ತದೆ ಎಂದು ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಅವರು ತಾಲೂಕಿನ ಹುಣಶ್ಯಾಳ ಪಿಜಿಯ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಭಾನುವಾರದಂದು ನಡೆದ ಶ್ರೀ ಸಿದ್ಧಲಿಂಗೇಶ್ವರ ಜಾತ್ರೆ ಹಾಗೂ 24ನೇ ಸತ್ಸಂಗ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಮನುಷ್ಯ ತಾನು ಗಳಿಸಿದ ಸಂಪತ್ತು ಸತ್ತ ಮೇಲೆ ಜೊತೆಗೆ ತಗೆದುಕೊಂಡು ಹೋಗುವುದಿಲ್ಲ. ಮನುಷ್ಯ ಜೀವಂತ ಇದ್ದಲ್ಲಿ ವಯೋವೃದ್ದರಿಗೆ, ವಿದ್ಯಾರ್ಥಿಗಳಿಗೆ, ರೋಗಿಗಳಿಗೆ ಅಲ್ಲದೇ ಕಷ್ಟದಲ್ಲಿರುವ ಜನರಿಗೆ ಸಹಾಯ ಸಹಕಾರ ನೀಡಿದರೇ ಪುಣ್ಯ ಪ್ರಾಪ್ತಿಯಾಗುತ್ತಿದೆ. ಮನುಷ್ಯನ ಈ ಶರೀರ ನಾಶವಾಗುತ್ತದೆ. ಸತ್ಕಾರ್ಯಗಳಿಗೆ ನೀಡಿದ ಸಹಾಯವೇ ಶ್ರೇಷ್ಠವಾಗುತ್ತದೆ. ನಾವು ಆನಂದ,ಸುಖದಿಂದ ಇದ್ದರೇ ಸಾಲದು ಪರರಿಗೂ ಸಹಾಯ ಮಾಡಿದರೇ ಅದುವೇ ಸುಖ,ಆನಂದ ಸಿಗುತ್ತದೆ. ಇನ್ನೂಬ್ಬರಿಗೆ ಕಷ್ಟದಲ್ಲಿ ಸ್ಪಂದಿಸಿದರೇ ಮುಂದಿನ ಜನ್ಮದಲ್ಲಿ ಮಾನವ,ಮಹಾದೇವನ ರೂಪದಲ್ಲಿ ಹುಟ್ಟುತ್ತೇವೆ. ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಮಹಾತ್ಮರ ಆಶೀರ್ವಚನ ಕೇಳುವುದರ ಮೂಲಕ ಜನ್ಮ ಸಾರ್ಥಕವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ಮಾಜಿ ಶಾಸಕ ಬಿ.ಸಿ.ಸರಿಕರ, ಅಥಣಿಯ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ, ಬಸಗೌಡ ಪಾಟೀಲ, ಶ್ರೀಮಠದ ಪೂಜ್ಯ ಶ್ರೀ ನಿಜಗುಣ ದೇವರು, ಬೈಲಹೊಂಗಲದ ಪೂಜ್ಯ ಶ್ರೀ ಮಹಾದೇವ ಸರಸ್ವತಿ ಮಹಾಸ್ವಾಮಿಜಿ, ಜಾರಕಿಹೊಳಿಯ ಕೃಪಾನಂದ ಸ್ವಾಮಿಜಿ, ಸಿದ್ದಾನಂದ ಸ್ವಾಮಿಜಿ, ಕೊಟಬಾಗಿಯ ಶ್ರೀ ಪ್ರಭುದೇವರು ಇದ್ದರು.
ಬೆಳಿಗ್ಗೆ ಶ್ರೀ ಸಿದ್ಧಲಿಂಗ ಯತಿರಾಜರ, ಶ್ರೀ ಶಾಂಭವಿ ಮಾತೆಯ, ಶ್ರೀ ಸಿದ್ಧಲಿಂಗ ಮಹಾರಾಜರ ಮೂರ್ತಿಗಳಿಗೆ ರುದ್ರಾಭಿಷೇಕ ಜರುಗಿತು. ಓಂಕಾರ ಧ್ವಜಾರೋಹಣ, ಶ್ರೀ ಸಿದ್ಧಲಿಂಗ ರಥದ ಕಳಸಾರೋಹಣ, ನಂತರ ಸಹಸ್ರ ಮುತೈದೆಯರ ಉಡಿ ತುಂಬುವು ಕಾರ್ಯಕ್ರಮ ಜರುಗಿತು.
ಇದೇ ಸಂದರ್ಭದಲ್ಲಿ ಶ್ರೀಮಠದ ವತಿಯಿಂದ ದಾನಿಗಳಿಗೆ,ಗಣ್ಯರಿಗೆ, ಪೂಜ್ಯರಿಗೆ ಸನ್ಮಾನಿಸಲಾಯಿತು. ಗುರುನಾಥ ಶಾಸ್ತ್ರೀ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.