ಬೀದರ: ಇದು ರೈತಪರ, ಬಡವರಪರ, ಶ್ರಮಿಕರಪರ ಬಜೆಟ್ ಅಲ್ಲವೆಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಕೇಂದ್ರ ಸರ್ಕಾರದ ಬಜೆಟ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ಕುರಿತು ಬೀದರ್ ನಲ್ಲಿ ಪ್ರತಿಕ್ರಿಯೆ ನೀಡಿದ ಬಂಡೆಪ್ಪಾ ಖಾಶೆಂಪುರ, ಡಬಲ್ ಇಂಜಿನ್ ಸರ್ಕಾರದ ಈ ಬಜೆಟ್ ಅನ್ನು ರಾಷ್ಟ್ರದ ಜನತೆ ಬಹಳಷ್ಟು ನಿರೀಕ್ಷೆಯಿಂದ ನೋಡುತ್ತಿದ್ದರು. ಅದರಂತೆಯೇ ಕರ್ನಾಟಕದ ಜನರು ಕೂಡ ಕೇಂದ್ರ ಬಜೆಟ್ ಮೇಲೆ ಬಹಳಷ್ಟು ನಂಬಿಕೆ ಇಟ್ಟುಕೊಂಡಿದ್ದರು. ರಾಜ್ಯಕ್ಕೆ ಲಾಭದಾಯಕ ಬಜೆಟ್ ಆಗಬಹುದು ಎಂಬುದು ನಮ್ಮೆಲ್ಲರ ನಿರೀಕ್ಷೆ ಇತ್ತು. ಆದರೆ ಅದು ಆಗಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಈ ಬಜೆಟ್ ನಲ್ಲಿ ಮಹತ್ವದ ರೈಲ್ವೆ ಯೋಜನೆಗಳಿಲ್ಲ. ರೈತರು ಎಲ್ಲಾ ರೀತಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಯಿಂದ, ನೆಟೆ ರೋಗದಿಂದ ಬೆಳೆಗಳು ಹಾನಿಯಾಗಿವೆ. ರೈತರಿಗೆ ಸರಿಯಾದ ರೀತಿಯಲ್ಲಿ ವಿಮೆ, ಬೆಂಬಲ ಬೆಲೆಗಳು ಸಿಗುತ್ತಿಲ್ಲ. ರೈತರ ಆದಾಯ ದ್ವಿಗುಣ ಮಾಡುವ ನಿಟ್ಟಿನಲ್ಲಿ, ರೈತರಿಗೆ ದೊಡ್ಡಮಟ್ಟದ ಯೋಜನೆಗಳನ್ನು ನೀಡಿಲ್ಲ. ಪ್ರಸ್ತುತ ನೀಡುತ್ತಿರುವ ಎರಡು ಸಾವಿರ ರೂ. ಗಳನ್ನು ಹತ್ತು ಸಾವಿರಕ್ಕೆ ಹೆಚ್ಚಿಸಬಹುದಿತ್ತು. ಆ ಕೆಲಸವನ್ನು ಮಾಡಿಲ್ಲ.
ಒಟ್ಟಾರೆಯಾಗಿ ಈ ಬಜೆಟ್ ರೈತರ ಪರವಾಗಿ, ಬಡವರ, ಶ್ರಮಿಕರ ಪರವಾಗಿಲ್ಲ. ಡಬಲ್ ಇಂಜಿನ್ ಸರ್ಕಾರದ ಮೇಲೆ ನಾವು ಇಟ್ಟುಕೊಂಡ ನಿರೀಕ್ಷೆ ಹುಸಿಯಾಗಿದೆ. ಈ ಬಜೆಟ್ ನಿಂದ ಕರ್ನಾಟಕಕ್ಕೆ ಯಾವುದೇ ರೀತಿಯಲ್ಲಿ ದೊಡ್ಡಮಟ್ಟದ ಖುಷಿ ತಂದಿಲ್ಲ. ಇದು ನಿರಾಶಾದಾಯಕವಾದ ಬಜೆಟ್ ಆಗಿದೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಅಸಮಾಧಾನ ವ್ಯಕ್ತಪಡಿಸಿದರು.
ವರದಿ: ನಂದಕುಮಾರ ಕರಂಜೆ,ಬೀದರ