ಬೆಂಗಳೂರು: ಮಹಾನ್ ಮಾನವತಾವಾದಿ ಬಸವಣ್ಣನವರು ಸಮಸ್ತ ಸಮಾಜಕ್ಕೆ- ವಿಶ್ವಕ್ಕೆ ಗುರುವಾಗಿದ್ದವರು. ಕಾಯಕ ಧರ್ಮದ ತಿರುಳನ್ನು ಮನುಜಕುಲಕ್ಕೆ ತಿಳಿಸಿದ ವಿಶ್ವಮಾನವರು. ಅವರ ತತ್ವಗಳನ್ನು ಕಾಂಗರೂ ನಾಡಿನಲ್ಲಿ ಪಾಲಿಸುತ್ತಿರುವ ಆಸ್ಟ್ರೇಲಿಯನ್ ಏಷಿಯಾ ಬಸವ ಸಮಿತಿಯ ಮೆಲ್ಬೋರ್ನ್ ಘಟಕವು ಅರ್ಥಪೂರ್ಣ ಕೆಲಸಗಳನ್ನು ಮಾಡುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಹರ್ಷವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾ ಏಶಿಯಾದ ಬಸವ ಸಮಿತಿಯ ಮೆಲ್ಬೋರ್ನ್ ಘಟಕದಲ್ಲಿ ಹಮ್ಮಿಕೊಂಡ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿ, ೧೯೯೯ರ ಏಪ್ರಿಲ್ ತಿಂಗಳಿನಲ್ಲಿ ಮೆಲ್ಬೋರ್ನ್ನಲ್ಲಿ ಬಸವ ಸಮಿತಿ ಸ್ಥಾಪನೆಯಾಗಿತ್ತು. ಡಾ. ಮಲ್ಲಿಕಾರ್ಜುನ ಮಾಲಿಪಾಟೀಲ ಅವರು ಸಂಸ್ಥಾಪಕ ಅಧ್ಯಕ್ಷರಾಗಿ, ಗಂಗಾಧರ ಬೇವಿನಕೊಪ್ಪ ಅವರು ಉಪಾಧ್ಯಕ್ಷರಾಗಿ ಘಟಕವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂದು ಅವರು ಶ್ಲಾಘಿಸಿದರು.
ಮೆಲ್ಬೋರ್ನ್ನಲ್ಲಿರುವ ಬಸವ ಸಮಿತಿಯ ಮಹಾಮನೆ ಕಾರ್ಯಕ್ರಮದಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಅಧ್ಯಕ್ಷರು ಸಂತಸ ವ್ಯಕ್ತಪಡಿಸಿದರು. ಬಸವಣ್ಣನವರ ತತ್ವವನ್ನು ಒಪ್ಪಿಕೊಂಡು ಅದನ್ನು ಅರ್ಥಪೂರ್ಣವಾಗಿ ಕಾರ್ಯರೂಪಕ್ಕೆ ತರುವ ಮೂಲಕ ಈ ʻಮಹಾಮನೆʼ ಸಾರ್ಥಕತೆ ಮೆರೆಯುತ್ತಿದೆ. ಬಸವಣ್ಣನವರು ಮನುಕುಲಕ್ಕೆ ಮಾನವೀಯ ನೆಲೆಯನ್ನು ವಚನಗಳ ಮೂಲಕ ನೀಡಿದವರು. ವಚನಗಳು ಕನ್ನಡದಲ್ಲಿ ರಚಿಸುವ ಮೂಲಕ ಜಗತ್ತಿಗೆ ಕನ್ನಡಭಾಷೆಯಲ್ಲಿ ತತ್ವಗಳನ್ನು ನೀಡಿದವರು. ಅವರ ವಚನಗಳನ್ನು ಹೊರನಾಡಿನಲ್ಲಿ ನೆಲೆಸಿರುವ ಕನ್ನಡಿಗರಿಗೆ ಹೇಳಿಕೊಡುವ ಮೂಲಕ ಉತ್ತಮ ಕೆಲಸವನ್ನು ಮಾಡಲಾಗುತ್ತಿದೆ ಎಂದು ನಾಡೋಜ ಡಾ. ಮಹೇಶ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದರು.
ಈಗಾಗಲೆ ಮೆಲ್ಬೋರ್ನ್ ಕನ್ನಡ ಸಂಘದವರಿಗೆ ಕನ್ನಡ ಭಾಷೆ ಕಲಿಯುವಲ್ಲಿ ಹಾಗೂ ಅಧ್ಯಯನ ಮಾಡುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಹಾಯ ಮಾಡಬೇಕು. ಬಸವಣ್ಣನವರ ವಚನಗಳಲ್ಲಿ ಬರುವ ಕೆಲವು ಕನ್ನಡ ಪದಗಳು ಅರ್ಥವಾಗದ ಸಂದರ್ಭದಲ್ಲಿ ಅದಕ್ಕೆ ಬೇಕಾದ ಪುಸ್ತಕಗಳನ್ನು ಪರಿಷತ್ತು ಕಲ್ಪಿಸಬೇಕು ಎನ್ನುವ ಬೇಡಿಕೆಗಳನ್ನು ಇಟ್ಟರು. ಅವರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಜೋಶಿ ಅವರು, ಪರಿಷತ್ತಿನಲ್ಲಿ ಲಭ್ಯ ಇರುವ ಪುಸ್ತಕಗಳನ್ನು ಪೂರೈಸಲಾಗುವುದು ಜೊತೆಗೆ ಯಾವುದೇ ಕನ್ನಡ ಪದಗಳ ಅರ್ಥಗಳು ಸಾಲುಗಳ ಅರ್ಥಗಳ ಬಗ್ಗೆ ಗೊಂದಲ ಉಂಟಾದಾಗ ವಾಟ್ಸ್ ಆಪ್ ಅಥವಾ ಇಮೇಲ್ ಮೂಲಕ ಪರಿಷತ್ತಿಗೆ ಬರೆದು ಕಳಿಸಿದರೆ ಅದಕ್ಕೆ ತಜ್ಞರಿಂದ ಸಮರ್ಪಕ ಉತ್ತರವನ್ನು ನೀಡುವ ಕೆಲಸವನ್ನು ಪರಿಷತ್ತು ಮಾಡಲಿದೆ. ಜೊತೆಗೆ ಈ ಬಾರಿ ಮಂಡ್ಯದಲ್ಲಿ ನಡೆಯಲಿರುವ ೮೭ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಅಧ್ಯಕ್ಷರು ಮೆಲ್ಬೋರ್ನ್ ಬಸವ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಮತ್ತು ಮೆಲ್ಬೋರ್ನ್ ನಲ್ಲಿ ನೆಲೆಸಿರುವ ಕನ್ನಡಿಗರಿಗೆ ಗೌರವ ಪೂರ್ವಕ ಆಹ್ವಾನವನ್ನು ನೀಡಿದರು. ವಿದೇಶಲ್ಲಿ ನೆಲೆಸಿರುವ ಸಮಸ್ತ ಕನ್ನಡಿಗರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಡಾ. ಮಹೇಶ್ ಜೋಶಿ ತಿಳಿಸಿದ್ದಾರೆ,
ಮೆಲ್ಬೋರ್ನ್ ಬಸವ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಜಯಾ ಪವಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮೆಲ್ಬೋರ್ನ್ ಬಸವ ಸಮಿತಿಯ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಸಮಿತಿಯು ʻಅಕ್ಷರ ದಾಸೋಹʼ ಕಾರ್ಯಯೋಜನೆಯನ್ನು ಹಮ್ಮಿಕೊಂಡಿದ್ದು ಕನ್ನಡ ಕಲಿಸುವದರ ಜೊತೆಗೆ ಕನ್ನಡ ಭಾಷೆಯನ್ನು ಅಂತರ್ಗತವಾಗಿರಿಸಿಕೊಂಡ ವಚನಗಳನ್ನು ಎಲ್ಲರಿಗೂ ಕಲಿಸುವ ಕೆಲಸವನ್ನು ಬಸವ ಸಮಿತಿ ಹಮ್ಮಿಕೊಂಡಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಮುಂದಿನ ದಿನಗಳಲ್ಲಿ ವಚನಗಳಲ್ಲಿ ಬಳಸಲಾಗಿರುವ ಕನ್ನಡ ಪದಗಳನ್ನು ಎಲ್ಲರಿಗೂ ಅರ್ಥ ಮಾಡಿಸುವುದರ ಜೊತೆಗೆ ವಚನಗಳ ಸಾರವನ್ನು ತಿಳಿಸಿಕೊಡುವ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
ಮೆಲ್ಬೋರ್ನ್ ಬಸವ ಸಮಿತಿಯ ಗಂಗಾಧರ ಬೇವಿನಕೊಪ್ಪ ಅವರು ಪರಿಷತ್ತಿನ ಅದ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರೊಂದಿಗೆ ಮಾತನಾಡುತ್ತ, ದೂರದ ಕಾಂಗರೂ ನಾಡಿನಲ್ಲಿ ನೆಲೆಸಿದ ಕನ್ನಡಿಗರ ಮೇಲೆ ಕನ್ನಡ ಸಾಹಿತ್ಯ ಪರಿಷತ್ತು ಅಪಾರ ವಿಶ್ವಾಸವನ್ನು ಇರಿಸಿದೆ. ಕನ್ನಡ ಕಟ್ಟುವ ಕೆಲಸದಲ್ಲಿ ನಾವೆಲ್ಲಾ ಸಾಹಿತ್ಯ ಪರಿಷತ್ತಿನ ಜೊತೆ ಕೈಜೋಡಿಸಿ ಕೆಲಸ ಮಾಡಲಿದ್ದೇವೆ. ಬಸವಣ್ಣನರು ಹೇಳಿಕೊಟ್ಟ ಕಾಯಕವೇ ಕೈಲಾಸ ಎನ್ನುವ ತತ್ವವನ್ನು ನಾವು ಇಲ್ಲಿ ತ್ರಿಕರಣರ್ಪೂರ್ವಕವಾಗಿ ಒಪ್ಪಿಕೊಂಡು ನಡೆದುಕೊಳ್ಳುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ಹೆಮ್ಮೆಯಿಂದ ಒಪ್ಪಿಕೊಳ್ಳುವ ಮೂಲಕ ಕನ್ನಡ ಕಟ್ಟುವ ಕೆಲಸಕ್ಕೆ ಪರಿಷತ್ತಿನ ಜೊತೆಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೇವೆ ಎಂದು ಹೇಳಿದರು.
ಈ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಮೆಲ್ಬೋರ್ನ್ ಬಸವ ಸಮಿತಿಯ ಟ್ರಸ್ಟಿ ಡಾ. ಮಲ್ಲಿಕಾರ್ಜುನ ಮಾಲಿಪಾಟೀಲ, ಸಮಿತಿಯ ಇತರ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಶ್ರೀನಾಥ್ ಜೆ
ಮಾದ್ಯಮ ಸಲಹೆಗಾರರು
ಕನ್ನಡ ಸಾಹಿತ್ಯ ಪರಿಷತ್ತು
ಬೆಂಗಳೂರು.