ಹಾಸನದ ದೊಡ್ಡಮಂದಿಗನಹಳ್ಳಿಯ ಸಮಾಜ ಸೇವಕ ಹಿರಿಯ ರಂಗಭೂಮಿ ಕಲಾವಿದರಾದ ಎಂ. ಸಿ.ರಾಜು ಅವರ ಕಳೆದ ನಲವತ್ತು ವರ್ಷಗಳಿಂದ ಸಮಾಜಸೇವೆ ಹಾಗೂ ರಂಗಭೂಮಿ ಸೇವೆ,ಮೂಕ ಪ್ರಾಣಿಗಳ ಸೇವೆಯನ್ನು ಪರಿಗಣಿಸಿ ಸೆಂಟ್ ಮದರ್ ಥೆರೇಸಾ ವಿಶ್ವವಿದ್ಯಾನಿಲಯವು ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿದೆ.
ಬೆಂಗಳೂರಿನ ರಾಜಭವನ ರಸ್ತೆಯ ಹೋಟೆಲ್ ಪರಾಗ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ವಿಜ್ಞಾನಿಗಳಾದ ಡಾ.ಪ್ರಭಾಕರನ್ ಅವರು ಸಾಧಕ ಎಂ.ಸಿ. ರಾಜು ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಮಾಡಿದರು.
ಶ್ರೀ ವಿದ್ಯಾ ಮಹಾ ಸಂಸ್ಥಾನದ ಮುಖ್ಯಸ್ಥರಾದ ಡಾ. ಲಕ್ಷ್ಮಿ ರವಿಶಂಕರನ್, ಸೆಂಟ್ ಮದರ್ ಥೆರೇಸಾ ವಿಶ್ವ ವಿದ್ಯಾಲಯದ ಉಪಕುಲಪತಿ ಡಾ. ವಿಜಯಾ ಸರಸ್ವತಿ ಹಾಗೂ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಡಾ.ಕೆ.ಆರ್.ರವಿಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಾಸನದ ದೊಡ್ಡಮಂಡಿಗನ ಹಳ್ಳಿಯ ಎಂ. ಸಿ.ರಾಜು ಅವರು ಹಿರಿಯ ಸಮಾಜ ಸೇವಕರು ,ಹಿರಿಯ ರಂಗಭೂಮಿ ನಟರು. ಪ್ರಾಣಿಗಳ ಬಗ್ಗೆ ಅಪಾರ ಕಾಳಜಿ. ತಮ್ಮ ತಂದೆಯ ಮರಣದ ಹಿನ್ನೆಲೆಯಲ್ಲಿ ಅತೀಚಿಕ್ಕ ವಯಸ್ಸಿಗೇ ತುಂಬಿದ ಸಂಸಾರದ ಜವಾಬ್ದಾರಿ ಹೊರಬೇಕಾಗಿ ಬಂತು.ಇದರಿಂದಾಗಿ ಹೆಚ್ಚು ಶಿಕ್ಷಣ ಪಡೆಯದ ಇವರು ಕಳೆದ ನಲವತ್ತು ವರ್ಷಗಳಿಂದ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳು ಹಾಗೂ ನೋಟ್ ಪುಸ್ತಕಗಳನ್ನು ನೀಡುತ್ತಿದ್ದಾರೆ. ಶಾಲೆಯ ಫೀಸುಗಳನ್ನು ಕಟ್ಟಿ ಕೊಡುತ್ತಿದ್ದಾರೆ.
2016 ರಲ್ಲಿ ಇವರು ಹಾಸನದ ರಿಂಗ್ ರಸ್ತೆಯಲ್ಲಿ ಬೆಳಗಿನ ವೇಳೆ ವಾಕಿಂಗ್ ಮಾಡುತ್ತಿದ್ದಾಗ ಕುದುರೆಯೊಂದು ರಸ್ತೆ ಅಪಘಾತಕ್ಕೆ ಒಳಗಾಗಿತ್ತು. ಅದರ ಒಂದು ಕಾಲು ಮುರಿದು ಹೋಗಿತ್ತು.ಅದು ಹೆಜ್ಜೆ ಹಾಕಲೂ ಕಷ್ಟ ಪಡುತಿತ್ತು.ಅದನ್ನು ನೋಡಿ ಮರುಗಿದ ಎಂ. ಸಿ.ರಾಜು ಅವರು ಅದಕ್ಕೆ ತಮ್ಮ ಸ್ವಂತ ಖರ್ಚು ಮಾಡಿ ಕೃತಕ ಕಾಲು ಹಾಕಿಸಿದರು. ತಿಂಗಳುಗಟ್ಟಲೆ ಕಾಲ ಚಿಕಿತ್ಸೆ ಕೊಡಿಸಿ,ಅದಕ್ಕೆ ಪುನರ್ಜನ್ಮ ನೀಡಿದರು.ಇವರು ಹಾಸನದ ಸನರೈಸ್ ರೋಟರಿ ಸಂಸ್ಥೆಯ ಪ್ರದಾನ ಕಾರ್ಯದರ್ಶಿಯಾಗಿ, ಎರಡು ಬಾರಿ ಅಧ್ಯಕ್ಷರಾಗಿ, ಹಾಲಿ ಖಜಾಂಚಿ ಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಇವರ ಅಪರೂಪದ ಸೇವೆ ಪರಿಗಣಿಸಿ ಸೆಂಟ್ ಮದರ್ ತೆರೇಸಾ ವಿಶ್ವ ವಿದ್ಯಾಲಯವು ಇವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿದೆ.
ಗೌರವ ಡಾಕ್ಟರೇಟ್ ಪ್ರಶಸ್ತಿ ಪಡೆದಿರುವ ಎಂ. ಸಿ.ರಾಜು ಅವರನ್ನು ಹಿರಿಯ ಸಾಹಿತಿ ಡಾ. ಭೇರ್ಯ ರಾಮಕುಮಾರ್ ಅಭಿನಂದಿಸಿದ್ದಾರೆ.