ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅಭಿಮತ
ಯೋಗ ಯೂನಿವರ್ಸಿಟಿ ಆಫ್ ದಿ ಅಮೆರಿಕಾಸ್ ಮತ್ತು ಸ್ನೇಹಕೂಟ ಸಾಂಸ್ಕೃತಿಕ ವೇದಿಕೆ ನಗರದ ಜೆಸಿ ರಸ್ತೆಯ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಶ್ರೀಕೃಷ್ಣ ಸಮೂಹ ವಿದ್ಯಾಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾದ ಡಾ. ಎಂ.ರುಕ್ಮಾಂಗದ ನಾಯ್ಡು ಅಭಿನಂದನ ಸಮಾರಂಭದಲ್ಲಿ ಅಭಿನಂದನಾ ನುಡಿಗಳನ್ನಾಡಿದ ಖ್ಯಾತ ಹರಿದಾಸ ವಿದ್ವಾಂಸ ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ರವರು ಶಿಕ್ಷಣ ತಜ್ಞ, ಸಾಹಿತ್ಯ ಸಂಸ್ಕೃತಿ ಪ್ರೇಮಿ ಡಾ.ರುಕ್ಮಾಂಗದ ನಾಯ್ಡು ರವರು ನೆರೆಯ ಆಂಧ್ರ ಮೂಲದವರಾದರೂ ಕೂಡ ಬೆಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಶ್ರೀ ಕೃಷ್ಣ ಸಮೂಹ ವಿದ್ಯಾ ಸಂಸ್ಥೆಗಳನ್ನು ನಿರ್ಮಿಸುವುದರ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕ ವಾತಾವರಣವನ್ನು ನಿರ್ಮಿಸಿ ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರ ಕ್ರಾಂತಿಯನ್ನೇ ಮಾಡಿದ್ದಾರೆ ಎಂದರು
75 ವಸಂತಗಳನ್ನು ಪೂರೈಸಿದ ಈ ಶುಭ ಸಂದರ್ಭದಲ್ಲಿ ಐದು ದಶಕಗಳಿಂದ ಶಿಕ್ಷಣ ರಂಗಕ್ಕೆ ಸಲ್ಲಿಸಿದ ಅಪೂರ್ವ ಕೊಡುಗೆ ಮುಂದಿನ ಪೀಳಿಗೆಯವರಿಗೆ ಮಾದರಿ ಎನಿಸಿದೆ. ಧಾರ್ಮಿಕ ಶ್ರದ್ಧಾಳುವಾಗಿ ಶ್ರೀ ಕೃಷ್ಣನ ಅನನ್ಯ ಭಕ್ತರಾಗಿ, ಸಂಸ್ಕೃತಿ -ಸಾಹಿತ್ಯಗಳ ಪೋಷಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಯುತರು ಸಿದ್ದಿ ಸಾಧನೆಗಳ ಕೂಡಲಸಂಗಮವಾಗಿದ್ದಾರೆ ಎಂದು ಅಭಿಪ್ರಾಯ ಪಟ್ಟರು .
ಸಮಾರಂಭದಲ್ಲಿ ಸ್ನೇಹಕೂಟ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಡಾ. ಆರ್ ವಾದಿರಾಜರವರು ಆಶಯ ನುಡಿಯಲ್ಲಿ ನಾಯ್ಡು ರವರ ಅಸೀಮ ಕನ್ನಡ ಪ್ರೇಮ,ನಾಡು ನುಡಿಯ ಸೇವೆಗೆ ಕಂಕಣಬದ್ಧರಾಗಿ ಹಲವಾರು ಸಾಮಾಜಿಕ ಸೇವಾ ಕೈoಕರ್ಯ ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅಪರೂಪದ ಸಾಧಕ ಎಂದು ಹೇಳಿದರು.
ಡಾ ಎಂ. ಆರ್.ನಾಯ್ಡು ಹಾಗೂ ಧರ್ಮಪತ್ನಿ ಶ್ರೀಮತಿ ಜಲಜಮ್ಮದಂಪತಿಗಳನ್ನು ಪೇಟ, ಸ್ಮರಣಿಕೆ, ಶಾಲು, ಫಲ- ತಾಂಬೂಲಗಳಿಂದ ಆತ್ಮೀಯವಾಗಿ ಸತ್ಕರಿಸಲಾಯಿತು.
ವೇದಿಕೆಯಲ್ಲಿ ಶ್ರೀಕೃಷ್ಣ ಸಮೂಹ ವಿದ್ಯಾಸಂಸ್ಥೆಗಳ ನಿರ್ದೇಶಕ ಪ್ರೋ.ಮನೋಹರ್ ಎಸ್ ಪಿ, ಯೋಗ ಯೂನಿವರ್ಸಿಟಿ ಆಫ್ ದಿ ಅಮೆರಿಕಾಸ್ ಕುಲಸಚಿವ ರವಿ ಪಿ ಎಸ್, ಡಾ ಚೌಡಯ್ಯ,ಶ್ರೀಮತಿ ಜಯಶೀಲ ,ಡಿ ಮುರಳಿದರ,ಡಾ. ಗುರುರಾಜ ಪೋಶೆಟ್ಟಿಹಳ್ಳಿ ಉಪಸ್ಥಿತರಿದ್ದರು.ಕಾರ್ಯಕ್ರಮದ ಆರಂಭದಲ್ಲಿ ಕವಿಗೋಷ್ಠಿಯನ್ನು ಆಯೋಜಿಸಲಾಗಿತ್ತು.