ಮೂಡಲಗಿ: ‘ಅರಭಾವಿಯ ದುರದುಂಡೀಶ್ವರ ಮಠದ ೧೧ನೇ ಪೀಠಾಧಿಪತಿ ಸಿದ್ಧಲಿಂಗ ಸ್ವಾಮೀಜಿ ಅವರು ತಮ್ಮ ನುಡಿ ಮತ್ತು ನಡೆ ಎರಡರಲ್ಲೂ ಒಂದಾಗಿ ಭಕ್ತರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ’ ಎಂದು ಅರಭಾವಿಯ ಜಗದ್ಗುರು ದುರದುಂಡೀಶ್ವರ ಪುಣ್ಯಾರಣ್ಯ ಮಠದ ಪೀಠಾಧಿಪತಿ ಗುರುಬಸವಲಿಂಗ ಸ್ವಾಮೀಜಿ
ತಾಲ್ಲೂಕಿನ ಅರಭಾವಿಯ ಜಗದ್ಗುರು ದುರದುಂಡೀಶ್ವರ ಮಠದ ೧೧ನೇ ಪೀಠಾಧಿಪತಿ ಲಿಂಗೈಕ್ಯ ಸಿದ್ಧಲಿಂಗ ಸ್ವಾಮೀಜಿಗಳ ೨ನೇ ವರ್ಷದ ಪುಣ್ಯಸ್ಮರಣೋತ್ಸವ ಮತ್ತು ಮಾಸಿಕ ಶಿವಾನುಭವ ಗೋಷ್ಠಿಯ ಸಾನ್ನಿಧ್ಯವಹಿಸಿ ಮಾತನಾಡಿದರು.
ಸಿದ್ಧಲಿಂಗ ಸ್ವಾಮೀಜಿ ತ್ರಿಕಾಲ ಲಿಂಗ ಪೂಜಾನಿಷ್ಠರು, ಸರಳ ಜೀವಿಯಾಗಿದ್ದರು. ಸ್ವಾಮೀಜಿಯವರು ಹೇಗೆ ಇರಬೇಕು ಎನ್ನುವದಕ್ಕೆ ಶ್ರೀಗಳು ಆದರ್ಶರಾಗಿದ್ದರು ಎಂದರು.
ಕಾರ್ಯಕ್ರಮದ ಸಮ್ಮುಖವಹಿಸಿದ್ದ ಹುಕ್ಕೇರಿಯ ವಿರಕ್ತಮಠದ ಶಿವಬಸವ ಸ್ವಾಮೀಜಿ ಮಾತನಾಡಿ ಅರಭಾವಿ ಮಠದಲ್ಲಿ ಸಿದ್ದಲಿಂಗ ಸ್ವಾಮೀಜಿಗಳ ವಿಶೇಷ ಕಾಳಜಿಯಲ್ಲಿ ಅನ್ನದಾಸೋಹ ಮತ್ತು ಜ್ಞಾನ ದಾಸೋಹ ನಿರಂತರವಾಗಿ ನಡೆದುಕೊಂಡು ಬಂದಿರುವುದಲ್ಲಿ ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿರುವ ಮಠ ಎನ್ನುವ ಹೆಗ್ಗಳಿಕೆ ಹೊಂದಿದೆ ಎಂದರು.
ಬೆಲ್ಲದಬಾಗೇವಾಡಿ ಶಿವಾನಂದ ಸ್ವಾಮೀಜಿ, ಕಟಕೋಳದ ಸಚ್ಛಿದಾನಂದ ಸ್ವಾಮೀಜಿ ಮಾತನಾಡಿದರು.
ಸಮಾರಂಭದ ಪೂರ್ವದಲ್ಲಿ ಲಿಂಗೈಕ್ಯ ಸಿದ್ಧಲಿಂಗ ಸ್ವಾಮೀಜಿಗಳ ಭಾವಚಿತ್ರಕ್ಕೆ ಉಪಸ್ಥಿತರಿದ್ದ ಶ್ರೀಗಳು ಪುಷ್ಪನಮನ ಸಲ್ಲಿಸಿದರು.
ಅಪ್ಪಾಸಾಹೇಬ ಕುರುಬರ ಸಂಗೀತ ಸೇವೆ ಸಲ್ಲಿಸಿದರು. ಪ್ರೊ. ವಿ.ಕೆ. ನಾಯಿಕ ನಿರೂಪಿಸಿದರು.

