ಮೈಸೂರಿನ ವಿಜಯನಗರದ ನಾಲ್ಕನೆಯ ಹಂತದಲ್ಲಿರುವ ಸೇವಾಯಾನ ವೃದ್ಧಾಶ್ರಮದ ನಿವಾಸಿಗಳಿಗೆ ವಿಶೇಷ ಊಟ ಹಾಗೂ ಹಣ್ಣು-ಹಂಪಲು ನೀಡುವ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು, ರಾಜ್ಯಸಭಾ ಸದಸ್ಯರೂ ಆದ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಜನ್ಮದಿನಾಚರಣೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುವೆಂಪುನಗರ ಕ್ಷೇತ್ರ ಯೋಜನಾಧಿಕಾರಿ ಪ್ರವೀಣ್ರವರು ಮಾತನಾಡಿ ಪೂಜ್ಯರು ಅನ್ನ, ಅಕ್ಷರ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಹೀಗೆ ಬಹಳಷ್ಟು ಸಮಾಜಸೇವೆ ಮಾಡುತ್ತಿದ್ದಾಗ್ಯೂ ಇದುವರೆಗೂ ವೃದ್ಧಾಶ್ರಮಗಳನ್ನು ಮಾಡಲಿಲ್ಲ. ಏಕೆಂದರೆ ಅವರಿಗೆ ವೃದ್ಧ ಮಾತಾಪಿತರನ್ನು ಅವರ ಮಕ್ಕಳೇ ನೋಡಿಕೊಳ್ಳಬೇಕು ಎಂಬ ಮಹತ್ತರವಾದ ಹಂಬಲವಿದೆ. ಆದಾಗ್ಯೂ ಅನಿವಾರ್ಯ ಕಾರಣಗಳಿಗೆ ಪ್ರಾರಂಭವಾಗಿರುವ ಇಂತಹ ಬಹಳಷ್ಟು ಸಂಸ್ಥೆಗಳಿಗೆ ಅವರು ನೆರವಾಗಿದ್ದಾರೆ. ಹೀಗಾಗಿ ಅವರ ಜನ್ಮದಿನವನ್ನು ಹಿರಿಯರ ಜೊತೆ ಆಚರಿಸಬೇಕೆಂಬುದು ನಮ್ಮೆಲ್ಲರ ಆಶಯವಾಗಿತ್ತು. ಅದಕ್ಕಾಗಿ ಇಂದು ಸೇವಾಯಾನ ಸಂಸ್ಥೆಯ ಹಿರಿಯರೊಂದಿಗೆ ಈ ಒಂದು ಸಂತೋಷದ ಸಂದರ್ಭವನ್ನು ಹಂಚಿಕೊಂಡಿದ್ದೇವೆ. ಎಲ್ಲಾ ಹಿರಿಯರ ಹಾರೈಕೆಗಳು ಪೂಜ್ಯರೊಂದಿಗಿರಲಿ ಎಂದು ಪ್ರಾರ್ಥಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಮುಡಾ ಅಧ್ಯಕ್ಷರು, ರಾಜಕೀಯ ಮುಖಂಡರು ಆದ ಹೆಚ್.ವಿ. ರಾಜೀವ್ರವರು ವೃದ್ಧಾಶ್ರಮಗಳು ಬೇಡ ಎಂಬ ಹೆಗ್ಗಡೆಯವರ ನಡೆ ಸಮಾಜಕ್ಕೆ ಮಾದರಿ. ಇಂತಹ ಅಭಿಪ್ರಾಯಗಳು ಅವರ ಮಾನವೀಯ ವ್ಯಕ್ತಿತ್ವವನ್ನು, ಭಾವನಾತ್ಮಕ ಮನಸ್ಸನ್ನು ನಮಗೆ ತಿಳಿಸುತ್ತವೆ. ಆದರೆ ಕುಟುಂಬಗಳಲ್ಲಿ ನಿರ್ಲಕ್ಷ್ಯ ಕ್ಕೆ ಒಳಗಾಗುವ ಹಿರಿಯರು ಇಂತಹ ಆಶ್ರಮಗಳಲ್ಲಿ ಅವರ ಒಡನಾಡಿಗಳೊಂದಿಗೆ ಜೀವನದ ಕೊನೆಯ ದಿನಗಳನ್ನು ನೆಮ್ಮದಿಯಾಗಿ ಕಳೆಯುವುದು ಕೂಡ ಒಳ್ಳೆಯದೆ ಎಂದೆನಿಸುತ್ತದೆ. ಬಹಳಷ್ಟು ಆಶ್ರಮಗಳಿಗೆ ನೆರವು ನೀಡುತ್ತಾ, ಅವುಗಳ ಅಗತ್ಯತೆಗಳನ್ನು ಪೂರೈಸುವ ಹೆಗ್ಗಡೆಯವರ ಹುಟ್ಟುಹಬ್ಬವನ್ನು ಇಂತಹ ಸ್ಥಳಗಳಲ್ಲಿ ಆಚರಿಸುವುದು ಅವರಿಗೆ ಬಹಳ ಸಂತೋಷ, ಸಮಾಧಾನ ನೀಡುವ ವಿಚಾರವೇ ಆಗಿರುತ್ತದೆ ಎಂದು ನಾನಾದರೂ ಭಾವಿಸುತ್ತೇನೆ ಎಂದು ಅಭಿಪ್ರಾಯಿಸಿದರು.
ಸೇವಾಯಾನ ಸಂಸ್ಥೆಯ ಅಧ್ಯಕ್ಷೆ ಪ್ರಭಾಮಣಿಯವರು ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಸೇವಾಯಾನ ಸೇರಿದಂತೆ ಬಹಳಷ್ಟು ಸಂಸ್ಥೆಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾದಾಗ, ಸಾಕ್ಷಾತ್ ದೇವರ ರೂಪದಲ್ಲಿ ಬಂದು ಸಂಸ್ಥೆಗಳಿಗೆ ನೆರವಾದವರು ಪೂಜ್ಯ ಹೆಗ್ಗಡೆಯವರು. ಈ ರೀತಿಯ ಒಳ್ಳೆಯ ಕೆಲಸಗಳನ್ನು ಮಾಡುವವರ ಜೊತೆ ಸದಾ ನೈತಿಕ ಶಕ್ತಿಯಾಗಿ ನಾವಿದ್ದೇವೆ ಎಂಬ ಅವರ ಭರವಸೆ, ಆರ್ಶೀವಾದ ಜೊತೆಗೆ ಅರ್ಥಿಕ ನೆರವು ಸೇವಾಯಾನವನ್ನು ಗಟ್ಟಿಯಾಗಿ ನಿಲ್ಲಿಸಿದೆ. ಹೆಗ್ಗಡೆಯವರ ಹುಟ್ಟುಹಬ್ಬವನ್ನು ನಮ್ಮ ಸಂಸ್ಥೆಯಲ್ಲಿ ಆಚರಣೆ ಮಾಡುವ ಅವಕಾಶ ಸಿಕ್ಕಿರುವುದು ನಮ್ಮ ಪುಣ್ಯ ಹಾಗೂ ಹೆಗ್ಗಳಿಕೆ ಎಂದು ಹರ್ಷ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಸೇವಾಯಾನದ ಹಿರಿಯರು ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿ, ಶುಭ ಹಾರೈಸಿದರು.

