ಬೀದರ – ಗಡಿ ಜಿಲ್ಲೆ ಬೀದರ ನಲ್ಲಿ ಪೊಲೀಸರು ಭರ್ಜರಿ ಬೇಟೆಯಾಡಿದ್ದು ಬರೊಬ್ಬರಿ 6 ಕೋಟಿ 50 ಲಕ್ಷ ರೂಪಾಯಿ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ
ನಿನ್ನೆ ಬೀದರನಲ್ಲಿ ಪೊಲೀಸ್ ಇಲಾಖೆ ವತಿಯಿಂದ ವಾರ್ಷಿಕ ಕ್ರೀಡಾಕೂಟ ನಡೆಯುತ್ತಿದ್ದು ಪೊಲೀಸರು ಅದರಲ್ಲಿ ಬಿಜಿ ಆಗಿರುತ್ತಾರೆ ಎಂದು ತಿಳಿದುಕೊಂಡಿದ್ದ ಖದೀಮರು ಗಾಂಜಾ ಸಾಗಾಟದಲ್ಲಿ ತೊಡಗಿದ್ದರು. ಆದರೆ ಪೊಲೀಸ್ ಇಲಾಖೆ ಕಣ್ಣು ಹದ್ದಿನ ಕಣ್ಣು ಇಡೀ ಬೀದರ ಜಿಲ್ಲೆಯ ಪ್ರತಿಯೊಂದು ಕಡೆ ಇರುತ್ತದೆ ಎಂಬುದು ಆ ಇಬ್ಬರು ಖದೀಮರಿಗೆ ಗೊತ್ತಿರಲಿಲ್ಲ.
ಪೊಲೀಸ್ ಇಲಾಖೆಯ ಎಚ್ಚರಿಕೆಯಿಂದ ಇಬ್ಬರು ಅಣ್ಣ ತಮ್ಮರ ಕೈಗೆ ಕೋಳ ಬಿದ್ದಿದೆ
ಹೈದರಾಬಾದ್ನಿಂದ ಮಹಾರಾಷ್ಟ್ರದ ಕಡೆಗೆ ಟಾಟಾ ಗೂಡ್ಸ್ ವಾಹನವೊಂದರಲ್ಲಿ 6 ಕೋಟಿ 50 ಲಕ್ಷ ರೂ. ಮೌಲ್ಯದ ಗಾಂಜಾ ಸಾಗಿಸುತ್ತಿರುವಾಗ ದಾಳಿ ನಡೆಸಿದ ಪೊಲೀಸರು, ಗಾಂಜಾ ವಶಕ್ಕೆ ಪಡೆದು ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ಬೀದರ್ ರಾಷ್ಟ್ರೀಯ ಹೆದ್ದಾರಿ-65ರ ರಾಜೇಶ್ವರ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.
ಗಾಂಜಾ ಸಾಗಾಟದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟೆ ಮಾರ್ಗದರ್ಶನ ದಲ್ಲಿ ಹುಮನಾಬಾದ ಉಪ ವಿಭಾಗದ ಸಿಪಿಐ ಮಾಡೋಳಪ್ಪ ಅವರ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿದೆ. ಟಾಟಾ ಗೂಡ್ಸ್ ವಾಹನದಲ್ಲಿ ಗಾಂಜಾ ಇದ್ದ ಮೂಟೆಗಳನ್ನಿಟ್ಟು ಅದರ ಮೇಲೆ ಮೊಟ್ಟೆಗಳನ್ನು ಇಡಲಾಗಿತ್ತು. ದಾಳಿ ವೇಳೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಟಾಟಾ ಗೂಡ್ಸ್ ವಾಹನವನ್ನು ತಡೆದು ತಪಾಸಣೆ ನಡೆಸಿದಾಗ ಸುಮಾರು 6 ಕೋಟಿ 50 ಲಕ್ಷ ರೂ. ಮೌಲ್ಯದ 650 ಕೆಜಿ ತೂಕದ ಗಾಂಜಾ ದೊರಕಿದೆ. ಚಾಲಕನನ್ನು ವಿಚಾರಿಸಿದಾಗ ಹೈದರಾಬಾದ್ನಿಂದ ಮಹಾರಾಷ್ಟ್ರದ ಸೋಲಾಪುರಕ್ಕೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಗಾಂಜಾ ಸಾಗಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಎಸ್ಪಿ ಪ್ರದೀಪ್ ಗುಂಟಿ ಮಾಹಿತಿ ನೀಡಿದ್ದಾರೆ.
ವರದಿ : ನಂದಕುಮಾರ ಕರಂಜೆ, ಬೀದರ

