Homeಸುದ್ದಿಗಳುಬಡವರಿಗೆ ಮುಗ್ಗಲು ಅಕ್ಕಿ, ರಾಜಕಾರಣಿಗಳಿಗೆ ಒಂದು ಊಟಕ್ಕೆ ರೂ. ೬೧೩೬ !!

ಬಡವರಿಗೆ ಮುಗ್ಗಲು ಅಕ್ಕಿ, ರಾಜಕಾರಣಿಗಳಿಗೆ ಒಂದು ಊಟಕ್ಕೆ ರೂ. ೬೧೩೬ !!

ಅಬ್ಬಬ್ಬಾ, ಎಂಥಾ ಊಟ ಅದು !! ನೇರ ಬಂಗಾರದ ಚಿಪ್ಸ್ ಇರಬಹುದೆ !?

ಮೂಡಲಗಿ – ಹೌದು, ಈ ರಾಜಕಾರಣಿಗಳು ಬಡವರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತ ಇವರ ಭಾಗ್ಯಕ್ಕೆ ಅನ್ನವೇ ಸಾಕು ಎನ್ನುತ್ತ ಮುಗ್ಗಲು ಅಕ್ಕಿ ನೀಡಿ ಹೆಸರು ಗಳಿಸುತ್ತಾರೆ ಆದರೆ ತಾವು ಮಾತ್ರ ಒಂದು ಪ್ಲೇಟ್ ಊಟಕ್ಕಾಗಿ ಕೇವಲ ಒಂದು ಪ್ಲೇಟ್ ಊಟಕ್ಕಾಗಿ ಆರು ಸಾವಿರದ ತನಕ ಸರ್ಕಾರದ ಖಜಾನೆಯಿಂದ ಖರ್ಚು ಹಾಕಿ ಗುಳುಂ ಮಾಡುತ್ತಾರೆ ! 

ಇತ್ತೀಚೆಗೆ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಅವರು ಪಡೆದುಕೊಂಡ ಮಾಹಿತಿಯ ಪ್ರಕಾರ ಸನ್ ೨೦೧೩ ರಿಂದ ಸನ್ ೨೦೨೨ ರ ಅವಧಿಯಲ್ಲಿ ರಾಜ್ಯಪಾಲರು, ಮಂತ್ರಿ ಮಾಗಧರು, ಗಣ್ಯ ಮಾನ್ಯರ ಆತಿಥ್ಯದ ಹೆಸರಿನಲ್ಲಿ ಅವರ ಔತಣ ಕೂಟಗಳಿಗಾಗಿ ಅಖಂಡ ೩೧೭ ಲಕ್ಷ ರೂ. ಗಳನ್ನು ವ್ಯಯಿಸಿದ್ದಾಗಿ ಹೇಳಿಕೊಂಡಿದೆ. ಅಂದರೆ ಈ ಗಣ್ಯ ಮಾನ್ಯರು ಒಂದು ಊಟಕ್ಕಾಗಿ ವ್ಯಯಿಸಿದ್ದು ೬೧೩೬ ರೂಪಾಯಿಗಳು ! ಅಬ್ಬಬ್ಬಾ, ಎಂಥ ಊಟ ಅದು ! ನೇರ ಬಂಗಾರವನ್ನೇ ಚಿಪ್ಸ್ ಮಾಡಿಕೊಂಡು ಸವಿದಿರಬಹುದಾದ ಭೋಜನ ಇರಬಹುದೇ !?

ಆತಿಥ್ಯಕ್ಕಾಗಿ ಇರುವ ಶಿಷ್ಟಾಚಾರ ಇಲಾಖೆಯೇ ಈ ಎಲ್ಲ ಖರ್ಚು ವೆಚ್ಚಗಳಿಗೆ ಅನುಮತಿ ನೀಡುತ್ತದೆ. ಆದರೆ ಶಿಷ್ಟಾಚಾರಕ್ಕಾಗಿ ಇರುವ ನಿಯಮಗಳೇನು ? ಇಂಥ ಒಂದು ಭಾರೀ ದುಂದುವೆಚ್ಚಕ್ಕೆ ಅನುಮತಿ ಇದೆಯಾ ? ಎಂದು ಭೀಮಪ್ಪ ಗಡಾದ ಪ್ರಶ್ನೆ ಮಾಡುತ್ತಾರೆ.

ವಿಚಿತ್ರವೆಂದರೆ, ರಾಜ್ಯಕ್ಕೆ ಮೊನ್ನೆ ಆಗಮಿಸಿದ್ದ ಅನ್ಯ ರಾಜ್ಯಗಳ ಗಣ್ಯ ಮಾನ್ಯರ ಆತಿಥ್ಯಕ್ಕಾಗಿ ಕರ್ನಾಟಕ ಸರ್ಕಾರ ಅಪಾರ ಹಣ ಖರ್ಚು ಮಾಡಿರುವ ಬಗ್ಗೆ ವಿರೋಧ ಮಾಡಿ ಅಧಿವೇಶನದ ಕಲಾಪವನ್ನೇ ಹಾಳು ಮಾಡಿರುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಹಿಂದಿನ ಸರ್ಕಾರದ ಸಮಯದಲ್ಲಿ ನಡೆದ ಈ ದುಂದುವೆಚ್ಚದ ಬಗ್ಗೆ ಚಕಾರ ಎತ್ತಿಲ್ಲ ! ಅದನ್ನೂ ಈ ಅಧಿವೇಶನದಲ್ಲಿ ಈ ಪಕ್ಷಗಳು ಚರ್ಚೆಗೆ ಇಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ದಿ. ೨೩.೧೦.೨೦೧೩ ರಂದು ರಾಜ್ಯಕ್ಕೆ ಭೇಟಿ ನೀಡಿದ ೧೪ ನೇ ಆರ್ಥಿಕ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ಆತಿಥ್ಯಕ್ಕಾಗಿ ಅಖಂಡ ೨೧.೭೨ ಲಕ್ಷ ರೂ. ಖರ್ಚಾಗಿದೆ. ೨೪.೦೬.೨೦೧೫ ರಂದು ಸ್ವಚ್ಛ ಭಾರತ ಸಭೆಗೆ ಆಗಮಿಸಿದ್ದ ೧೨೫ ಗಣ್ಯರಿಗೆ ತಾಜ್ ವೆಸ್ಟ್ ಎಂಡ್ ಹೊಟೇಲಿನಲ್ಲಿ ಹೈಟಿ ಮತ್ತು ಭೋಜನಕ್ಕಾಗಿ ಸರ್ಕಾರ ನೀಡಿದ ಹಣ ರೂ. ೫,೧೭,೯೭೫/- ಅಂದರೆ ತಲಾ ರೂ. ೪೧೪೩ !, ದಿ. ೩೦.೧೧.೨೦೨೦ ರಂದು ಅದೇ ತಾಜ್ ನಲ್ಲಿ ಏರ್ಪಡಿಸಲಾದ ಭೋಜನಕೂಟಕ್ಕೆ ಇಂಟರ್ ನ್ಯಾಶನಲ್ ಸೋಲಾರ್ ಅಲೈಯನ್ಸ್ ನ ೭೫ ಜನರಿಗೆ ಖರ್ಚು ಮಾಡಿದ್ದು ರೂ. ೪,೬೦,೨೦೦/- ಅಂದರೆ ಒಬ್ಬೊಬ್ಬರಿಗೆ ರೂ. ೬೧೩೬ !!….

ಹೀಗೆ ಇನ್ನೂ ಅನೇಕ ಸಲ ಲಕ್ಷಾಂತರ ರೂಪಾಯಿಗಳನ್ನು ಅತಿಥಿ ಸತ್ಕಾರದ ಹೆಸರಿನಲ್ಲಿ ಖರ್ಚು ಮಾಡಲಾಗಿದೆ. ಯಾರದೋ ದುಡ್ಡಿನಲ್ಲಿ ಯಲ್ಲಮ್ಮನ ಜಾತ್ರೆ ಮಾಡಲಾಗಿದೆ. 

ಒಂದು ಪ್ರಶ್ನೆ ಏನೆಂದರೆ, ರಾಜ್ಯಪಾಲರು, ಮುಖ್ಯಮಂತ್ರಿಗಳ ಆದೇಶದಂತೆ ಇಂಥ ದುಂದುವೆಚ್ಚದಲ್ಲಿ ಶಿಷ್ಟಾಚಾರ ಅಧಿಕಾರಿಗಳು ಅತಿಥಿ ಸತ್ಕಾರ ಮಾಡುತ್ತಾರೆ. ಪ್ರತಿ ತಿಂಗಳೂ ವೇತನ ಭತ್ಯೆ ಪಡೆಯುವ ರಾಜ್ಯಪಾಲರು, ಮುಖ್ಯಮಂತ್ರಿಗಳು, ಮಂತ್ರಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಅತಿಥಿ ಸತ್ಕಾರ ಮಾಡುವುದಾಗಿದ್ದರೆ ಇಷ್ಟು ದುಂದುವೆಚ್ಚ ಮಾಡುತ್ತಿದ್ದರೆ ? ಎಂಬುದು ಜನತೆಯ ಪ್ರಶ್ನೆ. ಇದಕ್ಕೆ ಜನಪ್ರತಿನಿಧಿಗಳು ಉತ್ತರಿಸುವರೆ ?

RELATED ARTICLES

Most Popular

error: Content is protected !!
Join WhatsApp Group