ಸಿಂದಗಿ: ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ರಮೇಶ ಭೂಸನೂರ ಭರ್ಜರಿ ಜಯ ಗಳಿಸಿದ್ದು, ಅವರ ಗೆಲುವಿಗೆ ಕಾರಣರಾದ ಕ್ಷೇತ್ರದ ಮತದಾರರು, ವಿಶೇಷವಾಗಿ ಸಂಘಟಿತ ಪ್ರಯತ್ನಕ್ಕೆ ಸ್ಪಂದಿಸಿ ಬಿಜೆಪಿಗೆ ಮತಹಾಕಿದ ಮಹಿಳಾ ಮತದಾರರ ಪಾತ್ರ ಮಹತ್ವದ್ದಾಗಿದೆ ಎಂದು ಮುಜರಾಯಿ, ವಕ್ಫ್ ಮತ್ತು ಹಜ್ ಸಚಿವರು ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆಯವರು ಅಭಿಪ್ರಾಯ ಪಟ್ಟಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಜಯ ಗಳಿಸಿರುವ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರಿಗೆ ಅಭಿನಂದನೆ ಸಲ್ಲಿಸಿರುವ ಅವರು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದ ಕ್ಷೇತ್ರದ ಮತದಾರರಿಗೆ ಮನಪೂರ್ವಕ ಧನ್ಯವಾದ ಅರ್ಪಿಸಿದ್ದಾರೆ.
ಕ್ಷೇತ್ರದಲ್ಲಿ ಉಪ ಚುನಾವಣೆ ಘೋಷಣೆಯಾದ ಆರಂಭದಿಂದಲೂ ನಾನು ಹಾಗೂ ಹಿರಿಯ ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ.ಪಾಟೀಲ್, ವಿ. ಸೋಮಣ್ಣ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರ ಸಂಘಟಿತ ಕಾರ್ಯತಂತ್ರ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಕಾರಣವಾಗಿದೆ.
ನಾನು ವಿಶೇಷವಾಗಿ ಮಹಿಳಾ ಮತದಾರರನ್ನು ಸೆಳೆಯಲು ಕ್ಷೇತ್ರದ ತುಂಬೆಲ್ಲ ವಿಶೇಷ ಕಾರ್ಯತಂತ್ರ ರೂಪಿಸಿದ್ದೆ. ಈ ಕ್ಷೇತ್ರದಲ್ಲಿ ಮನೆಯಿಂದ ಹೊರಗೆ ಬರಲು ಹಿಂಜರಿಯುತ್ತಿದ್ದ ಮಹಿಳಾ ಮತದಾರರನ್ನು ಹುರಿದುಂಬಿಸಿ ಚುನಾವಣೆಯಲ್ಲಿ ತಮ್ಮದೂ ಮಹತ್ವದ ಪಾತ್ರ ಇದೆ ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದೆ.
ಅಲ್ಲದೇ ಮಹಿಳೆಯರಿಗೆ ಅರಿಷಿಣ ಕುಂಕುಮ ನೀಡುವ ಕಾರ್ಯಕ್ರಮ, ಮನೆ ಮುಂದೆ ಕಮಲದ ರಂಗೋಲಿ ಬಿಡಿಸುವುದು, ಮಹಿಳೆಯರ ಕೈಯಲ್ಲಿ ಕಮಲದ ಮದರಂಗಿ ಹಾಕುವ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮತದಾರರು ಬಿಜೆಪಿಗೆ ಮತಹಾಕುವಂತೆ ಮಾಡಿರುವ ನನ್ನ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆತಿದೆ ಎಂದು ಸಚಿವರು ತಿಳಿಸಿದ್ದಾರೆ.
ಇದರೊಂದಿಗೆ ರಮೇಶ ಭೂಸನೂರ ಅವರು ಎರಡು ಬಾರಿ ಶಾಸಕರಾಗಿದ್ದಾಗ ಕ್ಷೇತ್ರದಲ್ಲಿ ಮಾಡಿದ್ದ ಕಾರ್ಯಗಳು, ರೈತರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಕಿಸಾನ್ ಸಮ್ಮಾನ್, ಭೀಮಾ ಫಸಲ್ ಯೋಜನೆಗಳು, ರೈತ ಮಕ್ಕಳಿಗೆ ವಿದ್ಯಾನಿಧಿ ಮತ್ತು ಮಹಿಳೆಯರಿಗೆ ಜಾರಿಗೆ ತಂದಿರುವ ರಾಜ್ಯ ಸರ್ಕಾರದ ಭಾಗ್ಯಲಕ್ಷ್ಮಿ ಯೋಜನೆ, ಕೇಂದ್ರದ ಭೇಟಿ ಬಚಾವೊ ಭೇಟಿ ಪಡಾವೊ, ಉಜ್ವಲ ಯೋಜನೆಗಳು ನೇರವಾಗಿ ಫಲಾನುಭವಿಗಳಿಗೆ ತಲುಪಿರುವುದು ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ನಾನು ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಜಿಲ್ಲೆಯ ಹಾಗೂ ಸಿಂದಗಿ ಕ್ಷೇತ್ರದ ಜನರಿಗೆ ವೈದ್ಯಕೀಯ ಸೇವೆ ಒದಗಿಸಿರುವುದು, ಸಿಂದಗಿ ಕ್ಷೇತ್ರದ ತಾರಾಪುರ ಮತ್ತು ಬ್ಯಾಡಗಿಹಾಳ ಗ್ರಾಮದ ಜನರನ್ನು ಸ್ಥಳಾಂತರಿಸಿ ಪುನರ್ ವಸತಿ ಕಲ್ಪಿಸಿರುವುದು ಕೂಡ ಮತದಾರರು ಬಿಜೆಪಿ ಮತ ನೀಡಲು ಕಾರಣವಾಗಿದೆ. ಈ ಫಲಿತಾಂಶ ಸಿಂದಗಿ ಹಾಗೂ ವಿಜಯಪುರ ಜಿಲ್ಲೆಯಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಪ್ರೇರಣೆ ನೀಡಿದೆ. ಅಲ್ಲದೇ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರ ಉತ್ಸಾಹ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ ಎಂದು ಅಭಿಮತ ವ್ಯಕ್ತಪಡಿಸಿದ್ದಾರೆ
ವರದಿ: ಪಂಡಿತ್ ಯಂಪೂರೆ, ಸಿಂದಗಿ