ಹಿರಿಯ ಚಿತ್ರನಟ ಡಾ.ರಾಜಕುಮಾರ್ ಅವರ ಜನ್ಮದಿನದ ಅಂಗವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸೂಚನೆಗೆ ಅನುಗುಣವಾಗಿ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಹಾಗೂ ಮೈಸೂರು ಮಹಾನಗರಪಾಲಿಕೆ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಎ.ಅರವಿಂದ ಶರ್ಮ ಅವರ ತಂಡವು ಇಂದು ಬೆಳಿಗ್ಗೆ ಇನಫೋಸಿಸ್ ಸಂಸ್ಥೆಗೆ ಭೇಟಿ ನೀಡಿ ಮೈಸೂರು ಜಿಲ್ಲೆ ಹಾಗೂ ನಗರದಲ್ಲಿರುವ ಪುರಾತನ ಕನ್ನಡ ಶಾಲೆಗಳನ್ನು ಇನ್ಫೋಸಿಸ್ ವತಿಯಿಂದ ದತ್ತು ಪಡೆದು ಅಭಿವೃದ್ಧಿ ಪಡಿಸುವಂತೆ ಹಕ್ಕೊತ್ತಾಯ ಪತ್ರ ಸಲ್ಲಿಸಿತು.
ಮೈಸೂರು ಜಿಲ್ಲೆ ಹಾಗೂ ಮೈಸೂರು ನಗರದಲ್ಲಿ ಶತಮಾನ ತುಂಬಿರುವ ಹಲವಾರು ಪುರಾತನ ಶಾಲೆಗಳಿವೆ. ಈ ಶಾಲೆಗಳ ಗೋಡೆಗಳು ಬಿರುಕು ಬಿಟ್ಟಿವೆ.ಹಲವೆಡೆ ಕುಡಿಯುವ ನೀರಿನ ಅವ್ಯವಸ್ಥೆ, ಶೌಚಾಲಯದ ಅವ್ಯವಸ್ಥೆ, ಉತ್ತಮ ಶುಚಿತ್ವದ ಕೊರತೆ, ಕಂಪ್ಯೂಟರ್ ತಂತ್ರಜ್ಞಾನದ ಕೊರತೆ ಸರ್ಕಾರಿ ಶಾಲಾ ಮಕ್ಕಳನ್ನು ಕಾಡುತ್ತಿದೆ.ಇಂತಹ ಶಾಲೆಗಳಲ್ಲಿ ಬಡವರ, ಕಾರ್ಮಿಕ ವರ್ಗದ ,ರೈತ ಕಾರ್ಮಿಕರ ಮಕ್ಕಳೇ ಹೆಚ್ಚು ಶಿಕ್ಷಣ ಪಡೆಯುತ್ತಿದ್ದಾರೆ. ಇಂತಹ ಮಕ್ಕಳಿಗೆ ಉತ್ತಮ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಿಕೊಡಬೇಕು.ಅದಕ್ಕಾಗಿ ಪುರಾತನ ಸರ್ಕಾರಿ ಶಾಲೆಗಳನ್ನು ಇನ್ಪೋಸಿಸ್ ಸಂಸ್ಥೆ ದತ್ತು ಪಡೆದು ಅಭಿವೃದ್ಧಿ ಪಡಿಸಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಲಾಯಿತು.
ಇನ್ಫೋಸಿಸ್ ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿ ಹೆಚ್. ಆರ್.ರಾಘವೇಂದ್ರ ಅವರ ಸೂಚನೆಯ ಮೇರೆಗೆ ಮೇನೇಜರ್ ರಘು ವೀರ್ ದಾಸ್ ಹಕ್ಕೊತ್ತಾಯ ಪತ್ರ ಸ್ವೀಕರಿಸಿ ಮಾತನಾಡಿ ಮುಂದಿನ ಕ್ರಮಕ್ಕಾಗಿ ಸಂಬಂಧಿಸಿದವರಿಗೆ ಕಳಿಸಿಕೊಡುವುದಾಗಿ ನುಡಿದರು.ಡಿ.ಅನಂತರಾಜ್,ಜಿ.ಆರ್.ರಾಜು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.