ಬೀದರ – ಕಾಂಗ್ರೆಸ್ ಸರ್ಕಾರದ ಮಹತ್ವದ ಗ್ಯಾರಂಟಿ ಯೋಜನೆ ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು ಯೋಜನೆಗೆ ಮಸಿ ಬಳಿಯುವಂತಾಗಿದೆ.
ಮಹಿಳೆಯರಿಗೆ ಮಾಸಿಕ ೨೦೦೦ ರೂ. ನೀಡುವ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಕೊಡಬೇಕಾಗಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಹೇಳಿದ್ದರೂ ಬೀದರ್ ಜಿಲ್ಲೆಯ ಔರಾದ ತಾಲೂಕಿನ ಕೌಠಾ ಗ್ರಾಮದ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರದಲ್ಲಿ ಅರ್ಜಿಹಾಕಲು ಬಂದ ಮಹಿಳೆಯರಿಂದ ಕಂಪ್ಯೂಟರ್ ಆಪರೇಟರ್ ೧೦೦-೧೫೦ ರೂ. ವಸೂಲಿ ಮಾಡುತ್ತಿರುವುದು ಬಹಿರಂಗವಾಗಿದೆ.
ಗೃಹ ಲಕ್ಷ್ಮಿ ಯೋಜನೆ ಅರ್ಜಿ ಹಾಕಲು ಬಂದ ಮಹಿಳೆಯರ ಬಳಿ ಕಂಪ್ಯೂಟರ್ ಆಪರೇಟರ್ ಹಣ ತೆಗೆದು ಕೊಳ್ಳುವ ವಿಡಿಯೋ ಈಗ Times of ಕರ್ನಾಟಕ ಕ್ಯಾಮರದಲ್ಲಿ ಸೆರೆಯಾಗಿದೆ.
ಗ್ರಾಮೀಣ ಭಾಗದ ಮಹಿಳೆಯರು ದಿನನಿತ್ಯ ತಮ್ಮ ಕೆಲಸಗಳನ್ನು ಬಿಟ್ಟು ಗ್ರಾಮ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರದ ಮುಂಭಾಗದಲ್ಲಿ ಸಾಲಿನಲ್ಲಿ ನಿಂತು ಅರ್ಜಿ ಹಾಕಲು ಬಂದಿದ್ದರಿಂದ ನೂಕು ನುಗ್ಗಲು ಉಂಟಾಗಿದ್ದು ಇದನ್ನೇ ಬಂಡವಾಳ ಮಾಡಿಕೊಂಡು ಆಪರೇಟರ್ ಪ್ರತಿಯೊಬ್ಬರಿಂದ ೧೦೦-೧೫೦ ರೂ ವಸೂಲಿ ಮಾಡುತ್ತಿದ್ದಾನೆಂಬುದಾಗಿ ಮಹಿಳೆಯರು ಆರೋಪಿಸಿದ್ದಾರೆ.
ಗ್ರಾಮೀಣ ಭಾಗದ ಗ್ರಾಮ ಪಂಚಾಯಿತಿಯಲ್ಲಿರುವ ಬಾಪೂಜಿ ಕೇಂದ್ರಕ್ಕೆ ಬೀಗ:
ಮಹಿಳೆಯರಿಗೆ ರೂ. ೨೦೦೦ ಮಾಸಿಕ ನೀಡುವ ಸರ್ಕಾರದ ಯೋಜನೆಗೆ ಅರ್ಜಿ ಸಲ್ಲಿಸಲು ಮಹಿಳೆಯರು ಬರುತ್ತಲೇ ಗ್ರಾಮ ಪಂಚಾಯಿತಿ ಕಂಪ್ಯೂಟರ್ ಆಪರೇಟರ್ ನಿಂದ ಸರ್ವರ್ ಬಿಜಿ ನೆಪ ಹೇಳಿಕೊಂಡು ತಮ್ಮ ಕಾರ್ಯಾಲಯಕ್ಕೆ ಬೀಗ ಹಾಕಿದ್ದರಿಂದ ಸಾರ್ವಜನಿಕರು ಖಾಸಗಿ ಕಂಪ್ಯೂಟರ್ ಶಾಪ್ ಕಡೆಗೆ ಮುಖ ಮಾಡಿದ್ದಾರೆ ಇದನ್ನೇ ದುರುಪಯೋಗಪಡಿಸಿಕೊಂಡ ಅವರು ಜನರಿಂದ ದುಡ್ಡು ವಸೂಲಿ ಮಾಡುತ್ತಿದ್ದಾರೆ.
ಸರ್ಕಾರ ದುಡ್ಡು ಕೊಡಬೇಡಿ ಎಂದು ಹೇಳುತ್ತಿದ್ದರೂ ಅನಧಿಕೃತವಾಗಿ ಮಹಿಳೆಯರಿಂದ ದುಡ್ಡು ವಸೂಲಿ ಮಾಡುತ್ತಿರುವ ಕಂಪ್ಯೂಟರ್ ಕೇಂದ್ರಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲದಿದ್ದರೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯೊಂದರಲ್ಲಿ ಭ್ರಷ್ಟರು ಹಣ ಮಾಡಿಕೊಂಡರೆ ಯೋಜನೆ ಹಳ್ಳ ಹಿಡಿಯುವ ಎಲ್ಲ ಸಾಧ್ಯತೆಗಳೂ ಇವೆ.
ನಾಡಕಚೇರಿ, ತಹಶೀಲ್ದಾರ ಕಚೇರಿ, ಬಾಪೂಜಿ ಕೇಂದ್ರ, ಗ್ರಾಮ ಒನ್ ಕೇಂದ್ರ ಎಲ್ಲ ಕೇಂದ್ರ ಗಳಿಗೆ ಮುಖ್ಯಮಂತ್ರಿ ಯವರ ಆದೇಶದಂತೆ ಸರ್ಕಾರದಿಂದ ರೂ. ೨೦ ಕೊಡುತ್ತಿದ್ದೇವೆ ಆದ್ದರಿಂದ ಯಾರೇ ಮಧ್ಯವರ್ತಿಗಳು ಬಂದು ಹಣ ಕೇಳಿದರೆ ಕೊಡಬಾರದು.
–ಲಕ್ಷ್ಮೀ ಹೆಬ್ಬಾಳಕರ, ಸಚಿವೆ
ವರದಿ: ನಂದಕುಮಾರ ಕರಂಜೆ, ಬೀದರ