ಘಟಪ್ರಭಾ: ದುರದುಂಡಿ ಗ್ರಾಮ ಅರಭಾಂವಿ ಮಠದ ಶ್ರೀ ದುರದುಂಡೇಶ್ವರರು ನೆಲೆಸಿದ ಪುಣ್ಯ ಭೂಮಿ, ಪೂಜ್ಯ ಮುರಗೋಡದ ಮಹಾಂತ ಶಿವಯೋಗಿಗಳು ಓಡಾಡಿದ ಪಾವನ ಕ್ಷೇತ್ರವಾಗಿದ್ದು ಇದೇ ಸ್ಥಳದಲ್ಲಿ ಗುರುಭವನವನ್ನು ನಿರ್ಮಾಣ ಮಾಡುವ ಮೂಲಕ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಗುರುವಿನ ಸಂಸ್ಕಾರ ದೊರೆಯುವಂತಾಗಲಿ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ರವಿವಾರ ಏ-13 ರಂದು ದುರದುಂಡಿ ಗ್ರಾಮದ ಶ್ರೀ ದುರದುಂಡೇಶ್ವರ ಮಠದ ಹತ್ತಿರ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ 25 ಲಕ್ಷ ರೂಪಾಯಿಗಳ ವೆಚ್ಚದ ಅನುದಾನದಲ್ಲಿ ಗುರು ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಅವರು ಮಾತನಾಡಿದರು.
ಮುರಗೋಡದ ಮಹಾಂತ ಶಿವಯೋಗಿಗಳು ಬಿ.ಡಿ.ಸಿ.ಸಿ. ಬ್ಯಾಂಕ್ ಸ್ಥಾಪನೆಗೆ ಕಾರಣಿಕರ್ತರಾದವರು. ಇಂದು ಜಿಲ್ಲೆಯ ಲಕ್ಷಾಂತರ ರೈತರು ಈ ಬ್ಯಾಂಕಿನ ಸದುಪಯೋಗ ಪಡೆಯುತ್ತಿದ್ದಾರೆ. ಪೂಜ್ಯ ಶ್ರೀಗಳು ಕೇವಲ ಆಧ್ಯಾತ್ಮಿಕ, ಪ್ರವಚನ ಮಾಡುವುದಲ್ಲದೇ ರೈತರ ಆರ್ಥಿಕ ಶಕ್ತಿ ಕೇಂದ್ರವನ್ನು ಸ್ಥಾಪನೆ ಮಾಡಿರುವುದು ಅತ್ಯಂತ ಶ್ಲಾಘನೀಯ ಕಾರ್ಯ. ಅಂತಹ ಮಹಾಂತ ಶಿವಯೋಗಿಗಳು ಹಲವು ಕಾಲ ದುರದುಂಡಿಯಲ್ಲಿ ನೆಲೆಸಿದ್ದರು ಎನ್ನುವುದೇ ನಮ್ಮ ಸೌಭಾಗ್ಯ. ಇಂದು ಅದೇ ಸ್ಥಳದಲ್ಲಿ ಗುರುಭವನ ನಿರ್ಮಾಣ ಮಾಡುವ ಮೂಲಕ ನಮ್ಮ ಸನಾತನ ಸಂಸ್ಕೃತಿಯನ್ನು ಇನ್ನೂ ಹೆಚ್ಚು ಗಟ್ಟಿಗೊಳಿಸಲು ಈ ಗುರುಭವನ ಅನುಕೂಲವಾಗಲಿದೆ ಎಂದರು.
ದುರದುಂಡಿ ಗ್ರಾಮದ ಜನರು ಹಿಂದುಳಿದ ವರ್ಗದವರಾದರು ಕೂಡ ಗುರು ಪರಂಪರೆಗೆ ಆದ್ಯತೆಯನ್ನು ಕೊಟ್ಟು ಯಾವುದೇ ಕೆಲಸವನ್ನು ಹಿಡಿದರೆ ಅದನ್ನು ಪೂರೈಸಿಯೇ ಬಿಡುತ್ತಾರೆ ಎನ್ನುವಂತಹ ಪ್ರತೀತಿ ತಾಲೂಕಿನಲ್ಲಿ ಇದೆ. ಈ ಕಾಮಗಾರಿಗೆ ನೀಡಿದ ಅನುದಾನವನ್ನು ಸರಿಯಾಗಿ ಸದುಪಯೋಗ ಮಾಡಿಕೊಳ್ಳುವಂತೆ ಗ್ರಾಮಸ್ಥರಿಗೆ ವಿನಂತಿಸಿದರು.
ಅರಭಾವಿಮಠದ ಜಗದ್ಗುರು ಶ್ರೀ ದುರದುಂಡೀಶ್ವರ ಸಿದ್ಧಸಂಸ್ಥಾನದ ಶ್ರೀ ಮ.ನಿ.ಪ್ರ.ಸ್ವ ಶ್ರೀ ಗುರುಬಸವಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಗ್ರಾಮ ಪಂಚಾಯತ ಅಧ್ಯಕ್ಷ ರಾಮಪ್ಪ ಸಣ್ಣಲಗಮಣ್ಣವರ, ಸದಸ್ಯರಾದ ಅವಣ್ಣ ಗೌಡಿ, ಅಣ್ಣಪ್ಪ ಸಂಪಗಾಂವ, ಸಿದ್ದರಾಮಯ್ಯ ಹಿರೇಮಠ, ಯಮನಪ್ಪ ಕಟಕೊಳ, ಮಲ್ಲಪ್ಪ ಕೋಳಿ, ದುಂಡಪ್ಪ ನಿಂಗಣ್ಣವರ, ಪಿ.ಕೆ.ಪಿ.ಎಸ್ ಅಧ್ಯಕ್ಷ ಲಕ್ಷ್ಮಣ ಶಿಗೊಂಡಿ ಪ್ರಮುಖರಾದ ಮಾದೇವ ಮಾನೆಪ್ಪಗೋಳ, ರಾಯಪ್ಪ ನಿಂಗನ್ನವರ, ಮಹಾದೇವ ಬಂಗಾರಿ, ಭೀಮಶಿ ಬಂಗಾರಿ, ಭೀರಯ್ಯ ಮಠದ, ಈರಪ್ಪ ಬೆಳವಿ, ಉದ್ದಪ್ಪ ಸಣ್ಣಲಗಮಣ್ಣವರ, ದುರದುಂಡೆಪ್ಪ ಅಂತರಗಟ್ಟಿ, ಹೊನ್ನಾಜ ಕೋಳಿ, ಶಂಕರ ಗುರಕನಾಥ, ರೇವಪ್ಪ ಪೂಜೇರಿ, ಈರಣ್ಣ ಪತ್ತಾರ, ಹುಲೆಪ್ಪ ಬಂಗಾರಿ, ಪಂಚಾಯತ ಅಭಿವೃದ್ದಿ ಅಧಿಕಾರಿ ಗಣೇಶ ತೊಡಗಂಟ್ಟಿ ಸೇರಿದಂತೆ ಶ್ರೀಮಠ ಭಕ್ತಾಧಿಗಳು, ಯುವಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.