ಬೀದರ: ಬೀದರ ಜಿಲ್ಲೆಯಲ್ಲಿ ಸತತವಾಗಿ ನಾಲ್ಕು ಐದು ದಿನಗಳಿಂದ ಜಿಟಿ ಜಿಟಿ ಮಳೆ ಬೀಳುತ್ತಿದ್ದು ಹಲವು ರೈತರ ಬೆಳೆದ ಬೆಳೆ ಸಂಪೂರ್ಣ ನೀರಿನಲ್ಲಿ ಮುಳುಗಿ ಬೆಳೆ ಸರ್ವನಾಶ ಆಗಿದ್ದು ಒಂದು ಕಡೆಯಾದರೆ, ಇನ್ನೊಂದು ಕಡೆ ಸಚಿವರು ಬೀದರ ನಲ್ಲಿ ಸನ್ಮಾನ, ಅಭಿನಂದನೆ ಕಾರ್ಯಕ್ರಮಗಳಲ್ಲಿ ಪುಲ್ ಬಿಜಿಯಾಗಿದ್ದಾರೆ. ರೈತರ ಪರವಾಗಿ ಎಂದು ಸರಕಾರ ಹೆಸರಿಗೆ ಅಷ್ಟೇ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವದು ಸಚಿವರಿಗೆ ಅಭ್ಯಾಸವಾಗಿ ಬಿಟ್ಟಿದೆ ಎಂದು ಹೇಳಬಹುದು.
ಇತ್ತ ಗಾಯದ ಮೇಲೆ ಬರೆ ಎಳೆದಂತೆ ಬೀದರ ಜಿಲ್ಲೆ ಚಿಟಗುಪ್ಪ ತಾಲೂಕಿನ ಕಂದಗೂಳ ಗ್ರಾಮದ ಅಣ್ಣೆಪ್ಪ ತಂದೆ ಹಣಮಂತಪ್ಪಾ ನಾಗನಕೇರಾ ಎಂಬ ರೈತ ತನ್ನ ಹೊಲದ ಸರ್ವೆ ನಂ 73ರಲ್ಲಿ ಸುಮಾರು 5 ಎಕರೆ ಕಬ್ಬು ಬೆಳೆದಿದ್ದು ಬೆಳೆದಿರುವ ಕಬ್ಬಿನ ಹೊಲಕ್ಕೆ ಶನಿವಾರ ರಾತ್ರಿ ಕಾಡು ಹಂದಿಗಳು ದಾಳಿ ಮಾಡಿ ಒಂದು ಎಕರೆಗಿಂತ ಅಧಿಕ ಪ್ರಮಾಣದ ಕಬ್ಬಿನ ಬೆಳೆಯನ್ನು ಸಂಪೂರ್ಣವಾಗಿ ನಾಶಪಡಿಸಿವೆ.
ಈ ಬೆಳೆ ನಾಶದಿಂದ ಅಂದಾಜು 1ಲಕ್ಷ ರೂಪಾಯಿ ಮೌಲ್ಯದ ನಷ್ಟವಾಗಿದೆ. ಸಾಲ ಮಾಡಿ ಹಗಲು ರಾತ್ರಿ ಎನ್ನದೆ ಕಷ್ಟಪಟ್ಟು ಕಬ್ಬು ಬೆಳಸಿದ ಕಬ್ಬು ,ಕೈಗೆ ತುತ್ತು ಬರುವಷ್ಟರಲ್ಲಿ ಎಲ್ಲಾ ಸಂಪೂರ್ಣ ನಾಶವಾಗಿ ಹೋಗಿದ್ದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಿಲ್ಲೆಯಲ್ಲಿ ರೈತರ ಕಷ್ಟ ಕಣ್ಣಿಗೆ ಕಾಣುತ್ತಿಲ್ಲವೆ ಎಂಬುದು ಸಾರ್ವಜನಿಕ ಪ್ರಶ್ನೆ ಆಗಿದೆ
ನನಗೆ ತುಂಬಾ ನೋವಾಗಿದೆ, ತಂದ ಸಾಲವನ್ನು ತೀರಿಸಲು ಏನು ಮಾಡಬೇಕು ಎಂಬ ಆತಂಕ ಹೆಚ್ಚುತಿದೆ. ನನಗಾದ ನಷ್ಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಬೆಳೆ ಪರಿಹಾರದ ನೆರವು ನೀಡಬೇಕು ಎಂದು ರೈತ ಅಣ್ಣೆಪ ಅವರ ಬೇಡಿಕೆಯಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರು ಬೀದರ ರೈತರ ಆಸರೆ ಆಗುತ್ತಾರೆ ಅಥವಾ ಅಭಿನಂದನ ಕಾರ್ಯಕ್ರಮಗಳಲ್ಲಿಯೇ ಮುಳುಗಿ ಇಲ್ಲವೆ ಬೆಂಗಳೂರಿನಲ್ಲಿ ಇದ್ದು ಜಿಲ್ಲೆಯ ಅಭಿವೃದ್ಧಿ ಮಾಡುತ್ತಾರೋ ಎಂಬುದನ್ನು ಕಾದು ನೋಡಬೇಕು.
ವರದಿ: ನಂದಕುಮಾರ ಕರಂಜೆ, ಬೀದರ